ತೇರದಾಳ: ಶತಮಾನ ಪೂರೈಸಿರುವ ಪೊಲೀಸ್ ವಸತಿ ಗೃಹಗಳು ಶಿಥಿಲಗೊಂಡಿದ್ದು, ಇಲಿ-ಹೆಗ್ಗಣಗಳ ಕಾಟ ಹೆಚ್ಚಾಗಿದೆ. ಮೇಲ್ಛಾವಣಿಗಳು ಕಿತ್ತು ಹೋಗಿದ್ದು, ಯಾವುದೋ ಹಳೆಯ ಗೋದಾಮುಗಳಂತೆ ಭಾಸವಾಗುತ್ತಿವೆ. ಇಂತಹ ವಸತಿ ಗೃಹಗಳಲ್ಲೇ ಪೊಲೀಸರ ಕುಟುಂಬಗಳು ವಾಸಿಸುತ್ತಿವೆ.
ನಗರದ ಹೃದಯಭಾಗ ನಾಡ ಕಾರ್ಯಾಲಯದ ಮುಂದಿರುವ ಪೊಲೀಸ್ ವಸತಿ ಗೃಹಗಳನ್ನು 1906ರಲ್ಲಿ ನಿರ್ಮಾಣ ಮಾಡಲಾಗಿದೆ. ಸುಮಾರು 11 ಪೊಲೀಸರ ಕುಟುಂಬಗಳು ನೆಲೆಸಿವೆ. ಒಂದೆರಡು ಬಾರಿ ದುರಸ್ತಿ ಮಾಡಿದ್ದು ಬಿಟ್ಟರೆ ಯಾವುದೇ ಕಾಮಗಾರಿ ಕೈಗೊಂಡಿಲ್ಲ.
ಪೊಲೀಸ್ ವಸತಿ ಗೃಹಗಳಲ್ಲಿ ಹೆಗ್ಗಣಗಳ ಹಾವಳಿ ವಿಪರೀತವಾಗಿವೆ. ದಿನಕ್ಕೊಂದು ಸ್ಥಳದಲ್ಲಿ ಹೆಗ್ಗಣಗಳು ಬಿಲಗಳನ್ನು ತೋಡುತ್ತಿವೆ. ಹೆಗ್ಗಣಗಳನ್ನು ನಿಯಂತ್ರಿಸಲು ಕುಟುಂಬಗಳು ಹೆಣಗಾಡುವಂತಾಗಿದೆ. ತೋಡಿರುವ ಬಿಲಗಳಲ್ಲಿ ವಿಷ ಜಂತುಗಳು ವಾಸಿಸುತ್ತೇವೆ ಎನ್ನುವ ಭಯದಲ್ಲೇ ಜೀವನ ನಡೆಸುವಂತಾಗಿದೆ.
ವಸತಿ ಗೃಹಗಳ ಹಿಂದುಗಡೆ ಸರಾಗವಾಗಿ ನೀರು ಹರಿದ ಹೋಗದ ಕಾರಣ ಹಂದಿಗಳ ತಾಣವಾಗಿ ಮಾರ್ಪಟ್ಟಿದೆ. ವಸತಿ ಗೃಹಗಳಲ್ಲಿ ಬಿಸಿಲು, ಮಳೆ ನೇರವಾಗಿ ಒಳ ಬರುವಂತಾಗಿದೆ. ಮೇಲ್ಛಾವಣಿಯ ಶೀಟಗಳು ಅಲ್ಲಲ್ಲಿ ತೂತು ಬಿದ್ದಿವೆ. ಬಾಗಿಲುಗಳು ಬೀಳುವ ಸ್ಥಿತಿಯಲ್ಲಿವೆ. ಇಂತಹ ಸ್ಥಿತಿಯಲ್ಲೇ ಪೊಲೀಸರ ಕುಟುಂಬಗಳು ಜೀವ ಕೈಯಲ್ಲಿ ಹಿಡಿದು ಜೀವನ ಸಾಗಿಸುತ್ತಿವೆ.
ಎಸ್‌ಬಿಐ ಬಳಿಯಲ್ಲಿದ್ದ ಪೊಲೀಸ್ ವಸತಿ ನಿಲಯಗಳು ಬಿದ್ದು ಹೋಗಿ ಅನೇಕ ವರ್ಷಗಳೇ ಗತಿಸಿವೆ. ಜಮಖಂಡಿ ರಸ್ತೆಯಲ್ಲಿ ನಿರ್ಮಾಣವಾದ ಹೊಸಠಾಣೆಯ ಆವರಣದಲ್ಲಿ ಕೇವಲ 6 ಪೊಲೀಸ್ ವಸತಿ ಗೃಹಗಳಿವೆ. ಸುಮಾರು 30 ಪೊಲೀಸ್ ಸಿಬ್ಬಂದಿ ಇರಬೇಕಾದ ನೂತನ ತಾಲೂಕಿನ ಸ್ಥಾನ ಪಡೆದ ನಗರದಲ್ಲಿ ಕೇವಲ 6 ಹೊಸ ವಸತಿ ಗೃಹಗಳಿವೆ. ಹೀಗಾಗಿ ಹಳೆಯ ವಸತಿ ಗೃಹಗಳಲ್ಲೇ ವಾಸುವಂತಾಗಿದೆ.