ನಂಜನಗೂಡು: ನಮ್ಮ ತಂದೆ ಸಿದ್ದರಾಮಯ್ಯರವರನ್ನು ಸೋಲಿಲ್ಲದ ಸರದಾರರನ್ನಾಗಿ ಮಾಡಿದ ವರುಣಾ ಕ್ಷೇತ್ರದ ಜನತೆಗೆ ಮಾಜಿ ಶಾಸಕ ಹಾಗೂ ಆಶ್ರಯ ಸಮಿತಿ ಅಧ್ಯಕ್ಷರಾದ ಡಾ||ಯತೀಂದ್ರ ಸಿದ್ದರಾಮಯ್ಯರವರು ಕೃತಜ್ಞತೆ ಸಲ್ಲಿಸಿದರು.
ನಂತರ ಅವರು ವರುಣಾ ಕ್ಷೇತ್ರ ವ್ಯಾಪ್ತಿಯ ಕಲ್ಮಳ್ಳಿ ಗ್ರಾಮದಲ್ಲಿ ಜನಸಂಪರ್ಕ ಹಾಗೂ ಕುಂದುಕೊರತೆ ಸಭೆಯ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ವರುಣಾ ವಿಧಾನ ಸಭಾ ಕ್ಷೇತ್ರ ರಚನೆಗೊಂಡಂದಿನಿಂದ ಸಿದ್ದರಾಮಯ್ಯರವರನ್ನು ಮೊದಲ ಬಾರಿ ಗೆಲ್ಲಿಸಿ ಮುಖ್ಯಮಂತ್ರಿಯನ್ನಾಗಿ ಮಾಡಿ, ನನ್ನನ್ನೂ ಒಂದು ಬಾರಿ ಶಾಸಕನನ್ನಾಗಿಮಾಡಿ, ಮತ್ತೆ ಈ ಬಾರಿಯ ವಿಧಾನ ಸಭಾ ಚುನಾವಣೆಯಲ್ಲಿ ನಮ್ಮ ತಂದೆ ಸಿದ್ದರಾಮಯ್ಯರವರನ್ನು ಗೆಲ್ಲಿಸಿ ಎರಡನೇ ಬಾರಿ ಮುಖ್ಯಮಂತ್ರಿಯಾಗಿ ಮಾಡಿದ ನಿಮಗೆ ನಾವು ಆಭಾರಿಯಾಗಿದ್ದೇವೆ ಎಂದು ತಿಳಿಸಿದರಲ್ಲದೇ ನಮ್ಮ ರಾಜ್ಯವು
ಅಭಿವೃದ್ದಿಯತ್ತ ಸಾಗಲು ನಿಮ್ಮ ಆಶೀರ್ವಾದವೇ ದಿಕ್ಸೂಚಿಯಾಯಿತು ಎಂದು ತಿಳಿಸಿದರು. ಇದೇ ವೇಳೆ ಸಾರ್ವಜನಿಕರಿಂದ ಮನವಿ ಪತ್ರಗಳನ್ನು ಸ್ವೀಕರಿಸಿ ಸ್ಥಳದಲ್ಲೇ ಇದ್ದ ಅಧಿಕಾರಿಗಳಿಗೆ ಸೂಚಿಸಿ ಸಮಸ್ಯೆಗಳನ್ನು ಶೀಘ್ರವೇ ಪರಿಹರಿಸಬೇಕೆಂದು ತಿಳಿಸಿದರಲ್ಲದೇ ಇದುವರೆಗೂ ನನ್ನ ಜೊತೆ ಇದ್ದು ಎಲ್ಲಾ ಕಾರ್ಯಕ್ರಮದಲ್ಲಿ ಸಹಕರಿಸಿದ ತಾಲ್ಲೂಕಿನ ಅಧಿಕಾರಿ ವರ್ಗಕ್ಕೂ ಕೃತಜ್ಞತೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಕೆ.ಆರ್.ನಗರ ಶಾಸಕ ಡಿ ರವಿಶಂಕರ್, ರಾಜ್ಯ ವಾಲ್ಮೀಕಿ ನಿಗಮದ ಮಾಜಿ ಅಧ್ಯಕ್ಷ ಎಸ್.ಸಿ.ಬಸವರಾಜು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹಾಡ್ಯ ರಂಗಸ್ವಾಮಿ, ಸಿದ್ದರಾಮಯ್ಯ ಅಭಿಮಾನಿ ಬಳಗದ ಅಧ್ಯಕ್ಷ ಕಲ್ಮಳ್ಳಿ ಸುರೇಶ್ ಬಾಬುವಿಶೇಷಾಧಿಕಾರಿ ವಿಜಯ್, ಶಿವಸ್ವಾಮಿ, ಪ್ರದೀಪ್, ಗ್ರಾ.ಪಂ ಅದ್ಯಕ್ಷ ಕುಮಾರ್, ಕಲ್ಮಳ್ಳಿ ಮಹಾಲಿಂಗು, ವಿಜಯ್‌ರಾಜ್, ಗುತ್ತಿಗೆದಾರ ಅನಿಲ್ ಕುಮಾರ್, ಎಂ.ಸಿ.ಹುಂಡಿ ಶಿವಪ್ರಸಾದ್, ಹಾರೋಪುರ ಶಿವಣ್ಣ, ಬಿಲಿಗೆರೆ ರವಿ, ಸುತ್ತೂರು ಸೋಮಣ್ಣ, ಬಿಲಿಗೆರೆ ಪುಟ್ಟಸ್ವಾಮಿ, ಜಿಮಾರಳ್ಳಿ ಜಗದೀಶ್, ಬಿಳುಗಲಿ ಕುಮಾರ್, ಕಲ್ಕುಂದ ರತ್ನಶೇಖರ್, ಜಯಶೀಲ, ಬಿಲಿಗೆರೆ ನಾಡ ಕಛೇರಿ ಉಪತಹಶೀಲ್ದಾರ್ ಶ್ರೀನಿವಾಸ್, ಬಿ.ಇ.ಒ ಡಿ.ಶಿವಲಿಂಗಯ್ಯ, ಪಶು ಇಲಾಖೆಯ ಅಧಿಕಾರಿ ಮಲ್ಲಿಕಾರ್ಜುನ್, ಸಿಡಿಪಿಒ ಮಂಜುಳಾ ಸೇರಿದಂತೆ ತಾಲ್ಲೂಕಿನ ಎಲ್ಲಾ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.