ಹೇಳುವಂಥ ವಿಷಯಗಳು ನೂರಾರಿದ್ದರೂ ಕೆಲವೊಂದು ಬಾರಿ ನಮ್ಮಲ್ಲಿ ಹೇಳಲು ಪದಗಳೇ ಇರುವುದಿಲ್ಲ. ಈ ಸಂದರ್ಭ ಎದುರಾಗುವುದು ಕೆಲವು ನಿರ್ದಿಷ್ಟ ಸಂದರ್ಭಗಳಲ್ಲಿ ಮಾತ್ರ. ಎದುರಿಗಿದ್ದ ವ್ಯಕ್ತಿಯಿಂದ ಮನಸ್ಸಿಗೆ ನೋವಾಗಿದ್ದರೆ ಅಥವಾ ಹೆಚ್ಚು ಖುಷಿಯನ್ನು ಕೊಟ್ಟಿದ್ದರೆ ನಮ್ಮ ಮಾತು ಸೋತು ಹೋಗುತ್ತದೆ, ಮೌನವೇ ಸರಿಯಾದ ಉತ್ತರ ಎಂದೆನಿಸಿ ಬಿಡುತ್ತದೆ.
ನಾವು ಸೋಲುವ ಹಾದಿಯಲ್ಲಿದ್ದಾಗ ನಿರೀಕ್ಷೆ ಮಾಡಲೂ ಸಾಧ್ಯವಿಲ್ಲದ ವ್ಯಕ್ತಿಯೊಬ್ಬರು ನಮ್ಮ ಬೆಂಬಲಕ್ಕೆ ನಿಂತರೆ ಆ ಕ್ಷಣವೂ ನಮ್ಮ ಮಾತು ಮೌನವಾಗಿರುತ್ತದೆ. ಪ್ರತಿಯೊಬ್ಬರ ಜೀವನದಲ್ಲೂ ಒಂದಲ್ಲ ಒಂದು ಬಾರಿ ಈ ಘಟನೆಗಳು ನಡೆದಿರುತ್ತದೆ. ಮಾತು ಸೋತು ಹೋದ ಆ ಕ್ಷಣ ಮೌನ ಮಾತನಾಡಲು ಆರಂಭಿಸಿರುತ್ತದೆ. ಒಂದು ಥ್ಯಾಂಕ್ಯೂ ಹೇಳಬೇಕೆಂದೆನಿಸಿದರೂ ಅದು ಶಬ್ಧದ ರೂಪದಲ್ಲಿ ಹೊರಬರುವುದೇ ಇಲ್ಲ.
ಒಂದೆರಡು ವರ್ಷಗಳ ಹಿಂದೆ ನಡೆದ ಘಟನೆ. ನಾನು ಕಾಲೇಜಿಗೆ ಸ್ಕೂಟರ್‌ನಲ್ಲಿ ಹೋಗುತ್ತಿದ್ದೆ. ಒಂದು ದಿನ ಕಾಲೇಜಿಗೆ ತಡವಾಗುತ್ತದೆ ಎಂದು ವೇಗವಾಗಿ ಹೋಗುತ್ತಿರುವಾಗ ಎದುರಿಗೆ ವ್ಯಕ್ತಿಯೊಬ್ಬರು ರಸ್ತೆ ದಾಟುತ್ತಿದ್ದರು. ನಾನು ಎಷ್ಟೇ ಹಾರ್ನ್ ಮಾಡಿದರೂ ಆ ವ್ಯಕ್ತಿ ನೋಡಲಿಲ್ಲ. ಕಿವಿಗೆ ಇಯರ್‌ಫೋನ್ ಹಾಕಿದ್ದರಿಂದ ಅವರಿಗೆ ನನ್ನ ಹಾರ್ನ್ ಶಬ್ಧ ಕೇಳಲಿಲ್ಲ. ಗಾಡಿ ನಿಲ್ಲಿಸಬೇಕೆಂದುಕೊಳ್ಳುವಷ್ಟರಲ್ಲಿ ಆ ವ್ಯಕ್ತಿಗೆ ಢಿಕ್ಕಿ ಹೊಡೆಯಿತು. ಅವರಿಗೆ ತರಚಿದ ಗಾಯಗಳಾಗಿ ಪಾರಾದರು. ನನಗೆ ಅಲ್ಲಿ ಹೇಳಲು ಅಥವಾ ವಿವರಣೆ ನೀಡಲು ಯಾವುದೇ ಅವಕಾಶವಿರಲಿಲ್ಲ.
ಸುತ್ತಮುತ್ತಲಿದ್ದವರು ಬಂದು ನನ್ನನ್ನು ಅಪರಾಧಿಯಂತೆ ನೋಡಿ ಬಯ್ಯತೊಡಗಿದರು. ಅವರ ಪ್ರಕಾರ ತಪ್ಪು ನನ್ನದೇ. ಯಾಕೆಂದರೆ ಗುದ್ದಿದವಳು ನಾನು. ಆದರೆ ಆ ಅಪಘಾತ ತಪ್ಪಿಸಲು ನಾನು ಪಟ್ಟ ಪ್ರಯತ್ನಕ್ಕೆ ಸಾಕ್ಷಿ ಗಳೇ ಇರಲಿಲ್ಲ. ಹಳ್ಳಿ ಪ್ರದೇಶವಾದ್ದರಿಂದ ಅಲ್ಲಿ ಪೊಲೀಸರಿಗಿಂತ ಹೆಚ್ಚು ಜನರೇ ನ್ಯಾಯ ತೀರ್ಮಾನಿಸುತ್ತಿದ್ದರು. ಸುತ್ತ ಸೇರಿದವರೆಲ್ಲ ನನ್ನದೇ ತಪ್ಪೆಂದು ನ್ಯಾಯ ಕೊಟ್ಟು ನನ್ನ ಬಳಿ ಹಣ ಕೇಳತೊಡಗಿದರು. ನನಗೆ ಅಳು ಬರುವುದೊಂದೇ ಬಾಕಿ. ಪವಾಡ ವೆಂಬಂತೆ ಅಲ್ಲಿಗೆ ಬಂದ ಹಿರಿಯ ವ್ಯಕ್ತಿಯೊಬ್ಬರು ಏನಾಯಿತೆಂದು ನನ್ನಲ್ಲಿ ನೇರ ವಾಗಿ ಕೇಳಿದರು. ನಡೆದದ್ದನ್ನೆಲ್ಲ ಹೇಳಿದಾಗ ಆ ವ್ಯಕ್ತಿಗೆ ಬಯ್ದರು. ಕಿವಿಗೆ ಇಯರ್‌ಫೋನ್ ಹಾಕಿ ರಸ್ತೆ ದಾಟಿದ್ದು ಇದಕ್ಕೆ ಕಾರಣ ಎಂದರು. ನನ್ನ ಸ್ಕೂಟರ್ ಎತ್ತಿಕೊಟ್ಟು ನಿಧಾನವಾಗಿ ಹೋಗು ಎಂದರು. ನಾನು ಅಶ್ಚರ್ಯಚಕಿತಳಾಗಿ ಅವರು ಹೇಳಿದ್ದನ್ನು ಅನುಸರಿಸಿದೆ. ಕೊನೆಗೆ ಒಂದು ಧನ್ಯವಾದವನ್ನೂ ಅವರಿಗೆ ಹೇಳಲಿಲ್ಲ. ಸೋತು ಹೋದ ನನ್ನ ಮನಸ್ಸಿನ ಮಾತಿಗೆ ಕಿವಿಯಾದ ಆ ವ್ಯಕ್ತಿಗೆ ಈ ಮೂಲಕ ಥ್ಯಾಂಕ್ಯೂ..
•
ಸುಶ್ಮಿತಾ ಶೆಟ್ಟಿ