ಕೊಯಮತ್ತೂರು:ಕೋವಿಡ್ 19 ತಡೆಗಟ್ಟಲು ಲಾಕ್ ಡೌನ್ ಜಾರಿಯಲ್ಲಿದ್ದ ಪರಿಣಾಮ ಮನೆಗೆ ತಲುಪಲು 200 ಕಿಲೋ ಮೀಟರ್ ದೂರ ಪ್ರಯಾಣಿಸಬೇಕು. ಆದರೆ ಯಾವುದೇ ಕಾರಣಕ್ಕೂ ನಡೆದುಕೊಂಡು ಹೋಗಿ ಆರೋಗ್ಯ ಹಾಳು ಮಾಡಿಕೊಳ್ಳುವುದು ಬೇಡ ಎಂದುಕೊಂಡ ಈ ವ್ಯಕ್ತಿ ಬೈಕ್ ಅನ್ನು ಕದ್ದು ಪತ್ನಿ ಜತೆಗೆ ಊರು ಸೇರಿಕೊಂಡು ಬಿಟ್ಟಿದ್ದ.
ಕುತೂಹಲದ ಸಂಗತಿ ಏನು ಅಂದರೆ ಊರು ಸೇರಿದ ಮೇಲೆ ಈತ ಕದ್ದ ಬೈಕ್ ಅನ್ನು ಮಾಲೀಕನಿಗೆ ಪಾರ್ಸೆಲ್ ಸರ್ವೀಸ್ ಮೂಲಕ ವಾಪಸ್ ಕಳುಹಿಸಿದ್ದು, ಇದರಿಂದ ಬೈಕ್ ಮಾಲೀಕ ಖುಷಿಗೊಂಡ ಘಟನೆ ಕೊಯಮತ್ತೂರಿನಲ್ಲಿ ನಡೆದಿದೆ.
ಬೈಕ್ ಅನ್ನು ಪ್ರಶಾಂತ್ ಎಂಬಾತ ಕದ್ದಿರುವುದು ಪತ್ತೆಹಚ್ಚಿದ್ದರು. ಏತನ್ಮಧ್ಯೆ ಶನಿವಾರ ಪಲ್ಲಾಪಾಳ್ಯಂನ ಲೆಥ್ ಉದ್ಯೋಗಿ ವಿ.ಸುರೇಶ್ ಕುಮಾರ್ (34ವರ್ಷ) ಶನಿವಾರ ಅಚ್ಚರಿ ಎಂಬಂತೆ ಪಾರ್ಸೆಲ್ ಸ್ವೀಕರಿಸಿದ್ದರು. ಈ ಕುರಿತು ಮಾಧ್ಯಮದ ಜತೆ ಮಾತನಾಡಿರುವ ಸುರೇಶ್, ಮೇ 18ರಂದು ಮಧ್ಯಾಹ್ನ ವರ್ಕ್ ಶಾಪ್ ಹೊರಗೆ ಪಾರ್ಕಿಂಗ್ ಮಾಡಿದ್ದ ಬೈಕ್ ಅನ್ನು ಕದ್ದೊಯ್ದಿದ್ದರು. ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದೆ. ನಂತರ ಬೈಕ್ ಗಾಗಿ ಸ್ಥಳೀಯವಾಗಿ ಅಳವಡಿಸಿದ್ದ ಸಿಸಿಟಿವಿ ಫೂಟೇಜ್ ಅನ್ನು ಪರಿಶೀಲಿಸಿದಾಗ ಪ್ರಶಾಂತ್ ಎಂಬಾತ ಬೈಕ್ ಕದ್ದು ಪತ್ನಿ ಜತೆ ಹೋಗಿರುವುದು ತಿಳಿದು ಬಂದಿತ್ತು.
ಕಣ್ಣಂಪಾಳ್ಯಂ ಸಮೀಪದ ಸೂಲೂರು ಬೇಕರಿಯ ಟೀ ಮಾಸ್ಟರ್ ಪ್ರಶಾಂತ್ ಇದ್ದ ಪ್ರದೇಶಕ್ಕೆ ಹೋಗಿ ವಿಚಾರಿಸಿದಾಗ ಆತ ಪತ್ನಿ ಜತೆ ಊರಿಗೆ ತೆರಳಿದ್ದ. ಲಾಕ್ ಡೌನ್ ಇದ್ದಿದ್ದರಿಂದ ಏನು ಮಾಡಲು ಸಾಧ್ಯವಾಗಿಲ್ಲವಾಗಿತ್ತು. ಅಂತೂ ಶನಿವಾರ ಪಾರ್ಸೆಲ್ ಸರ್ವೀಸ್ ನಿಂದ ಕರೆ ಬಂದಿತ್ತು. ನಿಮಗೆ ಪಾರ್ಸೆಲ್ ನಲ್ಲಿ ಬೈಕ್ ಬಂದಿದ್ದು, ಅದನ್ನು ನಿಮ್ಮ ವಿಳಾಸಕ್ಕೆ ಡೆಲಿವರಿ ಮಾಡುತ್ತೇವೆ ಎಂದು ತಿಳಿಸಿದ್ದರು.
ನನಗೆ ಬೈಕ್ ಕಂಡು ತುಂಬಾ ಸಂತಸವಾಗಿತ್ತು. 1,400 ರೂಪಾಯಿ ಪಾರ್ಸೆಲ್ ಚಾರ್ಜ್ ಕೊಟ್ಟು ಬೈಕ್ ಅನ್ನು ತೆಗೆದುಕೊಂಡು ಮನೆಗೆ ಬಂದಿದ್ದೇನೆ. ನನ್ನ ಬೈಕ್ ಕದ್ದ ವ್ಯಕ್ತಿಯ ಪರಿಸ್ಥಿತಿ ಅರ್ಥವಾಗಿದೆ. ಆದರೂ ನನ್ನ ಬೈಕ್ ಮರಳಿಸಿದ್ದಕ್ಕೆ ನಾನು ಕೃತಜ್ಞತೆ ಸಲ್ಲಿಸುವುದಾಗಿ ಸುರೇಶ್ ಕುಮಾರ್ ತಿಳಿಸಿದ್ದಾರೆ.