ಅಂದು ಕಾಲೇಜಿಗೆ ರಜೆ ಇತ್ತು. ಹೀಗಾಗಿ, ಅಜ್ಜಿ ಊರಿಗೆ ಹೊರಟಿದ್ದೆ. ಆ ಊರೆಂದರೆ ನನಗೆ ಎಲ್ಲಿಲ್ಲದ ಪ್ರೀತಿ. ನನ್ನ ಅದೆಷ್ಟೊ ನೆನಪುಗಳು ಅಲ್ಲಿವೆ. ನದಿಗೆ ಹೋಗಿ ಈಜಾಡಿದ್ದು, ಬೇರೆಯವರ ಹೊಲದಲ್ಲಿ ಕದ್ದು ಕಲ್ಲಂಗಡಿ ಹಣ್ಣು ತಿಂದದ್ದು, ಬೆಂಕಿಪೆಟ್ಟಿಗೆಯಿಂದ ಲಾರಿ ತಯಾರಿಸಿ ಆಟ ಆಡಿದ್ದು. ಇಂಥ ಅನೇಕ ನೆನಪುಗಳ ಗಣಿಯಾಗಿದ್ದ ಆ ಊರಿಗೆ ಹೋಗಲು ಉತ್ಸುಕನಾಗಿದ್ದೆ. ಹಾಗಾಗಿ, ಬೈಕ್ ಹೊಟ್ಟೆಗೆ ಒಂದು ಲೀಟರ್ ಪೆಟ್ರೊಲ್ ತುಂಬಿಸಿಕೊಂಡು ಹೊರಟೆ. ಅಲ್ಲಿ ನನ್ನ ಅಜ್ಜಿ ಪ್ರೀತಿಯಿಂದ ಬರಮಾಡಿಕೊಂಡು ಸತ್ಕರಿಸಿದರು. ನನಗಿಷ್ಟವಾದ ಸಿಹಿ ತಿನಿಸುಗಳನ್ನು ಕೊಟ್ಟರು. ಅಲ್ಲಿಂದ ವಾಪಸ್ ನನ್ನೂರಿಗೆ ಹೊರಡಲು ಅನುವಾದೆ. ಅದು ಪುಟ್ಟ ಹಳ್ಳಿಯಾದ್ದರಿಂದ ಬಂಕ್ ಇರಲಿಲ್ಲ. ಮುಂದೆ ಪಟ್ಟಣದಲ್ಲಿ ಪೆಟ್ರೊಲ್ ತುಂಬಿಸಿಕೊಂಡರಾಯ್ತು ಅಂತ ಅಲ್ಲಿಂದ ಹೊರಟೆ. ಸ್ವಲ್ಪ ದೂರ ಬಂದ ಮೇಲೆ ನನ್ನ ಮೋಟಾರ್ ಬೈಕ್ ಮುಂದಕ್ಕೆ ಚಲಿಸದೆ ಸ್ಥಬ್ದವಾಗಿ ನಿಂತುಬಿಟ್ಟಿತು. ಏನೇ ಪ್ರಯತ್ನಪಟ್ಟರೂ ಸ್ಟಾರ್ಟ್ ಆಗಲಿಲ್ಲ. ಪೆಟ್ರೊಲ್ ಟ್ಯಾಂಕಿನ ಮುಚ್ಚಳ ತೆಗೆದು ಬೈಕ್ ಅನ್ನು ಅಲ್ಲಾಡಿಸಿ ನೋಡಿದಾಗ ಪೆಟ್ರೊಲ್ ತಳಕಂಡಿದ್ದು ಖಾತ್ರಿಯಾಯಿತು. ಇನ್ನು ಪಟ್ಟಣ, ಅಲ್ಲಿದ್ದ ಬಂಕ್ ದೂರವಿದ್ದರಿಂದ ರಸ್ತೆಯ ಮಧ್ಯೆ ಕಂಗಾಲಾಗಿ ನಿಂತೆ. ಅದೇ ದಾರಿಯಲ್ಲಿ ಸಂಚರಿಸುತಿದ್ದ ಒಂದೆರಡು ಬೈಕ್ ಸವಾರರನ್ನು ತಡೆದು ಸಹಾಯ ಮಾಡಲು ಕೋರಿಕೊಂಡರೂ, ಯಾರೂ ನೆರವಿಗೆ ಬಾರದೆ ಬರ್‌ನೆ ಹೋಗುತಿದ್ದರು. ನನಗೆ ಆತಂಕ ಶುರುವಾಯಿತು. ಏನು ಮಾಡಬೇಕೆಂದು ತಿಳಿಯದೆ ಚಿಂತಿಸುತ್ತಾ ನಿಂತೆ. ಆಗ ದೂರದಲ್ಲಿ ಬೈಕ್ ಸವಾರರೊಬ್ಬರು ಬರುವುದು ಕಾಣಿಸಿತು. ಕಡೇ ಪ್ರಯತ್ನ ಅಂತ, ಕೈ ಹಾಕಿದೆ. ನಿಲ್ಲಿಸಿದರು. ಪರಿಸ್ಥಿತಿಯನ್ನು ವಿವರಿಸಿ ನನ್ನ ಕಷ್ಟವನ್ನು ತೋಡಿಕೊಂಡೆ.
ಸಹೃದಯರಾಗಿದ್ದ ಅವರು ಮಾಡಿದ್ದೇನು ಗೊತ್ತೆ? ಕುಡಿಯಲು ಇಟ್ಟುಕೊಂಡಿದ್ದ ಬಾಟಲು ನೀರನ್ನು ಚೆಲ್ಲಿ, ಅವರ ಬೈಕನಲ್ಲಿದ್ದ ಸ್ವಲ್ಪ ಪೆಟ್ರೊಲ್ ತೆಗೆದುಕೊಟ್ಟರು. ಮುಂದೆ ಪೆಟ್ರೋಲ್ ಬಂಕ್ ಇದೆ. ಇದನ್ನು ಹಾಕಿಕೊಂಡು ಹೋಗು ಅಂದರು. ನಾನು ಅದಷ್ಟೆ ಪೆಟ್ರೊಲ್ ಹಾಕಿಕೊಂಡು ಅವಸರದಲ್ಲಿ ಬೈಕ್ ಓಡಿಸಿಕೊಂಡು ಪೆಟ್ರೊಲ್ ಬಂಕ್ ತುಲುಪುವ ಹೊತ್ತಿಗೆ ನಿಟ್ಟುಸಿರು ಬಂತು. ಅಂತಹ ಪರಿಸ್ಥಿತಿಯಲ್ಲಿ ಸಹಾಯ ಮಾಡಿದ ಆ ಅಂಕಲ್‌ಗೆ ಒಂದು ಧನ್ಯವಾದ ಹೇಳಲಿಲ್ಲವಲ್ಲವೆಂದು ನನ್ನೊಳಗೆ ಮರುಗಿದೆ. ಆಪತ್ತಿನಲ್ಲಿ ನನಗೆ ಸಹಾಯ ಮಾಡಿದ ಅಂಕಲ್‌ಗೆ ದೊಡ್ಡ ಥ್ಯಾಂಕ್ಸ್….
-ಅಂಬಿ ಮುದ್ದೂರು