Advertisement

ಬಿಟ್ಟು ಹೋಗಿದ್ದಕ್ಕೆ ಧನ್ಯವಾದ!

08:49 PM Oct 21, 2019 | Lakshmi GovindaRaju |

ಹಣ, ಆಸ್ತಿ, ವಿದ್ಯೆ, ಇದ್ಯಾವುದೂ ನನ್ನಲ್ಲಿ ಇಲ್ಲ ಎಂದು ತಿಳಿದಾಗ ನೀನು ನಡೆದುಕೊಂಡ ರೀತಿಯಿದೆಯಲ್ಲ; ಅದನ್ನು ಎಂದಿಗೂ ಮರೆಯಲಾರೆ. ಇವನಿಂದ ಏನೂ ಸಿಗಲಾರದು ಎಂದು ತಿಳಿಯುತ್ತಿದ್ದಂತೆಯೇ ನೀನು ಬಿಟ್ಟು ಹೋದೆಯಲ್ಲವಾ ? ಬಾಳೆಂದರೇನೆಂಬುವುದು ಈಗ ಅರ್ಥವಾಗುತ್ತಿದೆ.

Advertisement

ತಾಯಿಯ ಯಜಮಾನಿಕೆಯಲ್ಲಿ ನಮ್ಮ ಮನೆ ನಡೆಯುತ್ತಿತ್ತು. ಬೆಳೆದು ದೊಡ್ಡವನಾಗುತ್ತಾ ಅದೆಲ್ಲವನ್ನೂ ನಿಭಾಯಿಸುವುದ ಕಲಿತೆ. ತಂಗಿಯ ಬದುಕಿಗೂ ಆಸರೆಯಾಗ ಹೊರಟೆ. ಈ ಎಲ್ಲದರ ನಡುವೆ ಯೌವ್ವನವೆಂಬ ಮಾಯೆ ನನ್ನ ಬದುಕಿಗೆ ಯಾಕೆ ಎಂಟ್ರಿ ಕೊಟ್ಟಿತೋ ಗೊತ್ತಾಗ್ಲಿಲ್ಲ. ಆವಾಗಲೇ ನನ್ನಲ್ಲಿ ಈ ಪ್ರೀತಿ ಎಂಬ ಹೂವು ಚಿಗುರೊಡೆದದ್ದು. ಆಸೆಗಳಿಗೆ ಮಂಕು ಬಳಿದದ್ದು. ಹೌದು ನಾನು ನನ್ನನ್ನೇ ಮರೆತದ್ದು ನೀ ಬಂದಾಗಲೇ.

ಜೀವನದಲ್ಲಿ ಕಷ್ಟಗಳನ್ನೇ ಎದುರಿಸಿದ ನನಗೆ ನೀನೊಂಥರಾ ಅತಿಯಾಗಿ ಹಿಡಿಸಿದೆ. ನಿನ್ನ ನಗುವಲ್ಲಿ ಪ್ರೀತಿಯ ರಂಗವಲ್ಲಿ ಬರೆದು ನಾನು ಖುಷಿ ಪಡುತ್ತಿದ್ದೆ. ನಿನ್ನ ಸಣ್ಣ ನೋವೂ ನನಗೆ ಪರ್ವತದಂತೆ ಭಾಸವಾಗುತ್ತಿತ್ತು. ನೀನು ನನ್ನ ಮನದ ಅಪ್ಪಣೆಯನ್ನು ಕೇಳದೇ ನನಗೇ ತಿಳಿಯದಂತೆ ನನ್ನನ್ನೇಆವರಿಸಿ ಬಿಟ್ಟಿದ್ದೆ. ಎಲ್ಲಾ ಹುಚ್ಚು ಆಸೆಗಳ ಮಧ್ಯೆ, ಪ್ರಾಯದಲ್ಲಿ ಬಂದ ಸಣ್ಣ ಆಕರ್ಷಣೆಗಳ ಮಧ್ಯೆ, ನಾನು ನನ್ನನ್ನೇ ಮರೆತು ಬಿಟ್ಟಿದ್ದೆ ಎಂಬುದು ತಿಳಿದದ್ದು ಮಾತ್ರ ತುಂಬ ತಡವಾಗಿ.

ನಿನ್ನನ್ನು ದೂರುವ ಹುಡುಗ ನಾನಲ್ಲ. ಆದರೆ, ಮನೆಗೆ ಹೆಗಲಾಗಬೇಕಾದ ಈ ವಯಸ್ಸಿನಲ್ಲಿ ನಾನು ಪ್ರಣಯವೆಂಬ ದಾರಿ ಹಿಡಿದೆ. ಹಣ, ಆಸ್ತಿ, ವಿದ್ಯೆ, ಇದ್ಯಾವುದೂ ನನ್ನಲ್ಲಿ ಇಲ್ಲ ಎಂದು ತಿಳಿದಾಗ ನೀನು ನಡೆದುಕೊಂಡ ರೀತಿಯಿದೆಯಲ್ಲ; ಅದನ್ನು ಎಂದಿಗೂ ಮರೆಯಲಾರೆ. ಇವನಿಂದ ಏನೂ ಸಿಗಲಾರದು ಎಂದು ತಿಳಿಯುತ್ತಿದ್ದಂತೆಯೇ ನೀನು ಬಿಟ್ಟು ಹೋದೆಯಲ್ಲವಾ ? ಬಾಳೆಂದರೇನೆಂಬುವುದು ಈಗ ಅರ್ಥವಾಗುತ್ತಿದೆ.

ಬಾಳ ಪಯಣವು ಸುದೀರ್ಘ‌ವಾಗಿದೆ. ನುಡಿಗಟ್ಟಾಗಿ ಬಂದ “ಹೆಣ್ಣು ತ್ಯಾಗಮಯಿ’ ಎಂಬ ಮಾತು ನೂರಕ್ಕೆ ನೂರು ಸತ್ಯವಲ್ಲವೆಂಬುವುದೂ ಅನುಭವವಾಗಿದೆ. ಪ್ರೇಯಸಿ ದೂರವಾಗಿರಬಹುದು. ಆದರೆ ರಕ್ತ ಹಂಚಿಕೊಂಡು ಹುಟ್ಟಿದ ತಂಗಿ ಎಂದಿಗೂ ನನ್ನ ಕಡೆಗಣಿಸಿಲ್ಲ. ಅವಳ ಭವಿಷ್ಯಕ್ಕೆ ಮುನ್ನುಡಿ ಬರೆದು, ನನ್ನ ಕನಸಿನ ಅರಮನೆಯ ಕಡೆಗೆ ಹೆಜ್ಜೆ ಇಡುತ್ತೇನೆ.

Advertisement

* ಅರ್ಪಿತಾ ಕುಂದರ್‌

Advertisement

Udayavani is now on Telegram. Click here to join our channel and stay updated with the latest news.

Next