Advertisement
ಬೀಚ್‌ಗಳನ್ನು ಪರಿಸರ ಸ್ನೇಹಿ ಮಾಡುವ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚಿನ ಪ್ರವಾಸಿಗರನ್ನು ಆಕರ್ಷಿಸುವುದಕ್ಕೆ ದೇಶದ ಎಂಟು ಬೀಚ್‌ಗಳಿಗೆ ಬ್ಲೂ ಫ್ಲ್ಯಾಗ್ ಮಾನ್ಯತೆ ಕಳೆದ ವರ್ಷ ದೊರೆತಿದ್ದು, ಈ ಪೈಕಿ ರಾಜ್ಯದ ಉತ್ತರ ಕನ್ನಡ ಜಿಲ್ಲೆ ಹೊನ್ನಾವರದ ಕಾಸರಕೋಡ್, ಉಡುಪಿ ಪಡುಬಿದ್ರೆ ಬೀಚ್‌ಗೆ ಬ್ಲೂ ಫ್ಲ್ಯಾಗ್ ಮಾನ್ಯತೆ ಲಭಿಸಿದೆ. 2019ರಲ್ಲಿ ಪಡುಬಿದ್ರಿ, ತಣ್ಣೀರುಬಾವಿ ಬೀಚ್ ಸಹಿತ ರಾಜ್ಯದ 16 ಬೀಚ್‌ಗಳಿಗೆ ಬ್ಲೂ ಫ್ಲ್ಯಾಗ್ ಮಾನ್ಯತೆ ನೀಡುವ ಬಗ್ಗೆ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು.
Related Articles
Advertisement
ಮೊದಲ ಹಂತವಾಗಿ ಕೆಲವು ತಿಂಗಳ ಹಿಂದೆ ತಣ್ಣೀರುಬಾವಿ ಬೀಚ್‌ಗೆ ಆಗಮಿಸಿದ ಕೇಂದ್ರದ ಪರಿಶೀಲನ ತಂಡ ಬ್ಲೂ ಫ್ಲಾ Âಗ್ ಮಾನ್ಯತೆಗೆ ತಕ್ಕುದಾದ ವ್ಯವಸ್ಥೆ ಇದೆ ಎಂಬುದನ್ನು ಉಲ್ಲೇಖೀಸಿದ್ದರು. ಇದರಂತೆ 2ನೇ ಹಂತವಾಗಿ ಸೋಮವಾರ ಮಂಗಳೂರಿಗೆ ಆಗಮಿಸಿದ ವಿಜ್ಞಾನಿಗಳು ಹಾಗೂ ತಜ್ಞರ ನೇತೃತ್ವದ ತಂಡವು ವಿವರವಾದ ಅಧ್ಯಯನ ಕೈಗೊಂಡಿದೆ. ಕಡಲಿನ ನೀರಿನ ಮಾದರಿ ಪರೀಕ್ಷೆ, ಅಲೆಗಳ ವೇಗ, ಭದ್ರತೆ, ರಕ್ಷಣಾ ಅಂಶಗಳು, ಮರಳಿನ ವ್ಯಾಪ್ತಿ, ಪ್ರವಾಸಿಗರಿಗೆ ಸೂಕ್ತವಾಗುವ ಸೌಲಭ್ಯಗಳು ಸಹಿತ ಎಲ್ಲ ಅಂಶಗಳನ್ನು ಪರಿಶೀಲಿಸಿದೆ.
ಮುಂದೇನು? :
ತಜ್ಞರ ವರದಿಯನ್ನು ಕೇಂದ್ರವು ಪರಿಶೀಲಿಸಿದ ಬಳಿಕ ತಣ್ಣೀರುಬಾವಿ ಬೀಚ್‌ನಲ್ಲಿ ಯಾವೆಲ್ಲ ಸೌಕರ್ಯಗಳನ್ನು ತುರ್ತಾಗಿ ಕೈಗೊಳ್ಳಬೇಕಾದ ಅಂಶಗಳ ಆಧಾರದಲ್ಲಿ ಟೆಂಡರ್ ಕರೆದು ವಿವಿಧ ಕಾಮಗಾರಿ ನಡೆಸಲು ನಿರ್ದೇಶನ ನೀಡಲಿದೆ.
ಗರಿಷ್ಠ ಸುಮಾರು 10 ಕೋ.ರೂ. ಇದಕ್ಕಾಗಿ ವೆಚ್ಚ ಮಾಡುವ ಸಾಧ್ಯತೆ ಇದೆ. ಕಾಮಗಾರಿ ಪೂರ್ಣವಾದ ಬಳಿಕ ಅದನ್ನು ಪರಿಶೀಲಿಸಿ ಕೇಂದ್ರ ಸರಕಾರವು ಡೆನ್ಮಾರ್ಕ್‌ನಲ್ಲಿರುವ
ಫೌಂಡೇಶನ್ ಫಾರ್ ಎನ್ವಿರಾನ್ಮೆಂಟ್ ಎಜುಕೇಶನ್ ಸಂಸ್ಥೆಗೆ ವರದಿ ಕಳುಹಿಸಿ ಬ್ಲೂ ಫ್ಲ್ಯಾಗ್ ಮಾನ್ಯತೆ ನೀಡಲು ಕೋರಲಾಗುತ್ತದೆ. ಇದರ ಆಧಾರದಂತೆ ಡೆನ್ಮಾರ್ಕ್ ತಂಡ ತಣ್ಣೀರುಬಾವಿಗೆ ಆಗಮಿಸಿ, ಮಾನ್ಯತೆ ನೀಡುವ ಬಗ್ಗೆ ಕ್ರಮ ಕೈಗೊಳ್ಳಲಿದೆ.
ಏನಿದು ಬ್ಲೂ ಫ್ಲ್ಯಾಗ್? :
ಕಡಲ ತೀರ (ಬೀಚ್)ಗಳಲ್ಲಿನ ಸ್ವಚ್ಚತೆ, ಪರಿಸರ ಸ್ನೇಹಿ ವಾತಾವರಣ ಮತ್ತಿತರ ಅಂಶಗಳನ್ನು ಪರಿಗಣಿಸಿ ಪರಿಸರ ಶಿಕ್ಷಣ ವೇದಿಕೆ (ಎಫ್.ಇ.ಇ-ಫೌಂಡೇಶನ್ ಫಾರ್ ಎನ್ವಿರಾನ್ಮೆಂಟ್ ಎಜುಕೇಶನ್) ಬ್ಲೂ ಫ್ಲ್ಯಾಗ್ ಪ್ರಮಾಣ ಪತ್ರ ನೀಡುತ್ತದೆ. ಅಂತಾರಾಷ್ಟ್ರೀಯ ಮಟ್ಟದ ಡೆನ್ಮಾರ್ಕ್‌ನಲ್ಲಿರುವ ಈ ಸಂಸ್ಥೆಯು ಪರಿಸರ ಶಿಕ್ಷಣ ಹಾಗೂ ಮಾಹಿತಿ, ನೀರಿನ ಗುಣಮಟ್ಟ, ಪರಿಸರ ನಿರ್ವಹಣೆ, ಸಂರಕ್ಷಣೆ, ಭದ್ರತೆ ಹಾಗೂ ಸೇವೆ ಎಂಬ ಪ್ರಮುಖ ಭಾಗಗಳಲ್ಲಿ 33 ಮಾನದಂಡಗಳನ್ನಿಟ್ಟುಕೊಂಡು ಈ ಮಾನ್ಯತೆ ನೀಡುತ್ತದೆ. ಇದನ್ನು ಭಾರತ ಸಹಿತ 47 ರಾಷ್ಟ್ರಗಳು ಮಾನ್ಯ ಮಾಡಿವೆ. ಇಂತಹ ಪ್ರಮಾಣಪತ್ರ ಪಡೆದ ಬೀಚ್‌ಗಳಲ್ಲಿ ನೀಲಿ ಬಣ್ಣದ ಧ್ವಜಾರೋಹಣ ಮಾಡಲಾಗುತ್ತದೆ. ವಿದೇಶಗಳಲ್ಲಿ ಇಂತಹ ಪ್ರಮಾಣಪತ್ರ ಪಡೆದ ಬೀಚ್‌ಗಳಿಗೆ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಹೀಗಾಗಿ ಭಾರತೀಯ ಪ್ರವಾಸೋದ್ಯಮ ಅಭಿವೃದ್ಧಿ ದೃಷ್ಟಿಯಿಂದ ಇಂತಹ ಪ್ರಮಾಣಪತ್ರ ಪಡೆಯುವುದು ಅತ್ಯಂತ ಪ್ರಮುಖವಾಗಿದೆ.
ಏನಿರಲಿದೆ? :
- ಶುದ್ಧ ಕುಡಿಯುವ ನೀರು
- ಸುಸಜ್ಜಿತ ಶೌಚಾಲಯ
- ಸೋಲಾರ್ ಪವರ್
- ತ್ಯಾಜ್ಯ ನಿರ್ವಹಣ ಘಟಕ
- ಪ್ರವಾಸಿಗರಿಗೆ ಅತ್ಯುತ್ತಮ ಕಾಲುದಾರಿ
- ಲ್ಯಾಂಡ್‌ಸ್ಕೇಪಿಂಗ್ ಲೈಟಿಂಗ್
- ಕುಳಿತುಕೊಳ್ಳಲು ವ್ಯವಸ್ಥೆ
- ಹೊರಾಂಗಣ ಕ್ರೀಡಾಕೂಟದ ಪರಿಕರ, ವ್ಯವಸ್ಥೆ
- ಸಿಸಿಟಿವಿ/ ಕಂಟ್ರೋಲ್ ರೂಂ
- ಪ್ರಥಮ ಚಿಕಿತ್ಸಾ ಕೇಂದ್ರ
- ಭದ್ರತೆಗಾಗಿ ವಾಚ್ ಟವರ್, ಬೀಚ್ ಭದ್ರತೆಗೆ ಆದ್ಯತೆ
- ಬೀಚ್ ಸುತ್ತ ಪರಿಸರ ಸೂಕ್ತ ವ್ಯವಸ್ಥೆ
- ಪಾರ್ಕಿಂಗ್ ವ್ಯವಸ್ಥೆ