Advertisement

ಥಾಣೆ ಬಂಟ್ಸ್‌ ಅಸೋಸಿಯೇಶನ್‌ ಇದರ 13ನೇ ವಾರ್ಷಿಕೋತ್ಸವ ಸಂಭ್ರಮ

03:53 PM Feb 09, 2018 | |

ಥಾಣೆ: ಹದಿಮೂರು ವರ್ಷಗಳ ಹಿಂದೆ ಕೇವಲ ಏಳು ಮಂದಿ ಹಿರಿಯರ ನೇತೃತ್ವದಲ್ಲಿ ಸ್ಥಾಪನೆಗೊಂಡ ಥಾಣೆ ಬಂಟ್ಸ್‌ ಅಸೋಸಿಯೇಶನ್‌ ಇಂದು ವಿಶಾಲ ವೃಕ್ಷವಾಗಿ ಬೆಳೆದು ನಿಂತಿದೆ. ಎಲ್ಲಾ ಮಾಜಿ ಅಧ್ಯಕ್ಷರುಗಳ, ಮಾಜಿ ಮಹಿಳಾ ಕಾರ್ಯಾಧ್ಯಕ್ಷೆಯರು, ಯುವ ವಿಭಾಗದವರು ಸಂಸ್ಥೆಯ ಅಭಿವೃದ್ಧಿಯಲ್ಲಿ ಹಗಲಿರುಳು ಶ್ರಮಿಸಿದ್ದಾರೆ. ಇಂದಿಗೂ ಶ್ರಮಿಸುತ್ತಿದ್ದಾರೆ ಎನ್ನಲು ಹೆಮ್ಮೆಯಾಗುತ್ತಿದೆ. ಪರಿಸರದ ಸಮಾಜ ಬಾಂಧವರ ವೈದ್ಯಕೀಯ, ಶೈಕ್ಷಣಿಕ ಇನ್ನಿತರ ಆಶೋತ್ತರಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಸ್ಥಾಪನೆಗೊಂಡ ಸಂಸ್ಥೆಯು ಇಂದು ದಾನಿಗಳ ಸಹಕಾರದಿಂದ ಧ್ಯೇಯೋದ್ಧೇಶಗಳನ್ನು ಪೂರೈಸುವಲ್ಲೂ ಯಶಸ್ವಿಯಾಗಿದೆ. ಸಂಸ್ಥೆಯ ಭವಿಷ್ಯದ ಎಲ್ಲಾ ಕಾರ್ಯಗಳಿಗೆ ಸಮಾಜ ಬಾಂಧವರ ಸಹಕಾರ, ಪ್ರೋತ್ಸಾಹ ಸದಾಯಿರಲಿ ಎಂದು ಥಾಣೆ ಬಂಟ್ಸ್‌ ಅಸೋಸಿಯೇಶನ್‌ ಅಧ್ಯಕ್ಷ ಕುಶಲ್‌ ಸಿ. ಭಂಡಾರಿ ನುಡಿದರು.

Advertisement

ಫೆ. 2 ರಂದು ಸಂಜೆ ಥಾಣೆ ಪಶ್ಚಿಮದ ಪವರ್‌ನಗರ ಹೀರಾನಂದಾನಿ ಮೆಡೋಲ್ಸ್‌ನಲ್ಲಿರುವ ಕಾಶೀನಾಥ್‌ ಘಾಣೇಕರ್‌ ಸಭಾಗೃಹದಲ್ಲಿ ನಡೆದ ಥಾಣೆ ಬಂಟ್ಸ್‌ ಅಸೋಸಿಯೇಶನ್‌ನ 13 ನೇ ವಾರ್ಷಿಕೋತ್ಸವ ಸಂಭ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಇವರು, ಸಂಸ್ಥೆಯು ಇತರ ಸಂಘಟನೆಗಳಿಗೆ ಪೈಪೋಟಿಗೆ ಇಳಿಯದೆ, ಯಾವುದೇ ರೀತಿಯ ದುಂದುವೆಚ್ಚಗಳಿಗೆ ಆಸ್ಪಧ ನೀಡದೆ, ನಾಡಿನ ಸಂಸ್ಕೃತಿ-ಸಂಸ್ಕಾರಗಳನ್ನು ಬಿಂಬಿಸಿ, ಯುವಪೀಳಿಗೆಗೆ ಮಾದರಿಯಾಗುವಂತಹ ಕಾರ್ಯಕ್ರಮಗಳಿಗೆ ಒತ್ತು ನೀಡುತ್ತಾ ಬಂದಿದೆ. ಹಿರಿಯ ಆಶಯಗಳನ್ನು ಈಡೇರಿಸುವಲ್ಲಿ ನಾವೆಲ್ಲರು ಒಗ್ಗಟ್ಟಾಗಿ, ಒಮ್ಮತದಿಂದ ಇನ್ನಷ್ಟು ಕಾರ್ಯಯೋಜನೆಗಳನ್ನು ರೂಪುಗೊಳಿಸುವತ್ತ ಮುಂದಾಗಬೇಕು ಎಂದರು. ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಕಟೀಲು ಎಸ್‌ಡಿಪಿಟಿ ಕಾಲೇಜಿನ ಪ್ರಾಂಶುಪಾಲ ಎಂ. ಬಾಲಕೃಷ್ಣ ಶೆಟ್ಟಿ ಅವರು ಮಾತನಾಡಿ, ಸಂಸ್ಥೆಯ ಸದಸ್ಯರ ಉತ್ಸಾಹ, ಒಗ್ಗಟ್ಟು, ಒಮ್ಮತದ ಇಂದಿನ ಸಂಭ್ರಮವನ್ನು ಕಂಡು ಮೂಕವಿಸ್ಮಿತನಾದೆ. ಹಿರಿಯರು-ಕಿರಿಯರು ಎಂಬ ತಾರತಮ್ಯವಿಲ್ಲದೆ ಸಂಸ್ಥೆಯ ಕಾರ್ಯಕಲಾಪಗಳಲ್ಲಿ ಸಕ್ರಿಯವಾಗಿ ಉತ್ಸಾಹದಿಂದ ಕಾರ್ಯನಿರ್ವಹಿಸುತ್ತಿದ್ದೀರಿ. ಇದು ಇತರರಿಗೆ ಮಾದರಿಯಾಗಿದೆ. ಕೇವಲ ಮನರಂಜನೆಗೆ ಸೀಮಿತವಾಗಿರದ ಇಂದಿನ ಸಾಂಸ್ಕೃತಿಕ ಕಾರ್ಯಕ್ರಮಗಳು ನಾಡಿನ ಸಂಸ್ಕೃತಿ-ಸಂಸ್ಕಾರಗಳನ್ನು ಬಿಂಬಿಸುವಂತಿತ್ತು. ಹಿರಿಯರ ಅಂದಿನ ಶ್ರಮ, ಚಿಂತನೆಯ ಪ್ರತಿರೂಪವಾಗಿ ಸಂಸ್ಥೆಯು ಹುಟ್ಟಿಕೊಂಡಿದ್ದು, ಅದರ ಆಶ್ರಯದಲ್ಲಿ ನಿವಿಂದು ಬೆಳೆಯುತ್ತಿದ್ದೀರಿ ಎಂಬುವುದನ್ನು ಮರೆಯಬಾರದು. ಹಿರಿಯರ ಶ್ರಮವಿಂದು ಫಲಪ್ರದವಾಗುತ್ತಿದೆ. ನಮ್ಮ ಸಂಸ್ಕೃತಿ, ಸಂಸ್ಕಾರ, ಆಚಾರ-ವಿಚಾರಗಳನ್ನು ಕಾಪಾಡಿಕೊಳ್ಳುವುದರೊಂದಿಗೆ ಆಧುನಿಕತೆಯನ್ನು ಯಾವ ರೀತಿಯಲ್ಲಿ ಮೈಗೂಡಿಸಿಕೊಳ್ಳಬೇಕು ಎಂಬುವುದನ್ನು ಇಂತಹ ಸಂಸ್ಥೆಗಳಿಂದ ಮಕ್ಕಳು ಕಲಿಯಬೇಕು ಎಂದರು.

ಗೌರವ ಅತಿಥಿಯಾಗಿ ಉಪಸ್ಥಿತರಿದ್ದ ವಿಕೆ ಗ್ರೂಪ್‌ ಆಫ್‌ ಕಂಪೆನೀಸ್‌ ಇದರ ಮಾಲಕ ಕೆ. ಎಂ. ಶೆಟ್ಟಿ ಅವರು ಮಾತನಾಡಿ, ಥಾಣೆ ಬಂಟ್ಸ್‌ನ ಸಮಾಜಪರ ಕಾರ್ಯಗಳು ಮೆಚ್ಚುವಂಥದ್ದಾಗಿದೆ. ಶೈಕ್ಷಣಿಕ, ಸಾಂಸ್ಕೃತಿಕ, ಸಾಮಾಜಿಕ, ವೈದ್ಯಕೀಯ ಇನ್ನಿತರ ಕ್ಷೇತ್ರಗಳಲ್ಲಿ ಸಂಸ್ಥೆಯ ಸಾಧನೆ ಅಪಾರವಾಗಿದೆ. ಸಂಸ್ಥೆಯಿಂದ ಸಹಾಯ ಪಡೆದ ಯುವ ವರ್ಗದವರು ಮುಂದಿನ ದಿನಗಳಲ್ಲಿ ಅವರು ಸಂಸ್ಥೆಯ ಋಣ ತೀರಿಸುವ ಕಾರ್ಯದಲ್ಲೂ ತೊಡಗಬೇಕು ಎಂದು ನುಡಿದರು. ಸಮಾರಂಭದಲ್ಲಿ ಥಾಣೆ ಮಾಜಿವಾಡಾದ ಹಿರಿಯ ಸಮಾಜ ಸೇವಕ ಆನಂದ ಶೆಟ್ಟಿ ಮತ್ತು ಜಯಂತಿ ಎ. ಶೆಟ್ಟಿ ದಂಪತಿ ಹಾಗೂ ಥಾಣೆಯ ಹಿರಿಯ ಹೊಟೇಲ್‌ ಉದ್ಯಮಿ ದಿವಾಕರ್‌ ಶೆಟ್ಟಿ ಅವರನ್ನು ಗಣ್ಯರ ಉಪಸ್ಥಿತಿಯಲ್ಲಿ ಸಮ್ಮಾನಿಸಲಾಯಿತು. ವಿಶೇಷ ಅತಿಥಿಯಾಗಿ ಪಾಲ್ಗೊಂಡ ವಿಶ್ವ ಬಂಟರ ಸಂಘಗಳ ಒಕ್ಕೂಟದ ನೂತನ ಅಧ್ಯಕ್ಷ ಐಕಳ ಹರೀಶ್‌ ಶೆಟ್ಟಿ ಅವರನ್ನು ಸಂಸ್ಥೆಯ ವತಿಯಿಂದ ಪದಾಧಿಕಾರಿಗಳು ಅಭಿನಂದಿಸಿ ಗೌರವಿಸಿದರು. ಅಂಬರ್‌ ಕ್ಯಾಟರರ್ ಚಲನಚಿತ್ರದ ನಾಯಕ ನಟ ಸೌರಭ್‌ ಎಸ್‌. ಭಂಡಾರಿ ಅವರು ಆಗಮಿಸಿ ಮಾತನಾಡಿ ಶುಭಹಾರೈಸಿದರು.

ಕಾರ್ಕಳ  ತಾಲೂಕು ಕಾಂಗ್ರೆಸ್‌ ನಾಯಕ ಉದಯ ಶೆಟ್ಟಿ ಮುನಿಯಾಲು ಅವರು ಆಗಮಿಸಿ ಶುಭಹಾರೈಸಿದರು. ಅತಿಥಿ-ಗಣ್ಯರುಗಳನ್ನು ಸಂಸ್ಥೆಯ ಅಧ್ಯಕ್ಷ ಕುಶಲ್‌ ಸಿ. ಭಂಡಾರಿ ಅವರು ಗೌರವಿಸಿದರು. ವೇದಿಕೆಯಲ್ಲಿ ಥಾಣೆ ಬಂಟ್ಸ್‌ನ ಉಪಾಧ್ಯಕ್ಷ ವೇಣುಗೋಪಾಲ್‌ ಎಲ್‌. ಶೆಟ್ಟಿ, ಕಾರ್ಯದರ್ಶಿ ಸುನೀಲ್‌ ಜೆ. ಶೆಟ್ಟಿ, ಕೋಶಾಧಿಕಾರಿ ಭಾಸ್ಕರ್‌ ಎನ್‌. ಶೆಟ್ಟಿ, ಜತೆ ಕಾರ್ಯದರ್ಶಿ ಅಶೋಕ್‌ ಎಂ. ಶೆಟ್ಟಿ, ಜತೆ ಕೋಶಾಧಿಕಾರಿ ಚಂದ್ರಶೇಖರ್‌ ಎಸ್‌. ಶೆಟ್ಟಿ, ಸಾಂಸ್ಕೃತಿಕ ವಿಭಾಗದ ಕಾರ್ಯಾಧ್ಯಕ್ಷ ಜಯಪ್ರಕಾಶ್‌ ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸುಮತಿ ಕೆ. ಶೆಟ್ಟಿ, ಯುವ ವಿಭಾಗದ ಕಾರ್ಯಾಧ್ಯಕ್ಷ ರಂಜನ್‌ ಆರ್‌. ಶೆಟ್ಟಿ ಉಪಸ್ಥಿತರಿದ್ದರು.

ಚಿತ್ರಾ ಶೆಟ್ಟಿ ಮತ್ತು ಜ್ಯೋತಿ ಶೆಟ್ಟಿ ಅವರು ಪ್ರಾರ್ಥನೆಗೈದರು. ಗಣ್ಯರು ದೀಪಪ್ರಜ್ವಲಿಸಿ, ಬಂಟ ಗೀತೆಯೊಂದಿಗೆ ಸಮಾರಂಭಕ್ಕೆ ಚಾಲನೆ ನೀಡಲಾಯಿತು. ಕೋಶಾಧಿಕಾರಿ ಭಾಸ್ಕರ್‌ ಎನ್‌. ಶೆಟ್ಟಿ, ಜತೆ ಕೋಶಾಧಿಕಾರಿ ಚಂದ್ರಶೇಖರ್‌ ಎಸ್‌. ಶೆಟ್ಟಿ ಅವರು ಅತಿಥಿಗಳನ್ನು ಪರಿಚಯಿಸಿದರು. ಉಪಾಧ್ಯಕ್ಷ ವೇಣುಗೋಪಾಲ್‌ ಎಲ್‌. ಶೆಟ್ಟಿ ಸ್ವಾಗತಿಸಿದರು. ಕಾರ್ಯದರ್ಶಿ ಸುನಿಲ್‌ ಜೆ. ಶೆಟ್ಟಿ ವಾರ್ಷಿಕ ವರದಿ ಮಂಡಿಸಿದರು. ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸುಮತಿ ಕೆ. ಶೆಟ್ಟಿ, ಯುವ ವಿಭಾಗದ ಕಾರ್ಯಾಧ್ಯಕ್ಷ ರಂಜನ್‌ ಆರ್‌. ಶೆಟ್ಟಿ ಆಯಾಯ ವಿಭಾಗದ ವರದಿ ಮಂಡಿಸಿದರು. ಮಹಿಳಾ ವಿಭಾಗದ ಮಾಜಿ ಕಾರ್ಯಾಧ್ಯಕ್ಷೆ ಪ್ರಮೋದಾ ಮಾಡಾ, ಸಾಂಸ್ಕೃತಿಕ ಸಮಿತಿಯ ಕಾರ್ಯಾಧ್ಯಕ್ಷ ಜಯಪ್ರಕಾಶ್‌ ಶೆಟ್ಟಿ ಸಮ್ಮಾನ ಪತ್ರ ವಾಚಿಸಿದರು. ಪ್ರತಿಭಾವಂತ ಮಕ್ಕಳಿಗೆ, ಕ್ರೀಡಾ ಕ್ಷೇತ್ರದ ಸಾಧಕರನ್ನು ಗೌರವಿಸಲಾಯಿತು. ಮಕ್ಕಳ ಯಾದಿಯನ್ನು ಕುಶಲಾ ಶೆಟ್ಟಿ ವಾಚಿಸಿದರು.

Advertisement

ವಿವಿಧ ಸಂಘಟನೆಗಳ ಪದಾಧಿಕಾರಿಗಳನ್ನು, ಗಣ್ಯರನ್ನು ಗೌರವಿಸಲಾಯಿತು. ಕಲಾ ಸಂಘಟಕ ಕರ್ನೂರು ಮೋಹನ್‌ ರೈ ಕಾರ್ಯಕ್ರಮ ನಿರ್ವಹಿಸಿದರು. ಜತೆ ಕಾರ್ಯದರ್ಶಿ ಅಶೋಕ್‌ ಎಂ. ಶೆಟ್ಟಿ ವಂದಿಸಿದರು. ಸದಸ್ಯ ಬಾಂಧವರಿಂದ ಮಕ್ಕಳಿಂದ ನೃತ್ಯ ವೈವಿಧ್ಯ, ಮಹಿಳಾ ವಿಭಾಗದಿಂದ ಪ್ರಹಸನ,  ಜಯಪ್ರಕಾಶ್‌ ಮಂಗಲ್ಪಾಡಿ ರಚಿಸಿ, ಬಾಬಾ ಪ್ರಸಾದ್‌ ಅರಸ ನಿರ್ದೇಶಿಸಿರುವ ನಮದಾನೆ ಇಂಚ ನಾಟಕ ಪ್ರದರ್ಶನಗೊಂಡಿತು. ಸ್ನೇಹ ಸೌರಭದ ಸಂಪಾದಕ ನಿತ್ಯಾನಂದ ಬೆಳುವಾಯಿ ಸಾಂಸ್ಕೃತಿಕ ಕಾರ್ಯಕ್ರಮ ನಿರ್ವಹಿಸಿದರು. ಕೊನೆಯಲ್ಲಿ ಭೋಜನದ ವ್ಯವಸ್ಥೆಯನ್ನು ಆಯೋಜಿಸಲಾಗಿತ್ತು. ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು. 

ನನ್ನಂತಹ ಸಣ್ಣ ವ್ಯಕ್ತಿಗೆ ಇಷ್ಟು ದೊಡ್ಡ ವೇದಿಕೆಯಲ್ಲಿ, ಗಣ್ಯರ ಉಪಸ್ಥಿತಿಯಲ್ಲಿ ಸಮ್ಮಾನಿಸಿದ್ದೀರಿ. ಇದು ನನ್ನ ಸೌಭಾಗ್ಯ. ಈ ಸಮ್ಮಾನಕ್ಕಿಂತ ದೊಡ್ಡದು ನನ್ನ ಬದುಕಿನಲ್ಲಿ ಇನ್ನೇನು ಇಲ್ಲ. ಸಂಸ್ಥೆಗೆ ನನ್ನಿಂದಾದ ಸಹಾಯ, ಸಹಕಾರ ಸದಾಯಿದೆ.
ಆನಂದ ಶೆಟ್ಟಿ (ಸಮ್ಮಾನಿತರು).

ಬಹಳ ಕಷ್ಟಪಟ್ಟು ಇಂದು ಈ ಮಟ್ಟಕ್ಕೆ ಬೆಳೆದಿದ್ದೇನೆ. ಸಮಾಜದ ಬಗ್ಗೆ ನನಗೆ ಅಭಿಮಾನವಿದೆ. ನನ್ನಿಂದ ಸಾಧ್ಯವಾದಷ್ಟು ಸಹಾಯ ಸಂಸ್ಥೆಗೆ ನೀಡುತ್ತೇನೆ. ನನ್ನಂತವರನ್ನು ಗುರುತಿಸಿ ಸಮ್ಮಾನಿಸುವ ಹೃದಯವಂತಿಕೆಯನ್ನು ಥಾಣೆ ಬಂಟ್ಸ್‌ನಿಂದ ಇತರ ಸಂಘಟನೆಗಳು ಕಲಿಯಬೇಕು 
ದಿವಾಕರ್‌ ಶೆಟ್ಟಿ (ಸಮ್ಮಾನಿತರು).

ದಿವಂಗತ ಪ್ರೊ| ಸೀತಾರಾಮ ಶೆಟ್ಟಿ ಅವರು ದೈಹಿಕವಾಗಿ ನಮ್ಮನ್ನು ಅಗಲಿದರು ಥಾಣೆ ಬಂಟ್ಸ್‌ ನ ಪ್ರತಿಯೊಂದು ಸಮಾರಂಭಗಳಲ್ಲಿ ಅವರು ಎದ್ದು ಕಾಣುತ್ತಾರೆ ಎಂಬುವುದಕ್ಕೆ ಅಚ್ಚುಕಟ್ಟಾದ ಸಮಾರಂಭಗಳೇ ಸಾಕ್ಷಿ. ಅವರು ಹಾಕಿಕೊಟ್ಟ ಸಂಸ್ಕೃತಿ-ಸಂಸ್ಕಾರಗಳು ಇಂದಿಗೂ ಇಲ್ಲಿ ಜೀವಂತವಾಗಿ ಕಾಣಸಿಗುತ್ತದೆ. ಇದು ನಿಜವಾಗಿಯೂ ನಮ್ಮ ಭಾಗ್ಯ. ಮುಂದಿನ ದಿನಗಳಲ್ಲಿ ನಾವೆಲ್ಲರು ಒಟ್ಟಿಗೆ ಒಂದಾಗಿ ಸಮಾಜದ ಏಳ್ಗೆಗಾಗಿ ಶ್ರಮಿಸೋಣ. ಅದಕ್ಕೆ  ಎಲ್ಲರ ಸಹಕಾರ ಸದಾಯಿರಲಿ. ವಿಶೇಷ ರೀತಿಯಲ್ಲಿ ನನ್ನನ್ನು ಸಮ್ಮಾನಿಸಿರುವುದಕ್ಕೆ ಹೃದಯ ತುಂಬಿ ಬಂದಿದೆ. ಸಂಸ್ಥೆಯ ಎಲ್ಲಾ ಪದಾಧಿಕಾರಿಗಳಿಗೆ ವಂದನೆಗಳು 
 ಐಕಳ ಹರೀಶ್‌ ಶೆಟ್ಟಿ
 (ಅಧ್ಯಕ್ಷರು : ವಿಶ್ವ ಬಂಟರ ಸಂಘಗಳ ಒಕ್ಕೂಟ).

ಚಿತ್ರ-ವರದಿ : ಸುಭಾಷ್‌ ಶಿರಿಯಾ

Advertisement

Udayavani is now on Telegram. Click here to join our channel and stay updated with the latest news.

Next