Advertisement

ಥಾಣೆ ಬಂಟ್ಸ್‌ ಅಸೋಸಿಯೇಶನ್‌ ವಾರ್ಷಿಕ ಶೈಕ್ಷಣಿಕ ನೆರವು ವಿತರಣೆ

02:30 PM Jul 12, 2017 | Team Udayavani |

 ಥಾಣೆ: ವಿದ್ಯೆಯೊಂದಿಗೆ ಕ್ರೀಡಾಕ್ಷೇತ್ರದಲ್ಲಿ ಮಕ್ಕಳನ್ನು ಪ್ರೋತ್ಸಾಹಿಸ ಬೇಕು. ಇಂದಿನ ಆಧುನಿಕ ಯುಗದಲ್ಲಿ ಮಕ್ಕಳು ಮೊಬೈಲ್‌, ಇಂಟರ್‌ನೆಟ್‌ ಮುಖಾಂತರ ಹಾದಿ ತಪ್ಪುತ್ತಿದ್ದು, ಇದರ ಬಗ್ಗೆ ಪಾಲಕರು ಹಾಗೂ ಶಿಕ್ಷಣ ಸಂಸ್ಥೆಗಳು ಎಚ್ಚರ ವಹಿಸಬೇಕು. ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡುವುದರೊಂದಿಗೆ ಅವರನ್ನು ಸುಸಂಸ್ಕೃತರನ್ನಾಗಿಸುವ ಜವಾಬ್ದಾರಿ ನಮ್ಮ ಮೇಲಿದೆ. ಥಾಣೆ ಬಂಟ ಸಮಾಜದ ಆರ್ಥಿಕವಾಗಿ ಹಿಂದುಳಿದ ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದೆ. ಬಡ ಮಕ್ಕಳನ್ನು ಶೈಕ್ಷಣಿಕವಾಗಿ ದತ್ತು ಸ್ವೀಕರಿಸಿ ಅವರ ಸಂಪೂರ್ಣ ವಿದ್ಯಾಭ್ಯಾಸದ ಖರ್ಚನ್ನು ಭರಿಸುತ್ತಿದೆ ಎಂದು ಥಾಣೆ ಬಂಟ್ಸ್‌ ಅಸೋಸಿಯೇಶನ್‌ ಅಧ್ಯಕ್ಷ ಚಂದ್ರಹಾಸ ಎಸ್‌. ಶೆಟ್ಟಿ ಅವರು  ಹೇಳಿದರು.

Advertisement

ಜು. 9ರಂದು ಥಾಣೆ ಪಶ್ಚಿಮದ ಎಲ್‌. ಬಿ. ಎಸ್‌. ಮಾರ್ಗದ ಸಮೀಪದಲ್ಲಿರುವ ಅರ್ನೆಸ್ಟ್‌ ಬ್ಯಾಂಕ್ವೆಟ್‌ ಸಭಾಗೃಹದಲ್ಲಿ ನಡೆದ ಥಾಣೆ ಬಂಟ್ಸ್‌ ಅಸೋಸಿಯೇಶನ್‌ ಇದರ ವಾರ್ಷಿಕ ಶೈಕ್ಷಣಿಕ ನೆರವು ವಿತರಣೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪ್ರತೀ ವರ್ಷದಂತೆ ಈ ವರ್ಷವೂ ಶೈಕ್ಷಣಿಕ ನೆರವು ನೀಡಿರುವುದಲ್ಲದೆ, ಈ ಬಾರಿ 27 ಕ್ಕೂ ಅಧಿಕ ಬಡ ಮಕ್ಕಳನ್ನು ಶೈಕ್ಷಣಿಕವಾಗಿ ದತ್ತು ಸ್ವೀಕರಿಸಲಾಗಿದೆ. ಪರಿಸರದ ಹೆಚ್ಚಿನ ಮಕ್ಕಳಿಗೆ ವಿದ್ಯಾರ್ಥಿ ವೇತನವನ್ನು ನೀಡಿದ್ದೇವೆ ಎನ್ನಲು ಹೆಮ್ಮೆಯಾಗುತ್ತಿದೆ. ಸಂಸ್ಥೆಯ ಎಲ್ಲಾ ಸಮಾಜಪರ ಕಾರ್ಯಕ್ರಮಗಳಿಗೆ ಎಲ್ಲರ ಪ್ರೋತ್ಸಾಹ, ಸಹಕಾರವಿರಲಿ ಎಂದು ನುಡಿದು ವಿದ್ಯಾರ್ಥಿಗಳಿಗೆ ಶುಭಹಾರೈಸಿದರು.

ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಮುಲುಂಡ್‌ ಬಂಟ್ಸ್‌ನ ಅಧ್ಯಕ್ಷ ಎಸ್‌. ಬಿ. ಶೆಟ್ಟಿ ಅವರು ಮಾತನಾಡಿ, ಮಕ್ಕಳ ಪ್ರತಿಭೆಯನ್ನು ಗುರುತಿಸಿ ಅವರ ಆಸಕ್ತಿಗೆ ಅನುಸಾರವಾಗಿ ಶಿಕ್ಷಣವನ್ನು ನೀಡಬೇಕೇ ಹೊರತು ಅವರಿಗೆ ಮಾನಸಿಕವಾಗಿ ಒತ್ತಡವನ್ನು ಹಾಕಬಾರದು. ಮಕ್ಕಳಲ್ಲಿ ನಮ್ಮ ಸಂಸ್ಕೃತಿ, ಸಂಸ್ಕಾರ, ಆಚಾರ, ವಿಚಾರಗಳೊಂದಿಗೆ ದೇಶಭಕ್ತಿಯನ್ನು ಮೂಡಿಸಬೇಕು. ನಮ್ಮ ಸಮಾಜದಲ್ಲಿ ದಾನಿಗಳಿಗೆ ಯಾವುದೇ ರೀತಿಯ ಕೊರತೆಯಿಲ್ಲ. ಶಿಕ್ಷಣಕ್ಕಾಗಿ ಎಲ್ಲರು ದೇಣಿಗೆ ನೀಡಲು ಮುಂದೆ ಬರಬೇಕು. ಥಾಣೆ ಬಂಟ್ಸ್‌ ಅಸೋಸಿಯೇಶನ್‌ನ ಇಂತಹ ಕಾರ್ಯಕ್ರಮಗಳು ಅರ್ಥಪೂರ್ಣವಾಗಿದೆ. ಸಂಘ-ಸಂಸ್ಥೆಗಳು ಇದೇ ರೀತಿಯಲ್ಲಿ ಶೈಕ್ಷಣಿಕ ನೆರವು ನೀಡುವ ಕಾರ್ಯಕ್ರಮಗಳನ್ನು ಆಯೋಜಿಸಿದಾಗ ಸಮಾಜ ಸುಸಂಸ್ಕೃತರಾಗಿ, ಸಮಾಜ ಸೇವೆಯ ಉದ್ದೇಶ ಪೂರ್ಣಗೊಳ್ಳಲಿದೆ ಎಂದು ನುಡಿದರು.

ಇನ್ನೋರ್ವ ಅತಿಥಿ, ಉದ್ಯಮಿ ಡಾ| ಆರ್‌. ಕೆ. ಶೆಟ್ಟಿ ಅವರು ಮಾತನಾಡಿ, ನಾವು ಸಮಾಜವನ್ನು ಕಟ್ಟುವ ಕೆಲಸವನ್ನು ಮಾಡಬೇಕು. ಮಕ್ಕಳಿಗೆ ಇಂದು ಶಿಕ್ಷಣಕ್ಕಾಗಿ ನೀಡುವ ದೇಣಿಗೆಯು ನಮಗೆ ಸಮಾಜ ಸೇವೆ ಮಾಡಲು ಒದಗಿರುವ ಭಾಗ್ಯ ಎಂದು ನಾವು ಪರಿಗಣಿಸಬೇಕು. ನಾವು ಆದಷ್ಟು ಮಕ್ಕಳನ್ನು ಶೈಕ್ಷಣಿಕವಾಗಿ ದತ್ತು ಸ್ವೀಕರಿಸಿ ಅವರ ಸಂಪೂರ್ಣ ವಿದ್ಯಾಭ್ಯಾಸದ ವೆಚ್ಚವನ್ನು ಭರಿಸುವಂತೆ ನೋಡಿಕೊಳ್ಳಬೇಕು. ಅದಕ್ಕಾಗಿ ದಾನಿಗಳನ್ನು ಗುರುತಿಸುವ ಜವಾಬ್ದಾರಿ ಸಂಘ-ಸಂಸ್ಥೆಗಳ ಮೇಲಿದೆ. ಇಂತಹ ಕಾರ್ಯಕ್ಕೆ ನನ್ನ ಪ್ರೋತ್ಸಾಹ, ಸಹಕಾರ ಸದಾಯಿದೆ ಎಂದು ಹೇಳಿದರು.

ಅತಿಥಿಯಾಗಿ ಪಾಲ್ಗೊಂಡ ಹೊಟೇಲ್‌ ಉದ್ಯಮಿ ರಾಘವ ಶೆಟ್ಟಿ ಅವರು ಮಾತನಾಡಿ, ನಾವು ಹಿರಿಯರನ್ನು ಗೌರವಿಸುವ ಮನೋಭಾವನವನ್ನು ಬೆಳೆಸಿಕೊಂಡು ನಮ್ಮ ಮನೆಯೇ ದೇಗುಲ ಎಂದು ಪರಿಗಣಿಸಿಕೊಳ್ಳಬೇಕು. ನಾವು ಎಲ್ಲರೊಂದಿಗೆ ಸುಸಂಸ್ಕೃತರಾಗಿ ಗುರುತಿಸಿಕೊಂಡಾಗ ನಮ್ಮ ಜೀವನ ಸಾರ್ಥಕವಾಗುವುದು. ಥಾಣೆ ಬಂಟ್ಸ್‌ ಅಸೋಸಿಯೇಶನ್‌ನ ಕಾರ್ಯ ನಿಜವಾಗಿಯೂ ಅಭಿನಂದನೀಯವಾಗಿದೆ ಎಂದರು.

Advertisement

ಮಹಿಳಾ ವಿಭಾಗದ ಮಾಜಿ ಕಾರ್ಯಾಧ್ಯಕ್ಷೆ ಪ್ರಮೋದಾ ಮ್ಹಾಡ ಅವರು ಪ್ರಾರ್ಥನೆಗೈದರು. ಅತಿಥಿ-ಗಣ್ಯರು ದೀಪಪ್ರಜ್ವಲಿಸಿ ಸಮಾರಂಭವನ್ನು ಉದ್ಘಾಟಿಸಿದರು. ಸಂಸ್ಥೆಯ ಉಪಾಧ್ಯಕ್ಷ ಕುಶಲ್‌ ಸಿ. ಭಂಡಾರಿ ಪ್ರಾಸ್ತಾವಿಕವಾಗಿ ಮಾತನಾಡಿ ಸಂಸ್ಥೆಯ ಸಿದ್ಧಿ-ಸಾಧನೆಗಳನ್ನು ವಿವರಿಸಿದರು. ಶೈಕ್ಷಣಿಕ ಸಮಿತಿಯ ಕಾರ್ಯಾಧ್ಯಕ್ಷ ಸೀತಾರಾಮ ಜೆ. ಶೆಟ್ಟಿ ಅವರು ಅತಿಥಿಗಳನ್ನು ಸ್ವಾಗತಿಸಿದರು.

ಗೌರವ ಕಾರ್ಯದರ್ಶಿ ವೇಣುಗೋಪಾಲ್‌ ಶೆಟ್ಟಿ, ಜತೆ ಕಾರ್ಯದರ್ಶಿ ಭಾಸ್ಕರ ಎನ್‌. ಶೆಟ್ಟಿ, ಶಿಕ್ಷಣ ಸಮಿತಿಯ ಕಾರ್ಯಾಧ್ಯಕ್ಷ ಚಂದ್ರಶೇಖರ ಎಸ್‌. ಶೆಟ್ಟಿ, ಜತೆ ಕೋಶಾಧಿಕಾರಿ ಅಶೋಕ್‌ ಎನ್‌. ಶೆಟ್ಟಿ ಅವರು ಅತಿಥಿಗಳನ್ನು ಪರಿಚಯಿಸಿದರು. ಕೋಶಾಧಿಕಾರಿ ಸುನೀಲ್‌ ಜೆ. ಶೆಟ್ಟಿ ಅವರು ಕಾರ್ಯಕ್ರಮ ನಿರ್ವಹಿಸಿದರು. ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ರೇವತಿ ಎಸ್‌. ಶೆಟ್ಟಿ ಅವರು ವಂದಿಸಿದರು. ಯುವ ವಿಭಾಗದ ಕಾರ್ಯಾಧ್ಯಕ್ಷೆ ಪ್ರಿಯಾಂಕಾ ಎಸ್‌. ಶೆಟ್ಟಿ, ಮಹಿಳಾ ವಿಭಾಗದ ಸದಸ್ಯೆಯರು ವಿದ್ಯಾರ್ಥಿಗಳ ಯಾದಿಯನ್ನು ಓದಿದರು.

ಸಂಸ್ಥೆಯ ಸ್ಥಾಪಕಾಧ್ಯಕ್ಷ ಡಿ. ಜಿ. ಬೋಳಾರ್‌, ಮಾಜಿ ಅಧ್ಯಕ್ಷರುಗಳಾದ ಭಾಸ್ಕರ್‌ ಎಂ. ಶೆಟ್ಟಿ, ಸಿಎ ಕರುಣಾಕರ ಶೆಟ್ಟಿ, ಸಿಎ ಜಗದೀಶ್‌ ಶೆಟ್ಟಿ ಮಹಿಳಾ ವಿಭಾಗದ ಮಾಜಿ ಕಾರ್ಯಾಧ್ಯಕ್ಷೆಯರುಗಳಾದ ವಿದ್ಯಾ ಎಸ್‌. ಶೆಟ್ಟಿ, ದಿ| ಜ್ಯೋತಿ ಎಸ್‌. ಶೆಟ್ಟಿ, ಸುಲೋಚನಾ ಬಿ. ಶೆಟ್ಟಿ, ಪ್ರಮೋದಾ ಮ್ಹಾಡ, ಆರತಿ ವೈ. ಶೆಟ್ಟಿ,ಯುವ ವಿಭಾಗದ ಮಾಜಿ ಕಾರ್ಯಾಧ್ಯಕ್ಷೆ  ಕೀರ್ತಿ ಎಸ್‌. ಶೆಟ್ಟಿ, ಮತ್ತು ಸರ್ವ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ ಸದಸ್ಯರುಗಳ ಉಪಸ್ಥಿತಿಯಲ್ಲಿ ಕಾರ್ಯಕ್ರಮವು ನಡೆಯಿತು.

ಥಾಣೆ ಪರಿಸರದ ಸಮಾಜದ 300 ಕ್ಕೂ ಅಧಿಕ ಮಕ್ಕಳಿಗೆ ವಿದ್ಯಾರ್ಥಿ ವೇತನ ವಿತರಿಸಲಾಯಿತು. ಸುಮಾರು 10 ಲಕ್ಷಕ್ಕೂ ಅಧಿಕ ನಿಧಿಯನ್ನು ಮಕ್ಕಳ ಶಿಕ್ಷಣಕ್ಕಾಗಿಯೇ ಹಂಚಲಾಯಿತು. ಆರ್ಥಿಕವಾಗಿ ಹಿಂದುಳಿದ  ಸಮಾಜದ 28 ವಿದ್ಯಾರ್ಥಿಗಳನ್ನು  ಶೈಕ್ಷಣಿಕವಾಗಿ ದತ್ತು ಸ್ವೀಕರಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next