Advertisement

ಥಾಣೆ ಬಂಟ್ಸ್‌ ಅಸೋಸಿಯೇಶನ್‌ ಇದರ 14 ನೇ ವಾರ್ಷಿಕ ಮಹಾಸಭೆ

04:39 PM Oct 07, 2018 | Team Udayavani |

ಮುಂಬಯಿ: ಸಮಾಜ ಸೇವೆ ಮಾಡಬೇಕು ಎಂಬ ಉದ್ದೇಶದಿಂದ 14 ವರ್ಷಗಳ ಹಿಂದೆ ಕೆಲವು ಮಹಾನೀಯರು ಸೇರಿ ಸ್ಥಾಪಿಸಿದ ಥಾಣೆ ಬಂಟ್ಸ್‌ ಇಂದು ಥಾಣೆ ಪರಿಸರದಲ್ಲಿ ಒಂದು ಪ್ರತಿಷ್ಠಿತ ಸಂಸ್ಥೆಯಾಗಿ ಬೆಳೆದು ಪರಿಸರದ ಸಮಾಜ ಬಾಂಧವರನ್ನು, ಒಂದೇ ಸೂರಿನಡಿಗೆ ತಂದು ಅವರ ಕಷ್ಟ- ಸುಖಗಳಲ್ಲಿ ನಿರಂತರ ಭಾಗಿಯಾಗುತ್ತಾ ನಮ್ಮ ನಾಡಿನ ಹಾಗೂ ಸಮಾಜದ ಸಂಸ್ಕೃತಿಯನ್ನು ಉಳಿಸಿ-ಬೆಳೆಸುವ ಪ್ರಯತ್ನ ಮಾಡುತ್ತಿದೆ ಎಂದು ಥಾಣೆ ಬಂಟ್ಸ್‌ನ ಅಧ್ಯಕ್ಷ ಕುಶಲ್‌ ಸಿ. ಭಂಡಾರಿ ಅವರು ನುಡಿದರು.

Advertisement

ಅ.4 ರಂದು ಥಾಣೆ ಪಶ್ಚಿಮದ ಹೊಟೇಲ್‌ ವುಡ್‌ಲ್ಯಾಂಡ್‌ ರಿಟ್ರೀಟ್‌ ಸಭಾಗೃಹದಲ್ಲಿ ಜರಗಿದ ಥಾಣೆ ಬಂಟ್ಸ್‌ ಅಸೋಸಿಯೇಶನ್‌ ಇದರ 14 ನೇ ವಾರ್ಷಿಕ ಮಹಾಸಭೆಯ ಅಧ್ಯ ಕ್ಷತೆ ವಹಿಸಿ ಮಾತನಾಡಿದ ಅವರು, ನಮ್ಮಿಂದ ಸಮಾಜಕ್ಕೆ ಏನಾದರೂ ಸಹಾಯವಾ ಗಬೇಕು. ನಮ್ಮ ಸಮಾಜ ಬೆಳೆಯಬೇಕು. ಅವರ ಕಷ್ಟ-ಸುಖಗಳಲ್ಲಿ ನಾವೆಲ್ಲರೂ ಭಾಗಿಯಾ ಗಬೇಕು ಎಂದು ನಾವು ಹಾಗೂ ಅನೇಕ ಮಹಾನೀಯರು ತಮ್ಮ ಉದ್ದಿಮೆ ಹಾಗೂ ಉದ್ಯೋಗಗಳ ಒತ್ತಡದ ನಡುವೆಯೂ ಸ್ವಲ್ಪ ಸಮಯವನ್ನು ವಿನಿಯೋಗಿಸಿ ಇಂತಹ ಸಮಾಜಪರ ಕಾರ್ಯಗಳಲ್ಲಿ ತೊಡಗಿಸಿ ಕೊಂಡಿದ್ದೇವೆ. ಪರಿಸರದ ಸಮಾಜ ಬಾಂಧವರು ಅಸೋಸಿಯೇಶನ್‌ ನಡೆಸುವ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ  ಅದರ ಸದುಪಯೋಗ ಪಡೆದುಕೊಂಡಾಗ ನಮಗೆ ಸಂತೋಷವಾಗುತ್ತದೆ ಎಂದರು. 

ಥಾಣೆ ಬಂಟ್ಸ್‌ ನಡೆಸುವ ಸಮಾಜಪರ, ಶೈಕ್ಷ ಣಿಕ, ವೈದ್ಯಕೀಯ ಯೋಜನೆಗಳಿಗಾಗಿ ನಿಧಿ ಸಂಗ್ರಹಿಸುವ ಉದ್ಧೇಶವು ನಮ್ಮ ಮುಂದಿದ್ದು,  ಇದಕ್ಕೆ ಎಲ್ಲರ ಸಹಕಾರ, ಪ್ರೋತ್ಸಾಹದ ಅಗತ್ಯತೆ ಯಿದೆ. ನಮ್ಮ ಸಂಸ್ಥೆಯ ಮಹಿಳಾ ವಿಭಾಗವು ಉತ್ತಮ ಕಾರ್ಯಕ್ರಮಗಳನ್ನು ಮಾಡುತ್ತಿದ್ದು, ಸದಾ ಕ್ರಿಯಾಶೀಲವಾಗಿದೆ ಎಂದರು.

ಯುವ ವಿಭಾಗದ ಕಾರ್ಯಕ್ರಮಗಳು ಅಭಿನಂದನೀಯ. ಯುವಜನತೆ ಹೆಚ್ಚಿನ ಸಂಖ್ಯೆಯಲ್ಲಿ ಸಂಘದ ಕಾರ್ಯಚಟುವಟಿಕೆಗಳಲ್ಲಿ ಸಕ್ರಿಯರಾಗಬೇಕು. ನಮ್ಮ ಮುಂದಿನ ಹಲವು ಯೋಜನೆಗಳಿಗೆ ಸ್ಥಾಪಕರು, ಮಾಜಿ ಅಧ್ಯಕ್ಷರು, ಮಹಿಳಾ ವಿಭಾಗ, ಯುವ ವಿಭಾಗ ಹಾಗೂ ಸದಸ್ಯರು ಸಹಕಾರ, ಬೆಂಬಲ ನಿರಂತರವಾಗಿ ಇರುವುದರಿಂದ ನಮ್ಮ ಯೋಜನೆಯು ಯಶಸ್ವಿಯಾಗುವುದರಲ್ಲಿ ಸಂಶಯವಿಲ್ಲ. ನಾವೆಲ್ಲರೂ ಒಟ್ಟಾಗಿ ಒಂದೇ ಮನೆಯವರಂತೆ ಈ ಸಂಸ್ಥೆಯನ್ನು ಮುನ್ನಡೆಸೋಣ ಎಂದು ನುಡಿದು ಕೃತಜ್ಞತೆ ಸಲ್ಲಿಸಿದರು.

ಪ್ರಾರಂಭದಲ್ಲಿ ಕಾರ್ಯದರ್ಶಿ ಸುನೀಲ್‌ ಜೆ. ಶೆಟ್ಟಿ ಅವರು ವಾರ್ಷಿಕ ವರದಿಯನ್ನು ಮಂಡಿಸಿದರು. ಕೋಶಾಧಿಕಾರಿ ಭಾಸ್ಕರ ಎನ್‌. ಶೆಟ್ಟಿ ಲೆಕ್ಕಪತ್ರವನ್ನು ಮಂಡಿಸಿದರು. ಈ ಸಂದರ್ಭದಲ್ಲಿ ಆಂತರಿಕ ಲೆಕ್ಕ ಪರಿ ಶೋಧಕರಾಗಿ ಶಶಿ ಶೆಟ್ಟಿ ಹಾಗೂ ಲೆಕ್ಕ ಪರಿ ಶೋಧಕರಾಗಿ ಸದಾಶಿವ ಶೆಟ್ಟಿ ಆ್ಯಂಡ್‌ ಕಂಪೆನಿಯನ್ನು ನೇಮಿಸಲಾಯಿತು. ಇದೇ ಸಂದರ್ಭದಲ್ಲಿ ಪರಿಸರದ ಶೈಕ್ಷಣಿಕವಾಗಿ ಉತ್ತಮ ಅಂಕಗಳಿಸಿದ ಸಮಾಜದ ವಿದ್ಯಾರ್ಥಿಗಳನ್ನು  ಪ್ರತಿಭಾ ಪುರಸ್ಕಾರವನ್ನಿತ್ತು ಗೌರವಿಸಲಾಯಿತು.

Advertisement

ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸುಮತಿ ಕೆ. ಶೆಟ್ಟಿ ಅವರು ವಾರ್ಷಿಕ ವರದಿ ವಾಚಿಸಿದರು. ಯುವ ವಿಭಾಗದ ವಾರ್ಷಿಕ ವರದಿಯನ್ನು ಕಾರ್ಯಾಧ್ಯಕ್ಷ ರಂಜನ್‌ ಆರ್‌. ಶೆಟ್ಟಿ ವಾಚಿಸಿದರು. ಮಹಿಳಾ ವಿಭಾಗದ ಉಪ ಕಾರ್ಯಾಧ್ಯಕ್ಷೆ ಕುಶಲಾ ಎನ್‌. ಶೆಟ್ಟಿ, ಕೋಶಾಧಿಕಾರಿ ಮೋಹಿನಿ ಆರ್‌. ಶೆಟ್ಟಿ, ಜತೆ ಕೋಶಾಧಿಕಾರಿ ಶರ್ಮಿಳಾ ಎಸ್‌. ಶೆಟ್ಟಿ ಅವರು ಪ್ರತಿಭಾನ್ವಿತ ವಿದ್ಯಾರ್ಥಿಗಳ ಯಾದಿಯನ್ನು ಓದಿದರು.

ಸಭಿಕರ ಪರವಾಗಿ ಸ್ಥಾಪಕ ಅಧ್ಯಕ್ಷರಾದ ಡಿ. ಜಿ. ಬೋಳಾರ್‌, ಸಲಹಾ ಸಮಿತಿಯ ಸದಸ್ಯ ಹಾಗೂ ಮಾಜಿ ಅಧ್ಯಕ್ಷರುಗಳಾದ ಭಾಸ್ಕರ ಎಂ. ಶೆಟ್ಟಿ, ಸಿಎ ಕರುಣಾಕರ ಶೆಟ್ಟಿ, ಸಿಎ ಜಗದೀಶ್‌ ಶೆಟ್ಟಿ, ಚಂದ್ರಹಾಸ ಎಸ್‌. ಶೆಟ್ಟಿ, ಕೇಶವ ಎಂ. ಆಳ್ವ, ಎನ್‌. ಶಂಕರ್‌ ಶೆಟ್ಟಿ, ಶಂಕರ್‌ ಹೆಗ್ಡೆ, ಉದಯ ಶೆಟ್ಟಿ, ಕರ್ನೂರು ಮೋಹನ್‌ ರೈ, ಡಾ| ಕರುಣಾಕರ ಶೆಟ್ಟಿ ಪಣಿಯೂರು, ರಘು ಶೆಟ್ಟಿ, ನಿತ್ಯಾನಂದ ಬೆಳುವಾಯಿ, ಮಹಿಳಾ ವಿಭಾಗದ ಹಿರಿಯ ಸದಸ್ಯೆ ಉಮಾ ಶೆಟ್ಟಿ, ಮಹಿಳಾ ವಿಭಾಗದ ಮಾಜಿ ಕಾರ್ಯಾಧ್ಯಕ್ಷೆ ಸುಲೋಚನಾ ಬಿ. ಶೆಟ್ಟಿ, ಪ್ರಮೋದಾ ಎಸ್‌. ಮಾಡಾ ಮೊದಲಾದವರು ತಮ್ಮ ಸಲಹೆ ಸೂಚನೆಗಳನ್ನು ನೀಡಿದರು.

ಜ್ಯೋತಿ ಶೆಟ್ಟಿ ಪ್ರಾರ್ಥನೆಗೈದರು. ಅಧ್ಯಕ್ಷರು, ಪದಾಧಿಕಾರಿಗಳು, ಮಾಜಿ ಅಧ್ಯಕ್ಷರು, ಸಲಹಾ ಸಮಿತಿಯ ಸದಸ್ಯರು ದೀಪಪ್ರಜ್ವಲಿಸಿ ಮಹಾಸಭೆಗೆ ಚಾಲನೆ ನೀಡಿದರು.  ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸುಮತಿ ಕೆ. ಶೆಟ್ಟಿ ಅವರು ವಂದಿಸಿದರು. ವೇದಿಕೆಯಲ್ಲಿ ಥಾಣೆ ಬಂಟ್ಸ್‌ನ ಉಪಾಧ್ಯಕ್ಷ ವೇಣುಗೋಪಾಲ್‌ ಎಲ್‌. ಶೆಟ್ಟಿ, ಜತೆ ಕಾರ್ಯದರ್ಶಿ ಅಶೋಕ್‌ ಎಂ. ಶೆಟ್ಟಿ, ಜತೆ ಕೋಶಾಧಿಕಾರಿ ಚಂದ್ರಶೇಖರ ಎಸ್‌. ಶೆಟ್ಟಿ ಮೊದಲಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಸಹಕರಿಸಿದರು. 

ಚಿತ್ರ-ವರದಿ : ಸುಭಾಷ್‌ ಶಿರಿಯಾ

Advertisement

Udayavani is now on Telegram. Click here to join our channel and stay updated with the latest news.

Next