Advertisement

ಥಾಣೆ ಬಂಟ್ಸ್‌ ಅಸೋಸಿಯೇಶನ್‌ 14ನೇ ವಾರ್ಷಿಕೋತ್ಸವ

05:15 PM Feb 07, 2019 | |

ಮುಂಬಯಿ: ಹೊಟ್ಟೆಪಾಡಿಗಾಗಿ ಪರವೂರು ಸೇರಿದ ಸಮಾಜ ಬಾಂಧವರು ಕಠಿಣ ಪರಿಶ್ರಮ ಹಾಗೂ ಪ್ರಾಮಾಣಿಕ ಸೇವೆಯೊಂದಿಗೆ ದೈವ ದೇವರುಗಳ ಅನುಗ್ರಹ ಹಾಗೂ ಹಿರಿಯರ ಆಶೀರ್ವಾದದಿಂದ ಯಶಸ್ವಿಯನ್ನು ಪಡೆದರು. ಅನೇಕ ಸಮಾಜ ಬಾಂಧವರು ತಮ್ಮ ಕಾರ್ಯವೈಖರಿಯಿಂದ ಇತಿಹಾಸವನ್ನು ನಿರ್ಮಿಸಿದರು. ಅಂಥವರನ್ನು ನಾವು ಸದಾ ಸ್ಮರಿಸಿ ಗೌರವಿಸಬೇಕಾಗುತ್ತದೆ. ಸಮಾಜ ಬಾಂಧವರನ್ನು ಒಗ್ಗೂಡಿಸಿ ಅವರ ಕಷ್ಟ ಸುಖದಲ್ಲಿ ಭಾಗವಹಿಸುವ ದೃಷ್ಟಿಯಿಂದ ಸಂಘ ಸಂಸ್ಥೆಗಳನ್ನು ಕಟ್ಟಿ ಆ ಮೂಲಕ ಸಮಾಜ ಸೇವೆಗಳನ್ನು ಮಾಡುವ ನಮ್ಮವರ ಮನೋಭಾವ ಮೆಚ್ಚುವಂತಹದ್ದು. ಇಂತಹ ಕಾರ್ಯಗಳಿಗೆ ನನ್ನ ಸಹಕಾರವು ಸದಾ ಇದೆ ಎಂದು ಉದ್ಯಮಿ ಎಂಆರ್‌ಜಿ ಗ್ರೂಪ್‌ನ ಕಾರ್ಯಾಧ್ಯಕ್ಷ ಕೆ. ಪ್ರಕಾಶ್‌ ಶೆಟ್ಟಿ ಅವರು ನುಡಿದರು. ಅವರು ಫೆ.4ರಂದು ಥಾಣೆ ಪಶ್ಚಿಮದ ಕಾಶಿನಾಥ್‌ ಘಾಣೇಕರ್‌ ನಾಟ್ಯ ಸಭಾಗೃಹದಲ್ಲಿ ಥಾಣೆ ಬಂಟ್ಸ್‌ ಅಸೋಸಿಯೇಶನ್‌ 14ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದು ಮಾತನಾಡುತ್ತಿದ್ದರು.

Advertisement

ಜೀವನದಲ್ಲಿ ಯಶಸ್ವಿಯಾಗ ಬೇಕಾದರೆ ದೂರದೃಷ್ಟಿ ಮತ್ತು ಸಂಸ್ಕಾರಯುತ ಶಿಕ್ಷಣದೊಂದಿಗೆ ಸಾಮಾನ್ಯ ಜ್ಞಾನವೂ ನಮ್ಮಲ್ಲಿರಬೇಕು. ಯುವ ಪೀಳಿಗೆಯು ಕ್ರಿಯಾಶೀಲರಾ ಗಿರಬೇಕು. ಆಗ ಯಶಸ್ವಿ ಖಂಡಿತ ಎಂದು ಅವರು ನುಡಿದರು.
ಇನ್ನೋರ್ವ ಅತಿಥಿ ಬಂಟರ ಸಂಘದ ಅಧ್ಯಕ್ಷ ಪದ್ಮನಾಭ ಎಸ್‌. ಪಯ್ಯಡೆ ಅವರು ಮಾತನಾಡಿ, ಮಕ್ಕಳಿಗೆ ಶಿಕ್ಷಣದೊಂದಿಗೆ ಸಂಸ್ಕಾರವನ್ನು ನೀಡಬೇಕು. ಉನ್ನತ ಮಟ್ಟದ ಶಿಕ್ಷಣ ನೀಡಿದ ಹೊರತಾಗಿಯೂ ಕೆಲವು ಮಕ್ಕಳು ಹೆತ್ತವರ ಸಂಬಂಧದಿಂದ ದೂರವಿರುವುದು ವಿಷಾದನೀಯ. ಉತ್ತಮ ಸಂಸ್ಕಾರ ದೊರೆತಾಗ ಮಕ್ಕಳ ಬದುಕು ಸಾರ್ಥಕವಾಗಲು ಸಾಧ್ಯ. ನಾವೆಲ್ಲರೂ ಒಗ್ಗಟ್ಟಿನಿಂದ ಸಮಾಜಪರ ಸೇವೆಗಳನ್ನು ಮಾಡಿದಾಗ ನಮ್ಮ ಸಮಾಜವು ಬೆಳೆಯಲು ಸಾಧ್ಯ. ಥಾಣೆ ಬಂಟ್ಸ್‌ನ ಕಾರ್ಯ ಚಟುವಟಿಕೆಗಳನ್ನು ನಾನು ಹತ್ತಿರದಿಂದ ಬಲ್ಲೆ. ಇವರ ಸಮಾಜಪರ ಕಾರ್ಯ ಅಭಿನಂದನೀಯ ಎಂದು ನುಡಿದರು.

ಇನ್ನೋರ್ವ ಅತಿಥಿ ಅದ್ಯಪಾಡಿ ಉಮಾಮಹೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಮಂಜುನಾಥ ಭಂಡಾರಿ ಶೆಡ್ಡೆ ಮಾತನಾಡಿ, ಮುಂಬಯಿಯಲ್ಲಿ ನಮ್ಮ ಸಂಸ್ಕೃತಿ ಸಂಸ್ಕಾರವನ್ನು ಉಳಿಸಿ ಬೆಳೆಸುವುದರಲ್ಲಿ ಇಲ್ಲಿಯ ಸಂಘ ಸಂಸ್ಥೆಗಳ ಪಾತ್ರ ಅಭಿನಂದನೀಯ. ಮುಂಬಯಿಯ ಬಂಟ ಸಮಾಜದವರು ಹುಟ್ಟೂರಿನ ಅನೇಕ ದೈವ ದೇವಸ್ಥಾನಗಳ ಅಭಿವೃದ್ಧಿಗೆ ಮಹತ್ತರ ಕೊಡುಗೆಗಳನ್ನು ನೀಡಿದ್ದಾರೆ ಎಂದು ನುಡಿಯುತ್ತ ಸಂಸ್ಥೆಯ ಶ್ರೇಯೋಭಿವೃದ್ಧಿಗೆ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಹೊಟೇಲ್‌ ಉದ್ಯಮಿ ಸುಧಾಕರ್‌ ಶೆಟ್ಟಿ ಮತ್ತು ಸುಂದರಿ ಎಸ್‌. ಶೆಟ್ಟಿ ದಂಪತಿ, ಸಮಾಜಸೇವಕ ರಾಜೇಂದ್ರ ಮೇಲಂಟ ಮತ್ತು ವಿಮಲಾ ಮೇಲಂಟ ದಂಪತಿ, ಡಾಕ್ಟರ್‌ ಪ್ಲಾನೇಟ್‌ ಇದರ ಎಂಡಿ ರತ್ನಾಕರ ಎ. ಶೆಟ್ಟಿ ಮತ್ತು ಶೋಭಾ ಶೆಟ್ಟಿ ದಂಪತಿಯನ್ನು ಸಮ್ಮಾನಿಸಲಾಯಿತು. ಮಾತ್ರವಲ್ಲದೆ, ದಕ್ಷಿಣ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪಡೆದ ಮಕ್ಕಳು ಹಾಗೂ ಸಿಎಯಲ್ಲಿ ಉತ್ತೀರ್ಣರಾದ ಸ್ನೇಹಾ ಎಸ್‌. ಶೆಟ್ಟಿ, ವಿನಿತಾ ಬಿ. ಶೆಟ್ಟಿ, ಎಂಬಿಬಿಎಸ್‌ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದ ಡಾ| ರಂಜನ್‌ ರತ್ನಾಕರ್‌ ಶೆಟ್ಟಿ, ಡಾ| ವೀಕ್ಷಾ ವೇಣುಗೋಪಾಲ್‌ ಶೆಟ್ಟಿ, ಡಾ| ರಚನಾ ಸುರೇಶ್‌ ಶೆಟ್ಟಿ,  ಐಐಟಿ ಗೋಲ್ಡ್‌ ಪಡೆದ ಚಿರಾಗ್‌ ಶೆಟ್ಟಿ ಅವರನ್ನು ಗೌರವಿಸಲಾಯಿತು. ಸಮ್ಮಾನ ಪತ್ರವನ್ನು ಮೋಹಿನಿ ಶೆಟ್ಟಿ, ಅಶೋಕ್‌ ಶೆಟ್ಟಿ ಹಾಗೂ ಡಾ| ಕರುಣಾಕರ್‌ ಶೆಟ್ಟಿ ಅವರು ವಾಚಿಸಿದರು. ಜ್ಯೋತಿ ಎನ್‌. ಶೆಟ್ಟಿ ಹಾಗೂ ಚಿತ್ರಾ ಜಿ. ಶೆಟ್ಟಿ ಪ್ರಾರ್ಥನೆ ಗೈದರು.  ಥಾಣೆ ಬಂಟ್ಸ್‌ ಉಪಾಧ್ಯಕ್ಷ ವೇಣುಗೋಪಾಲ್‌ ಎಲ್‌. ಶೆಟ್ಟಿ ಅವರು ಅತಿಥಿಗಳನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವಾರ್ಷಿಕ ವರದಿಯನ್ನು ಗೌರವ ಪ್ರಧಾನ ಕಾರ್ಯದರ್ಶಿ ಸುನೀಲ್‌ ಜೆ. ಶೆಟ್ಟಿ ಹಾಗೂ ಮಹಿಳಾ ವಿಭಾಗದ ವಾರ್ಷಿಕ ವರದಿಯನ್ನು ಕಾರ್ಯಾಧ್ಯಕ್ಷೆ ಸುಮತಿ ಕೆ. ಶೆಟ್ಟಿ, ಯುವ ವಿಭಾಗದ ವಾರ್ಷಿಕ ವರದಿಯನ್ನು ಕಾರ್ಯಾಧ್ಯಕ್ಷ ರಂಜನ್‌ ಆರ್‌. ಶೆಟ್ಟಿ ಅವರು ವಾಚಿಸಿದರು.  ಸಾಂಸ್ಕೃತಿಕ ವಿಭಾಗದ ಕಾರ್ಯಾಧ್ಯಕ್ಷ   ಜಯಪ್ರಕಾಶ್‌ ಶೆಟ್ಟಿ, ಥಾಣೆ ಬಂಟ್ಸ್‌ನ ಜತೆ ಕಾರ್ಯದರ್ಶಿ ಚಂದ್ರಶೇಕರ್‌ ಎಸ್‌. ಶೆಟ್ಟಿ, ಮಹಿಳಾ ವಿಭಾಗದ ಕುಶಲಾ ಶೆಟ್ಟಿ ಅತಿಥಿಗಳನ್ನು ಪರಿಚಯಿಸಿದರು. ಸಂಘದ ಸಂಘಟಕ ಕರ್ನೂರು ಮೋಹನ್‌ ರೈ ಅವರು ಕಾರ್ಯಕ್ರಮ ನಿರೂಪಿಸಿದರು.ಗೌರವ ಕೋಶಾಧಿಕಾರಿ ಭಾಸ್ಕರ್‌ ಎನ್‌. ಶೆಟ್ಟಿ ವಂದಿಸಿದರು.

ಜೊತೆ ಕಾರ್ಯದರ್ಶಿ ಅಶೋಕ್‌ ಎಂ. ಶೆಟ್ಟಿ ಅವರು ಉಪಸ್ಥಿತರಿದ್ದರು. ದೀಪ ಪ್ರಜ್ವಲನೆಯ ಸಂದರ್ಭ ವೇದಿಕೆಯಲ್ಲಿ ಮಾಜಿ ಅಧ್ಯಕ್ಷರುಗಳಾದ ಡಿ. ಜಿ. ಬೋಳಾರ್‌, ಭಾಸ್ಕರ್‌ ಎಂ. ಶೆಟ್ಟಿ, ಸಿಎ ಕರುಣಾಕರ್‌ ಶೆಟ್ಟಿ, ಸಿಎ ಜಗದೀಶ್‌ ಶೆಟ್ಟಿ, ಚಂದ್ರಹಾಸ್‌ ಎಸ್‌. ಶೆಟ್ಟಿ, ಸ್ಥಾಪಕ ಸದಸ್ಯರಾದ ಕೇಶವ ಆಳ್ವ, ಎನ್‌. ಶೇಖರ್‌ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಸದಸ್ಯರಿಂದ, ಮಹಿಳೆಯರಿಂದ ಹಾಗೂ ಮಕ್ಕಳಿಂದ ವಿವಿಧ ನೃತ್ಯಗಳು ಹಾಗೂ ದಿನಕರ ಭಂಡಾರಿ ಕಣಂಜಾರು ರಚಿತ ಕೃಷ್ಣರಾಜ್‌ ಶೆಟ್ಟಿ ನಿರ್ದೇಶನದಲ್ಲಿ ಪಿರ ಬನ್ನಗ ತುಳು ನಾಟಕವು ಪ್ರದರ್ಶನಗೊಂಡಿತು. 

Advertisement

 ಥಾಣೆ ಬಂಟ್ಸ್‌ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುವುದರೊಂದಿಗೆ ಆರ್ಥಿಕ ಹಿಂದುಳಿದವರಿಗೆ ವೈದ್ಯಕೀಯ ಸೇವೆ, ಕಲೆಗೆ ಪ್ರೋತ್ಸಾಹ ಹಾಗೂ ನಾಡು ನುಡಿಯ ಸಂಸ್ಕಾರವನ್ನು ಪ್ರೋತ್ಸಾಹಿಸುವುದರೊಂದಿಗೆ ಪ್ರತಿ ವರ್ಷ ವಾಷಿಕೋತ್ಸವದ ಸಂದರ್ಭದಲ್ಲಿ ಸಾಧಕರನ್ನು ಸಮ್ಮಾನಿಸುವ ಕಾರ್ಯವನ್ನು ಮಾಡುತ್ತ ಬಂದಿದೆ. ಬಂಟರ ಸಂಸ್ಕೃತಿ ಅಳಿಯಬಾರದು ನಮ್ಮ ಸಂಸ್ಕೃತಿ ಸಂಸ್ಕಾರವನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಯುವ ಜನಾಂಗಕ್ಕಿದೆ. ಸಂಘಟನೆಯ ಮೂಲಕ ಸಮಾಜವನ್ನು ಬಲಪಡಿಸಬೇಕು ಎಂಬುದೇ ನಮ್ಮ ಉದ್ದೇಶ.
  – ಕುಶಲ್‌ ಸಿ. ಭಂಡಾರಿ, ಅಧ್ಯಕ್ಷರು, ಥಾಣೆ ಬಂಟ್ಸ್‌ ಅಸೋಸಿಯೇಶನ್‌

ಚಿತ್ರ-ವರದಿ: ಸುಭಾಷ್‌ ಶಿರಿಯಾ

Advertisement

Udayavani is now on Telegram. Click here to join our channel and stay updated with the latest news.

Next