ಮುಂಡರಗಿ: ರಾಜ್ಯದಲ್ಲಿರುವ ತಾಂಡಾಗಳ ಮರು ಪರಿಶೀಲನೆ ಮಾಡುವ ಕಾರ್ಯವನ್ನು ಮಾಡಲಾಗುತ್ತಿದೆ. ತಾಂಡಾಗಳು ಕಂದಾಯ ಗ್ರಾಮಕ್ಕೆ ಒಳಪಟ್ಟಿಲ್ಲವೋ ಅಂತಹ ತಾಂಡಾಗಳು ಕಂದಾಯ ಗ್ರಾಮಗಳಿಗೆ ಸೇರಿಸಲಾಗುವುದು ಎಂದು ಶಾಸಕ ಪಿ. ರಾಜೀವ್ ಹೇಳಿದರು.
ಪಟ್ಟಣದ ಪುರಸಭೆ ಮೈದಾನದಲ್ಲಿ ತಾಲೂಕಿನ ಶ್ರೀ ಸಂತ ಸೇವಾಲಾಲ್ ಸಮಿತಿ ಆಶ್ರಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸಂತ ಶ್ರೀ ಸೇವಾಲಾಲ್ ಮಹಾರಾಜರ ಜಯಂತ್ಯುತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕೊಪ್ಪಳ ಸಮೀಪದ ಬಹದ್ಧೂರಬಂಡಿಯಲ್ಲಿ ಪ್ರವಾಸಿ ಉತ್ತೇಜನಕ್ಕಾಗಿ ತಾಂಡಾವನ್ನು ಮರು ವಿನ್ಯಾಸಗೊಳಿಸಲಾಗಿದೆ. ಭಾರತದಲ್ಲಿಯೇ ಲಂಬಾಣಿ ಉಡುಗೆಗಳ ದೊಡ್ಡ ಮಾರುಕಟ್ಟೆ ನಿರ್ಮಿಸಲಾಗುತ್ತಿದೆ. ಅಂತಾರಾಷ್ಟ್ರೀಯ ಮಟ್ಟಕ್ಕೆ ಎತ್ತರಿಸಲು ತಾಂಡಾ ಅಭಿವೃದ್ಧಿ ನಿಗಮ ಮತ್ತು ಪ್ರವಾಸೋದ್ಯಮ ಇಲಾಖೆ ಜಂಟಿ ಸಮಭಾಗಿತ್ವದಲ್ಲಿ 50 ಕೋಟಿ ರೂ. ಅನುದಾನ ಮೀಸಲು ಇಡಲಾಗಿದೆ ಎಂದರು.
ಶಾಸಕ ಕಳಕಪ್ಪ ಬಂಡಿ ಮಾತನಾಡಿ, ಸೇವಾಲಾಲ್‌ರಂತ ಸಂತರನ್ನು ಇಟ್ಟುಕೊಂಡು ಬೇರೊಂದು ಧರ್ಮಕ್ಕೆ ಮತಾಂತರ ಆಗೋದು ದೇಶಕ್ಕೆ ಮತ್ತು ಧರ್ಮಕ್ಕೆ ದ್ರೋಹದ ಕೆಲಸವಾಗಿದೆ. ಮತಾಂತರವು ಹಿಂದು ಧರ್ಮಕ್ಕೆ ಪಿಡುಗಾಗಿದ್ದು, ಸಮಾಜದ ಹಿರಿಯರು ಮತಾಂತರ ತಡೆಗಟ್ಟಲು ಮುಂದಾಗಬೇಕು ಎಂದರು.
ಶಾಸಕ ಪಿ.ಟಿ. ಪರಮೇಶ್ವರನಾಯ್ಕ ಮಾತನಾಡಿ, ಸದಾಶಿವ ಆಯೋಗವು ವರದಿಯ ರಚನೆಯ ಉದ್ದೇಶ, ವ್ಯಾಪ್ತಿಯನ್ನು ಮೀರಿ ವರದಿ ನೀಡಿದ್ದು, ಸಂವಿಧಾನ ಬಾಹೀರವಾಗಿದೆ. ಸದಾಶಿವ ಆಯೋಗ ವರದಿಯನ್ನು ಸರ್ಕಾರ ತಿರಸ್ಕರಿಸಲು ಈ ಹಿಂದೆ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ್ದೇವು. ಸದಾಶಿವ ಆಯೋಗ ವರದಿಯು ಡಾ| ಬಿ.ಆರ್. ಅಂಬೇಡ್ಕರ್ ಆಶಯಕ್ಕೆ ವಿರುದ್ಧವಾಗಿದೆ. ಪರಿಶಿಷ್ಟ ಜಾತಿಯ ಎಲ್ಲ ಉಪಜಾತಿಗಳಿಗೆ ನ್ಯಾಯ ಸಮ್ಮತವಾಗಿ ಎಲ್ಲ ಸೌಲಭ್ಯ ನೀಡಬೇಕು. ಸರಕಾರವು ವರದಿ ಪರಿಗಣಿಸಬಾರದು ಎಂದರು.
ನಾಡೋಜ ಡಾ| ಅನ್ನದಾನೀಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಶಾಸಕ ರಾಮಣ್ಣ ಲಮಾಣಿ ಅಧ್ಯಕ್ಷತೆ ವಹಿಸಿದ್ದರು. ಜಿಪಂ ಸದಸ್ಯೆ ಶಕುಂತಲಾ ಚವ್ಹಾಣ, ಶೋಭಾ ಮೇಟಿ, ಭೀಮಸಿಂಗ್ ರಾಠೊಡ, ಪಿ.ಟಿ. ಭರತನಾಯ್ಕ, ಲಿಂಗರಾಜಗೌಡ ಪಾಟೀಲ, ರಾಕ್ರಪ್ಪ ನಾಯ್ಕ, ಸಿ.ಪಿ. ಬೊಮ್ಮನಪಾಡ, ಡಾ| ಲಕ್ಷ್ಮಣ ನಾಯಕ, ರಾಮಚಂದ್ರ ಕಲಾಲ್ ಇದ್ದರು. ಸುಭಾಸ ಗುಡಿಮನಿ ಸ್ವಾಗತಿಸಿದರು. ಎಚ್.ಜೆ. ಪವಾರ, ಎಚ್.ಎಂ. ರಾಠೊಡ ನಿರೂಪಿಸಿದರು.