ಹುಬ್ಬಳ್ಳಿ: ಉಕ ಪ್ರವಾಹ ಪೀಡಿತ ಸಂತ್ರಸ್ತರಿಗೆ ಮದ್ದೂರು ವಿಧಾನಸಭಾ ಕ್ಷೇತ್ರದ ಡಿ.ಸಿ. ತಮ್ಮಣ್ಣ ಸೇವಾ ಪ್ರತಿಷ್ಠಾನ ವತಿಯಿಂದ ಅಂದಾಜು 50 ಲಕ್ಷಕ್ಕೂ ಅಧಿಕ ಮೌಲ್ಯದ ಆಹಾರ ಪದಾರ್ಥ ಹಾಗೂ ವಿವಿಧ ಸಾಮಗ್ರಿ ವಿತರಿಸಲಾಗುತ್ತಿದೆ.
ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಮಾಜಿ ಸಚಿವ ಡಿ.ಸಿ. ತಮ್ಮಣ್ಣ, ನೆರೆ ಪೀಡಿತರಿಗೆ ನಮ್ಮ ಕೈಲಾದ ಸಹಾಯ ಮಾಡುತ್ತಿದ್ದೇವೆ. ಆರು ಲಾರಿಗಳಲ್ಲಿ ಪರಿಹಾರ ಸಾಮಗ್ರಿಗಳನ್ನು ಪ್ರವಾಹ ಪೀಡಿತರಿಗೆ ವಿತರಿಸಲಾಗುತ್ತಿದೆ. ಪ್ರಕೃತಿ ಎದುರು ಯಾರೂ ದೊಡ್ಡವರಲ್ಲ. ಎಲ್ಲರೂ ಪ್ರಕೃತಿ ಉಳಿಸಿ, ಬೆಳೆಸಬೇಕು ಎಂದರು.
ಕೇಂದ್ರ ಸರಕಾರ ಉಕ ಪ್ರವಾಹ ಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸಬೇಕು. ರಾಜ್ಯದಿಂದ ಬಿಜೆಪಿಯ 25 ಸಂಸದರನ್ನು ಕೊಟ್ಟರೂ ಇದುವರೆಗೆ ಅದು ನೆರವು ನೀಡಿಲ್ಲ. ಈ ಭಾಗದ ಸಂಸದರು ರಾಜ್ಯದ ಪರಿಸ್ಥಿತಿ ಕುರಿತು ಪ್ರಧಾನಿಗೆ ಮನವರಿಕೆ ಮಾಡಲು ಏಕೆ ವಿಫಲವಾಗುತ್ತಿದ್ದಾರೆ ಎಂಬುದು ಗೊತ್ತಾಗುತ್ತಿಲ್ಲ. ಸಂತ್ರಸ್ತರ ನೆರವಿಗಾಗಿ ಮುಖ್ಯಮಂತ್ರಿ 10 ಸಾವಿರ ಕೋಟಿ ರೂ. ನೀಡುವಂತೆ ಕೇಂದ್ರಕ್ಕೆ ಮನವಿ ಮಾಡಿದ್ದಾರೆ. ಅದು ಏತಕ್ಕೂ ಸಾಲದು. ಸದ್ಯದ ಮಟ್ಟಿಗೆ ಕೇಂದ್ರ ಕೂಡಲೇ 10ಸಾವಿರ ಕೋಟಿ ರೂ. ಬಿಡುಗಡೆ ಮಾಡಲಿ. ರಾಷ್ಟ್ರೀಯ ವಿಪತ್ತು ಎಂದು ಘೋಷಿಸಲಿ ಎಂದು ಒತ್ತಾಯಿಸಿದರು.
ಡಿ.ಸಿ. ತಮ್ಮಣ್ಣ ಸೇವಾ ಟ್ರಸ್ಟ್ ಅಧ್ಯಕ್ಷೆ ಡಾ| ಸೌಮ್ಯ ರಮೇಶ ಮಾತನಾಡಿ, ಉಕ ಭಾಗದಲ್ಲಿ ನೆರೆಯಿಂದ ಸಂತ್ರಸ್ತರಾದವರ ಬಗ್ಗೆ ಮಾಧ್ಯಮಗಳು ಬಿತ್ತರಿಸುತ್ತಿದ್ದ ಸುದ್ದಿ ನೋಡಿ ತುಂಬಾ ವ್ಯಥೆಯಾಯಿತು. ಪ್ರತಿಷ್ಠಾನ ಹಾಗೂ ಕ್ಷೇತ್ರದ ಜನರಿಂದ ಒಂದಿಷ್ಟು ನೆರವು ನೀಡುವ ಅಭಿಲಾಷೆಯೊಂದಿಗೆ ಎರಡು ದಿನಗಳಲ್ಲಿ ಬೀದಿಗಳಲ್ಲಿ ಸಂಚರಿಸಿ ಅಂಗಡಿಕಾರರು, ಸಾರ್ವಜನಿಕರಿಂದ ಅಗತ್ಯವಾದ ಪರಿಹಾರ ಸಾಮಗ್ರಿ, ವಂತಿಗೆ ಸಂಗ್ರಹಿಸಲಾಯಿತು. ಉಕ ಭಾಗದ ನೆರೆ ಸಂತ್ರಸ್ತರಿಗೆ ಆರು ಲಾರಿಯಷ್ಟು ಹಾಗೂ ಶಿವಮೊಗ್ಗ ಭಾಗದ ನೆರೆ ಸಂತ್ರಸ್ತರಿಗೆ ಎರಡು ಲಾರಿಯಷ್ಟು ಪರಿಹಾರ ಸಾಮಗ್ರಿ ವಿತರಿಸಲಾಗುತ್ತಿದೆ ಎಂದರು.
ವಿಪ ಸದಸ್ಯ ಬಸವರಾಜ ಹೊರಟ್ಟಿ ಮಾತನಾಡಿ, ಜೆಡಿಎಸ್‌ನ ಶಾಸಕರು ಅಧಿಕಾರ ಇಲ್ಲದಿದ್ದರೂ ವೈಯಕ್ತಿಕವಾಗಿ ಉಕ ಭಾಗದ ನೆರೆ ಸಂತ್ರಸ್ತರಿಗೆ ನೆರವು ನೀಡುತ್ತಿದ್ದಾರೆ. ಸ್ವಹಿತಾಸಕ್ತಿ ಬಿಟ್ಟು ಪ್ರಾಮಾಣಿಕವಾಗಿ ಪರಿಹಾರ ಸಾಮಗ್ರಿ ವಿತರಿಸುವ ಕಾರ್ಯ ಆಗಬೇಕಿದೆ ಎಂದು ಹೇಳಿದರು.ಮಾಜಿ ಶಾಸಕ ಎಂ.ಎಸ್. ಅಕ್ಕಿ, ರಾಜೇಗೌಡ, ರಾಜಣ್ಣ ಕೊರವಿ, ನಾಸೀರ ಬಾಗವಾನ, ದಮಯಂತಿ ಅಣ್ಣಿಗೇರಿ ಮೊದಲಾದವರು ಸುದ್ದಿಗೋಷ್ಠಿಯಲ್ಲಿದ್ದರು.