Advertisement

ಆಸ್ತಿ ತೆರಿಗೆ ಸಂಗ್ರಹಕ್ಕೆ ತಮಟೆ ಚಳವಳಿ

11:47 AM Oct 04, 2018 | Team Udayavani |

ಬೆಂಗಳೂರು: ಬಿಬಿಎಂಪಿಗೆ ಕೋಟ್ಯಂತರ ರೂ. ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿರುವ ಮಾಲ್‌, ಟೆಕ್‌ಪಾರ್ಕ್‌, ಬೃಹತ್‌ ವಾಣಿಜ್ಯ ಸಂಸ್ಥೆಗಳ ಮುಂದೆ ಮುಂದೆ ತಮಟೆ ಚಳವಳಿ ನಡೆಸುವ ಮೂಲಕ ಆಸ್ತಿ ತೆರಿಗೆ ಸಂಗ್ರಹಕ್ಕೆ ಪಾಲಿಕೆ ಸಜ್ಜಾಗಿದೆ. ಪಾಲಿಕೆಗೆ ಹಲವಾರು ವರ್ಷಗಳಿಂದ ಕೋಟ್ಯಂತರ ರೂ. ತೆರಿಗೆ ಉಳಿಸಿಕೊಂಡಿರುವವರಿಗೆ ಹಲವಾರು ಬಾರಿ ನೋಟಿಸ್‌ ಜಾರಿಗೊಳಿಸಲಾಗಿದೆ. ಜತೆಗೆ ವಾರೆಂಟ್‌ ಜಾರಿಗೊಳಿಸುವ ಎಚ್ಚರಿಕೆ ನೀಡಿದರೂ ಆಸ್ತಿದಾರರು ಮಾತ್ರ ತೆರಿಗೆ ಪಾವತಿಗೆ ಮುಂದಾಗಿಲ್ಲ. ಆ ಹಿನ್ನೆಲೆಯಲ್ಲಿ ಪ್ರತಿಷ್ಠಿತರ ಆಸ್ತಿಗಳ ಮುಂದೆ ತಮಟೆ ಚಳವಳಿ ನಡೆಯಲು ಪಾಲಿಕೆ ಸಿದ್ಧತೆ ನಡೆಸಿದೆ.

Advertisement

ಪ್ರಸಕ್ತ ಸಾಲಿನ ಆರ್ಥಿಕ ವರ್ಷದ ಮೊದಲಾರ್ಧದಲ್ಲಿಯೇ ಬಿಬಿಎಂಪಿಗೆ ದಾಖಲೆಯ 1,904 ಕೋಟಿ ರೂ. ಆಸ್ತಿ ತೆರಿಗೆ ಸಂಗ್ರಹವಾಗಿದ್ದು, ಈವರೆಗೆ 14.17 ಲಕ್ಷ ಆಸ್ತಿದಾರರು ತೆರಿಗೆ ಪಾವತಿಸಿದ್ದಾರೆ. ಇನ್ನು 5 ಲಕ್ಷ ಆಸ್ತಿಗಳಿಂದ ತೆರಿಗೆ ಪಾವತಿಯಾಗಬೇಕಿದ್ದು, ಈ ಪೈಕಿ ಒಂದು ಕೋಟಿಗಿಂತಲೂ ಹೆಚ್ಚಿನ ತೆರಿಗೆ ಬಾಕಿ ಉಳಿಸಿಕೊಂಡವರ ಸಂಖ್ಯೆ ಅಧಿಕವಾಗಿದ್ದು, ಪಾಲಿಕೆಯ ಬೊಕ್ಕಸ ತುಂಬಿಸಲು ಚಳವಳಿಗೆ ಮುಂದಾಗಿದೆ.

ಜಿಐಎಸ್‌ ಆಧಾರಿತ ತಂತ್ರಜ್ಞಾನದಿಂದಾಗಿ ನಗರದಲ್ಲಿ 19.5 ಲಕ್ಷ ಆಸ್ತಿಗಳಿರುವುದಾಗಿ ಪತ್ತೆ ಮಾಡಿ ವಿಶೇಷ ಗುರುತಿನ ಸಂಖ್ಯೆ (ಪಿಐಡಿ) ನೀಡಲಾಗಿದೆ. ಅದರಂತೆ ಪ್ರಸಕ್ತ ಆರ್ಥಿಕ ವರ್ಷದಲ್ಲಿ 3100 ಕೋಟಿ ರೂ. ತೆರಿಗೆ ಸಂಗ್ರಹ ಗುರಿಯನ್ನು ಪಾಲಿಕೆ ಹೊಂದಿದೆ. ಆದರೆ, ಈವರೆಗೆ 14,17,402 ಜನರು ಮಾತ್ರ ತೆರಿಗೆ ಪಾವತಿಸಿದ್ದು, ಈವರೆಗೆ ಶೇ.61.45ರಷ್ಟು ಅಂದರೆ 1,904 ಕೋಟಿ ರೂ. ತೆರಿಗೆ ಸಂಗ್ರಹವಾಗಿದೆ. ಇನ್ನು 1200 ಕೋಟಿ ರೂ. ತೆರಿಗೆ ಸಂಗ್ರಹಿಸಲು ಅಭಿಯಾನ ಕೈಗೊಳ್ಳುವುದು ಅನಿವಾರ್ಯವಾಗಿದೆ.

ಇನ್ನು ಪಾಲಿಕೆಗೆ ಹಲವಾರು ವರ್ಷಗಳಿಂದ ಕೋಟ್ಯಂತರ ರೂ. ತೆರಿಗೆ ಪಾವತಿಸದ ಹಾಗೂ ತಪ್ಪು ಮಾಹಿತಿ ನೀಡಿ ತೆರಿಗೆ ವಂಚಿಸಿದ ಆಸ್ತಿದಾರರನ್ನು ಪಟ್ಟಿ ಮಾಡಲಾಗಿದ್ದರೂ, ಪಾಲಿಕೆಯಿಂದ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ತೆರಿಗೆ ಪಾವತಿಸಿಲ್ಲ ಎಂಬ ಆರೋಪಗಳಿವೆ.

ಸರ್ವೆ ಬಳಿಕವೂ ಆದಾಯವಿಲ್ಲ: ಬಿಬಿಎಂಪಿಗೆ 2008ರ ಸ್ವಯಂ ಘೋಷಿತ ಆಸ್ತಿ ತೆರಿಗೆ ಪದ್ಧತಿ (ಎಸ್‌ಎಎಸ್‌) ಅಡಿಯಲ್ಲಿ ಹೆಚ್ಚಿನವರು ತಪ್ಪು ಮಾಹಿತಿ ನೀಡಿರುವ ಬಗ್ಗೆ ದೂರುಗಳು ಬಂದ ಹಿನ್ನೆಲೆಯಲ್ಲಿ ಖಾಸಗಿ ಏಜೆನ್ಸಿಗಳ ಮೂಲಕ ನಗರದಲ್ಲಿ 87 ಬೃಹತ್‌ ಟೆಕ್‌ಪಾರ್ಕ್‌, ಮಾಲ್‌ ಹಾಗೂ ವಾಣಿಜ್ಯ ಕಟ್ಟಡಗಳನ್ನು ಟೋಟಲ್‌ ಸ್ಟೇಷನ್‌ ಸರ್ವೆಗೆ ಒಳಪಡಿಸಲಾಗಿದೆ.

Advertisement

ಸರ್ವೆಯಿಂದಾಗಿ ಬೃಹತ್‌ ಆಸ್ತಿಗಳು ಪಾಲಿಕೆಗೆ ವಂಚನೆ ಮಾಡಿರುವುದು ಬೆಳಕಿಗೆ ಬಂದಿದ್ದು, 45 ಆಸ್ತಿಗಳಿಗೆ 223 ಕೋಟಿ ರೂ. ಬಾಕಿ ತೆರಿಗೆ ಪಾವತಿಸುವಂತೆ ಡಿಮ್ಯಾಂಡ್‌ ನೋಟಿಸ್‌ ನೀಡಲಾಗಿದೆ. ಅದನ್ನು ಪ್ರಶ್ನಿಸಿ 21 ಆಸ್ತಿದಾರರು
ನ್ಯಾಯಾಲಯದ ಮೊರೆ ಹೋಗಿದ್ದಾರೆ. ಆದರೆ, ಉಳಿದ 24 ಆಸ್ತಿದಾರರು ನ್ಯಾಯಾಲಯದ ಮೊರೆ ಹೋಗದಿದ್ದರೂ ಅವರಿಂದ ತೆರಿಗೆ ಸಂಗ್ರಹಿಸಲು ಅಧಿಕಾರಿಗಳು ಹಿಂದೇಟು ಹಾಕುತ್ತಿರುವುದು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ

ಆನ್‌ಲೈನ್‌ ಪಾವತಿದಾರರ ಸಂಖ್ಯೆ ಹೆಚ್ಚಳ ಎರಡು ವರ್ಷಗಳ ಹಿಂದೆ ಯಾವುದೇ ಪೂರ್ವ ತಯಾರಿಯಿಲ್ಲದೆ ಜಾರಿಗೊಂಡು ಆಸ್ತಿದಾರರಿಂದ ತೀವ್ರ ಟೀಕೆಗೆ ಗುರಿಯಾಗಿದ್ದ ಆನ್‌ಲೈನ್‌ ತೆರಿಗೆ ಪಾವತಿ ವ್ಯವಸ್ಥೆ ಸುಧಾರಿಸಿದ್ದು, ಈ ಬಾರಿ ಹೆಚ್ಚಿನ ಜನರು ಆನ್‌ಲೈನ್‌ ಮೂಲಕ ತೆರಿಗೆ ಪಾವತಿಸಿದ್ದಾರೆ. ಪ್ರಸಕ್ತ ಸಾಲಿನ ಆಸ್ತಿ ತೆರಿಗೆಯನ್ನು 10,57,432 ಮಂದಿ ತೆರಿಗೆ ಪಾವತಿಸಿದ್ದು, ಆ ಪೈಕಿ 5,29,830 ಮಂದಿ ಆನ್‌ಲೈನ್‌ ಮೂಲಕವೇ ತೆರಿಗೆ ಪಾವತಿಸಿದ್ದಾರೆ. ಉಳಿದಂತೆ 5,27,602 ಆಸ್ತಿದಾರರು ಚಲನ್‌ ಮೂಲಕ ತೆರಿಗೆ ಪಾವತಿಸಿದ್ದಾರೆ ಎಂಬುದು ಅಂಕಿ-ಅಂಶಗಳಿಂದ ತಿಳಿದುಬಂದಿದೆ.

ದಂಡ ಬೀಳುತ್ತೆ ಹುಷಾರ್‌!
ಆಸ್ತಿ ಮಾಲೀಕರು ಏಪ್ರಿಲ್‌ ಅಂತ್ಯದೊಳಗೆ ತೆರಿಗೆ ಪಾವತಿಸಿದರೆ ಪಾಲಿಕೆಯಿಂದ ಅವರಿಗೆ ಶೇ.5ರಷ್ಟು ತೆರಿಗೆ ರಿಯಾಯಿತಿ ನೀಡಲಾಗುತ್ತದೆ. ರಿಯಾಯಿತಿ ಅವಧಿ ಮುಗಿದ ಬಳಿಕವೂ ಆಸ್ತಿದಾರರು ಪಾವತಿಸದಿದ್ದರೆ ತಿಂಗಳಿಗೆ
ಶೇ.2ರಷ್ಟು ಬಡ್ಡಿ ಹಾಕಲಾಗುತ್ತದೆ. ಜತೆಗೆ ಹಲವು ವರ್ಷಗಳಿಂದ ತೆರಿಗೆ ಪಾವತಿಸದಿದ್ದರೆ ಅಂತಹ ಆಸ್ತಿಗಳಿಗೆ ಬಡ್ಡಿಯೊಂದಿಗೆ ದಂಡ ಸಹ ಹಾಕಲಾಗುತ್ತದೆ ಎನ್ನುತ್ತಾರೆ ಪಾಲಿಕೆ ಅಧಿಕಾರಿಗಳು.

ತೆರಿಗೆ ಪಾವತಿಸುವಂತೆ ಡಿಮ್ಯಾಂಡ್‌ ನೋಟಿಸ್‌ ನೀಡಿದ ನಂತರವೂ ಕೋಟ್ಯಂತರ ರೂ. ತೆರಿಗೆ ಬಾಕಿ ಉಳಿಸಿಕೊಂಡಿರುವವರ ವಿರುದ್ಧ ತಮಟೆ ಬಾರಿಸುವ ಅಭಿಯಾನ ಆರಂಭಿಸಲು ಚಿಂತನೆ ನಡೆಸಿದ್ದು, ನನ್ನ ಮುಂದಾಳತ್ವದಲ್ಲಿಯೇ ಅಭಿಯಾನ ಆರಂಭವಾಗಲಿದೆ. ನಮಗೆ ಪಾಲಿಕೆಯ ಸಂಪನ್ಮೂಲ ಕ್ರೋಢೀಕರಣ ಮುಖ್ಯವೇ
ಹೊರತು, ಹಲವು ವರ್ಷಗಳಿಂದ ತೆರಿಗೆ ಪಾವತಿಸದೆ ಬಾಕಿದಾರರಾಗಿರುವ ಖಾಸಗಿ ಆಸ್ತಿಗಳ ಮರ್ಯಾದೆಯಲ್ಲ.
ಗಂಗಾಂಬಿಕೆ, ಮೇಯರ್‌ 

ವೆಂ. ಸುನೀಲ್‌ಕುಮಾರ್‌

Advertisement

Udayavani is now on Telegram. Click here to join our channel and stay updated with the latest news.

Next