ಮನೆಮುಂದಿನ ತೆಂಗಿನ ಮರಕ್ಕೆ ಹಬ್ಬಿ ಏರಿದ ರಾಶಿ ರಾಶಿ ಬಳ್ಳಿಯನ್ನು ಕಂಡಾಗ ಕಳೆದುಹೋದ ನನ್ನಮ್ಮ ಆಗಾಗ ನೆನಪಾಗುತ್ತಾರೆ. ಅವರು ಮನೆಗೆ ಬಂದಾಗಲೆಲ್ಲಾ ತೆಂಗಿನ ಮರದ ಬುಡಕ್ಕೆ ಇಳಿದು ಎಳೆಯ ಎಲೆ ಚಿವುಟಿ ಕವುಲೆ ಕಟ್ಟಿ ಜಗಲಿಯಲ್ಲಿ ಕೂತು ಆಯ್ದ ಎಲೆ ತೆಗೆದು ಮುಂಗೈಗೆ ಉಜ್ಜಿ ತೊಟ್ಟು ಕಳಚಿ ಸುಣ್ಣ ಹಚ್ಚಿ ಅದನ್ನು ಮೆಲ್ಲುವುದೇ ಒಂದು ಸಂಭ್ರಮ. ಬರೀ ನನ್ನಮ್ಮ ಅಲ್ಲ, ಮಲೆನಾಡಿನ ಪ್ರತಿ ಮನೆಯ ಜಗಲಿಯೂ ಸಂಜೆಯ ಹೊತ್ತಿಗೆ ಭಾರತವಾಗುವುದು ಮಾತು ಬೆಸೆದುಕೊಳ್ಳುವುದು ಇಂಥದ್ದೇ ನಾಟೀ ಸಂಭ್ರಮಗಳಿಂದ. ನಡುಮನೆಯ ರಾಮಕ್ಕ, ಪಕ್ಕದ ಮನೆಯ ಫಾತುಮಕ್ಕ, ಆಚೆಮನೆಯ ಮೋಂತು ಪಬುìಗಳು, ಕೆಳಮನೆಯ ಇಸ್ಮಾಯಿಲ್ ಬ್ಯಾರಿ ಇವರೆಲ್ಲಾ ಎಲ್ಲಿಂದಲೋ ಕಾಡುಗುಡ್ಡ ಏರಿ ಇಳಿದು ಒಟ್ಟಾಗುತ್ತಿದ್ದುದು, ಪರಸ್ಪರ ಹಂಚಿಕೊಳ್ಳುತ್ತಿದುದು, ಊರಲ್ಲಿ ಆ ದಿನ ನಡೆದುಹೋದ ಘಟನೆಗಳನ್ನು ಒಂದೊಂದೇ ಬಿಚ್ಚುವುದು, ಸತ್ತವರು, ಹುಟ್ಟಿದವರು, ಮದುವೆಯಾಗಿ ಹೊಸದಾಗಿ ಬಂದವರು, ಓಡಿಹೋದವರು, ಶ್ರಾದ್ಧ, ಬ್ರಹ್ಮಕಲಶ, ಸತ್ಯನಾರಾಯಣ ಪೂಜೆ, ಮಳೆಬೆಲೆ, ಬರಗಾಲ, ಬಿತ್ತಿದ್ದು, ಕೊಯ್ದದ್ದು- ಪ್ರತಿದಿನ ಬಾಯಲ್ಲಿ ತಾಂಬೂಲ ಕರಗಿದಂತೆ ಎಲ್ಲವೂ ಅಲ್ಲಿ ಲೆಕ್ಕ ಚುಕ್ತವಾಗಲೇ ಬೇಕು.
ನನಗೆ ಈಗಲೂ ನೆನಪಿದೆ. ನಮ್ಮ ಕೂಡುಮನೆಗೆ ಹೊಸದಾಗಿ ಟಿವಿ ಬಂದ ದಿನಗಳವು. ಇಂಥದ್ದೇ ತಾಂಬೂಲ ಕುಟುಂಬಕ್ಕೆ ದೂರದರ್ಶನ ಮಹಾ ಬೆರಗು ಚೋದ್ಯವಾಗಿದ್ದ ದಿನಗಳವು. ಪ್ರತಿ ಭಾನುವಾರ ಬಹುಪಾಲು ಡಾ| ರಾಜಕುಮಾರರ ಚಲನಚಿತ್ರ. ಸಿನೆಮಾ ಇನ್ನೂ ಮುಕ್ಕಾಲು ಪಾಲು ಮುಗಿದಿರಲಿಲ್ಲ , ನಾಯಕ ಡಾ| ರಾಜ್‌ಗೆ ವಜ್ರಮುನಿ ಬಂದು ನಾಲ್ಕು ತದಕಿದರು. ನಮ್ಮ ಮನೆಯ ಜಗಲಿಯಲ್ಲಿ ಕೂತ ಹೊನ್ನಮ್ಮಕ್ಕನ ಕಣ್ಣಿನಲ್ಲಿ ನಾಲ್ಕು ಹನಿ ನೀರು ಜಿನುಗಿತು. ಡಾ| ರಾಜ್‌ಕುಮಾರರು ನಮ್ಮೂರ ಹೊನ್ನಮ್ಮಕ್ಕನ ಮಾವನ ಮಗ, ಅಜ್ಜನ ಮಗ ಏನೂ ಅಲ್ಲ. ಆದರೂ ಡಾ| ರಾಜ್‌ಗಾದ ನೋವು ದೇರ್ಲದ ಹೊನ್ನಮ್ಮಕ್ಕನಿಗೆ ನೋವು ಬರಿಸಿತ್ತು. ಎಲ್ಲಿಯ ರಾಜ್ ಎಲ್ಲಿಯ ಹೊನ್ಮಮ್ಮಕ್ಕ?
ಬಹುಶಃ ಇದೇ ಇದೇ ಇರಬೇಕು ನಿಜವಾದ ಭಾರತ. ಇದೇ ಈ ದೇಶದ ಗ್ರಾಮ ಗ್ರಾಮಗಳ ನಿಜವಾದ ನೈತಿಕತೆ.
ಮುಗ್ಧತೆ. ತಾನು ಮಾಡಬೇಕಾದ ಕೆಲಸವನ್ನು ಡಾ| ರಾಜ್‌ಕುಮಾರ್ ಮಾಡುತ್ತಾರೆ. ತಾನು ಮಾಡಬೇಕಾದ ಕೆಲಸವನ್ನು ಎಲ್ಲೋ ಇರುವ ಅಣ್ಣಾ ಹಜಾರೆ ಮಾಡುತ್ತಾರೆ. ತಾನು ಮಾಡಬೇಕಾದ ಕೆಲಸವನ್ನು ಎಲ್ಲೋ ಇರುವ ಸಂತೋಷ ಹೆಗ್ಡೆ ಮಾಡುತ್ತಾರೆ ಎಂಬ ಭಾವನೆಗಳು ನಮ್ಮ ಗ್ರಾಮ ಹೃದಯಗಳಲ್ಲಿ ಹೀಗೆ ಪ್ರಕಟವಾಗುತ್ತವೆ. ಈ ಕಾರಣ ಆ ದಿನಗಳಲ್ಲಿ ಜಗಲಿಯಲ್ಲಿ ಕೂತ ನಾನು ಟಿ. ವಿ. ನೋಡದೆ ಇಂಥ ತಾಂಬೂಲ ಕುಟುಂಬದ ಸಂಜೆಯ ಬಂಧುಗಳ ಮುಖಗಳನ್ನೇ ನೋಡುತ್ತಿದ್ದೆ. ಚಲನಚಿತ್ರದ ನಡುವೆ ಹದಿನೈದು ನಿಮಿಷ ವಾರ್ತೆಪ್ರಸಾರವಾಗುತ್ತಿದ್ದ ಸಮಯಕ್ಕೆ ಇವರೆಲ್ಲಾ ಆ ಕ್ಷಣಕ್ಕೆ ಅದು ಇದು ಅಲ್ಲಿಂದ ತರಿಸುತ್ತಿದ್ದರು. ದೇಶದ ಸುದ್ದಿ ಗಂಭೀರತೆಯನ್ನು ತಂದು ಅವರಿಗೆಲ್ಲಾ ಕಿರಿಕಿರಿಯನ್ನುಂಟುಮಾಡುತ್ತಿತ್ತು. ವಾರ್ತೆ ಎಂಡ್ ಆದಾಗ ಮತ್ತೆ ಅದೇ ಗುಂಗು, ನಿರೀಕ್ಷೆ , ಕಾತರ. ಕಿಟಕಿಯ ಕುಂಬಿಗಳಿಗೆ ಕೈಯಿಟ್ಟು ಮತ್ತೆ ಟಿವಿಯ ಮೇಲೆ ಕಣ್ಣು . ನಿರೀಕ್ಷೆ. ತಾಂಬೂಲ ಮೆಲ್ಲುತ್ತಾ ತುಪ್ಪುತ್ತಾ ತೆರೆಯ ಮೇಲಿನ ಕಥಾನಕಗಳಲ್ಲಿ ಬೆರೆಯುತ್ತಿದ್ದ ಅವರ ಭಾವಕೋಶಗಳ ಸೂಕ್ಷ್ಮ ಅಭಿವ್ಯಕ್ತಿಗಳು ಅದ್ಭುತ. ಜಗಲಿಯಲ್ಲಿ ಕೂತೇ ಅವು ಬೇರೆ ಬೇರೆ ಹೃದಯಗಳಿಗೆ ಕೋರುಕೊಳ್ಳುತ್ತಿತ್ತು.
ಇಂಥ ಹಳ್ಳಿ ಹೃದಯಗಳ ಸಂಬಂಧ ದಿನೇ ದಿನೇ ಇಂದು ಶಿಥಿಲಗೊಳ್ಳುತ್ತಿದೆ. ಕೂಟದೊಳಗೆ ಸೊಂಟದ ತಾಂಬೂಲ ಸಂಚಿಯನ್ನು ಬಿಚ್ಚಿ ಒಂದು ಮನೆಯ ಎಲೆ, ಮತ್ತೂಂದು ಮನೆಯ ಸುಣ್ಣ, ಮಗದೊಂದು ಮನೆಯ ಹೊಗೆಸೊಪ್ಪು ಒಂದಾಗುವುದೆಂದರೆ ಮತ್ತು ಅದು ಕರಗಿ ಕರಗಿ ಪ್ರತಿ ಬಾಯಿಯಲ್ಲೂ ಪಚಗುಟ್ಟುವುದೆಂದರೆ ತಲೆಯಲ್ಲೂ-ಬಾಯಿಯಲ್ಲೂ ಮಾತು ಒಟ್ಟಾಗುವುದೆಂದೇ ಅರ್ಥ. ಆದರೆ ನನ್ನೂರಿನದ್ದೇ ಅಡಿಕೆ ಗುಜರಾತಿಗೆ ಹೋಗಿ ಅಲ್ಲಿಂದ ತಿರುಗಿ ಬಂದ ಗುಟ್ಕಾ ಸ್ಯಾಚೆಯ ಮೂತಿ ಮುರಿದು ಬಾಯಿಗೆ ಸುರಿದು ಪಚಗುಟ್ಟುವುದಕ್ಕೂ ಅರ್ಧ ಗಂಟೆ ಗುಂಪಾಗಿ ಕೂತು ಲೋಕಾಭಿರಾಮವಾಗಿ ತಾಂಬೂಲ ಮೆಲ್ಲುವುದಕ್ಕೂ ವ್ಯತ್ಯಾಸವಿದೆ. ಗುಟ್ಕಾ ಯಾವತ್ತೂ ಮಾತನ್ನು ಸೃಷ್ಟಿಸುವುದಿಲ್ಲ. ಬಾಯಿಮುಚ್ಚಿಸುತ್ತದೆ. ಅಮಲು ನೆತ್ತಿ ರಂಧ್ರಕ್ಕೆ ಏರಿ ಅದೇ ಗುಂಗಿನಲ್ಲಿ ಆತ ತೇಲುತ್ತಾನೆ. ತಾಂಬೂಲ ಹಾಗಲ್ಲ, ಬದುಕಿಗೆ ಸೊಗಸಾದ ಬಣ್ಣಗಟ್ಟುತ್ತದೆ. ಭಾಷ್ಯೆ ಬರೆಯುತ್ತದೆ.
ಈಗ ನನ್ನ ಮನೆಯ ತೆಂಗಿನ ಮರಕ್ಕೆ ಹಬ್ಬಿದ ಎಲೆಗಳನ್ನು ಕೊಯ್ಯುವವರೇ ಇಲ್ಲ. ಒಂದು ಕಾಲದಲ್ಲಿ ಊರಿನ ಪ್ರತಿ ಬಾಯಿಯ ಮಾತು-ಮನಸ್ಸು ಮಾಲೆ ಮಾಲೆಯಾಗಿ ಮನಸ್ಸಿಗೆ ಅಂಟಿಕೊಂಡಂತೆ ಭಾಸವಾಗುತ್ತಿದ್ದ ಅವು ಹಸುರು ಹಸುರಾಗಿ ಬಾ ಎಂದು ಕರೆಯುವಂತಿದ್ದªರೂ ಈಗ ಬೇಡಿಕೆಯಿಲ್ಲ. ಕವಳ ತಿನ್ನುವವರೆಲ್ಲ ಊರಿಂದ ಕಾಣೆಯಾದರೆ? ಅಥವಾ ಯುವಕರೆಲ್ಲ ಗುಟ್ಕಾಕ್ಕೆ ಬದಲಾದರೆ? ಪ್ರಶ್ನೆಗಳು ಹುಟ್ಟಿಕೊಳ್ಳುತ್ತವೆ. ಬಳ್ಳಿ ಏರಿ ಏರಿ ಈಗ ತೆಂಗಿನ ಕುಬೆ-ಹಿಂಗಾರಕ್ಕೆ ಮುಟ್ಟಿದೆ. ಜೀವಮಾನದಲ್ಲಿ ಒಮ್ಮೆಯೂ ತಾಂಬೂಲ ತಿನ್ನದ ನನ್ನ ಹೆಂಡ್ತಿಗೆ ಆ ತಾಂಬೂಲ ಬಳ್ಳಿಯನ್ನು ಇಡಿಯಾಗಿ ಮರದಿಂದ ಇಳಿಸಲೇಬೇಕೆಂಬ ಹಠ. ವೀಳ್ಯದೆಲೆ ಬಳ್ಳಿ ತೆಂಗಿನ ಮರದ ಕುಬೆಗೆ ಸರಿದರೆ ಮನೆಯ ಯಜಮಾನ ಇಲ್ಲವಾಗುತ್ತಾನೆ ಎಂಬ ಸುದ್ದಿ ಅವಳ ಕಿವಿಗೆ ಬಿದ್ದಿದೆ. ಕೆಲಸದಾಳುಗಳ ಕೈಗೆ ಕತ್ತಿಯೋ ಕೊಕ್ಕೆಯೋ ಕೊಟ್ಟು ಹೇಗಾದರೂ ಅದನ್ನು ಇಳಿಸಿಬಿಡಿ ಎನ್ನುವ ಆಕೆಯ ಒತ್ತಾಯ, ಬೇಡ ಬೇಡ ಇಳಿಸಬೇಡಿ ಅದು ಹಾಗೆಯೇ ಇನ್ನೂ ಇನ್ನೂ ಎತ್ತರೆತ್ತರ ಏರಲಿ ಎಂಬ ನನ್ನಿಂದ ಮನೆಯಲ್ಲೀಗ ಒಂದು ಬಗೆಯ ಶೀತಲ ಸಮರವೇ ಸೃಷ್ಟಿಯಾಗಿದೆ.
ಹಳ್ಳಿ ನುಡಿಗಟ್ಟಿನ ನಿಘಂಟೇ ಆಗಿದ್ದ ನನ್ನಮ್ಮ ಯಾವತ್ತೂ ನನ್ನ ಕಿವಿಗೆ “ವೀಳ್ಯದೆಲೆಯ ಬಳ್ಳಿ ತೆಂಗಿನ ಕುಬೆ ಏರಿದರೆ ಮನೆಯ ಯಜಮಾನ ಮರಣಿಸುತ್ತಾರೆ’ ಎಂಬುದನ್ನು ಹೇಳೇ ಇರಲಿಲ್ಲ. ತಾಂಬೂಲಕಟ್ಟೆಯಲ್ಲಿ ಎಲ್ಲವನ್ನೂ ಹೇಳುತ್ತಿದ್ದ ನನ್ನಮ್ಮ, “ಅದನ್ನು ಹೇಳೇ ಇಲ್ಲ, ನಿನಗೆ ಮಾತ್ರ ಅದು ಹೇಗೆ ಗೊತ್ತಾಯ್ತು?’ ಅಂದಾಗ ಈಕೆ, ನಂಗೆ ಗುಟ್ಟಾಗಿ ಹೇಳಿದ್ದು ಅತ್ತೆಯೇ ಎನ್ನಬೇಕೆ?
ಈ ಮನೆಯ ಪಾಲಿಗೆ ಯಜಮಾನರು ನನ್ನಮ್ಮನೇ. ಅವರು ತೀರಿಹೋಗಿ ಎರಡು ವಾರ ಕಳೆಯಿತು. ವೀಳ್ಯದೆಲೆಯ ತುದಿ ತೆಂಗಿನ ಕುಬೆ-ಸಿಂಗಾರಕ್ಕೇರಿ ಎರಡು ವಾರ ಆಯಿತು. ಅಮ್ಮ ಹೇಳಿದ ನುಡಿಗಟ್ಟು-ಭವಿಷ್ಯ ಸತ್ಯವಾಗಿದೆ. ನಾನಿನ್ನು ಅಜರಾಮರ, ನಿಶ್ಚಿಂತೆಯಿಂದಿರು, ದಯವಿಟ್ಟು ವೀಳ್ಯದೆಲೆಯ ಬಳ್ಳಿಯ ಸುದ್ದಿಗೆ ಹೋಗಬೇಡ ಎಂದು ಆಕೆಯನ್ನು ಸಮಾಧಾನಿಸಿದೆ. ಇಷ್ಟಾದರೂ ಪ್ರತಿಸಂಜೆ ಕಾಲೇಜಿನಿಂದ ಬಂದ ತಕ್ಷಣ ಮೊದಲು ನೋಡುವುದು ಅದೇ ಮರವನ್ನು. ಯಾಕೆಂದರೆ ಅದೇ ಈಗ ನನ್ನ ಪಾಲಿಗೆ ಪ್ರೀತಿಯ ಅಮ್ಮ!
– ನರೇಂದ್ರ ರೈ ದೇರ್ಲ