ತಾಂಬಾ: ಇಂಡಿ ಏತ ನೀರಾವರಿ (ಗುತ್ತಿ ಬಸವಣ್ಣ) ಕಾಲುವೆಗೆ ನೀರು ಹರಿಸಿ ತಾಂಬಾ ಸೇರಿದಂತೆ ಸುತ್ತಲಿನ ಗ್ರಾಮಗಳಿಗೆ ಸಂಬಂಧಪಟ್ಟ ದೊಡ್ಡ ಹಳ್ಳದ ಬಾಂದಾರಗಳಿಗೆ ನೀರು ಹರಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರೈತರು ನಡೆಸುತ್ತಿರುವ ಸರದಿ ಸತ್ಯಾಗ್ರಹ ಶನಿವಾರ ಏಳನೇ ದಿನಕ್ಕೆ ಕಾಲಿಟ್ಟಿದೆ.
ಧರಣಿ ಸ್ಧಳಕ್ಕೆ ಭೇಟಿ ನೀಡಿದ ಇಂಡಿ ತಹಶೀಲ್ದಾರ್ ಚಿದಾನಂದ ಗುರುಸ್ವಾಮಿ ಮಾತನಾಡಿ, ರೈತರ ಕೆಲಸ ಮಾಡಲು ನಾವು ಉತ್ಸಕರಾಗಿದ್ದೇವೆ. ತಮ್ಮ ಬೇಡಿಕೆಗಳು ನ್ಯಾಯ ಸಮ್ಮತವಾಗಿದ್ದು ಉತ್ತರ ಕರ್ನಾಟಕದ 8 ಜಿಲ್ಲೆಗಳಲ್ಲಿ ಪ್ರವಾಹದಿಂದ ರೈತರು ಹಾನಿಗೊಳಗಾಗಿದ್ದಾರೆ. ನಮ್ಮ ಭಾಗದ ರೈತರು ಮಳೆಯಿಲ್ಲದೆ ಬರಗಾಲದಿಂದ ಹಾನಿಗೊಳಗಾಗಿದ್ದಾರೆ. ಆದಷ್ಟು ನಮ್ಮ ರೈತರ ಧ್ವನಿಯಾಗಿ ಕೆಲಸ ಮಾಡುತ್ತೇವೆ. ತಾವು ಧರಣಿ ಕೈ ಬಿಡಬೇಕು. ಆದಷ್ಟು ಬೇಗ ಈ ಭಾಗದಲ್ಲಿ ನೀರು ಹರಿಸುವ ಕಾರ್ಯ ಪ್ರಾರಂಭವಾಗಲಿದೆ ಎಂದರು.
ಕಂದಾಯ ನಿರೀಕ್ಷಕ ಬಿ.ಎ. ರಾವುರ ಮಾತನಾಡಿದರು.
ರೈತ ಮುಖಂಡ ಗುರಸಂಗಪ್ಪ ಬಾಗಲಕೋಟ, ಶಂಖರ ಪ್ಯಾಟಿ ಮಾತನಾಡಿ, ನಮ್ಮ ಗುತ್ತಿ ಬಸವಣ್ಣ ಕಾಲುವೆಗೆ ನೀರು ಹರಿಸಬೇಕು ಹಾಗೂ 147ರವರಗೆ ನೀರು ಹರಿಸಲು ಕೆಬಿಜೆನ್ನೆಲ್ ಅಧಿಕಾರಿಗಳು ಸರಕಾರದ ಮಟ್ಟದಲ್ಲಿ ಇರುವ ಹಾಗೆ ಮಾರ್ಚ್ 30ರವರೆಗೆ ನೀರು ಹರಿಸುತ್ತೇವೆ ಎಂದು ಲೇಖೀ ಮೂಲಕ ಕೊಟ್ಟರೆ ಮಾತ್ರ ನಾವು ಧರಣಿ ಕೈ ಬೀಡುತ್ತೇವೆ. ಇಲ್ಲದಿದ್ದರೆ ಧರಣಿ ಮುಂದುವರಿಯಲಿದೆ. ಇದಕ್ಕೆ ವಿಳಂಬ ಮಾಡಿದರೆ ಮುಂಬರುವ ದಿ ನಗಳಲ್ಲಿ ನಮ್ಮ ಹೋರಾಟ ಇನ್ನಷ್ಟು ಉಗ್ರರೂಪ ಪಡೆಯಲಿದೆ ಎಂದು ಎಚ್ಚರಿಸಿದರು.
ತಾಪಂ ಸದಸ್ಯ ಪ್ರಕಾಶ ಮುಂಜಿ, ಪಿಎಲ್ಡಿ ಬ್ಯಾಂಕ್ ನಿರ್ದೇಶಕ ರಾಯಗೊಂಡ ಪೂಜಾರಿ ಮಾತನಾಡಿದರು. ಹೋರಾಟದಲ್ಲಿ ರೈತ ಮಹಿಳೆಯರಾದ ಜಗದೇವಿ ಬಾಗಲಕೋಟ, ಶೋಭಾ ಹೊಸಮನಿ, ಜಯಶ್ರೀ ಪಾತಳಿ, ಶಶಿಕಲಾ ಗೌರ, ಈರಮ್ಮ ಸುರಾಗಾವ, ಕಲಾವತಿ ಅಲದಿ, ಸುನಂದಾ ಚಿಂಚೋಳಿ, ರೂಪಾ ನಿಂಬಾಳ, ನಿರ್ಮಲಾ ನಿಂಬಾಳ, ಲಕ್ಷ್ಮೀ ಗೊಲಗೇರಿ, ನಿರ್ಮಲಾ ಕಟ್ಟಿ, ಸರೋಜಿನಿ ಸಾಬಾ, ಪಾರ್ವತಿ ಹಲಸಂಗಿ, ಕಮಲಾ ಹಲಸಂಗಿ, ಜ್ಯೋತಿ ಚಾಳೀಕಾರ, ಸುಶೀಲಾ ಸಿಂದಗಿ, ಶ್ರೀದೇವಿ ನಿಂಬಾಳ, ಈರಮ್ಮ ಕುಂಬಾರ, ಸುಮಂಗಲಾ ಸುಕಾಲಿ, ಕಸ್ತೂರಿಬಾಯಿ ಬೆಟಗೇರಿ ಇದ್ದರು.