Advertisement
ತಲ್ಲೂರು ಶಿವರಾಮ ಶೆಟ್ಟರು ಮೂಲತಃ ಯಶಸ್ವಿ ಹೊಟೇಲ್ ಉದ್ಯಮಿಗಳು. ತಲ್ಲೂರು ಗ್ರೂಪ್ ಆಫ್ ಹೊಟೇಲ್ಸ್‌ನ ಚಯರ್‌ಮ್ಯಾನ್ ಮತ್ತು ಮೆನೇಜಿಂಗ್ ಡೈರೆಕ್ಟರ್ ಆಗಿದ್ದಾರೆ. ಉದ್ಯಮದ ಸಾಧನೆಗೆ ಸಂಬಂಧಿಸಿ “ಉದ್ಯಮ ರತ್ನ’ದಂಥ ಅನೇಕ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಉದ್ಯಮಶೀಲರಾಗಿ ಒಂದಿಷ್ಟು ಹೊತ್ತು ಕಚೇರಿಯಲ್ಲಿ ತೊಡಗಿಸಿಕೊಳ್ಳುವ ಇವರ ಬಹು ಸಮಯ ಸಮಾಜಸೇವೆಯಲ್ಲಿಯೇ ಕಳೆದುಹೋಗುತ್ತದೆ. ಇವರು ನೇತೃತ್ವ ವಹಿಸಿರುವ ಸಂಸ್ಥೆಗಳು ಹಲವಾರು. ಲಯನ್ಸ್ ಕ್ಲಬ್‌ನಲ್ಲಿ ಸಕ್ರಿಯರಾಗಿರುವ ಇವರು ಉನ್ನತ ಹುದ್ದೆಯನ್ನು ಅಲಂಕರಿಸಿ ಹಲವು ಪ್ರಶಸ್ತಿಗಳನ್ನು ಪಡೆದಿದ್ದಾರೆ. ದೇಶ-ವಿದೇಶಗಳಿಗೆ ಪ್ರವಾಸ ತೆರಳಿ ಅನುಭವ ಕೋಶವನ್ನು ಹಿಗ್ಗಿಸಿಕೊಂಡಿದ್ದಾರೆ. ಕೇವಲ ಉಡುಪಿ ಪೂರ್ಣಪ್ರಜ್ಞ ಕಾಲೇಜಿನ ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ಅವರ ಸೇವೆಯನ್ನು ಸ್ಮರಿಸಿದರೆ ಶಿಕ್ಷಣ ಕ್ಷೇತ್ರಕ್ಕೆ ಅವರು ಕೊಟ್ಟ ಸಮಗ್ರ ಕೊಡುಗೆಯನ್ನು ಪರಿಗಣಿಸಿದಂತಾಗುವುದಿಲ್ಲ. ಅವರಿಂದ ವಿದ್ಯಾರ್ಥಿ ವೇತನವನ್ನು ಪಡೆದು ಕಲಿತು ಸಾಧನೆ ಗೈದ ವಿದ್ಯಾರ್ಥಿಗಳೆಷ್ಟು, ಇವರ ಕೊಡುಗೆಯಿಂದ ಅಭ್ಯುದಯ ಹೊಂದಿದ ಶಾಲೆಗಳೆಷ್ಟು ಎಂಬುದನ್ನೂ ಗಮನಿಸಬೇಕಾಗಿದೆ.
Related Articles
Advertisement
“ಯಕ್ಷಗಾನ ಕಲಾರಂಗದ ಅಧ್ಯಕ್ಷ ರಾದರೂ ಯಕ್ಷಗಾನ ಗೊತ್ತಿಲ್ಲ’ ಎಂಬ ಮಾತು ಕೇಳಿ 60ರ ಹರೆಯದಲ್ಲಿ ಯಕ್ಷಗಾನದ ನಾಟ್ಯಾಭಿನಯ ಕಲಿಯಲು ಮುಂದಾದರು. ಇಂದ್ರಾಳಿ ಯಕ್ಷಗಾನ ಕೇಂದ್ರದಲ್ಲಿ ಗುರು ಬನ್ನಂಜೆ ಸಂಜೀವ ಸುವರ್ಣರ ಶಿಷ್ಯರಾದರು. ಶ್ರೀಕೃಷ್ಣ, ಹನುಮಂತ, ಪರಶುರಾಮ, ಮಯೂರಧ್ವಜ, ಲಂಕಿಣಿ ಮುಂತಾದ ಪಾತ್ರಗಳನ್ನು ನಿರ್ವಹಿಸಿ ಜನಮನ ಗೆದ್ದರು. ಸುಮಾರು ನೂರರಷ್ಟು ಪ್ರದರ್ಶನಗಳನ್ನು ನೀಡಿದ ಹೆಗ್ಗಳಿಕೆ ಅವರದು.
ಯಕ್ಷಗಾನ ಕಲಾವಿದರಿಗೆ, ಪ್ರದರ್ಶನಗಳಿಗೆ ಸದಾ ಆಸರೆ ನೀಡುವ ತಲ್ಲೂರು ಶಿವರಾಮ ಶೆಟ್ಟರು ತಮ್ಮ ಮಾತಾಪಿತರ ಹೆಸರಿನಲ್ಲಿ ಸ್ಥಾಪಿಸಿರುವ “ತಲ್ಲೂರು ಕನಕಾ-ಅಣ್ಣಯ್ಯ ಶೆಟ್ಟಿ ಪ್ರಶಸ್ತಿ’ಯನ್ನು ಪ್ರತಿವರ್ಷ ಯಕ್ಷಗಾನ ವಿದ್ವಾಂಸರಿಗೆ ನೀಡಿ ತಮ್ಮ “ವಿದ್ವಜ್ಜನ ವಿಧೇಯ ಗುಣ’ವನ್ನು ಮೆರೆಯುತ್ತಿದ್ದಾರೆ. “ತಲ್ಲೂರು ಫ್ಯಾಮಿಲಿ ಟ್ರಸ್ಟ್’ನ ಮೂಲಕ ಇವರು ನಡೆಸಿರುವ ಸಾಮಾಜಿಕ ಚಟುವಟಿಕೆಗಳು ಅಸಂಖ್ಯ.
ಆರ್ಥಿಕವಾಗಿ ಸಬಲರಾಗಿರುವ ಅನೇಕ ಮಂದಿ ಸಮಾಜದಲ್ಲಿ ಇದ್ದಾರೆ. ಆದರೆ, ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ “ಸಂಸ್ಕಾರ’ ಅವರಲ್ಲಿರುವುದಿಲ್ಲ. ಪರಿಶ್ರಮ, ಕೌಶಲ ಮತ್ತು ಔದಾರ್ಯಗಳೆಂಬ ಮೂರು ಗುಣಗಳಿಂದಾಗಿ ತಲ್ಲೂರು ಶಿವರಾಮ ಶೆಟ್ಟರ ಹೆಸರು ನಾಡಿನ ಪ್ರಸಿದ್ಧರ ಸಾಲಿನಲ್ಲಿ ಸೇರಿದೆ. ಮುಖ್ಯವಾಗಿ ಇಷ್ಟು ಎತ್ತರಕ್ಕೆ ಏರಲು ಯಕ್ಷಗಾನ ಕಲೆ, ಯಕ್ಷಗಾನ ಕಲಾರಂಗದ ಒಡನಾಟ ಕಾರಣ ಎಂದು ಹೇಳುವುದು ಶಿವರಾಮ ಶೆಟ್ಟರ ವಿನಮ್ರವಾದ ಗುಣವಾಗಿದೆ. ಶಿವರಾಮ ಶೆಟ್ಟರು ಈಗ ಪ್ರಶಸ್ತಿ ಭಾಜನರಾಗಿರುವುದು ಅವರ ಸಾಧನೆಯಿಂದಾಗಿ ಮತ್ತು ಸಾಧಕನಿಗಿರುವ ಸಹಜ ವಿನಯಶೀಲತೆಯಿಂದಾಗಿ.
ವೈ. ಕಲಾ