Advertisement

ತಾಳಿಕೋಟೆ ಪುರಸಭೆಗೆ ಚುನಾವಣೆ ನಿಗದಿ

10:43 AM May 03, 2019 | Naveen |

ತಾಳಿಕೋಟೆ: ರಾಜ್ಯದ 103 ನಗರ ಸ್ಥಳೀಯ ಸಂಸ್ಥೆಗಳ ಎರಡನೇ ಹಂತದ ಸಾರ್ವತ್ರಿಕ ಚುನಾವಣೆ ನಡೆಸಲು ರಾಜ್ಯ ಚುನಾವಣೆ ಆಯೋಗ ದಿನಾಂಕ ನಿಗದಿಗೊಳಿಸಿದೆ. ಇದರಲ್ಲಿ ತಾಳಿಕೋಟೆ ಪುರಸಭೆಗೂ ಮೇ 29ರಂದು ಮತದಾನ ನಡೆಯಲಿದೆ.

Advertisement

ಎರಡನೇ ಹಂತದಲ್ಲಿ ಮಾರ್ಚ್‌ 2019ರಿಂದ ಜುಲೈ-2019ರ ವರೆಗೆ ಅವಧಿ ಮುಕ್ತಾಯವಾಗುವ ಒಟ್ಟು 103 ನಗರ ಸ್ಥಳೀಯ ಸಂಸ್ಥೆಗಳಲ್ಲಿ ರಾಜ್ಯದ 8 ನಗರಸಭೆಗಳು, 33 ಪುರಸಭೆಗಳು ಹಾಗೂ 22 ಪಟ್ಟಣ ಪಂಚಾಯ್ತಿಗಳಿಗೆ ಚುನಾವಣೆ ನಡೆಸಲು ಚುನಾವಣೆ ಆಯೋಗ ನಿರ್ಧರಿಸಿದೆ. ಅದರಲ್ಲಿ ತಾಳಿಕೋಟೆ ಪುರಸಭೆ ಸೇರಿದಂತೆ ಒಟ್ಟು 33 ಪುರಸಭೆಗಳಿಗೆ ಚುನಾವಣೆ ನಡೆಯಲಿದೆ. ಇದರಲ್ಲಿ ಜಿಲ್ಲೆಯ ಬಸವನಬಾಗೇವಾಡಿ, ಇಂಡಿ ಪುರಸಭೆ ಒಳಗೊಂಡಿದ್ದು, ಚುನಾವಣೆಗೆ ಸಂಬಂಧಿಸಿದಂತೆ ವಿಧಾನಸಭಾ ಮತದಾರರ ಪಟ್ಟಿಯ ಡಾಟಾವನ್ನು ಅಳವಡಿಸಿಕೊಂಡು ವಾರ್ಡ್‌ವಾರು ಮತದಾರರ ಪಟ್ಟಿ ತಯಾರಿಸಲು ಚುನಾವಣೆ ಆಯೋಗವು ಸೂಚನೆ ನೀಡಿದೆ.

ವೇಳಾ ಪಟ್ಟಿ: ರಾಜ್ಯ ಚುನಾವಣೆ ಆಯೋಗದ ನಿರ್ದೇಶನದಂತೆ ಮೇ 9ರಂದು ಜಿಲ್ಲಾಧಿಕಾರಿಗಳು ಚುನಾವಣಾ ಅಧಿಸೂಚನೆ ಹೊರಡಿಸಲಿದ್ದಾರೆ. ಮೇ 16ರಂದು ನಾಮಪತ್ರ ಸಲ್ಲಿಸಲು ಕೊನೆಯ ದಿನಾಂಕ ನಿಗಪಡಿಸಲಾಗಿದೆ. ಮೇ 17ರಂದು ನಾಮಪತ್ರ ಪರಿಶೀಲನೆ ನಡೆಯಲಿದೆ. ಮೇ 20ರ‌ಂದು ಉಮೇದುವಾರಿಕೆಗಳನ್ನು ಹಿಂತೆಗೆದುಕೊಳ್ಳುವ ಕೊನೆಯ ದಿನವಾಗಿದೆ. ಮತದಾನ ಮೇ 29ರಂದು ಬೆಳಗ್ಗೆ 7ರಿಂದ ಸಾಯಂಕಾಲ 5ರ ವರೆಗೆ ನಿಗದಿಪಡಿಸಲಾಗಿದೆ. ಮೇ 31ರಂದು ಮತ ಏಣಿಕೆ ಕಾರ್ಯ ತಾಲೂಕು ಕೇಂದ್ರದ ಸ್ಥಳಗಳಲ್ಲಿ ನಡೆಯಲಿದೆ.

ಬಿರುಸಿನ ಚಟುವಟಿಕೆ: ಪುರಸಭೆಯ ಲೋಕಲ್ ಪೈಟ್‌ಗೆ ಚುನಾವಣೆ ದಿನಾಂಕ ನಿಗದಿಗೆ ಕಾಯುತ್ತಾ ಕುಳಿತಿದ್ದ ಯುವ ಸಮೂಹ ದಿನಾಂಕ ನಿಗದಿಗೊಂಡ ಕ್ಷಣದಿಂದಲೇ ವಾರ್ಡ್‌ವಾರು ಸ್ಪರ್ಧಿಸಲು ಬಿರುಸಿನ ರಾಜಕೀಯ ಚಟುವಟಿಕೆಗಳು ಶುರುವಾಗಿವೆ. ಪುರಸಭೆಯ 23 ವಾರ್ಡ್‌ಗಳ ಪೈಕಿ ಕೆಲ ವಾರ್ಡ್‌ ಗಳಲ್ಲಿ ಅತೀ ಕಡಿಮೆ ಮತದಾರರಿದ್ದರೆ ಇನ್ನೂ ಕೆಲ ವಾರ್ಡ್‌ಗಳಲ್ಲಿ ಎರಡು ಸಾವಿರಕ್ಕೂ ಅಧಿಕ ಮತದಾರರು ಹೊಂದಿದ್ದಾರೆ. ಇದರಲ್ಲಿ ಕಡಿಮೆ ಮತದಾರರು ಇದ್ದ ಸ್ಥಳಗಳಲ್ಲಿ ಜಾತಿ ಲೆಕ್ಕಾಚಾರಗಳೇ ಅತೀ ಹೆಚ್ಚು ಕಂಡುಬರುತ್ತಿದೆ.

ಈಗಾಗಲೇ ವಾರ್ಡ್‌ವಾರುಗಳ ಮೀಸಲಾತಿ ಪ್ರಕಟಗೊಂಡಿದ್ದು, ಇದರಲ್ಲಿ ಕೆಲ ವಾರ್ಡ್‌ಗಳಲ್ಲಿ ಜಾತಿ ಲೆಕ್ಕಾಚಾರದ ಮೇಲೆ ಇನ್ನೂ ಕೆಲ ವಾರ್ಡ್‌ಗಳಲ್ಲಿ ಪಕ್ಷ ಮತ್ತು ಪಕ್ಷೇತರವಾಗಿ ಸ್ಪರ್ಧಿಸಬೇಕೋ? ಎಂಬ ಲೆಕ್ಕಾಚಾರ ಆರಂಭವಾಗಿದೆ. ಇನ್ನೂ ಈ ಹಿಂದೆ ಆಯ್ಕೆಗೊಂಡು ಆಡಳಿತ ನಡೆಸಿದ ಅರ್ಧದಷ್ಟು ಸದಸ್ಯರು ಮರುಸ್ಪರ್ಧೆ ಬಯಿಸಿ ಮತದಾರರ ಓಲೈಕೆಗೆ ಮುಂದಾಗಲಿದ್ದಾರೆ ಎನ್ನಲಾಗಿದೆ. ಇನ್ನೂ ಕೆಲವರು ತಮ್ಮ ಮೊದಲಿನ ವಾರ್ಡ್‌ಗಳನ್ನು ಬದಲಾಯಿಸಿ ಬೇರೆ ವಾರ್ಡ್‌ಗಳಲ್ಲಿ ಸ್ಪರ್ಧಿಸಲು ಚಿಂತನೆ ನಡೆಸಿದ್ದಾರೆ. ಆದರೆ ಮತದಾರರು ಹಿಂದಿನ ಆಡಳಿತ ವ್ಯವಸ್ಥೆ ಮೆಚ್ಚುತ್ತಾರೋ? ಅಥವಾ ಹೊಸ ಆಡಳಿತವನ್ನು ಬಯಸುತ್ತಾರೋ? ಕಾದು ನೋಡಬೇಕಿದೆ.

Advertisement

ಜಿ.ಟಿ. ಘೋರ್ಪಡೆ

Advertisement

Udayavani is now on Telegram. Click here to join our channel and stay updated with the latest news.

Next