ತಾಳಿಕೋಟೆ: ಇಲ್ಲಿನ ಪುರಸಭೆ ಸದಸ್ಯ ಜೈಸಿಂಗ್ ಮೂಲಿಮನಿ ಅವರು ಕೋವಿಡ್ ಸೋಂಕು ತಡೆಗೆ ವಿಶಿಷ್ಟ ರೀತಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಸ್ವಂತ ಖರ್ಚಿನಲ್ಲಿ ಪಟ್ಟಣದಲ್ಲಿ ನಿತ್ಯ ಹೈಪೋಕ್ಲೋರೈಡ್ ದ್ರಾವಣ ಸಿಂಪಡಣೆ ಮಾಡಿಸುತ್ತಿದ್ದು, ಇದರ ಜತೆಗೆ ನಿತ್ಯ ನೂರಾರು ಜನರಿಗೆ ಸ್ಯಾನಿಟೈಸರ್‌ನಿಂದ ಕೈ ತೊಳೆಸುತ್ತಿದ್ದು, ಮಾಸ್ಕ್ ಧರಿಸುವಂತೆ ಜಾಗೃತಿ ಮೂಡಿಸುತ್ತಿದ್ದಾರೆ.
ಇವರ ಈ ಸಾಮಾಜಿಕ ಕಾರ್ಯಕ್ಕೆ ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಪುರಸಭೆ ಅಗ್ನಿಶಾಮಕ ಸಿಬ್ಬಂದಿಗಳ ಸಹಾಯದಿಂದ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಹೈಪೋಕ್ಲೋರೈಡ್ ಸಿಂಪಡಣೆ ಮಾಡಿತ್ತು. ಆದರೆ ಬಡಾವಣೆಗಳ, ಸಂದಿಗೊಂದಿಗಳಲ್ಲಿ ವಾಹನ ಹೋಗಲಾರದಕ್ಕೆ ಫಾಗಿಂಗ್ ಮಾಡಲಾಗಿತ್ತು. ಈ ಕಾರ್ಯದಲ್ಲಿಯೂ ಕೈಜೋಡಿಸಿದ್ದ ಪುರಸಭೆ ಸದಸ್ಯ ಜೈಸಿಂಗ್ ಮೂಲಿಮನಿ ಸ್ವಂತ ಖರ್ಚಿನಲ್ಲಿ ಪಟ್ಟಣದ ಎಲ್ಲ ಬಡಾವಣೆಗಳಲ್ಲಿ ಹೈಪೋಕ್ಲೋರೈಡ್ ಸಿಂಪಡಣೆ ಮಾಡಿಸುತ್ತಿದ್ದಾರೆ. ಸುಮಾರು 6 ಬಾಡಿಗೆ ಟ್ರ್ಯಾಕ್ಟರ್‌ಗಳಿಗೆ ಟಾಕ್ಸಿಗಳನ್ನು ಕೂಡ್ರಿಸಿ ಪಟ್ಟಣದ ಪ್ರಮುಖ ರಸ್ತೆಗಳನ್ನೊಳಗೊಂಡು ವಿವಿಧ ಬಡಾವಣೆಗಳಲ್ಲಿ ಹೈಪೋಕ್ಲೋರೈಡ್ ಸಿಂಪಡಣೆಗೆ ಮುಂದಾಗಿದ್ದಾರೆ.
ಜಾಗೃತಿ: ಕಳೆದ 1 ತಿಂಗಳಿಂದ ದಿನಕ್ಕೆ 2 ಲೀಟರ್‌ನಷ್ಟು ಸ್ಯಾನಿಟೈಸರ್ ಖರೀದಿಸಿ ಕಿರಾಣಿ ಅಂಗಡಿಕಾರರ ಹಾಗೂ ತರಕಾರಿ ಮಾರಾಟಗಾರರು ಮತ್ತು ಗ್ರಾಹಕರ ಕೈಗೆ ಸ್ಯಾನಿಟೈಸರ್ ಹಾಕುತ್ತಾ ಕೈ ತೊಳೆದುಕೊಳ್ಳಲು ಮತ್ತು ಮಾಸ್‌ಕ ಧರಿಸುವಂತೆ, ಮಾಸ್ಕ್ ಇಲ್ಲದಿದ್ದರೆ ಕನಿಷ್ಠ ಪಕ್ಷ ಮುಖಕ್ಕೆ ಕರವಸ್ತ್ರವನ್ನಾದರೂ ಕಟ್ಟಿಕೊಳಿ ಜಾಗೃತಿ ಮೂಡಿಸುತ್ತಿದ್ದಾರೆ. ಇವರ ಸಾಮಾಜಿಕ ಕಳಕಳಿ ಜನರ ಮೆಚ್ಚುಗೆಗೆ ಪಾತ್ರವಾಗಿದೆ. ಬಡ ಕುಟಂಬಕ್ಕೆ ನೆರವು: ಪಟ್ಟಣದ ವಿವಿಧ ಬಡಾವಣೆಗಳಲ್ಲಿನ ಕಡು ಬಡವರಿಗೆ 1 ತಿಂಗಳಿಗಾಗುವಷ್ಟು ದಿನಸಿ ಸಾಮಗ್ರಿ ವತಿರಿಸಿದ್ದಾರೆ. ಕೆಲವರಿಗೆ ಧನ ಸಹಾಯವನ್ನೂ ಮಾಡಿದ್ದಾರೆ.
ಕೋವಿಡ್ ವೈರಸ್ ನಮ್ಮೂರಿಗೆ ಬಾರದಿರಲಿ ಮತ್ತು ಇದರ ತಡೆಗೆ ಜನ ಜಾಗೃತರಾಗಲಿ ಎಂಬ ಭಾವನೆಯಿಂದ ಸ್ಯಾನಿಟೈಸರ್ ಮೂಲಕ ಕೈ ತೊಳೆದುಕೊಳ್ಳಲು ಮತ್ತು ಮಾಸ್ಕ್ಧ ರಿಸಿಕೊಂಡು
ಸಂಚರಿಸುವಂತೆ ಜಾಗೃತಿ ಮೂಡಿಸುತ್ತಿದ್ದೇನೆ. ನನ್ನ ಈ ಸೇವಾ ಕಾರ್ಯದಿಂದ ಸಾಕಷ್ಟು ಜನ ಬದಲಾಗಿರುವುದು ತೃಪ್ತಿ ತಂದಿದೆ.
ಜೈಸಿಂಗ್ ಮೂಲಿಮನಿ,
ಪುರಸಭೆ ಸದಸ್ಯ ತಾಳಿಕೋಟೆ
ಜಿ.ಟಿ. ಘೋರ್ಪಡೆ