Advertisement

ತರಗತಿ ಆರಂಭದ ಹೊಸ್ತಿಲಲ್ಲೇ ಪಠ್ಯ ಕ್ರಮ ಬದಲು ನಿರ್ಧಾರ 

12:38 PM Jun 09, 2017 | Team Udayavani |

ಬೆಂಗಳೂರು: ಇನ್ನೇನು ಬೆಂಗಳೂರು ವಿವಿಯ ಪದವಿ ತರಗತಿಗಳು ಆರಂಭವಾಗುತ್ತಿರುವ ಹೊತ್ತಲ್ಲೇ, ಪೂರ್ವ ಸಿದ್ಧತೆ ಇಲ್ಲದೆ ಪ್ರಥಮ ವರ್ಷದ ಪದವಿ ಕೋರ್ಸ್‌ಗಳ ಕನ್ನಡ ಪಠ್ಯಕ್ರಮ ಬದಲಾಯಿಸಲು ವಿವಿ ನಿರ್ಧಾರ ಕೈಗೊಂಡಿದೆ. ಹೀಗಾಗಿ ಕನ್ನಡ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳಲ್ಲಿ ಗೊಂದಲ ಸೃಷ್ಟಿಯಾಗಿದೆ.

Advertisement

ಪದವಿ ವಿದ್ಯಾರ್ಥಿಗಳ ಕನ್ನಡ ಪಠ್ಯಕ್ರಮ ಬದಲಾವಣೆಗೆ ಸಂಬಂಧಿಸಿದಂತೆ ಗೊಂದಲದ ನಿಲುವು ಹೊಂದಿರುವ ಬೆಂಗಳೂರು ವಿವಿ, ಒಂದು ವೇಳೆ ಹೊಸ ಪಠ್ಯಪುಸ್ತಕ ಮುದ್ರಣ ತಿಂಗಳೊಳಗೆ ಪೂರ್ಣಗೊಂಡರೆ ಈ ಸಾಲಿನಿಂದಲೇ ಅನುಷ್ಠಾನಗೊಳಿಸಲಾಗುವುದು, ಇಲ್ಲವಾದಲ್ಲಿ ಮುಂಬರುವ ಶೈಕ್ಷಣಿಕ ವರ್ಷದಿಂದ ಜಾರಿಗೆ ತರಲಾಗುವುದು. ಅಲ್ಲಿ ವರೆಗೆ ಸದ್ಯದ ಪಠ್ಯ ಕ್ರಮವೇ ಮುಂದುವರಿಯಲಿದೆ ಎಂದು ಹೇಳುತ್ತಿದೆ. 

ಒಂದು ತಿಂಗಳಲ್ಲಿ ಪೂರ್ಣವಾಗುವುದೇ ಕೆಲಸ?: ಹೊಸ ಪಠ್ಯಕ್ರಮ ಸಿದ್ಧಪಡಿಸಲು ಸಮಿತಿ ರಚನೆ ಮಾಡಬೇಕು. ಪದವಿ ತರಗತಿಯ ಗುಣಮಟ್ಟಕ್ಕೆ ಅನುಗುಣವಾಗಿ ಪಠ್ಯಗಳ ಆಯ್ಕೆ ಮಾಡಬೇಕು. ಸಾಹಿತಿಗಳ ಬರಹ ಹಾಗೂ ಕವಿತೆಯನ್ನು ಪಠ್ಯದಲ್ಲಿ ಅಳವಡಿಸಬೇಕಿದ್ದರೆ ಅಂಥವರ ಅನುಮತಿ ಪಡೆಯಬೇಕು. ಪಠ್ಯಪುಸ್ತಕ ರಚನಾ ಮಾನದಂಡವನ್ನು ಕಡ್ಡಾಯವಾಗಿ ಪಾಲಿಸಲೇಬೇಕು.

ಹಳೇ ಪಠ್ಯ ಪುನರಾವರ್ತನೆ ಆಗದಂತೆ ಎಚ್ಚರ ವಹಿಸಬೇಕು. ತಜ್ಞರಿಂದ ಸಲಹೆ ಪಡೆದು ಪಠ್ಯ ರಚನೆಯಾದ ನಂತರ ಅದನ್ನು ಪರಿಶೀಲಿಸಿ ತಿದ್ದುಪಡಿ ಮಾಡಬೇಕು. ಇದೆಲ್ಲವನ್ನು ಎರಡು ತಿಂಗಳ ಕಾಲಮಿತಿಯೊಳಗೆ ಮಾಡಲು ಸಾಧ್ಯವೇ ಎಂಬುದು ಈಗಿರುವ ಸವಾಲು. ಆದರೂ, ಬೆಂಗಳೂರು ವಿಶ್ವವಿದ್ಯಾಲಯ ಈ ಸಾಹಸ ಮಾಡುತ್ತಿರುವುದು ವಿದ್ಯಾರ್ಥಿಗಳ, ಉಪನ್ಯಾಸಕರ ಗೊಂದಲಕ್ಕೆ ಕಾರಣವಾಗಿದೆ.

ಮೇ 10ರಂದು ಕನ್ನಡ ಪುಸ್ತಕ ಬದಲಾವಣೆಗೆ  ತೀರ್ಮಾನ ತೆಗೆದುಕೊಂಡಿದ್ದು, ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಪೀಠಕ್ಕೆ ಇದರ ಸಂಪೂರ್ಣ ಜವಾಬ್ದಾರಿ ನೀಡಿದೆ. ಅಧ್ಯಯನ ಪೀಠದ ಮುಖ್ಯಸ್ಥರು ಪಠ್ಯಪುಸ್ತಕ ರಚನೆಗೆ ಸಂಬಂಧಿಸಿದಂತೆ ಕೆಲವು ಕ್ರಮ ತೆಗೆದುಕೊಂಡಿದ್ದಾರೆ. ಆದರೆ, ಇನ್ನೂ ಯಾವುದೂ ಅಂತಿಮಗೊಂಡಿಲ್ಲ.

Advertisement

ಈ ನಡುವೆ ಇದೇ 28ರಂದು ಪದವಿ ಕಾಲೇಜು ಆರಂಭವಾಗಲಿದೆ. ಅಷ್ಟರೊಳಗೆ ಹೊಸ ಪಠ್ಯಕ್ರಮದ ಕನ್ನಡ ಪಠ್ಯಪುಸ್ತಕ ಮುದ್ರಣವಾಗುವ ಸಾಧ್ಯತೆ ಕಡಿಮೆ ಇದೆ. ಬಿ.ಎ, ಬಿ.ಕಾಂ, ಬಿಬಿಎಂ, ಬಿಸಿಎ ಹಾಗೂ ಬಿಎಸ್ಸಿ ಸೇರಿದಂತೆ ಒಟ್ಟು 8 ಪದವಿ ಕೋರ್ಸ್‌ಗಳ ಕನ್ನಡ ಪಠ್ಯಕ್ರಮ ಬದಲಾಗಲಿದೆ. ಈ ಎಲ್ಲ ಪಠ್ಯಕ್ರಮದ ಹೊಸದಾಗಿ ಸಿದ್ಧಪಡಿಸಬೇಕಿರುವುದರಿಂದ ಕಾಲಾವಕಾಶದ ಅಗತ್ಯವೂ ಇರುತ್ತದೆ ಎಂದು ವಿವಿಯ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ವಿದ್ಯಾರ್ಥಿ, ಉಪನ್ಯಾಸಕರಲ್ಲಿ ಆತಂಕ
ಕೆಲವೇ ದಿನಗಳಲ್ಲಿ ಪ್ರಥಮ ವರ್ಷದ ತರಗತಿಗಳು ಆರಂಭವಾಗಲಿದೆ. ವಿಶ್ವವಿದ್ಯಾಲಯ ಕನ್ನಡ ಪಠ್ಯಕ್ರಮಕ್ಕೆ ಸಂಬಂಧಿಸಿದಂತೆ ಇನ್ನು ಸೂಕ್ತ ನಿರ್ಧಾರ ತೆಗೆದುಕೊಂಡಿಲ್ಲ. ಯಾವ ಪಠ್ಯ ಓದಬೇಕು ಎಂಬ ಗೊಂದಲ ವಿದ್ಯಾರ್ಥಿಗಳಲ್ಲಾದರೆ, ಪಾಠ ಹೇಳಿಕೊಡುವ ಉಪನ್ಯಾಸಕರು ಯಾವ ಪಠ್ಯಕ್ರಮ ಅಧ್ಯಯನ ಮಾಡಬೇಕೆಂಬ ಜಿಜ್ಞಾಸೆಗೆ ಒಳಗಾಗಿದ್ದಾರೆ. 

ಒಂದೇ ಪಠ್ಯಪುಸ್ತಕ, ಎರಡು ಪಠ್ಯಕ್ರಮ 
ವಿದ್ಯಾರ್ಥಿಗಳ ಅಧ್ಯಯನಕ್ಕೆ ಪೂರಕವಾಗುವಂತೆ ಎರಡು ಸೆಮಿಸ್ಟರ್‌ ಪಠ್ಯವನ್ನು ಒಂದೇ ಪುಸ್ತಕದಲ್ಲಿ ನೀಡಲು ವಿಶ್ವವಿದ್ಯಾಲಯ ಯೋಚನೆ ಮಾಡಿದೆ. ಈ ಹಿಂದೆ ಒಂದು ಮತ್ತು ಎರಡನೇ ಸಮಿಸ್ಟರ್‌ಗೆ ಪ್ರತ್ಯೇಕ ಪಠ್ಯಕ್ರಮ  ಹಾಗೂ ಪಠ್ಯಪುಸ್ತಕ ಇರುತಿತ್ತು. ಈ ವರ್ಷದಿಂದ ಒಂದೇ ಪಠ್ಯಪುಸ್ತಕದಲ್ಲಿ ಎರಡು ಸೆಮಿಸ್ಟರ್‌ನ ಪಠ್ಯಕ್ರಮ ಜೋಡಿಸಲು ಚಿಂತನೆ ನಡೆಸಿದೆ. ವಿದ್ಯಾರ್ಥಿಗಳಿಗೆ ಇದು ಅನುಕೂಲವಾಗುವುದರ ಜತೆಗೆ ಮುದ್ರಣ ವೆಚ್ಚವೂ ಕಡಿಮೆಯಾಗಲಿದೆ ಎಂಬುದು ವಿವಿ ಆಡಳಿತ ಮಂಡಳಿ ಆಶಯ.

ಕನ್ನಡ ವಿಷಯದ ಹೊಸ ಪಠ್ಯಪುಸ್ತಕವು ಸಿದ್ಧವಾಗುತ್ತಿದೆ. ಜೂನ್‌ ಅಂತ್ಯದೊಳಗೆ ಅದು ಮುದ್ರಣ ಮಾಡಲು ಸಾಧ್ಯವಾಗದೇ ಇದ್ದರೆ, ಹಳೇ ಪಠ್ಯಕ್ರಮದಲ್ಲೇ ತರಗತಿ ನಡೆಸಲಿದ್ದೇವೆ. ಮುಂದಿನ ವರ್ಷ ಅಥವಾ ಎರಡನೇ ಸೆಮಿಸ್ಟರ್‌ನಲ್ಲಿ ಹೊಸ ಪಠ್ಯ ನೀಡಲಿದ್ದೇವೆ.
-ಡಾ.ಎಂ.ಮುನಿರಾಜು, ಬೆಂವಿವಿ ಕುಲಪತಿ(ಪ್ರಭಾರ) 

* ರಾಜು ಖಾರ್ವಿ ಕೊಡೇರಿ

Advertisement

Udayavani is now on Telegram. Click here to join our channel and stay updated with the latest news.

Next