Advertisement

12 ಸಾವಿರ ಮಂದಿಗೆ ಸಂಸ್ಕೃತ ಕಲಿಸಿದ ಜವುಳಿ ಉದ್ಯಮಿ!

02:30 AM Jul 03, 2021 | Team Udayavani |

ವಿಜಯಪುರ: ಇಲ್ಲಿನ ಸಗಟು ಜವುಳಿ ವ್ಯಾಪಾರಸ್ಥರೊಬ್ಬರು 2 ದಶಕಗಳಿಂದ ಸಂಸ್ಕೃತವನ್ನು ಪಸರಿಸುವ ಸೇವೆಯಲ್ಲಿ ತೊಡಗಿದ್ದು, ಈವರೆಗೆ 12 ಸಾವಿರ ಜನರಿಗೆ ಸಂಸ್ಕೃತ ಕಲಿಸಿದ್ದಾರೆ. ಅವರ ಸಂಸ್ಥೆಯ ಸುಮಾರು ಒಂದು ನೂರು ಸಿಬಂದಿ ಸಂಸ್ಕೃತದಲ್ಲೇ ವ್ಯವಹರಿಸುತ್ತಿದ್ದು, ವಿಭಿನ್ನ ರೀತಿಯಲ್ಲಿ ಸಂಸ್ಕೃತ ಭಾಷಾ ಪ್ರಸಾರ ಮಾಡುತ್ತಿದ್ದಾರೆ.

Advertisement

ಹುತಾತ್ಮರ ವೃತ್ತದಲ್ಲಿ “ತ್ರೀಆರ್‌’ ಎಂಬ ಸಿದ್ಧ ಬಟ್ಟೆಗಳ ಸಗಟು ಅಂಗಡಿ ನಡೆಸುತ್ತಿರುವ ರಾಮಸಿಂಗ್‌ ರಜಪೂತ್‌ ಹೀಗೆ ವಿಶಿಷ್ಟವಾಗಿ ಸಂಸ್ಕೃತವನ್ನು ಪಸರಿಸುವ ಕೆಲಸದಲ್ಲಿ ತೊಡಗಿದ್ದಾರೆ. ಇವರ ಕುಟುಂಬ ಕೂಡ ಇದೇ ಕೆಲಸ ಮಾಡುತ್ತಿದೆ.
20 ವರ್ಷಗಳ ಹಿಂದೆ “ಸಂಸ್ಕೃತ ಭಾರತಿ’ಯಿಂದ ನಗರದ ಸಿದ್ಧೇಶ್ವರ ಶ್ರೀಗಳ ಜ್ಞಾನಯೋಗಾಶ್ರಮದಲ್ಲಿ ನಡೆದ ಸಂಸ್ಕೃತ ಶಿಬಿರದಿಂದ ಪ್ರೇರಿತರಾದ ರಾಮ ಸಿಂಗ್‌, ಸಂಪೂರ್ಣ ಸಂಸ್ಕೃತ ಭಾಷೆಯಲ್ಲೇ ವ್ಯವಹರಿಸುತ್ತಿದ್ದು, ಸಂಸ್ಕೃತ ಭಾಷಾ ಪ್ರಸಾರಕ್ಕೆ ತಮ್ಮನ್ನು ಸಮರ್ಪಿಸಿಕೊಂಡಿದ್ದಾರೆ.

ತಮ್ಮಲ್ಲಿ ಕೆಲಸಕ್ಕಿರುವ ನೂರಕ್ಕೂ ಹೆಚ್ಚು ಸಿಬಂದಿಗೆ ನಿತ್ಯವೂ ಒಂದು ತಾಸು ಸಂಸ್ಕೃತ ಬೋಧನೆ ಮಾಡು ತ್ತಾರೆ. ಹೀಗಾಗಿ ಎಲ್ಲ ಸಿಬಂದಿ ಸಂಸ್ಕೃತದಲ್ಲೇ ವ್ಯವಹರಿಸುತ್ತಾರೆ.

ಅಚ್ಚರಿಯ ಸಂಗತಿ ಎಂದರೆ ರಾಮಸಿಂಗ್‌ ಕಳೆದ 20 ವರ್ಷಗಳಲ್ಲಿ ಉತ್ತರ ಕರ್ನಾಟಕದ ಸುಮಾರು 12 ಸಾವಿರ ಜನರಿಗೆ ಸಂಸ್ಕೃತ ಭಾಷಾ ಬೋಧನೆ ಮಾಡಿದ್ದಾರೆ. ಇದರಲ್ಲಿ ಶೇ. 50ಕ್ಕಿಂತ ಹೆಚ್ಚಿನವರು ಸಂಸ್ಕೃತದಲ್ಲೇ ಸಂವಹನ ಮಾಡುತ್ತಿದ್ದಾರೆ. ವಿಜಯ ಪುರ ನಗರವೊಂದಲ್ಲೇ ಸುಮಾರು ಐದು ಸಾವಿರ ಜನರಿಗೆ ಸಂಸ್ಕೃತ ಕಲಿಸಿದ್ದಾರೆ.

ಇತ್ತೀಚೆಗೆ ಕೊಂತೆವ್ವನ ಬಬಲಾದ ಎಂಬ ಪುಟ್ಟ ಗ್ರಾಮದಲ್ಲಿ 50 ಜನರಿಗೆ ಆನ್‌ಲೈನ್‌ ಸಂಸ್ಕೃತ ಪಾಠ ಮಾಡಿದ್ದಾರೆ. ಬಬಲೇಶ್ವರ ತಾಲೂಕಿನ ಕಾಖಂಡಕಿ ಗ್ರಾಮದಲ್ಲಿ 200ಕ್ಕೂ ಹೆಚ್ಚು ಜನರನ್ನು ಸಂಸ್ಕೃತ ಪ್ರವೀಣರನ್ನಾಗಿ ರೂಪಿಸಿದ್ದಾರೆ. ಸಂಸ್ಕೃತ ಭಾಷೆ ಕಲಿಯುವ ಆಸಕ್ತರಿಗೆ ಶಿಬಿರಗಳನ್ನು ಏರ್ಪಡಿಸುವ ಜತೆಗೆ ಆಸಕ್ತರಿರುವ ಸ್ಥಳಕ್ಕೆ ತೆರಳಿ ಭಾಷಾ ತರಗತಿ ಮಾಡುತ್ತಾರೆ. ಗಮನಾರ್ಹ ವಿಚಾರ ಎಂದರೆ ಇವರ ಬಳಿ ಸಂಸ್ಕೃತ ಕಲಿತವರಲ್ಲಿ ಬಹುತೇಕರು ಅನಕ್ಷರಸ್ಥರು, ಅಲ್ಪ ಶಿಕ್ಷಣ ಪಡೆದವರು.

Advertisement

ಸಂಸ್ಕೃತ ಧರ್ಮಾತೀತ ವಾದ ರಾಷ್ಟ್ರೀಯ ಭಾಷೆ. ಹೀಗಾಗಿ ನಮ್ಮ ಅಂಗಡಿ ಸಿಬಂದಿ ಶೌಕತ್‌, ಸಾನಿಯಾ, ಸಮೀರ್‌, ಶೈನಾಜ್‌ ಮಾತ್ರವಲ್ಲದೆ ತಿಕೋಟಾ ಪಟ್ಟಣದ ಟೇಲರ್‌ ಬಂದೇನವಾಜ್‌ ಕೂಡ ಸಂಸ್ಕೃತ ಭಾಷೆ ಸಂವಹನ ಪ್ರವೀಣರಾಗಿದ್ದಾರೆ.
-ರಾಮಸಿಂಗ್‌ ರಜಪೂತ, ಜವುಳಿ ಉದ್ಯಮಿ, ವಿಜಯಪುರ.

– ಜಿ.ಎಸ್‌. ಕಮತರ

Advertisement

Udayavani is now on Telegram. Click here to join our channel and stay updated with the latest news.

Next