Advertisement

ತಿಂಗಳು ಕಳೆದರೂ ಬಾರದ ಪಠ್ಯಪುಸ್ತಕಗಳು, ಶೀಘ್ರ ಬಟವಾಡೆಗೆ ಆಗ್ರಹ-ನಿರ್ಣ

03:45 AM Jul 02, 2017 | Team Udayavani |

ಉಪ್ಪಿನಂಗಡಿ: ಶಾಲೆಗಳು ಪ್ರಾರಂಭವಾಗಿ ತಿಂಗಳು ಕಳೆಯುತ್ತಾ ಬಂದಿವೆ. ಆದರೆ ಶಾಲೆಗಳಿಗೆ, ಮಕ್ಕಳಿಗೆ ಅಗತ್ಯ ಬರಬೇಕಾದ ಪಠ್ಯ ಪುಸ್ತಕಗಳು ಇನ್ನೂ ಬಂದಿಲ್ಲ. ಇದರಿಂದ ಮಕ್ಕಳ ಪಾಠ, ಕಲಿಕೆಗೆ ತೊಡಕಾಗಿದೆ. ಆದುದರಿಂದ ಶೀಘ್ರವಾಗಿ ಪಠ್ಯ ಪುಸ್ತಕಗಳನ್ನು ಬಟವಾಡೆ ಮಾಡುವಂತೆ ಸರಕಾರಕ್ಕೆ ಮನವಿ ಮಾಡಲು ಅಬ್ದುಲ್‌ ರಹಿಮಾನ್‌ ಅಧ್ಯಕ್ಷತೆಯಲ್ಲಿ ನಡೆದ ಉಪ್ಪಿನಂಗಡಿ ಗ್ರಾಮ ಪಂಚಾಯತ್‌ ಸಾಮಾನ್ಯ ಸಭೆಯಲ್ಲಿ ನಿರ್ಣಯ ಅಂಗೀಕರಿಸಲಾಯಿತು.

Advertisement

ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಸದಸ್ಯರುಗಳು, ಪ್ರಾಥಮಿಕ ಶಾಲೆಗಳು ಮೇ. 28ರಿಂದ ಪ್ರಾರಂಭ ಆಗಿವೆ. ಆದರೆ ಶಾಲೆಗಳಲ್ಲಿ ಅಗತ್ಯ ಬೇಕಾದ ಎಲ್ಲ ಪುಸ್ತಕಗಳು ಇನ್ನೂ ಬಂದಿಲ್ಲ. ಪುಸ್ತಕಗಳು ದೊರಕದೆ ಮಕ್ಕಳು ಶಾಲೆಗಳಲ್ಲಿ  ಕಾಲ ಹರಣ ಮಾಡುವಂತಾಗಿದೆ ಎಂದ ಸದಸ್ಯರುಗಳು ಶೀಘ್ರ ಪುಸ್ತಕ ಬಟವಾಡೆ ಮಾಡುವ ಬಗ್ಗೆ ಸರಕಾರವನ್ನು, ಶಿಕ್ಷಣ ಇಲಾಖೆಯನ್ನು ಕೇಳಿಕೊಳ್ಳುವುದು ಸೂಕ್ತ ಎಂದು ಆಗ್ರಹಿಸಿದರು. ಅದರಂತೆ ನಿರ್ಣಯ ಅಂಗೀಕರಿಸಲಾಯಿತು.

ಇಂಗು ಗುಂಡಿ ಕಡ್ಡಾಯ
ಪೇಟೆಯಲ್ಲಿ  ಕೆಲವೊಂದು ಹೊಟೇಲ್‌ ಅಂಗಡಿ ಯವರು ಇಂಗು ಗುಂಡಿ ತೆಗೆಯದೆ ಮಲೀನ ನೀರು ಚರಂಡಿಗೆ ಬಿಡುತ್ತಿದ್ದು,  ಸಮಸ್ಯೆ ಉಂಟಾಗುತ್ತಿದೆ. ಇಂಗು ಗುಂಡಿ ತೆಗೆಯದೆ ಯಾವುದೇ ವಾಣಿಜ್ಯ ಉದ್ದೇಶಗಳಿಗೆ ಪರವಾನಿಗೆ ನೀಡಬಾರದು ಎಂದು ಸದಸ್ಯರು ಸಭೆಯ ಗಮನ ಸೆಳೆದರು.

ಇದಕ್ಕೆ   ಪಿ.ಡಿ.ಓ. ಅಬ್ದುಲ್ಲಾ  ಅಸಾಪ್‌ ಅವರು ಪ್ರತಿಕ್ರಿಯಿಸಿ, ಇಂಗು ಪ್ರತಿಯೊಂದು ಮನೆ, ಕಟ್ಟಡ ಗಳಿಗೂ ತೆಗೆಯಬೇಕಾಗುತ್ತದೆ. ಒಬ್ಬರಿ ಗೊಂದು, ಇನ್ನೊಬ್ಬರಿ ಗೊಂದು ನಿಯಮ ಮಾಡಲು ಆಗುತ್ತಿಲ್ಲ  ಎಂದರು. ಆಗ ಸದಸ್ಯರು ಮತ್ತೆ ಪ್ರತಿಕ್ರಿಯಿಸಿ ವಾಣಿಜ್ಯ ಉದ್ದೇಶದ ಕಟ್ಟಡಗಳಿಗೆ ಇಂಗು ಗುಂಡು ಕಡ್ಡಾಯವಾಗಿ ಇರಬೇಕು. ಅದು ಇರದಿದ್ದರೆ ಪರವಾನಿಗೆ ಕೊಡುವಂತಿಲ್ಲ. ಅದೇ ರೀತಿ ಪೇಟೆ ಪರಿಸರದಲ್ಲಿರುವ ಮನೆಗಳಲ್ಲೂ ಇಂಗುಗುಂಡಿ ತೆರೆದಿ ರಬೇಕು. ಆದರೆ ಗ್ರಾಮೀಣ ಪ್ರದೇಶಗಳಲ್ಲಿ  ತೀರಾ ಅಗತ್ಯ ಕಂಡು ಬರುವುದಿಲ್ಲ ಅಲ್ಲಿನ ಪರಿಸರಕ್ಕೆ ಹೊಂದಿಕೊಂಡು ಅಗತ್ಯ ಇದ್ದರೆ ಇಂಗು ಗುಂಡಿ ತೆರೆಯುವ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳುವುದಾಗಿ ನಿರ್ಣಯ ಅಂಗೀಕರಿಸಲಾಯಿತು.

ಬೇಜವಾಬ್ದಾರಿ
ಸಭೆಯಲ್ಲಿ  ಸದಸ್ಯರು ಅಪಾಯಕಾರಿ ಮರಗಳ ತೆರವು ಬಗ್ಗೆ  ಪ್ರಸ್ತಾಪಿಸಿ, ಈಗಾಗಲೇ ಹಲವು ಬಾರಿ ಅಪಾಯಕಾರಿ ಮರ ತೆರವು ಮಾಡುವ ಬಗ್ಗೆ  ಪಂಚಾಯತ್‌ನಲ್ಲಿ  ನಿರ್ಣಯವಾಗಿದ್ದರೂ,  ಆದರೆ ಎಲ್ಲಿಯೂ ಮರ ತೆರವು ಆಗಿಲ್ಲ. ಪಂಚಾಯತ್‌ ನಿರ್ಣಯಕ್ಕೆ, ನಮ್ಮ ಮಾತಿಗೆ ಬೆಲೆಯೇ ಇಲ್ಲವೇ? ಎಂದರು.

Advertisement

ಇದಕ್ಕೆ ಉತ್ತರಿಸಿದ ಅಧ್ಯಕ್ಷರು ನಿರ್ಣಯವನ್ನು ಇಲ್ಲಿನ ಸಿಬಂದಿಗಳ ಮೂಲಕ ಅರಣ್ಯ ಇಲಾಖೆಗೆ ಖುದ್ದಾಗಿ ಕೊಡಲಾಗಿದೆ. ಆದರೆ ಯಾವುದೇ ರೀತಿ ಯಲ್ಲಿ   ಅಲ್ಲಿಂದ ಸ್ಪಂದನೆ ದೊರಕಿಲ್ಲ  ಎಂದರು. 

ಅಧ್ಯಕ್ಷರು ಸಭೆಯಿಂದಲೇ ವಲಯ ಅರಣ್ಯ ಅಧಿಕಾರಿಗೆ ಕರೆ ಮಾಡಿ ಅಪಾಯಕಾರಿ ಮರ ತೆರವು ಬಗ್ಗೆ  ಪ್ರಸ್ತಾಪಿಸಿದರು. ಆಗ ಅರಣ್ಯ ಅಧಿಕಾರಿ ಪಂಚಾಯತ್‌ನಿÀಂದ ದೂರು ಅರ್ಜಿ ಬರೆದುಕೊಡಿ ಎಂದರು. ಆಗ ಅಧ್ಯಕ್ಷರು, ಈಗಾಗಲೇ 2 ಬಾರಿ ಕೊಟ್ಟಿದ್ದೇವೆ. ಕೆಲವು ದಿನಗಳ ಹಿಂದೆ ತಹಶೀಲ್ದಾರ್‌ ಅಧ್ಯಕ್ಷತೆಯಲ್ಲಿ  ನಡೆದ  ನೆರೆ ಮುಂಜಾಗ್ರತಾ ಸಭೆಯಲ್ಲಿಯೂ ತಿಳಿಸ ಲಾಗಿದೆ ಎಂದರು. ಆರ್‌.ಎಫ್.ಒ. ನಮಗೆ ಪಂಚಾಯತ್‌ನಿಂದ ಅರ್ಜಿ ಕೊಡಿ ಎಂದು ಮತ್ತೆ ಹೇಳಿದರು. ಅದಕ್ಕೆ ಅಧ್ಯಕ್ಷರು ಪಂಚಾಯತ್‌ ಕಡತದಲ್ಲಿದ್ದ  ಈ ಹಿಂದೆ ಕೊಟ್ಟ ಅರ್ಜಿಯನ್ನು ಓದಿ ಹೇಳಿ, ದಿನಾಂಕವನ್ನು ತಿಳಿಸಿ, ತಾವೇ ಅರ್ಜಿಯನ್ನು ಸ್ವೀಕರಿಸಿ, ಸೀಲ್‌ ಹಾಕಿ ಸಹಿ ಮಾಡಿ ಕೊಟ್ಟಿದ್ದೀರಿ. ನಿಮ್ಮ ಸಹಿ ಇರುವ 2 ಅರ್ಜಿಯ ಪ್ರತಿ ನಮ್ಮಲ್ಲಿ ಇದೆ.

ಹೀಗಿದ್ದರೂ ಅರ್ಜಿ ಕೊಟ್ಟಿಲ್ಲ, ಅರ್ಜಿ ಕೊಡಿ ಎನ್ನುತ್ತೀರಿ. ಕೆಲ ದಿನಗಳ ಹಿಂದೆ ಮಠದಲ್ಲಿ  ಮರದ ಗೆಲ್ಲು  ಬಿದ್ದು ಬೈಕ್‌ ಸವಾರ ಗಾಯಗೊಂಡಿದ್ದಾರೆ. ಇಂತಹ ಅನಾಹುತ ಮತ್ತೆ ಆಗಲು ಅವಕಾಶ ನೀಡಬೇಡಿ ಎಂದು  ವಿನಂತಿಸಿಕೊಂಡರು. ಆಗ ಆರ್‌.ಎಫ್. ಒ. ಪಂಚಾಯತ್‌ನಿಂದ ಅರ್ಜಿಕಳುಹಿಸಿಕೊಡಿ, ನೋಡೋಣ ಎಂದು ಫೋನ್‌ ಕಟ್‌ ಮಾಡಿದ ರೆನ್ನಲಾಗಿದೆ.

ಇದರಿಂದ ಅಸಮಾಧಾನಗೊಂಡ ಅಧ್ಯಕ್ಷರು ನೇರವಾಗಿ ಎ.ಸಿ.ಎಫ್. ಮತ್ತು ಡಿ.ಎಫ್.ಒ.ಗೆ ಕರೆ ಮಾಡಿ ಈ ಎಲ್ಲ  ವಿಷಯ ತಿಳಿಸಿದ್ದು, ¤ ಪಂಚಾಯತ್‌ ಸದಸ್ಯರುಗಳು ಆರ್‌.ಎಫ್.ಒ. ವಿರುದ್ಧ ತೀರಾ ಆಕ್ರೋಶಿತರಾಗಿದ್ದಾರೆ. ಕಚೇರಿಗೆ ಮುತ್ತಿಗೆ ಹಾಕಲು ಮುಂದಾಗಿದ್ದಾರೆ. ಇದಕ್ಕೆ ಅವಕಾಶ ಮಾಡಿಕೊಡಬೇಡಿ ಎಂದರು. ವಿಷಯ ಆಲಿಸಿದ  ಡಿ.ಎಫ್.ಒ. ಮರ ತೆರವಿಗೆ ಅಗತ್ಯ ಕ್ರಮಕೈಗೊಳ್ಳುವ ಬಗ್ಗೆ ತಿಳಿಸಿದ್ದಾರೆ. ಡಿ.ಎಫ್.ಒ. ಸೂಚನೆಯಂತೆ ಆರ್‌.ಎಫ್.ಒ. ಮತ್ತೆ ಅಧ್ಯಕ್ಷರಿಗೆ ಕರೆ ಮಾಡಿ ವಿಷಯ ತಿಳಿದುಕೊಂಡು ಮರ ತೆರವು ಮಾಡುವ ಬಗ್ಗೆ  ಭರವಸೆ ನೀಡಿದರೆನ್ನಲಾಗಿದೆ.

ಉಪಾಧ್ಯಕ್ಷೆ ಹೇಮಲತಾ ಶೆಟ್ಟಿ, ಸದಸ್ಯರಾದ ಸುರೇಶ್‌ ಅತ್ರಮಜಲು, ಚಂದ್ರಶೇಖರ ಮಡಿವಾಳ, ಯು.ಕೆ. ಇಬ್ರಾಹಿಂ, ಯು.ಟಿ. ತೌಶೀಫ್, ಗೋಪಾಲ ಹೆಗ್ಡೆ, ಸುನಿಲ್‌ ದಡ್ಡು, ವಿನಾಯಕ ಪೈ, ಉಮೇಶ್‌ ಗೌಡ ಮಾತನಾಡಿದರು. ಸದಸ್ಯರುಗಳಾದ  ಝರೀನಾ, ಚಂದ್ರಾವತಿ ಹೆಗ್ಡೆ, ಸುಂದರಿ, ಜಮೀಲಾ, ಕವಿತಾ, ಭಾರತಿ, ಯೋಗಿನಿ, ಸುಶೀಲಾ ಉಪಸ್ಥಿತರಿದ್ದರು. 

ಪಂಚಾಯತ್‌ ಅಭಿವೃದ್ಧಿ ಅಧಿಕಾರಿ ಅಬ್ದುಲ್ಲ ಅಸಾಫ್ ಸ್ವಾಗತಿಸಿದರು.  ಕಾರ್ಯದರ್ಶಿ ರೋಹಿತ್‌ ವಂದಿಸಿದರು.

ನಿರ್ಣಯ
ಪಂಚಾಯತ್‌ ವ್ಯಾಪ್ತಿಯಲ್ಲಿ  ಇನ್ನೂ ಕೆಲವು ಕಡೆಯಲ್ಲಿ  ಅಕ್ರಮ ಅಂಗಡಿ, ಅತಿಕ್ರಮಣ ಯಾಕೆ ತೆರವಾಗಿಲ್ಲ  ಎಂದು ಸದಸ್ಯರು ಪ್ರಶ್ನಿಸಿದರು. ಇದಕ್ಕೆ ಅಧ್ಯಕ್ಷರು  ಪ್ರತಿಕ್ರಿಯಿಸಿ, ಅಕ್ರಮ, ಅತಿಕ್ರಮಣ ಮಾಡಿದವರಿಗೆ ಈಗಾಗಲೇ ಅಂತಿಮ ಗಡುವು ನೀಡಲಾಗಿದೆ. ಅವರಾಗಿಯೇ ತೆಗೆಯಲು ಅವಕಾಶ ನೀಡಲಾಗಿದೆ. ಇನ್ನೂ ತೆಗೆಯದಿದ್ದಲ್ಲಿ   ಪೊಲೀಸ್‌ ದೂರು ನೀಡಿ ಅವರ ಸಹಾಯ ಪಡೆದುಕೊಂಡು  ತೆರವು ಮಾಡುವುದಾಗಿ ತಿಳಿಸಿದರು. ಅದರಂತೆ ನಿರ್ಣಯವನ್ನು ಅಂಗೀಕರಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next