ದಾವಣಗೆರೆ: ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಕಾಡಿದ ಕೊರೊನಾದಿಂದಾಗಿ ಸಂಪೂರ್ಣವಾಗಿ ಶಾಲೆಗಳನ್ನೇ ತೆರೆಯಲಾಗದ ಸಂಕಷ್ಟಕ್ಕೆ ಸಿಲುಕಿದ್ದ ಸಾರ್ವಜನಿಕ ಶಿಕ್ಷಣ ಇಲಾಖೆ, ಈಗ ಹೊಸ ಭರವಸೆಯೊಂದಿಗೆ ಮುಂದಿನ ಶೈಕ್ಷಣಿಕ ಸಾಲಿಗೆ ಬೇಕಾದ ಪಠ್ಯಪುಸ್ತಕ, ಅಭ್ಯಾಸ ಪುಸ್ತಕ ಹಾಗೂ ದಿನಚರಿಗಳ ಬೇಡಿಕೆಗಳನ್ನು ಶಾಲೆಗಳಿಂದ ಪಡೆಯುವ ಪ್ರಕ್ರಿಯೆ ಆರಂಭಿಸಿದೆ.
2021-22ನೇ ಸಾಲಿನ ಶೈಕ್ಷಣಿಕ ಸಾಲಿಗೆ ಅಗತ್ಯ ಪಠ್ಯಪುಸ್ತಕದ ಬೇಡಿಕೆಯನ್ನು ಎಸ್‌ಎಟಿಎಸ್ ತಂತ್ರಾಂಶದಲ್ಲಿ ದಾಖಲಿಸುವ ಪ್ರಕ್ರಿಯೆ ಶಾಲಾ ಹಂತದಿಂದ ಜಿಲ್ಲಾ ಹಂತದವರೆಗೆ ನಡೆದಿದೆ. ಈ ಪ್ರಕ್ರಿಯೆ ಮಾ.3ರಿಂದ ಆರಂಭಗೊಂಡಿದ್ದು ಮಾ.23ವರೆಗೆ ನಡೆಯಲಿದೆ. ಇದಕ್ಕೆ ಪೂರಕವಾಗಿ ಕ್ಲಸ್ಟರ್, ಬ್ಲಾಕ್ ಮತ್ತು ಜಿಲ್ಲಾ ಹಂತದಿಂದ ಪರಿಶೀಲನೆ ಹಾಗೂ ಅನುಪಾಲನೆ ಚಟುವಟಿಕೆಯೂ ಏಕಕಾಲದಲ್ಲಿ ನಡೆದಿದೆ.
ಪುಸ್ತಕದ ಬೇಡಿಕೆ ಮಂಡಿಸುವ ಹಿನ್ನೆಲೆಯಲ್ಲಿ ಎಸ್ ಎಟಿಎಸ್ ತಂತ್ರಾಂಶದಲ್ಲಿ ಎಲ್ಲ ಶಾಲೆಗಳನ್ನು (ಸರ್ಕಾರಿ, ಅನುದಾನಿತ,ಅನುದಾನರಹಿತ ಇತರೆ ಇಲಾಖೆಯಿಂದ ನಡೆಯುವ ಶಾಲೆಗಳು) ದಾಖಲಿಸಿರುವ ಬಗ್ಗೆ ಕ್ಲಸ್ಟರ್, ಬ್ಲಾಕ್ ಮತ್ತು ಜಿಲ್ಲಾ ಹಂತಗಳಿಂದ ಹಂತ ಹಂತವಾಗಿ ಪರಿಶೀಲಿಸುವ ಕಾರ್ಯವೂ ನಡೆದಿದೆ. ಒಟ್ಟು ಶಾಲೆಗಳ ನಿಖರವಾದ ಮಾಹಿತಿ, ಎಲ್ಲ ವಿಧದ ಶಾಲೆಗಳ ಪಟ್ಟಿ ಸಿದ್ಧಪಡಿಸಿಕೊಂಡ ಬಳಿಕವೇ ಪಠ್ಯಪುಸ್ತಕಗಳ ಬೇಡಿಕೆಯನ್ನು ದಾಖಲಿಸಲು ಕ್ರಮವಹಿಸಲಾಗಿದೆ. ತರಬೇತಿ: ಬೇಡಿಕೆ ಸಲ್ಲಿಸುವ ಪ್ರಕ್ರಿಯೆ ಅಚ್ಚುಕಟ್ಟಾಗಿ ನಡೆಸುವ ಉದ್ದೇಶದಿಂದ ಶಾಲೆಗಳ ಮುಖ್ಯ ಶಿಕ್ಷಕರಿಗೆ, ಕ್ಲಸ್ಟರ್ ಸಂಪನ್ಮೂಲ ಅಧಿಕಾರಿಗಳಿಗೆ ಈಗಾಗಲೇ ತರಬೇತಿ ನೀಡಲಾಗಿದೆ. ಜತೆಗೆ ಎಸ್ ಎಟಿಎಸ್ ತಂತ್ರಾಂಶದಲ್ಲಿ ಆಗಿರುವ ಮಾರ್ಪಾಡುಗಳ ಬಗ್ಗೆಯೂ ತಿಳಿವಳಿಕೆ ನೀಡಲಾಗಿದೆ. ಪ್ರಮುಖವಾಗಿ ನಲಿ-ಕಲಿ ಶಾಲೆಗಳು, ಆದರ್ಶ ಶಾಲೆಗಳು, ಕನ್ನಡ ಮಾಧ್ಯಮ ಮತ್ತು ಉರ್ದು ಮಾಧ್ಯಮ ಶಾಲೆಗಳಲ್ಲಿ ಅನುಷ್ಠಾನಗೊಂಡಿರುವ ಆಂಗ್ಲಮಾಧ್ಯಮ ವಿಭಾಗಗಳಿಗೆ ಹೇಗೆ ಪುಸ್ತಕದ ಬೇಡಿಕೆ ಸಲ್ಲಿಸಬೇಕು ಎಂಬ ವಿವರ ಮಾಹಿತಿ ನೀಡಲಾಗಿದೆ.
ವಿವಿಧ ಹಂತಗಳಲ್ಲಿ ಕಾರ್ಯ: ಶಾಲಾ ಹಂತದಲ್ಲಿ ಮುಖ್ಯ ಶಿಕ್ಷಕರು ತರಗತಿವಾರು ಪಠ್ಯಪುಸ್ತಕಗಳ ಬೇಡಿಕೆಯನ್ನು ತಂತ್ರಾಂಶದಲ್ಲಿ ದಾಖಲಿಸುತ್ತಿದ್ದಾರೆ. ಶಾಲಾ ಹಂತದಲ್ಲಿ ದಾಖಲಿಸಿದ ಬೇಡಿಕೆಗೆ ಆಯಾ ಶಾಲಾ ಮುಖ್ಯಶಿಕ್ಷಕರು ಹಾಗೂ ಶಾಲಾ ವ್ಯಾಪ್ತಿಯ ಸಿಆರ್‌ಪಿ ಅವರನ್ನೇ ಜವಾಬ್ದಾರರನ್ನಾಗಿ ಮಾಡಲಾಗಿದ್ದು ಹೆಚ್ಚು ಮುತುವರ್ಜಿಯಿಂದ ಈ ಹಂತದಲ್ಲಿ ಬೇಡಿಕೆ ಸಲ್ಲಿಕೆ ಕಾರ್ಯ ನಡೆಯುತ್ತಿದೆ. ಕ್ಲಸ್ಟರ್ ಹಂತದಲ್ಲಿ ನಿಗದಿತ ಅವಧಿಯಲ್ಲಿ ಶಾಲೆಗಳಿಂದ ಬೇಡಿಕೆ ಪಡೆಯುವ, ಬೇಡಿಕೆ ಖಚಿತಪಡಿಸಿಕೊಳ್ಳುವ ಜವಾಬ್ದಾರಿ ವಹಿಸಲಾಗಿದೆ.
ಬ್ಲಾಕ್ ಹಂತದಲ್ಲಿ 2020-21ನೇ ಸಾಲಿನಲ್ಲಿ ವಿತರಿಸದೆ ಉಳಿದ ಪುಸ್ತಕಗಳನ್ನು ಎಸ್‌ಎಟಿಎಸ್ ತಂತ್ರಾಂಶದಲ್ಲಿ ದಾಖಲಿಸುವ, ತನ್ನ ವ್ಯಾಪ್ತಿಯ ಎಲ್ಲ ಶಾಲೆಗಳಲ್ಲಿ ದಾಸ್ತಾನು ಇರುವ ಪುಸ್ತಕಗಳ ಮಾಹಿತಿ ನಮೂದಿಸುವ ಜವಾಬ್ದಾರಿ ವಹಿಸಲಾಗಿದೆ. ಜಿಲ್ಲಾ ಹಂತದಲ್ಲಿ ಶಾಲೆಗಳು ಪಠ್ಯಪುಸ್ತಕಗಳ ಬೇಡಿಕೆ ದಾಖಲಿಸಲು ಪ್ರಾರಂಭಿಸಿದ ದಿನದಿಂದಶಾಲಾವಾರು, ಕ್ಲಸ್ಟರ್‌ವಾರು, ತಾಲೂಕುವಾರು ಬೇಡಿಕೆಯನ್ನು ನಿಗದಿತ ದಿನಾಂಕದವರೆಗೆ ದಾಖಲಿಸುತ್ತಿರುವ ಬಗ್ಗೆ ಪ್ರತಿ ದಿನ ಉಸ್ತುವಾರಿ ಮಾಡುವ ಹಾಗೂ ಪಠ್ಯಪುಸ್ತಕಗಳ ಬೇಡಿಕೆಯನ್ನು ದಾಖಲಿಸುವ ಕೊನೆಯ ದಿನಾಂಕದವರೆಗೆ ವೇಳಾಪಟ್ಟಿ ಅನುಪಾಲಿಸುವ ಜವಾಬ್ದಾರಿ ನೀಡಲಾಗಿದೆ. ಒಟ್ಟಾರೆ ಹೊಸ ಭರವಸೆಯೊಂದಿಗೆ ಮುಂದಿನ ಶೈಕ್ಷಣಿಕ ಸಾಲಿಗೆ ಬೇಕಾದ ಅಗತ್ಯ ಪಠ್ಯಪುಸ್ತಕಗಳ ಬೇಡಿಕೆಗಳನ್ನು ಪಡೆಯುವ ಪ್ರಕ್ರಿಯೆ ರಾಜ್ಯಾದ್ಯಂತ ಅಚ್ಚುಕಟ್ಟಾಗಿ ನಡೆದಿದೆ.