Advertisement

ಪಠ್ಯ ಕಡಿತ ಇನ್ನಷ್ಟು ಪರಿಷ್ಕರಣೆ ಸಾಧ್ಯತೆ!

12:42 AM Nov 23, 2020 | mahesh |

ಬೆಂಗಳೂರು: ಶಾಲಾರಂಭ ಇನ್ನಷ್ಟು ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ಪಠ್ಯ ಕಡಿತದಲ್ಲಿ ಮತ್ತಷ್ಟು ಪರಿಷ್ಕರಣೆ ಮಾಡಲು ಸಾರ್ವಜನಿಕ ಶಿಕ್ಷಣ ಇಲಾಖೆ ನಿರ್ಧರಿಸಿದೆ. ಪಿಯುಸಿ ತರಗತಿಗಳಿಗೆ 2020-21ನೇ ಸಾಲಿಗೆ ಅನ್ವಯವಾಗುವಂತೆ ಶೇ.30ರಷ್ಟು ಪಠ್ಯ ಕಡಿತಗೊಳಿಸಿ, ಅಧಿಕೃತ ಆದೇಶ ಹೊರಡಿಸಲಾಗಿದೆ. ಆದರೆ, ಪಿಯು ಕಾಲೇಜು ಇನ್ನೂ ಆರಂಭವಾಗದೇ ಇರುವುದರಿಂದ ಶೇ.70ರಷ್ಟು ಪಠ್ಯ ಕಲಿಕೆ ಮತ್ತು ಬೋಧನೆ ಹೊರೆಯಾಗಲಿದೆ ಎಂದು ಆರೋಪವೂ ಕೇಳಿ ಬರುತ್ತಿದೆ.

Advertisement

ಈ ಮಧ್ಯೆ ಸಾರ್ವಜನಿಕ ಶಿಕ್ಷಣ ಇಲಾಖೆ ಎಸೆಸೆಲ್ಸಿ ವಿದ್ಯಾರ್ಥಿಗಳ ಪಠ್ಯಕಡಿತಕ್ಕೆ ಸಂಬಂಧಿಸಿದಂತೆ ಇನ್ನಷ್ಟು ಚರ್ಚೆ ನಡೆಸಲು ತಜ್ಞರ ಸಮಿತಿಯ ಮೊರೆ ಹೋಗಿದೆ. ಪ್ರಸಕ್ತ ಸಾಲಿನಲ್ಲಿ ವಿದ್ಯಾರ್ಥಿಗಳ ತರಗತಿ ಬೋಧನೆಗೆ ಸಿಗಬಹುದಾದ ಶೈಕ್ಷಣಿಕ ದಿನಗಳ ಆಧಾರದಲ್ಲಿ ವೈಜ್ಞಾನಿಕ ರೀತಿಯಲ್ಲಿ ಪಠ್ಯ ಕಡಿತ ಮಾಡಲು ಚಿಂತನೆ ನಡೆಯುತ್ತಿದೆ ಎಂದು ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಕಡಿತ ಪಠ್ಯದ ಪರಿಷ್ಕರಣೆ
2020-21ರ ಶೈಕ್ಷಣಿಕ ವರ್ಷದಲ್ಲಿ ಡಿಸೆಂಬರ್‌, ಜನವರಿ, ಫೆಬ್ರವರಿ ಹಾಗೂ ಮಾರ್ಚ್‌ ತಿಂಗಳು ಮಾತ್ರ ಉಳಿದಿದೆ. ಶಾಲಾರಂಭದ ಬಗ್ಗೆ ಯಾವುದೇ ನಿರ್ಧಾರವೂ ಆಗಿಲ್ಲ. ಹೀಗಾಗಿ ರಾಜ್ಯ ಶಿಕ್ಷಣ ಸಂಶೋಧನೆ ಹಾಗೂ ತರಬೇತಿ ಇಲಾಖೆ (ಡಿಎಸ್‌ಇಆರ್‌ಟಿ)ಯಲ್ಲಿರುವ ವಿವಿಧ ವಿಷಯ ತಜ್ಞರ ಮೂಲಕ ಮುಂದೇ ಸಿಗಬಹುದಾದ ಶೈಕ್ಷಣಿಕ ದಿನಗಳ ಆಧಾರದಲ್ಲಿ ಪಠ್ಯ ಕಡಿತದ ಕರಡು ವರದಿಯನ್ನು ಸಿದ್ಧಪಡಿಸಿ ನೀಡುವಂತೆ ಶಿಕ್ಷಣ ಇಲಾಖೆ ಸೂಚನೆ ನೀಡಿದೆ.

ಈಗಾಗಲೇ ಶೇ.30ರಷ್ಟು ಪಠ್ಯ ಕಡಿತ ಮಾಡಿರುವ ವಿಷಯ ತಜ್ಞರ ಸಮಿತಿಯು ಈಗ ಅದನ್ನೇ ಇನ್ನಷ್ಟು ಪರಿಷ್ಕರಿಸಿ, ಶೇ.50ರಷ್ಟು ಅಥವಾ ಶೇ.60ರಷ್ಟು ಪಠ್ಯವನ್ನು ಕಡಿತಗೊಳಿಸಿ, ಅಥವಾ ಉಳಿಸಿಕೊಂಡು ಕರಡು ರೂಪದಲ್ಲಿ ವರದಿ ಸಲ್ಲಿಸುವ ಸಾಧ್ಯತೆಯಿದೆ. ಸರಕಾರ ಈ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಡಿಎಸ್‌ಇಆರ್‌ಟಿ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next