Advertisement

ಪಠ್ಯ ಪುಸ್ತಕ ವಿವಾದ ಶೀಘ್ರ ಬಗೆಹರಿಯಲಿ

12:05 AM Jun 03, 2022 | Team Udayavani |

ಶಾಲೆಗಳು ಆಗಲೇ ಆರಂಭವಾಗಿವೆೆ. ಆದರೆ ಪಠ್ಯ ಪುಸ್ತಕ ಪರಿಷ್ಕರಣೆ ವಿವಾದ ಮಾತ್ರ ಬಗೆಹರಿಯದೆ ದಿನಕ್ಕೊಂದು ಸ್ವರೂಪ ಪಡೆಯುತ್ತಿದೆ. ಈ ಸಮಸ್ಯೆಯನ್ನು ಗಂಭೀರ ಮತ್ತು ತುರ್ತು ಎಂದು ಪರಿಗಣಿಸಿ ಅದನ್ನು ಇತ್ಯರ್ಥಪಡಿಸುವ ಹೊಣೆಗಾರಿಕೆ ರಾಜ್ಯ ಸರಕಾರದ್ದು. ಶಾಲೆಗಳು ಆರಂಭವಾಗಿ ಪಠ್ಯಪುಸ್ತಕ ಸರಬರಾಜು ಆಗುತ್ತಿರುವ ಈ ಹಂತದಲ್ಲಿ ಪಠ್ಯ ವಾಪಸ್‌ ಅಭಿಯಾನ ವಿದ್ಯಾರ್ಥಿಗಳು, ಪೋಷಕರಲ್ಲಿ ಸಾಕಷ್ಟು ಅನುಮಾನ, ಗೊಂದಲ ಮೂಡಿಸಿದೆ.

Advertisement

ಪಠ್ಯಕ್ರಮ ಬದಲಾವಣೆ ಹೊಸ ವ್ಯವಸ್ಥೆ ಏನಲ್ಲ. ಹಿಂದೆ ಸಾಕಷ್ಟು ಬಾರಿ ಪರಿಷ್ಕಾರಗೊಂಡಿದೆ. ಆದು ಕಾಲಾನುಕಾಲಕ್ಕೆ ಅನಿವಾರ್ಯವಾದ ಮತ್ತು ಅಗತ್ಯವಾದ ಪ್ರಕ್ರಿಯೆ. ಆದರೆ ಇದೊಂದು ವಿವಾದದ ಸ್ವರೂಪ ಪಡೆದು ಕೊಂಡಿರುವುದು ದುರದೃಷ್ಟಕರ. ಈ ರೀತಿ ಆಗಿರುವುದು ರಾಜ್ಯದ ಇತಿಹಾಸದಲ್ಲಿ ಇದೇ ಮೊದಲು. ಲೇಖಕರು, ಸಾಹಿತಿಗಳು ತಮ್ಮ ಕಥೆ-ಕವಿತೆ ಪಠ್ಯದಲ್ಲಿ ಅಳವಡಿಕೆಗೆ ನೀಡಿದ್ದ ಅನುಮತಿ ವಾಪಸ್‌ ಪಡೆಯುತ್ತಿರುವುದರಿಂದ ಎಲ್ಲವೂ ಗೊಂದಲದ ಗೂಡಾಗಿದ್ದು ಮುಂದೇನು ಎಂಬ ಪ್ರಶ್ನೆ ಮೂಡಿದೆ.

ರಾಜ್ಯ ಸರಕಾರ ಆರಂಭದಲ್ಲೇ ಇದರ ಬಗ್ಗೆ ಗಮನಹರಿಸಿ ಸರಿಪಡಿಸುವ ಕೆಲಸ ಮಾಡಬಹುದಿತ್ತು. ಆದರೆ ನಿರ್ಲಕ್ಷ್ಯ ಧೋರಣೆ ತಾಳಿದ್ದರಿಂದ ವಿವಾದ ದೊಡ್ಡ ಮಟ್ಟದಲ್ಲಿ ಸಮಸ್ಯೆ ಸೃಷ್ಟಿಸಿದೆ. ಈ ಹಿಂದೆ ಯಾವತ್ತೂ ಸಾಹಿತ್ಯ ಲೋಕದಲ್ಲಿ ಮತ್ತು ಶೈಕ್ಷಣಿಕ ಪಠ್ಯಕ್ಷೇತ್ರದಲ್ಲಿ ಈ ರೀತಿಯ ಪರಿಸ್ಥಿತಿ ಉದ್ಭವಿಸಿರಲಿಲ್ಲ. ಈಗಲೂ ಅಸ್ಪಷ್ಟ ಮಾಹಿತಿಗಳೇ ಸಾರ್ವಜನಿಕ ವಲಯದಲ್ಲಿದ್ದು, ಅದರ ಆಧಾರದಲ್ಲಿ ಎಲ್ಲರೂ ಮಾತನಾಡುತ್ತಿದ್ದಾರೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಾವೇ ಖುದ್ದಾಗಿ ವರದಿ ಪಡೆದು ಎಲ್ಲ ಸಾಹಿತಿಗಳ ಲೇಖಕರ ಜತೆ ಮಾತನಾಡಿ ಸೌಹಾರ್ದಯುತವಾಗಿ ಸಮಸ್ಯೆ ಬಗೆಹರಿಸುವ ಪ್ರಯತ್ನ ಮಾಡುತ್ತೇನೆ ಎಂದು ಹೇಳಿರುವುದು ಸ್ವಾಗತಾರ್ಹ. ಆದರೆ ಆ ಕೆಲಸ ಆದಷ್ಟು ಬೇಗ ಆಗಬೇಕಾಗಿದೆ. ಇಲ್ಲದಿದ್ದರೆ ಮಕ್ಕಳ ಭವಿಷ್ಯ ಹಾಗೂ ಮನಸ್ಸಿನ ಮೇಲೆ ಬೇರೆಯೇ ರೀತಿಯ ಪರಿಣಾಮ ಬೀರುವ ಆಪಾಯವೂ ಇದೆ.

ಪ್ರಸಕ್ತ ವಿದ್ಯಮಾನ ಗಮನಿಸಿದರೆ ಪಠ್ಯ ಪರಿಷ್ಕರಣೆ ವಿವಾದದಿಂದ ಕಾನೂನಾತ್ಮಕ ಬಿಕ್ಕಟ್ಟಿನ ಜತೆಗೆ ಪಠ್ಯ ವಿದ್ಯಾರ್ಥಿಗಳಿಗೆ ತಲುಪದೆ ಬಿಕ್ಕಟ್ಟು ಕೂಡ ಸೃಷ್ಟಿಯಾಗಲಿದೆ. ವಾಪಸ್‌ ಪಡೆಯಲು ಪತ್ರ ಬರೆದಿರುವ ಲೇಖ ಕರು ಸಾಹಿತಿಗಳ ಪಠ್ಯ-ಕವಿತೆ ಬಿಟ್ಟು ಬೇರೆ ಪಠ್ಯ ಹಾಕಿಕೊಳ್ಳುವ ತೀರ್ಮಾನವಾದರೆ ಅದು ಆಯ್ಕೆಯಾಗಬೇಕು. ಅದಕ್ಕೆ ಸಮಯ ಬೇಕು. ಆಗ, ಈಗಾಗಲೇ ಪಠ್ಯಪುಸ್ತಕ ಮುದ್ರಣಕ್ಕೆ ಮಾಡಿರುವ ವೆಚ್ಚ ಹೊರೆಯಾ ಗುತ್ತದೆ. ಜತೆಗೆ ವಿದ್ಯಾರ್ಥಿಗಳಿಗೂ ಸಮಸ್ಯೆ ಉಂಟಾಗುತ್ತದೆ.

Advertisement

ಹೀಗಾಗಿ, ಸರಕಾರ ಎಲ್ಲ ರೀತಿಯಲ್ಲೂ ಆಲೋಚಿಸಿ ಮುಕ್ತ ಹಾಗೂ ಮಕ್ಕಳ ಭವಿಷ್ಯದ ದೃಷ್ಟಿಯಿಂದ ಸಮಸ್ಯೆ ಬಗೆಹರಿಸಬೇಕು. ಅಗತ್ಯವಾದರೆ ಶಿಕ್ಷಣ ತಜ್ಞರು, ಚಿಂತಕರು ಹಾಗೂ ನಾಡಿನ ಗಣ್ಯರ ಜತೆಯೂ ಸಮಾಲೋಚನೆ ನಡೆಸಿ ಇದೀಗ ಉದ್ಭವಿಸಿರುವ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಪ್ರಾಮಾಣಿಕ ಪ್ರಯತ್ನ ಮಾಡಬೇಕು.

ಪಠ್ಯಕ್ರಮ ಹಾಗೂ ಇತಿಹಾಸ ಯಾವತ್ತೂ ಸತ್ಯವಾಗಿರಬೇಕು ಎನ್ನುವುದು ಎಲ್ಲರದೂ ಸಹಜವಾದ ಕಳಕಳಿ. ಈ ವಿಚಾರದಲ್ಲಿ ಸಿದ್ಧಾಂತ ಆಧಾರದಲ್ಲಿ ವಾಗ್ವಾದ ಹಾಗೂ ರಾಜಕೀಯ ಮತಗಳಿಕೆಗೆ ಇದನ್ನು ಅಸ್ತ್ರವಾಗಿಸಿಕೊಳ್ಳುವುದು ಸರ್ವಥಾ ತರವಲ್ಲ. ಹಿಂದಿನ ವ್ಯವಸ್ಥೆಯಲ್ಲಿ ಇಂಥದ್ದು ಸಾಕಷ್ಟು ನಡೆದಿರುವುದಕ್ಕೆ ಪುರಾವೆಗಳಿದ್ದು, ಅದು ಮರುಕಳಿಸಬಾರದು ಎನ್ನುವುದು ಎಲ್ಲರ ಆಶಯ.

Advertisement

Udayavani is now on Telegram. Click here to join our channel and stay updated with the latest news.

Next