ಅಮೆರಿಕದ ಟೆಕ್ಸಾಸ್‌ನ ಶಾಲೆಯಲ್ಲಿ ಬುಧವಾರ ಯುವಕನೊಬ್ಬನ ಗುಂಡೇಟಿನಿಂದಾಗಿ ಬೇಸಗೆ ರಜೆಯಲ್ಲಿ ಮಜಾ ಮಾಡಲು ಸಿದ್ಧರಾಗುತ್ತಿದ್ದ 19 ಚಿಣ್ಣರ ಜತೆ ಅದೆಷ್ಟೋ ಕನಸುಗಳೂ ಶ್ಮಶಾನ ಸೇರಿವೆ. ಸಾವನ್ನಪ್ಪಿದ ಮಕ್ಕಳ ಕೆಲವು ಮನಕಲಕುವ ವಿಚಾರ ಇಲ್ಲಿದೆ.
ಸಾಫ್ಟ್ಬಾಲ್ ಆಡುವ ಸಂಭ್ರಮದಲ್ಲಿದ್ದ ಪುಟಾಣಿ :
ನರಮೇಧದಲ್ಲಿ 4ನೇ ತರಗತಿಯ ಎಲಿಹಾನಾ ಕ್ರೂಜ್ ಟೊರ್ರೆಸ್(10) ಸಾವನ್ನ ಪ್ಪಿದ್ದಾಳೆ. ಸಾಫ್ಟ್ ಬಾಲ್ ಆಟಗಾರ್ತಿಯಾಗಿದ್ದ ಆಕೆ ಶೂಟೌಟ್ ನಡೆದ ದಿನ ಶಾಲೆಯಲ್ಲಿ ನಡೆಯಲಿದ್ದ ಸಾಫ್ಟ್ಬಾಲ್ ಅಂತಿಮ ಪಂದ್ಯದಲ್ಲಿ ಭಾಗವಹಿಸಲು ಉತ್ಸುಕಳಾಗಿದ್ದಳಂತೆ. ಆಟವಾಡುವ ಖುಷಿಯ ಲ್ಲೇ ಶಾಲೆಗೆ ತೆರಳಿದ್ದ ಕಂದಮ್ಮ ಮತ್ತೆ ಬಾರದ ಲೋಕಕ್ಕೆ ತೆರಳಿಬಿಟ್ಟಳು ಎಂದು ಕಣ್ಣೀರಿಡುತ್ತಿದ್ದಾರೆ ಆಕೆಯ ಅಜ್ಜಿ.
ಪೊಲೀಸರಿಗೆ ಕರೆ ಮಾಡಿದ್ದ ಕಂದಮ್ಮ :
ನರಹಂತಕ ಸಾಲ್ವ ಡೋರ್ ರಾಮೋಸ್(18) ತರಗತಿಯೊಳಗೆ ಬರುತ್ತಿದ್ದಂತೆಯೇ ಮಕ್ಕಳಿಗೆ ಬಂದೂಕು ತೋರಿಸಿ, “ನೀವೆಲ್ಲ ಈಗ ಸಾಯಲಿದ್ದೀರಿ’ ಎಂದಿದ್ದಾನೆ. ತಕ್ಷಣ ಬಾಲಕಿ ಅಮೆರಿ ಜೋ ಗರ್ಜಾ(10) ತನ್ನ ಫೋನ್ ನಿಂದ ಪೊಲೀಸರ ಸಂಖ್ಯೆಯಾದ 911ಕ್ಕೆ ಕರೆ ಮಾಡಲು ಮುಂದಾಗಿದ್ದಾಳೆ. ಅದನ್ನು ಕಂಡೊಡನೆ ಸಾಲ್ವ ಆಕೆಯ ಮೇಲೆ ಗುಂಡು ಹಾರಿಸಿ, ಹತ್ಯೆಗೈದಿದ್ದಾನೆ. “ನನ್ನ ಮೊಮ್ಮಗಳು ಸಾಯುವಾಗಲೂ ಹೀರೋ ಆಗಿಯೇ ಸತ್ತಳು’ ಎಂದು ಕಣ್ಣೀರೊರೆಸಿಕೊಳ್ಳುತ್ತಾ ಹೇಳಿದ್ದಾರೆ ಮೃತ ಬಾಲಕಿಯ ಅಜ್ಜಿ.
ಕೊನೆಯ ಆಲಿಂಗನ :
ಶಾಲೆಯಲ್ಲಿ ಶೂಟೌಟ್ ನಡೆದ ದಿನವೇ ಮಕ್ಕಳ ಸಾಧನೆಯನ್ನು ಗುರುತಿಸಲು “ಹಾನರ್ ರೋಲ್’ ಕಾರ್ಯಕ್ರಮ ಇಟ್ಟುಕೊಳ್ಳಲಾಗಿತ್ತು. ತರಗತಿಯಲ್ಲಿ ಉತ್ತಮ ಸಾಧನೆ ಮಾಡಿದ ಮಕ್ಕಳಿಗೆ ಅವರ ತಂದೆ ತಾಯಿಯ ಎದುರೇ ಪ್ರಶಸ್ತಿ ಪತ್ರ ಕೊಡಲಾಗಿತ್ತು. ಅದೇ ರೀತಿ ಕ್ಸೇವಿಯರ್ ಲೊಪೆಜ್(10)ಗೂ ಪ್ರಶಸ್ತಿ ಪತ್ರ ವಿತರಿಸಲಾಗಿತ್ತು. ಮಗನ ಸಂಭ್ರಮ ನೋಡಲೆಂದೇ ಶಾಲೆಗೆ ಬಂದಿದ್ದ ತಾಯಿ, ಕಾರ್ಯಕ್ರಮ ಮುಗಿದ ನಂತರ ಮಗನನ್ನು ಅಪ್ಪಿಕೊಂಡು, “ನಿನ್ನ ಬಗ್ಗೆ ಹೆಮ್ಮೆಯಿದೆ’ ಎಂದು ಹೇಳಿ ಹೋಗಿದ್ದರು. ಆದರೆ ಅದೇ ಅವನೊಂದಿಗೆ ನನ್ನ ಕೊನೆಯ ಅಪ್ಪುಗೆ ಎಂದು ತಿಳಿದಿರಲಿಲ್ಲ ಎನ್ನುತ್ತಾರೆ ಕ್ಸೇವಿಯರ್‌ನ ತಾಯಿ.