Advertisement
ಕೇಂದ್ರ ಜಿಎಸ್‌ಟಿ ಮಂಡಳಿಯಲ್ಲಿ ಈ ಬಗ್ಗೆ ಗಂಭೀರ ಚರ್ಚೆ ನಡೆದಿದ್ದು, ಇದಕ್ಕೆ ಪೂರಕವಾದ ರೂಪುರೇಷೆ ರೂಪಿಸಲು ಐದು ಮಂದಿಯ ತಂಡವೂ ರಚನೆಯಾಗಿದೆ. ಜಿಎಸ್‌ಟಿ ಬಗೆಗಿನ ಗೊಂದಲಗಳು ನಿವಾರಣೆಯಾಗುತ್ತಿದ್ದಂತೆ ಅಗತ್ಯಬಿದ್ದರೆ ಸರಕು ಮತ್ತು ಸೇವಾ ತೆರಿಗೆ ಅಧಿಕಾರಿಗಳ ತಂಡ “ಪರೀಕ್ಷಾರ್ಥ ಖರೀದಿ’ ಮೂಲಕ ವಸ್ತುಸ್ಥಿತಿ ತಿಳಿಯುವ ಪ್ರಯತ್ನ ನಡೆಸಲು ಚಿಂತನೆ ನಡೆಸಿದೆ. ಜಿಎಸ್‌ಟಿ ಜಾರಿಯಾಗಿ 20 ದಿನ ಕಳೆದಿದ್ದು, ಆರಂಭ ದಿನಗಳಲ್ಲಿದ್ದ ಬಹಳಷ್ಟು ಗೊಂದಲಗಳಿಗೆ ತೆರೆಬಿದ್ದಿದ್ದರೂ ತೆರಿಗೆ ದರ ನಿಗದಿ, ಜಿಎಸ್‌ಟಿಯಡಿ ಲೆಕ್ಕಪತ್ರ ಸಲ್ಲಿಕೆ (ರಿಟರ್ನ್ಸ್) ಸೇರಿ ಆಯ್ದ ಪ್ರಕ್ರಿಯೆಗಳ ಬಗ್ಗೆ ಇನ್ನಷ್ಟು ಸ್ಪಷ್ಟತೆ ಮೂಡಬೇಕಿದೆ ಎಂದು ಬಹುತೇಕ ವ್ಯಾಪಾರಿಗಳು ಹೇಳುತ್ತಾರೆ. ಆದರೆ, ಹಲವು ವ್ಯಾಪಾರಿಗಳು ಇದನ್ನೇ ನೆಪ ಮಾಡಿಕೊಂಡು ಗ್ರಾಹಕರನ್ನು ವಂಚಿಸುತ್ತಿದ್ದಾರೆಂಬದೂರುಗಳು ಕೇಳಿಬಂದಿವೆ.
ಜಿಎಸ್‌ಟಿ ಜಾರಿಯಿಂದಾಗುವ ಬೆಲೆ ಇಳಿಕೆಯ ಲಾಭ ಗ್ರಾಹಕರಿಗೆ ತಲುಪಿದಾಗಲೇ ಕಾಯ್ದೆಯ ಉದ್ದೇಶ ಈಡೇರಿದಂತಾಗುತ್ತದೆ. ಆ ಹಿನ್ನೆಲೆಯಲ್ಲಿ ಜಿಎಸ್‌ಟಿಯಿಂದಾಗಿ ತೆರಿಗೆ ಇಳಿಕೆಯಾದ ವಸ್ತುಗಳ ಬೆಲೆಯೂ ಇಳಿಕೆಯಾಗಿದೆಯೇ ಎಂಬುದನ್ನು ತಿಳಿದು ಅದರ ಲಾಭ
ಗ್ರಾಹಕರಿಗೆ ತಲುಪುವಂತೆ ಮಾಡಲು ಕೇಂದ್ರ ಸರ್ಕಾರ ಜಿಎಸ್‌ಟಿ ಕೌನ್ಸಿಲ್‌ನಲ್ಲಿ ಚರ್ಚಿಸಿ ಐದು ಮಂದಿ ತಜ್ಞರ ತಂಡ ರಚಿಸಿದೆ. ಈ ತಂಡ ಅಗತ್ಯ ರೂಪುರೇಷೆಗಳನ್ನು ಸಿದ್ಧಪಡಿಸಿ ಜಾರಿ ಬಗ್ಗೆ ಶಿಫಾರಸು ಸಲ್ಲಿಸಲಿದೆ. ತೆರಿಗೆ ಇಳಿಕೆಯ ಲಾಭಾಂಶ ಖರೀದಿದಾರರಿಗೆ
ತಲುಪುತ್ತಿದೆಯೇ ಎಂಬುದನ್ನು ತಿಳಿಯಲು ಅಧಿಕಾರಿಗಳ ತಂಡ ಮಳಿಗೆಗಳಿಗೆ ದಿಢೀರ್ ಭೇಟಿ ನೀಡಿ ಪರೀಕ್ಷಾರ್ಥ ಖರೀದಿ ನಡೆಸಿ
ಪರಿಶೀಲನೆ ನಡೆಸುವ ಬಗ್ಗೆಯೂ ಚಿಂತನೆ ನಡೆಸಿದೆ. ಅಧಿಕಾರಿಗಳೇ ಗ್ರಾಹಕರಂತೆ ಮಳಿಗೆಗಳಿಗೆ ತೆರಳಿ ವಸ್ತುಗಳನ್ನು
ಖರೀದಿಸಲಿದ್ದಾರೆ. ಈ ವೇಳೆ ಬೆಲೆ ಇಳಿಕೆ ಮಾಡಿ ಲಾಭ ನೀಡದಿರುವುದು ದೃಢಪಟ್ಟರೆ ಮಳಿಗೆದಾರರ ಮೇಲೆ ಕಾನೂನು ಕ್ರಮ
ಕೂಡ ಜರುಗಿಸಲಿದ್ದಾರೆ. ಪರಿಶೀಲನೆ ಏನೇನು?
ಲಾಭ ಪ್ರಮಾಣ ಗ್ರಾಹಕರಿಗೆ ತಲುಪಿಸುವ ವ್ಯವಸ್ಥೆ ಮಾತ್ರವಲ್ಲದೆ ಇನ್ನೂ ಕೆಲ ಅಂಶಗಳನ್ನು ತಂಡ ಪರೀಶೀಲನೆ ನಡೆಸಲು ಚಿಂತಿಸಿದೆ. 200 ರೂ.ವರೆಗಿನ ಖರೀದಿಗೆ ಗ್ರಾಹಕರಿಗೆ ರಸೀದಿ ನೀಡುವುದು ಕಡ್ಡಾಯವಲ್ಲದಿದ್ದರೂ ಗ್ರಾಹಕರು ಕೇಳಿದರೆ ಕಡ್ಡಾಯವಾಗಿ ರಸೀದಿ ನೀಡಬೇಕು. 200 ರೂ. ಮೇಲ್ಪಟ್ಟ ಖರೀದಿ, ವ್ಯವಹಾರಕ್ಕೆ ಕಡ್ಡಾಯವಾಗಿ ಗ್ರಾಹಕರಿಗೆ ರಸೀದಿ ನೀಡಬೇಕು. ಈ ರೀತಿಯ ಅಂಶಗಳು ಸೇರಿ ಜಿಎಸ್‌ಟಿ ಅನುಷ್ಠಾನದ ಬಳಿಕ ನಂತರ ದರ ಪರಿಷ್ಕಣೆ ಬಗ್ಗೆ ಸ್ಪಷ್ಟ ಮಾಹಿತಿ ಗ್ರಾಹಕರಿಗೆ ನೀಡುವ ಬಗ್ಗೆಯೂ ತಂಡ ಪರಿಶೀಲನೆ ನಡೆಸುವ ಸಾಧ್ಯತೆ ಇದೆ. ಆ ಮೂಲಕ ಗ್ರಾಹಕರಿಗೆ ಜಿಎಸ್‌ಟಿ ಜಾರಿಯ ಲಾಭ ತಲುಪಿಸುವ
ನಿಟ್ಟಿನಲ್ಲಿ ಚಿಂತನೆ ನಡೆದಿದೆ.
Related Articles
ಅಬಕಾರಿ ತೆರಿಗೆ, ವ್ಯಾಟ್ ತೆರಿಗೆ, ಸೇವಾ ಶುಲ್ಕ, ಪ್ರವೇಶ ಶುಲ್ಕ ಸೇರಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಉಪಕರಗಳನ್ನು (ಸೆಸ್)
ಒಟ್ಟುಗೂಡಿಸಿ ಕೇಂದ್ರ ಹಾಗೂ ರಾಜ್ಯ ಜಿಎಸ್‌ಟಿ ದರಗಳನ್ನಷ್ಟೇ ಜಿಎಸ್‌ಟಿಯಡಿ ನಿಗದಿಪಡಿಸಲಾಗಿದೆ. ಇದರಿಂದ ಸಾಕಷ್ಟು ಸರಕು-ಸೇವೆಯಲ್ಲಿ ತೆರಿಗೆ ಪ್ರಮಾಣ ಇಳಿಕೆಯಾಗಿರುವುದರಿಂದ ಸಹಜವಾಗಿಯೇ ಬೆಲೆ ಇಳಿಕೆಯಾಗಬೇಕು. ಆದರೆ ಈ ಲಾಭ ಪ್ರಮಾಣ
ಬಹುತೇಕ ಕಡೆ ಗ್ರಾಹಕರಿಗೆ ತಲುಪುತ್ತಿಲ್ಲ.
Advertisement
ಜಿಎಸ್‌ಟಿ ಜಾರಿ ಬಳಿಕ ತೆರಿಗೆ ಪ್ರಮಾಣ ಇಳಿಕೆಯಾದ ಸರಕು ಮತ್ತು ಸೇವೆಗಳ ಬೆಲೆಯೂ ನಿಯಮಾನುಸಾರ ಇಳಿಕೆಯಾಗಬೇಕು. ಆ ಮೂಲಕ ಲಾಭಾಂಶ ಗ್ರಾಹಕರಿಗೆ ತಲುಪಬೇಕು. ದೇಶದೆಲ್ಲೆಡೆ ಇದು ಪರಿಣಾಮಕಾರಿಯಾಗಿ ಜಾರಿಯಾಗುತ್ತಿದೆಯೇ ಎಂಬುದರ ಪತ್ತೆ, ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಮಾಹಿತಿ ಪಡೆಯಲು ಜಿಎಸ್‌ಟಿ ಮಂಡಳಿಯು ಐದು ಮಂದಿ ತಜ್ಞರ ಸಮಿತಿ ರಚಿಸಿದೆ. ಜಿಎಸ್‌ಟಿ ಬಗ್ಗೆ ವ್ಯಾಪಕವಾಗಿ ಜಾಗೃತಿ ಮೂಡಿಸಲು ಸದ್ಯ ಆದ್ಯತೆ ನೀಡಲಾಗಿದ್ದು, ಮುಂದಿನ ದಿನಗಳಲ್ಲಿ ಅಧಿಕಾರಿಗಳು ಪರಿಶೀಲನೆ ನಡೆಸಿ ಕಾನೂನು ಕ್ರಮ ಜರುಗಿಸುವ ಸಾಧ್ಯತೆಗಳಿವೆ.ಬಿ.ಟಿ.ಮನೋಹರ್, ರಾಜ್ಯ ತೆರಿಗೆ ಸಮಿತಿ ಅಧ್ಯಕ್ಷ