Advertisement

ಭಾರತಕ್ಕೆ ಸಂಕಟ ತಂದ ಚೀನದ ಕಳಪೆ ಕಿಟ್‌ ;ದೋಷಪೂರಿತ ಕಿಟ್‌ ರವಾನಿಸಿದ ಕಮ್ಯೂನಿಸ್ಟ್‌ ರಾಷ್ಟ್ರ

02:13 AM Apr 22, 2020 | Hari Prasad |

ಹೊಸದಿಲ್ಲಿ: ಕೋವಿಡ್ 19 ವೈರಸ್ ವಿಚಾರದಲ್ಲಿ ಸುಳ್ಳುಗಳ ಸರಮಾಲೆಯನ್ನೇ ಹೆಣೆಯುತ್ತ ಬಂದಿರುವ ಕಮ್ಯೂನಿಸ್ಟ್‌ ರಾಷ್ಟ್ರ ಚೀನವು ಈಗ ಭಾರತವೂ ಸೇರಿದಂತೆ ವಿದೇಶಗಳಿಗೆ ಕಳಪೆ ಕೋವಿಡ್ 19 ವೈರಸ್ ಪರೀಕ್ಷಾ ಕಿಟ್‌ಗಳನ್ನು ಕಳುಹಿಸಿದ್ದು, ಸಮಸ್ಯೆ ಸೃಷ್ಟಿಸಿದೆ.

Advertisement

ಚೀನ ಕಳುಹಿಸಿರುವ ಕಿಟ್‌ಗಳು ಲೋಪ ದೋಷಗಳಿಂದ ಕೂಡಿವೆ ಎಂಬ ಆಘಾತಕಾರಿ ಮಾಹಿತಿ ಹೊರಬಿದ್ದಿದ್ದು, ಆತಂಕಕ್ಕೆ ಕಾರಣವಾಗಿದೆ. ಈಗಾಗಲೇ ಕೊರೊನಾ ಮೂಲ ಮತ್ತು ತನ್ನಲ್ಲಿ ಆಗಿರುವ ಸಾವಿನ ಸಂಖ್ಯೆಯ ಬಗ್ಗೆ ಸತ್ಯ ಮುಚ್ಚಿಟ್ಟಿರುವ ಆರೋಪ ಎದುರಿಸುತ್ತಿರುವ ಕಮ್ಯೂನಿಸ್ಟ್ ರಾಷ್ಟ್ರದ ಕೋವಿಡ್‌ ಪರೀಕ್ಷಾ ಕಿಟ್‌ಗಳಲ್ಲಿ ಇರುವ ದೋಷ ಆತಂಕ ಹುಟ್ಟಿಸಿದೆ.

ಚೀನದಿಂದ ಆಮದಾಗಿರುವ ಕೋವಿಡ್ 19 ವೈರಸ್ ಸೋಂಕು ಪರೀಕ್ಷೆ ನಡೆಸುವ ಕಿಟ್‌ಗಳಲ್ಲಿ ಲೋಪಗಳು ಕಂಡುಬಂದ ಹಿನ್ನೆಲೆಯಲ್ಲಿ 2 ದಿನ ಯಾರೂ ರ್ಯಾಪಿಡ್‌ ಟೆಸ್ಟ್ ಕೈಗೊಳ್ಳಬೇಡಿ ಎಂದು ರಾಜ್ಯ ಸರಕಾರಗಳಿಗೆ ಭಾರತೀಯ ವೈದ್ಯಕೀಯ ಸಂಶೋಧನ ಮಂಡಳಿ (ಐಸಿಎಂಆರ್‌) ಮಂಗಳವಾರ ಸೂಚಿಸಿದೆ.

ರ್ಯಾಪಿಡ್‌ ಟೆಸ್ಟ್ ಕಿಟ್‌ಗಳ ಫ‌ಲಿತಾಂಶದಲ್ಲಿ ವ್ಯತ್ಯಾಸಗಳು ಕಂಡುಬರುತ್ತಿವೆ ಎಂದು ಅನೇಕ ರಾಜ್ಯಗಳು ಆರೋಪಿಸಿದ್ದವು. ರಾಜಸ್ಥಾನ ಸರಕಾರ ಕೂಡ ಅಸ್ಪಷ್ಟ ಫ‌ಲಿತಾಂಶ ಬರುತ್ತಿರುವ ಕಾರಣ ಇಂಥ ಕಿಟ್‌ಗಳ ಬಳಕೆ ನಿಲ್ಲಿಸುತ್ತಿರುವುದಾಗಿ ಐಸಿಎಂಆರ್‌ಗೆ ಮಂಗಳವಾರ ಮಾಹಿತಿ ನೀಡಿತ್ತು. ಪಶ್ಚಿಮ ಬಂಗಾಲ ಸರಕಾರ ಕೂಡ ಕೇಂದ್ರ ನೀಡಿರುವ ಕಿಟ್‌ನಿಂದ ಸರಿಯಾದ ಫ‌ಲಿತಾಂಶ ಲಭಿಸುತ್ತಿಲ್ಲ ಎಂದೂ ದೂರಿತ್ತು.

ತಜ್ಞರ ತಂಡದಿಂದ ಪರೀಕ್ಷೆ
ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಮಂಗಳವಾರ ಪತ್ರಿಕಾಗೋಷ್ಠಿ ನಡೆಸಿದ ಐಸಿಎಂಆರ್‌ನ ಹಿರಿಯ ವಿಜ್ಞಾನಿ ಡಾ| ರಾಮನ್‌ ಗಂಗಾಖೇಡ್ಕರ್‌, ಇದೊಂದು ಹೊಸ ಕಾಯಿಲೆ. ಕಳೆದ ಮೂರೂವರೆ ತಿಂಗಳಲ್ಲಿ ವಿಜ್ಞಾನಿಗಳು ಪಿಸಿಆರ್‌ ಕಿಟ್‌ಗಳನ್ನು ಅಭಿವೃದ್ಧಿಪಡಿಸಿದ್ದಾರೆ.

Advertisement

ಐದು ಲಸಿಕೆಗಳನ್ನು ಮಾನವನ ಮೇಲೆ ಪ್ರಯೋಗಿಸಲು ಆರಂಭಿಸಲಾಗಿದೆ. ಹಿಂದೆಂದೂ ಯಾವುದೇ ರೋಗ ಬಂದಾಗಲೂ ಇಂಥ ಪರಿಸ್ಥಿತಿ ಬಂದಿರಲಿಲ್ಲ. ಆದರೆ ಈಗ ಪರೀಕ್ಷಾ ಕಿಟ್‌ಗಳಲ್ಲಿ ಲೋಪದೋಷಗಳು ಇರುವ ಮಾಹಿತಿ ಲಭ್ಯವಾಗಿದೆ. ಈ ಕುರಿತು ಮೂರು ರಾಜ್ಯಗಳೊಂದಿಗೆ ಚರ್ಚಿಸಿದ್ದೇವೆ.

ದಯವಿಟ್ಟು ಮುಂದಿನ ಎರಡು ದಿನಗಳ ಕಾಲ ಯಾರೂ ರ್ಯಾಪಿಡ್‌ ಟೆಸ್ಟ್ ಕಿಟ್‌ ಮತ್ತು ಆರ್‌ಟಿ-ಪಿಸಿಆರ್‌ ಕಿಟ್‌ಗಳನ್ನು ಬಳಸಬೇಡಿ. ಆರೋಗ್ಯ ಸಚಿವಾಲಯದ ತಜ್ಞರ ತಂಡವು ಕಿಟ್‌ಗಳನ್ನು ಪರೀಕ್ಷೆಗೆ ಒಳಪಡಿಸಿ ವರದಿ ನೀಡಲಿದೆ. ಅದಾದ ಬಳಿಕ ಸಚಿವಾಲಯವೇ ಈ ಕುರಿತು ಮುಂದಿನ ನಿರ್ಧಾರ ಘೋಷಿಸಲಿದೆ ಎಂದಿದ್ದಾರೆ.

ಜತೆಗೆ ಒಂದು ವೇಳೆ ಹೆಚ್ಚಿನ ಕಿಟ್‌ಗಳಲ್ಲಿ ಇಂಥ ಲೋಪಗಳು ಕಂಡುಬಂದರೆ ನಾವು ಅವನ್ನು ವಾಪಸ್‌ ಕಳುಹಿಸಿ ಬದಲಿಸಿಕೊಡುವಂತೆ ಕಂಪೆನಿಗಳಿಗೆ ಸೂಚಿಸುತ್ತೇವೆ ಎಂದೂ ಅವರು ತಿಳಿಸಿದ್ದಾರೆ.

ಬಳಕೆ ನಿಲ್ಲಿಸಿದ ರಾಜಸ್ಥಾನ
ಕಳಪೆ ಫಲಿತಾಂಶದ ಕಾರಣದಿಂದಾಗಿ, ಕ್ಷಿಪ್ರ ಪರೀಕ್ಷಾ ಕಿಟ್‌ (ಆರ್‌ಟಿಕೆ)ಗಳ ಬಳಕೆಯನ್ನು ರಾಜಸ್ಥಾನ ಸರಕಾರ ನಿಲ್ಲಿಸಿದೆ. ಸೋಂಕಿನ ಪರೀಕ್ಷೆಗೆ ಬಳಸಲಾಗುವ ಈ ಕಿಟ್‌ಗಳು ನಿಖರ ಫಲಿತಾಂಶ ನೀಡದ ಹಿನ್ನೆಲೆಯಲ್ಲಿ ಅವುಗಳನ್ನು ಬಳಸದಿರಲು ಸರಕಾರ ನಿರ್ಧರಿಸಿದೆ. ಈ ಕಿಟ್‌ಗಳು ಕೇವಲ ಶೇ.5.4ರಷ್ಟು ನಿಖರ ಫಲಿತಾಂಶ ನೀಡುತ್ತಿವೆ ಎಂದು ರಾಜಸ್ಥಾನದ ಆರೋಗ್ಯ ಸಚಿವ ರಘು ಶರ್ಮಾ ವರದಿಗಾರರಿಗೆ ಮಾಹಿತಿ ನೀಡಿದ್ದಾರೆ.

ಚೀನದಿಂದ ಪಿಪಿಇ ಕಳ್ಳ ದಾಸ್ತಾನು?
ಚೀನ ವಿರುದ್ಧ ವಾಗ್ಧಾಳಿ ನಡೆಸುತ್ತಲೇ ಇರುವ ಅಮೆರಿಕ, ಈಗ ಮತ್ತೂಮ್ಮೆ ಮುಗಿಬಿದ್ದಿದೆ. ವೈದ್ಯರಿಗೆ ಅಗತ್ಯವಾದ ವೈಯಕ್ತಿಕ ಸುರಕ್ಷಾ ಸಾಧನ (ಪಿಪಿಇ)ಗಳು ಮತ್ತು ಮಾಸ್ಕ್ ಗಳನ್ನು ಚೀನ ಸರಕಾರವು ಕಳ್ಳ ದಾಸ್ತಾನು ಮಾಡಿಟ್ಟುಕೊಂಡಿದ್ದು, ಈಗ ಅತ್ಯಧಿಕ ಬೆಲೆಗೆ ಅವುಗಳನ್ನು ಮಾರಾಟ ಮಾಡುತ್ತಿದೆ ಎಂದು ಅಮೆರಿಕ ಆರೋಪಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next