ಬರ್ಮಿಂಗ್‌ಹ್ಯಾಮ್: ವಿಶ್ವ ಟೆಸ್ಟ್ ಚಾಂಪಿಯನ್ ಹಾಗೂ ಪ್ರತಿಷ್ಠಿತ ಆ್ಯಶಸ್ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಪ್ರವಾಸಿ ಆಸ್ಟ್ರೇಲಿಯ 251 ರನ್ನುಗಳ ಭಾರೀ ಅಂತರದಿಂದ ಇಂಗ್ಲೆಂಡನ್ನು ಉರುಳಿಸಿದೆ.
ಸ್ಪಿನ್ನರ್ ನಥನ್ ಲಿಯೋನ್ 6 ವಿಕೆಟ್ ಉರುಳಿಸಿ ಆಸೀಸ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಈ ಸಾಧನೆಯ ವೇಳೆ ಲಿಯೋನ್ 350 ಟೆಸ್ಟ್ ವಿಕೆಟ್‌ಗಳ ಸಾಧನೆಯನ್ನೂ ಪೂರ್ತಿಗೊಳಿಸಿದರು. ಉಳಿದ 4 ವಿಕೆಟ್ ಪ್ಯಾಟ್ ಕಮಿನ್ಸ್ ಪಾಲಾಯಿತು. ನಿಷೇಧ ಮುಗಿಸಿದ ಬಳಿಕ ಮೊದಲ ಟೆಸ್ಟ್ ಆಡಿ, ಎರಡೂ ಇನ್ನಿಂಗ್ಸ್‌ಗಳಲ್ಲಿ ಶತಕ ಬಾರಿಸಿ ಮೆರೆದ ಸ್ಟೀವನ್ ಸ್ಮಿತ್ (144 ಮತ್ತು 142) ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು.
ಗೆಲುವಿಗೆ 398 ರನ್ನುಗಳ ಗುರಿ ಪಡೆದ ಇಂಗ್ಲೆಂಡ್, ಪಂದ್ಯದ ಅಂತಿಮ ದಿನವಾದ ಸೋಮವಾರ 52.3 ಓವರ್‌ಗಳಲ್ಲಿ 146 ರನ್ನುಗಳಿಗೆ ಉರುಳಿತು. ಇದು 2001ರ ಬಳಿಕ ಎಜ್‌ಬಾಸ್ಟನ್ ಅಂಗಳದಲ್ಲಿ, ಎಲ್ಲ ಮಾದರಿಯ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳಲ್ಲಿ ಆಸ್ಟ್ರೇಲಿಯ ಸಾಧಿಸಿದ ಮೊದಲ ಗೆಲುವು. ಹಾಗೆಯೇ ಎಜ್‌ಬಾಸ್ಟನ್‌ನಲ್ಲಿ ಇಂಗ್ಲೆಂಡಿನ ಸತತ ಗೆಲುವಿನ ಓಟ 11 ಪಂದ್ಯಗಳಿಗೆ ಕೊನೆಗೊಂಡಿತು.ಇಂಗ್ಲೆಂಡ್ ವಿಕೆಟ್ ನಷ್ಟವಿಲ್ಲದೆ 13 ರನ್ ಮಾಡಿದಲ್ಲಿಂದ ಕೊನೆಯ ದಿನದಾಟ ಮುಂದುವರಿಸಿತ್ತು. 37 ರನ್ ಮಾಡಿದ ಕ್ರಿಸ್ ವೋಕ್ಸ್ ಅವರದೇ ಹೆಚ್ಚಿನ ಗಳಿಕೆ.
ಸಂಕ್ಷಿಪ್ತ ಸ್ಕೋರ್
ಆಸ್ಟ್ರೇಲಿಯ-281 ಮತ್ತು 7 ವಿಕೆಟಿಗೆ 487 ಡಿಕ್ಲೇರ್. ಇಂಗ್ಲೆಂಡ್-374 ಮತ್ತು 146.