Advertisement

ಟೆಸ್ಟ್‌ ಕ್ರಿಕೆಟಿಗೆ ಹೊಸ ರೂಪ

11:52 PM Aug 07, 2019 | Team Udayavani |

ಕ್ರಿಕೆಟ್ ಶುರುವಾಗಿದ್ದರ ಹಿಂದೆ ಒಂದು ಕಥೆಯಿದೆ. ಇಂಗ್ಲೆಂಡ್‌ನ‌ಲ್ಲಿ ದನ ಕಾಯುತ್ತಿದ್ದ ಹುಡುಗರು ತಮ್ಮ ಬೇಸರ ಕಳೆಯಲು, ಚೆಂಡಿನಂತೆ ಇರುವ ಒಂದು ವಸ್ತುವನ್ನು ಎಸೆಯುವುದು, ಇನ್ನೊಬ್ಬ ಅದಕ್ಕೆ ಕೋಲಿನಿಂದ ಕುಟ್ಟುವುದು ಮಾಡುತ್ತಿದ್ದರಂತೆ. ಕಡೆಗೆ ಅದೇ ಕ್ರಿಕೆಟ್ ಆಗಿ ಬದಲಾಯಿತು ಎಂದು ದಂತಕಥೆ ಹೇಳುತ್ತದೆ. ಇದು ಎಷ್ಟು ಸತ್ಯವೋ, ಸುಳ್ಳೋ ಗೊತ್ತಿಲ್ಲ. ಆದರೆ ಆ ಕ್ರಿಕೆಟ್ ಕ್ರೀಡೆಯನ್ನು ಬ್ರಿಟಿಷರು ಎಲ್ಲೆಲ್ಲಿ ಹೋದರೋ ಅಲ್ಲೆಲ್ಲ ಹಬ್ಬಿಸಿದ್ದಾರೆ. ಭಾರತ, ಆಸ್ಟ್ರೇಲಿಯಾ, ದ.ಆಫ್ರಿಕಾ ಹೀಗೆ ಹಲವು ದೇಶಗಳಲ್ಲಿ ಕ್ರಿಕೆಟ್ ಬೆಳೆಯುತ್ತ ಹೋಯಿತು.

Advertisement

ಕ್ರಿಕೆಟಿನ ಮೊದಲ ರೂಪ ಟೆಸ್ಟ್‌. ಆರಂಭದಲ್ಲಿ ಇದಕ್ಕೆ ದಿನಗಳ ಮಿತಿಯಿರಲಿಲ್ಲ. ಸೋಲು ಗೆಲುವಿನ ಫ‌ಲಿತಾಂಶ ಬರುವವರೆಗೆ ಆಡಲಾಗುತ್ತಿತ್ತು. ಒಂದು ಹಂತದ ಅನಂತರ ಅದನ್ನು ಐದು ದಿನಕ್ಕೆ ಮಿತಿಗೊಳಿಸಲಾಯಿತು. ಫ‌ಲಿತಾಂಶ ಬರದಿದ್ದರೆ, ಅದನ್ನು ಡ್ರಾ ಎಂದು ಪರಿಗಣಿಸಲಾಯಿತು. ಈ ಮಾದರಿಯ ಕ್ರಿಕೆಟ್ ಒಂದೇ ಅಸ್ತಿತ್ವದಲ್ಲಿದ್ದರಿಂದ, ಆರಂಭದಲ್ಲಿ ಇದು ಬಹಳ ಜನಪ್ರಿಯವಾಗಿತ್ತು. ಜನ ಬಹಳ ಕುತೂಹಲದಿಂದ ನೋಡುತ್ತಿದ್ದರು. ಆದರೆ ಇದಕ್ಕಿದ್ದ ಸಮಸ್ಯೆಯೆಂದರೆ ಮಳೆ. ಇಂಗ್ಲೆಂಡ್‌, ಆಸ್ಟ್ರೇಲಿಯಾದಂತಹ ದೇಶಗಳಲ್ಲಿ ಮಳೆ ಜಾಸ್ತಿ. ಅದು ಬಂದರೆ ಕೆಲವೊಮ್ಮೆ ಪೂರ್ಣ ಟೆಸ್ಟ್‌ ಪಂದ್ಯವೇ ರದ್ದಾಗುತ್ತಿತ್ತು. ಅಭಿಮಾನಿಗಳು ನಿರಾಶರಾಗುತ್ತಿದ್ದರು. ಈ ಹಂತದಲ್ಲಿ ಅಭಿಮಾನಿಗಳಿಗೆ ನಿರಾಶೆ ತಪ್ಪಿಸುವುದು ಹೇಗೆ ಎಂದು ಯೋಚಿಸಿದಾಗ, ಹೊಳೆದಿದ್ದೇ ಏಕದಿನ ಕ್ರಿಕೆಟ್.

1971ರಲ್ಲಿ ಆಸ್ಟ್ರೇಲಿಯಾ-ಇಂಗ್ಲೆಂಡ್‌ ನಡುವಿನ ಟೆಸ್ಟ್‌ ಪಂದ್ಯ ಮಳೆಗೆ ಸಿಕ್ಕಿ ರದ್ದಾಗುವ ಹಂತ ತಲುಪಿದಾಗ, ಒಂದು ದಿನದ ಕ್ರಿಕೆಟ್ ನಡೆಸಲಾಯಿತು. ಅಲ್ಲಿಂದ ಕ್ರಿಕೆಟ್ ಸ್ವರೂಪ ವೇಗಗೊಳ್ಳುತ್ತ ಹೋಯಿತು. ಎಷ್ಟು ವೇಗವೆಂದರೆ ಟಿ20 ಮಟ್ಟಕ್ಕೆ ಬರುವಷ್ಟು ವೇಗವಾಗಿದೆ. ಇದರಿಂದ ದೊಡ್ಡ ಏಟು ಬಿದ್ದಿದ್ದು ಟೆಸ್ಟ್‌ ಕ್ರಿಕೆಟಿಗೆ. ಅದು ದಿನದಿನಕ್ಕೆ ಆಕರ್ಷಣೆ ಕಳೆದುಕೊಳ್ಳುತ್ತ ಸಾಗಿತು. ಟೆಸ್ಟ್‌ ಕ್ರಿಕೆಟ್ ಇದ್ದಾಗ ಶಾಲಾ ಮಕ್ಕಳಿಗೆ ಉಚಿತ ಪ್ರವೇಶ ಕೊಡುವ ಮಟ್ಟಕ್ಕೆ ಪರಿಸ್ಥಿತಿ ಬದಲಾಗಿದೆ.

ಆದ್ದರಿಂದ ಹಲವು ವರ್ಷಗಳಿಂದ ಟೆಸ್ಟ್‌ಗೂ ಒಂದು ಆಕರ್ಷಕ ರೂಪ ಕೊಡಬೇಕು. ತಂಡಗಳು ಶುದ್ಧ ಪೈಪೋಟಿಯನ್ನು ನಡೆಸಬೇಕಾದ ಮಾದರಿಯಲ್ಲಿ ಅದನ್ನು ಬದಲಾಯಿಸಬೇಕು ಎಂದು ಐಸಿಸಿ ಯೋಚಿಸಿತು. ಅದರ ಫ‌ಲವಾಗಿ ಹುಟ್ಟಿಕೊಂಡಿರುವುದು ಟೆಸ್ಟ್‌ ವಿಶ್ವಚಾಂಪಿಯನ್‌ಶಿಪ್‌. ಬಹಳ ವರ್ಷಗಳಿಂದ ಇದನ್ನು ಮಾಡಬೇಕು ಎಂದು ಹೇಳುತ್ತಲೇ ಬಂದಿದ್ದರೂ ಜಾರಿಯಾಗಿರಲಿಲ್ಲ.

ಏನಿದು ಟೆಸ್ಟ್‌ ವಿಶ್ವ ಚಾಂಪಿಯನ್‌ಶಿಪ್‌?

ಇದು ಟೆಸ್ಟ್‌ ಕ್ರಿಕೆಟಿನ ವಿಶ್ವಕಪ್‌ ಇದ್ದಂತೆ. 2019ರಿಂದ 2021ರವರೆಗೆ ಎರಡು ವರ್ಷಗಳ ಕಾಲ ನಡೆಯುತ್ತದೆ. ಟೆಸ್ಟ್‌ ಕ್ರಿಕೆಟಿನಲ್ಲಿ ರೋಚಕತೆಯನ್ನು ಹೆಚ್ಚಿಸಲು ಈ ಮಾದರಿ ಶುರು ಮಾಡಲಾಗಿದೆ.

ಎಲ್ಲಿಂದ ಎಲ್ಲಿಯವರೆಗೆ ನಡೆಯಲಿದೆ?

ಆ.1, 2019ರ ಇಂಗ್ಲೆಂಡ್‌-ಆಸ್ಟ್ರೇಲಿಯಾ ನಡುವಿನ ಐದು ಟೆಸ್ಟ್‌ಗಳ ಆ್ಯಶಸ್‌ ಸರಣಿಯಿಂದ ಶುರುವಾಗಲಿದೆ. 2021 ರ ಜೂನ್‌ನಲ್ಲಿ ಇಂಗ್ಲೆಂಡ್‌ನ‌ ಲಾರ್ಡ್ಸ್‌ನಲ್ಲಿ ಫೈನಲ್ ನಡೆಯಲಿದೆ.

ಹೇಗಿರುತ್ತದೆ ಸ್ವರೂಪ?

ಎರಡು ವರ್ಷಗಳ ಕಾಲ ನಡೆಯುತ್ತದೆ. ಜಿಂಬಾಬ್ವೆ ನಿಷೇಧಕ್ಕೊಳಗಾಗಿರುವುದರಿಂದ ಒಟ್ಟು 9 ತಂಡಗಳು ಕೂಟದಲ್ಲಿ ಪಾಲ್ಗೊಳ್ಳುತ್ತವೆ. ತಂಡವೊಂದು ತಾನು ಆಯ್ಕೆ ಮಾಡಿಕೊಂಡ 6 ತಂಡಗಳ ವಿರುದ್ಧ ಮಾತ್ರ ಟೆಸ್ಟ್‌ ಸರಣಿ ಆಡಬೇಕು . ಕನಿಷ್ಠ 2, ಗರಿಷ್ಠ 5 ಪಂದ್ಯಗಳಿರುವ 6 ಟೆಸ್ಟ್‌ ಸರಣಿಯಲ್ಲಿ ಪಾಲ್ಗೊಳ್ಳಬೇಕು. ಈ ಪೈಕಿ 3 ಸರಣಿ ತನ್ನ ನೆಲದಲ್ಲಿ, ಇನ್ನು ಮೂರು ಸರಣಿಯನ್ನು ವಿದೇಶಿ ನೆಲದಲ್ಲಿ ಆಡಬೇಕು.

ಅಂಕ ಹಂಚಿಕೆ ಹೇಗೆ?

ಒಂದು ಸರಣಿಗೆ 120 ಅಂಕವಿರುತ್ತದೆ. ಈ ಅಂಕವನ್ನು ಸರಣಿಯೊಂದರಲ್ಲಿ ಒಟ್ಟು ಎಷ್ಟು ಟೆಸ್ಟ್‌ ನಡೆಯುತ್ತದೆ ಎಂಬ ಆಧಾರದಲ್ಲಿ ವಿಭಾಗಿಸಿ ಹಂಚಲಾಗುತ್ತದೆ. ಅಂದರೆ ಸರಣಿಯೊಂದರಲ್ಲಿ ಎರಡು ಟೆಸ್ಟ್‌ ಇದ್ದರೆ, ಒಂದು ಟೆಸ್ಟ್‌ಗೆ 60 ಅಂಕ ಸಿಗುತ್ತದೆ. 5 ಟೆಸ್ಟ್‌ ಇದ್ದರೆ ಪಂದ್ಯವೊಂದಕ್ಕೆ 24 ಅಂಕ ಸಿಗುತ್ತದೆ. ಇದೇ ಆಧಾರದಲ್ಲಿ ಅಗ್ರ ತಂಡವನ್ನು ನಿರ್ಧರಿಸಲಾಗುತ್ತದೆ.

ನಿರ್ಬಂಧಗಳೇನು?

ಒಂದು ತಂಡ 6 ತಂಡಗಳ ವಿರುದ್ಧ ಮಾತ್ರ ಆಡಬೇಕು. ಯಾವ ತಂಡದ ವಿರುದ್ಧ ಆಡಬೇಕು ಎನ್ನುವುದನ್ನು ತಂಡಗಳು ಮೊದಲೇ ಮಾತುಕಥೆ ನಡೆಸಿರುತ್ತವೆ. ಆ ಪ್ರಕಾರ ಐಸಿಸಿ ವೇಳಾಪಟ್ಟಿ ನಿರ್ಧರಿಸುತ್ತದೆ. ವಿಶ್ವ ಚಾಂಪಿಯನ್‌ಶಿಪ್‌ ಅನ್ನು ಹೊರತುಪಡಿಸಿ, ತಂಡಗಳು ಇದೇ ಅವಧಿಯಲ್ಲಿ ಬೇರೆ ಟೆಸ್ಟ್‌ಗಳನ್ನೂ ಆಡಬಹುದು.
Advertisement

ಕಣದಲ್ಲಿರುವ ತಂಡಗಳು?

ಭಾರತ, ಇಂಗ್ಲೆಂಡ್‌, ಆಸ್ಟ್ರೇಲಿಯಾ, ದ.ಆಫ್ರಿಕಾ, ಪಾಕಿಸ್ತಾನ, ನ್ಯೂಜಿಲೆಂಡ್‌, ಶ್ರೀಲಂಕಾ, ಬಾಂಗ್ಲಾದೇಶ, ವೆಸ್ಟ್‌ಇಂಡೀಸ್‌ ತಂಡಗಳು ಆಡಲಿವೆ.

ವಿಜೇತರ ನಿರ್ಧಾರ ಹೇಗೆ?

ಪ್ರತಿ ಟೆಸ್ಟ್‌ನಲ್ಲಿ ತಂಡವೊಂದು ಪಡೆಯುವ ಅಂಕಗಳನ್ನು ಪರಿಗಣಿಸಿ ಅಗ್ರ ಎರಡು ತಂಡಗಳನ್ನು ನಿರ್ಧರಿಸಲಾಗುತ್ತದೆ. ಈ ಎರಡು ತಂಡಗಳ ನಡುವೆ ಅಂತಿಮ ಟೆಸ್ಟ್‌ ನಡೆಸಿ ವಿಶ್ವ ಚಾಂಪಿಯನ್ನರನ್ನು ಆಯ್ಕೆ ಮಾಡಲಾಗುತ್ತದೆ.

ಕೂಟದಿಂದ ಲಾಭವೇನು?

1ಕ್ರಿಕೆಟ್ ತಂಡಗಳು ಟೆಸ್ಟ್‌ ಕ್ರಿಕೆಟನ್ನು ಗಂಭೀರವಾಗಿ ಪರಿಗಣಿಸುತ್ತವೆ. ಐಸಿಸಿ ವೇಳಾಪಟ್ಟಿ ನಿಗದಿ ಮಾಡಿದೆಯೆಂಬ ಕಾರಣಕ್ಕೆ ಟೆಸ್ಟ್‌ ಆಡುವ ಕಾಟಾಚಾರ ಇಲ್ಲವಾಗುತ್ತದೆ.
2ಗೆಲುವಿನ ಫ‌ಲಿತಾಂಶವನ್ನೇ ಪಡೆಯಲು ಕಡ್ಡಾಯವಾಗಿ ಯತ್ನಿಸುತ್ತವೆ. ಆಗ ನೀರಸ ಡ್ರಾಗಳ ಸಂಖ್ಯೆ ಕಡಿಮೆಯಾಗುತ್ತದೆ.
3ಆಗ ಸಹಜವಾಗಿಯೇ ಟೆಸ್ಟ್‌ಗೂ ರೋಚಕತೆ ಬರುತ್ತದೆ. ಅಭಿಮಾನಿಗಳು ಮೈದಾನಕ್ಕೆ ಬರುತ್ತಾರೆ.

•ನಿರೂಪ

Advertisement

Udayavani is now on Telegram. Click here to join our channel and stay updated with the latest news.

Next