ಲಕ್ನೋ : ಉತ್ತರ ಪ್ರದೇಶ ಉಪ ಮುಖ್ಯಮಂತ್ರಿ ದಿನೇಶ್ ಶರ್ಮಾ ಅವರು ಅಗ್ಗದ ಪ್ರಚಾರದ ಇನ್ನೊಂದು ಊಹನಾತ್ಮಕ ಹೇಳಿಕೆ ನೀಡಿದ್ದಾರೆ. ‘ಪ್ರನಾಳ ಶಿಶು ಪರಿಕಲ್ಪನೆ ರಾಮಾಯಣ ಕಾಲದಲ್ಲೇ ಇದ್ದು ಸೀತೆಯು ಅದಕ್ಕೊಂದು ಉದಾಹರಣೆಯಾಗಿದ್ದಾಳೆ’ ಎಂದು ಶರ್ಮಾ ಹೇಳಿದ್ದಾರೆ.
“ಸೀತೆಯು ಮಣ್ಣಿನ ಮಡಕೆಯಲ್ಲಿ ಜನಿಸಿದ್ದಳು ಎಂದು ಆ ಕಾಲದ ಜನರು ಹೇಳುತ್ತಿದ್ದರು. ಅದರರ್ಥ ರಾಮಾಯಣ ಕಾಲದಲ್ಲೇ ಪ್ರನಾಳ ಶಿಶು ರೀತಿಯ ಪರಿಕಲ್ಪನೆ ಇತ್ತೆಂದು ಗೊತ್ತಾಗುತ್ತದೆ’ ಎಂದು ದಿನೇಶ್ ಶರ್ಮಾ ಹೇಳಿರುವುದನ್ನು ಉಲ್ಲೇಖೀಸಿ ಎಎನ್‌ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.
ನಿನ್ನೆ ಗುರುವಾರವಷ್ಟೇ ದಿನೇಶ್ ಶರ್ಮಾ ಅವರು ಇನ್ನೊಂದು ಊಹನಾತ್ಮಕ ಹೇಳಿಕೆಯನ್ನು ನೀಡಿದ್ದರು. ಅವರ ಪ್ರಕಾರ ಮಹಾಭಾರತದ ಕಾಲದಲ್ಲೇ ಪತ್ರಿಕೋದ್ಯಮ ಆರಂಭವಾಗಿತ್ತು. ‘ಆಧುನಿಕ ಜಗತ್ತಿನ ಅನೇಕ ಅನ್ವೇಷಣೆಗಳ ಕೊಂಡಿಯನ್ನು ಪ್ರಾಚೀನ ಭಾರತದಲ್ಲೂ ಕಾಣಬಹುದಾಗಿದೆ’ ಎಂದು ದಿನೇಶ್ ಶರ್ಮಾ ಹೇಳಿದ್ದರು.
“ಇವತ್ತು ಲೈವ್ ಟೆಲಿಕಾಸ್ಟ್ ಆಗುತ್ತಿದೆ. ಆದರೆ ಇದೇ ರೀತಿಯ ತಂತ್ರಜ್ಞಾನ ಮಹಾಭಾರತದ ಕಾಲದಲ್ಲೂ ಇದ್ದಿರಬೇಕು ಎಂದು ನನಗೆ ಅನ್ನಿಸುತ್ತದೆ. ಮಹಾಭಾರತದ ಯುದ್ಧವನ್ನು ಸಂಜಯನು ಕುರುಡು ಚಕ್ರವರ್ತಿ ಧೃತರಾಷ್ಟ್ರನಿಗೆ ನೇರವಾಗಿ ಬಿತ್ತರಿಸುತ್ತಿದ್ದನು’ ಎಂದು ಶರ್ಮಾ ಹೇಳಿದರು.
ಶರ್ಮಾ ಅವರು “ಹಿಂದಿ ಪತ್ರಿಕೋದ್ಯಮ ದಿವಸ’ದ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಮಾಡಿದ ಭಾಷಣದಲ್ಲಿ ಈ ವಿಷಯವನ್ನು ಹೇಳಿದರು. ಈ ಸಂದರ್ಭದಲ್ಲಿ ಅವರು ಮತ್ತೆ ನಾರದ ಮುನಿಯನ್ನು ಆಧುನಿಕ ಅಂತರ್ ಜಾಲದ ಸರ್ಚ್ ಇಂಜಿನ್ ಗೂಗಲ್‌ಗೆ ಹೋಲಿಸಿದರು.
“ನಿಮ್ಮ ಗೂಗಲ್ ಈಗ ಶುರುವಾಗಿದೆ; ಆದರೆ ನಮ್ಮ ಗೂಗಲ್ ನಾರದ ಮುನಿಯಷ್ಟು ಪ್ರಾಚೀನ ಕಾಲದಲ್ಲೇ ಶುರುವಾಗಿತ್ತು. ನಾರದ ಮುನಿಗಳು ‘ನಾರಾಯಣ’ ಎಂದು ದೇವರ ನಾಮವನ್ನು ಮೂರು ಬಾರಿ ಉಚ್ಚರಿಸುವ ಮೂಲಕ ಮಾಹಿತಿಗಳನ್ನು , ಸಂದೇಶಗಳನ್ನು ಒಂದೆಡೆಯಿಂದ ಇನ್ನೊಂದೆಡೆಗೆ ರವಾನಿಸುತ್ತಿದ್ದರು’ ಎಂದು ಶರ್ಮಾ ಹೇಳಿದರು.