Advertisement

ಭಾರತಕ್ಕೆ ಟೆಸ್ಟ್‌ ಸರಣಿ ಕ್ಲೀನ್‌ಸ್ವೀಪ್‌

02:53 PM Aug 15, 2017 | Team Udayavani |

ಪಲ್ಲೆಕಿಲೆ: ಏಕಮುಖವಾಗಿ ಸಾಗಿದ ಶ್ರೀಲಂಕಾ ವಿರುದ್ಧದ ಟೆಸ್ಟ್‌ ಸರಣಿಯನ್ನು ಭಾರತ ನಿರೀಕ್ಷೆಯಂತೆ 3-0 ಅಂತರದಿಂದ ಕ್ಲೀನ್‌ಸ್ವೀಪ್‌ಗೈದಿದೆ. ಪಲ್ಲೆಕಿಲೆಯಲ್ಲಿ ಸಾಗಿದ ಮೂರನೇ ಟೆಸ್ಟ್‌ ಮೂರೇ ದಿನಗಳಲ್ಲಿ ಅಂತ್ಯಗೊಂಡಿದ್ದು ಭಾರತ ಇನ್ನಿಂಗ್ಸ್‌ ಮತ್ತು 171 ರನ್ನುಗಳಿಂದ ಜಯಭೇರಿ ಬಾರಿಸಿದೆ. 

Advertisement

ಸರಣಿಯ ಯಾವುದೇ ಪಂದ್ಯ ಐದನೇ ದಿನ ಕಂಡಿಲ್ಲ. ಅದರಲ್ಲಿಯೂ ಅಂತಿಮ ಟೆಸ್ಟ್‌ ಅತ್ಯಂತ ಕಡಿಮೆ ಅವಧಿಯಲ್ಲಿ ಮುಗಿದಿದೆ. ಕೇವಲ ಎರಡೂವರೆ ದಿನಗಳಲ್ಲಿ ಆತಿಥೇಯ ತಂಡ ಶರಣಾಗಿದೆ. ಮೂರನೇ ದಿನದ ಟೀ ವಿರಾಮದ ಮೊದಲೇ ಶ್ರೀಲಂಕಾ ತನ್ನ ದ್ವಿತೀಯ ಇನ್ನಿಂಗ್ಸ್‌ನಲ್ಲಿ 74.3 ಓವರ್‌ ಎದುರಿಸಿ 181 ರನ್ನಿಗೆ ಆಲೌಟಾಗಿದೆ. ಟೆಸ್ಟ್‌ ಕ್ರಿಕೆಟ್‌ನ ಅಗ್ರ ರ್‍ಯಾಂಕಿನ ಭಾರತ ವೃತ್ತಿಪರ ನಿರ್ವಹಣೆ ದಾಖಲಿಸಿ ದುರ್ಬಲ ಶ್ರೀಲಂಕಾವನ್ನು ಬಗ್ಗುಬಡಿದಿದೆ. ತನ್ನ ಚೊಚ್ಚಲ ಸರಣಿಯಲ್ಲಿಯೇ ಹಾರ್ದಿಕ್‌ ಪಾಂಡ್ಯ ಗಮನಾರ್ಹ ನಿರ್ವಹಣೆ ನೀಡಿರುವುದು ಸಕಾರಾತ್ಮಕ  ಅಂಶವಾಗಿದೆ ಎಂದು ನಾಯಕ ವಿರಾಟ್‌ ಕೊಹ್ಲಿ ಹೇಳಿದ್ದಾರೆ.

ಸತತ ಎರಡನೇ ಇನ್ನಿಂಗ್ಸ್‌ ಅಂತರದ ಗೆಲುವಿನಿಂದ ಭಾರತ ಎರಡು ವರ್ಷಗಳ ಹಿಂದೆ ಶ್ರೀಲಂಕಾದಲ್ಲಿ ನಡೆದ ಈ ಹಿಂದಿನ ಸರಣಿ ವೇಳೆ ಗಾಲೆಯಲ್ಲಿ ಸೋತ ಬಳಿಕ ಇಷ್ಟರವರೆಗೆ 20 ಗೆಲುವು ಸಾಧಿಸಿದ್ದು ಒಂದು ಪಂದ್ಯದಲ್ಲಿ ಮಾತ್ರ ಸೋತಿದೆ ಮತ್ತು ಐದು ಪಂದ್ಯಗಳನ್ನು ಡ್ರಾ ಮಾಡಿಕೊಂಡಿದೆ.

ಮಾಮೂಲಿ ಆಟಗಾರರೆಲ್ಲರೂ ಉತ್ತಮ ನಿರ್ವಹಣೆ ನೀಡಿದ್ದಾರೆ. ಆದರೆ ಬಲುದೊಡ್ಡ ಸಕಾರಾತ್ಮಕ ಅಂಶವೆಂದರೆ ಹಾರ್ದಿಕ್‌ ಅವರ ಸೇರ್ಪಡೆ ಆಗಿದೆ. ಅವರು ಈ ಮೂರು ಪಂದ್ಯಗಳ ಸರಣಿಯಲ್ಲಿ ಬ್ಯಾಟಿಂಗ್‌ ಮತ್ತು ಬೌಲಿಂಗ್‌ನಲ್ಲಿ ಬಹಳಷ್ಟು ಆತ್ಮವಿಶ್ವಾಸದಿಂದ ಆಡಿರುವುದು ನಮಗೆ ಸಮಾಧಾನ ತಂದಿದೆ ಎಂದು ಕೊಹ್ಲಿ ನುಡಿದರು. ನಮ್ಮ ಈ ಹೋರಾಟದ ಕ್ರಿಕೆಟ್‌ ಆಟ ಮುಂದುವರಿಯಲಿದೆ ಎಂದು ಸ್ಪಷ್ಟಪಡಿಸಿದ ಅವರು ನಮ್ಮದು ಯುವ ಆಟಗಾರರನ್ನು ಒಳಗೊಂಡ ತಂಡವಾಗಿದೆ. ಪ್ರತಿಯೊಂದು ಟೆಸ್ಟ್‌ ಪಂದ್ಯವನ್ನು ನಾವು ತೀವ್ರ ಸ್ಪರ್ಧೆಯಿಂದ ಆಡುವುದನ್ನು ಎದುರು ನೋಡುತ್ತಿದ್ದೇವೆ ಎಂದವರು ತಿಳಿಸಿದರು.

ಪಂದ್ಯದ ಎರಡನೇ ದಿನ 352 ರನ್‌ ಮೊದಲ ಇನ್ನಿಂಗ್ಸ್‌ ಹಿನ್ನಡೆ ಪಡೆದಿದ್ದ ಶ್ರೀಲಂಕಾ ಫಾಲೋಆನ್‌ಗೆ ಗುರಿಯಾಯಿತು. ದ್ವಿತೀಯ ಇನ್ನಿಂಗ್ಸ್‌ ಆರಂಭಿಸಿದ ಶ್ರೀಲಂಕಾ ತಂಡ ಒಂದು ವಿಕೆಟಿಗೆ 19 ರನ್‌ ಗಳಿಸಿ ದಿನದಾಟ ಅಂತ್ಯಗೊಳಿಸಿತ್ತು. ಅದೇ ಮೊತ್ತದಿಂದ ಮೂರನೇ ದಿನದಾಟದ ಆಟ ಮುಂದುವರಿಸಿದ ಶ್ರೀಲಂಕಾ ಉಮೇಶ್‌ ಯಾದವ್‌, ಶಮಿ ದಾಳಿಗೆ ಆರಂಭದಲ್ಲಿಯೇ ಕುಸಿಯಿತು. ಊಟದ ವಿರಾಮದ ವೇಳೆ ಆತಿಥೇಯ ತಂಡ 82 ರನ್ನಿಗೆ 4 ವಿಕೆಟ್‌ ಕಳೆದುಕೊಂಡು ಒದ್ದಾಡುತ್ತಿತ್ತು. 

Advertisement

ದಿನೇಶ್‌ ಚಂಡಿಮಾಲ್‌ ಮತ್ತು ಏಂಜೆಲೊ ಮ್ಯಾಥ್ಯೂಸ್‌ ಐದನೇ ವಿಕೆಟಿಗೆ 65 ರನ್ನುಗಳ ಜತೆಯಾಟದಲ್ಲಿ ಪಾಲ್ಗೊಂಡರು. 49ನೇ ಓವರಿನಲ್ಲಿ ತಂಡದ ಮೊತ್ತ 100ರ ಗಡಿ ದಾಟಿತ್ತು. ಚಂಡಿಮಾಲ್‌, ಮ್ಯಾಥ್ಯೂಸ್‌ ಮತ್ತು ನಿರೋಷನ್‌ ಡಿಕ್ವೆಲ್ಲ ಅವರನ್ನು ಹೊರತುಪಡಿಸಿ ಉಳಿದವರ್ಯಾರೂ ಉತ್ತಮ ಬ್ಯಾಟಿಂಗ್‌ ಪ್ರದರ್ಶಿಸಿಲ್ಲ. ಡಿಕ್ವೆಲ್ಲ 52 ಎಸೆತಗಳಿಂದ 41 ರನ್‌ ಹೊಡೆದರು.  ಮೊದಲ ಇನ್ನಿಂಗ್ಸ್‌ನಲ್ಲಿ 135 ರನ್ನಿಗೆ ಆಲೌಟಾಗಿದ್ದ ಶ್ರೀಲಂಕಾ ದ್ವಿತೀಯ ಇನ್ನಿಂಗ್ಸ್‌ನಲ್ಲಿ 181 ರನ್‌ ಗಳಿಸಲು ಶಕ್ತವಾಯಿತು. ಬಿಗು ದಾಳಿ ಸಂಘಟಿಸಿದ ಆರ್‌. ಅಶ್ವಿ‌ನ್‌ 68 ರನ್ನಿಗೆ 4 ವಿಕೆಟ್‌  ಪಡೆದರು.

ಇನ್ನು ಭಾರತೀಯ ತಂಡ ಐದು ಪಂದ್ಯಗಳ ಏಕದಿನ ಸರಣಿಯಲ್ಲಿ ಶ್ರೀಲಂಕಾವನ್ನು ಎದುರಿಸಲಿದೆ. ಸರಣಿಯ ಮೊದಲ ಪಂದ್ಯ ದಾಂಬುಲದಲ್ಲಿ ಆ. 20ರಂದು ನಡೆಯಲಿದೆ. ಈ ಸರಣಿಗಾಗಿ ಕೊಹ್ಲಿ ನಾಯಕತ್ವದ ಭಾರತೀಯ ತಂಡವನ್ನು ಪ್ರಕಟಿಸಲಾಗಿದೆ.

ಬಾಳ್ವೆಯ ಕೆಟ್ಟ  ಸರಣಿ: ಚಂಡಿಮಾಲ್‌
ಪಲ್ಲೆಕಿಲೆ: ಭಾರತ ತಂಡದ ವಿರುದ್ಧದ ಶ್ರೀಲಂಕಾದ ಅತ್ಯಂತ ಹೀನಾಯ ನಿರ್ವಹಣೆಯಿಂದ ಆಘಾತಗೊಂಡಿರುವ ನಾಯಕ ದಿನೇಶ್‌ ಚಂಡಿಮಾಲ್‌ ಅವರು ಇದೊಂದು ನನ್ನ ಬಾಳ್ವೆಯ ಅತ್ಯಂತ ಕೆಟ್ಟ ಸರಣಿ ಎಂದು ಹೇಳಿದ್ದಾರೆ. ಇದು ನನ್ನ ಬಾಳ್ವೆಯ ಅತ್ಯಂತ ಕಠಿನ ಸರಣಿಯಾಗಿದೆ ಎಂದು ಹೇಳಲು ಯಾವುದೇ ಸಂಶಯವಿಲ್ಲ. ಪಂದ್ಯವನ್ನು ಐದು ದಿನಗಳವರೆಗೆ ಕೊಂಡೊಯ್ಯಲು ಸಾಧ್ಯವಾಗದಿರುವುದು ಸೋಲಿಗೆ ಪ್ರಮುಖ ಕಾರಣವಾಗಿದೆ. ಕೆಲವು ಟೆಸ್ಟ್‌ಗಳು ನಾಲ್ಕು ದಿನ ಮತ್ತು ಮೂರು ದಿನಗಳಲ್ಲಿ ಮುಗಿದಿವೆ. ಇದನ್ನು ಅರಗಿಸಿಕೊಳ್ಳಲು ಕಷ್ಟವಾಗುತ್ತಿದೆ. ಆದರೆ ಭಾರತ ಶ್ರೇಷ್ಠ ನಿರ್ವಹಣೆ ನೀಡಿದೆ ಎಂದು ಚಂಡಿಮಾಲ್‌ ತಿಳಿಸಿದರು.

ಸ್ಕೋರ್‌ಪಟ್ಟಿ
ಭಾರತ ಪ್ರಥಮ ಇನ್ನಿಂಗ್ಸ್‌    487
ಶ್ರೀಲಂಕಾ ಪ್ರಥಮ ಇನ್ನಿಂಗ್ಸ್‌    135
ಶ್ರೀಲಂಕಾ ದ್ವಿತೀಯ ಇನ್ನಿಂಗ್ಸ್‌

ದಿಮುತ್‌ ಕರುಣರತ್ನೆ    ಸಿ ರಹಾನೆ ಬಿ ಅಶ್ವಿ‌ನ್‌    16
ಉಪುಲ್‌ ತರಂಗ    ಬಿ ಯಾದವ್‌    7
ಎಂ. ಪುಷ್ಪಕುಮಾರ    ಸಿ ಸಾಹಾ ಬಿ ಶಮಿ    1
ಕುಸಲ್‌ ಮೆಂಡಿಸ್‌    ಎಲ್‌ಬಿಡಬ್ಲ್ಯು ಬಿ ಶಮಿ    12
ದಿನೇಶ್‌ ಚಂಡಿಮಾಲ್‌    ಸಿ ಪೂಜಾರ ಬಿ ಕುಲದೀಪ್‌    36
ಏಂಜೆಲೊ ಮ್ಯಾಥ್ಯೂಸ್‌    ಎಲ್‌ಬಿಡಬ್ಲ್ಯು ಬಿ ಅಶ್ವಿ‌ನ್‌    35
ನಿರೋಷನ್‌ ಡಿಕ್ವೆಲ್ಲ    ಸಿ ರಹಾನೆ ಬಿ ಉಮೇಶ್‌    41
ದಿಲುವಾನ್‌ ಪೆರೆರ    ಸಿ ಪಾಂಡ್ಯ ಬಿ ಅಶ್ವಿ‌ನ್‌    8
ಲಕ್ಷಣ್‌ ಸಂದಕನ್‌    ಸಿ ಸಾಹಾ ಬಿ ಶಮಿ    8
ವಿಶ್ವ ಫೆರ್ನಾಂಡೊ    ಔಟಾಗದೆ    4
ಲಹಿರು ಕುಮಾರ    ಬಿ ಅಶ್ವಿ‌ನ್‌    10

ಇತರ:        3
ಒಟ್ಟು (74.3 ಓವರ್‌ಗಳಲ್ಲಿ ಆಲೌಟ್‌)    181

ವಿಕೆಟ್‌ ಪತನ: 1-16, 2-26, 3-34, 4-39, 5-104, 6-118, 7-138, 8-166, 9-168

ಬೌಲಿಂಗ್‌: 
ಮೊಹಮ್ಮದ್‌ ಶಮಿ    15-6-32-3
ಆರ್‌. ಅಶ್ವಿ‌ನ್‌        28.3-6-68-4
ಉಮೇಶ್‌ ಯಾದವ್‌        13-5-21-2
ಕುಲದೀಪ್‌ ಯಾದವ್‌        17-4-56-1
ಹಾರ್ದಿಕ್‌ ಪಾಂಡ್ಯ        1-0-2-0

ಪಂದ್ಯಶ್ರೇಷ್ಠ: ಹಾರ್ದಿಕ್‌ ಪಾಂಡ್ಯ
ಸರಣಿಶ್ರೇಷ್ಠ: ಶಿಖರ್‌ ಧವನ್‌

ಎಕ್ಸ್‌ಟ್ರಾ ಇನ್ನಿಂಗ್ಸ್‌
ಮೂರು ಅಥವಾ ಅದಕ್ಕಿಂತ ಟೆಸ್ಟ್‌ಗಳಿರುವ ವೇಳೆ ವಿದೇಶದಲ್ಲಿ ಭಾರತ ಇದೇ ಮೊದಲ ಸಲ ವೈಟ್‌ವಾಶ್‌ ಮೂಲಕ ಸರಣಿ ಗೆದ್ದುಕೊಂಡಿದೆ. ಸಮಗ್ರವಾಗಿ ಇದು ಮೂರು ಮೂರು ಅಥವಾ ಹೆಚ್ಚು ಅದಕ್ಕಿಂತ ಟೆಸ್ಟ್‌ಗಳಿರುವ ವೇಳೆ ಭಾರತದ ಐದನೇ ವೈಟ್‌ವಾಶ್‌ ಗೆಲುವು ಆಗಿದೆ.

ಮೂರು ಅಥವಾ ಅದಕ್ಕಿಂತ ಹೆಚ್ಚು ಟೆಸ್ಟ್‌ಗಳಿರುವ ವೇಳೆ ತವರಿನಲ್ಲಿ ಎರಡು ಬಾರಿ ಶ್ರೀಲಂಕಾ ವೈಟ್‌ವಾಶ್‌ ಸೋಲು ಅನುಭವಿಸಿದೆ. ಈ ಹಿಂದೆ 2003-04ರಲ್ಲಿ ಆಸ್ಟ್ರೇಲಿಯ ತಂಡವು ಶ್ರೀಲಂಕಾವನ್ನು ವೈಟ್‌ವಾಶ್‌ ಮೂಲಕ ಸೋಲಿಸಿತ್ತು. ಸಮಗ್ರವಾಗಿ ಇದು ಶ್ರೀಲಂಕಾ ತಂಡದ ಆರನೇ ವೈಟ್‌ವಾಶ್‌ ಸೋಲು ಆಗಿದೆ.

ಭಾರತ ಈ ಪಂದ್ಯದ ಇನ್ನಿಂಗ್ಸ್‌ ಗೆಲುವಿಗಿಂತ ಮಿಗಿಲಾದ ಇನ್ನಿಂಗ್ಸ್‌ ಗೆಲುವನ್ನು ಈ ಹಿಂದೆ ಮೂರು ಬಾರಿ ದಾಖಲಿಸಿದೆ. ವಿದೇಶದಲ್ಲಿ ಇದು ಭಾರತದ ಎರಡನೇ ಗರಿಷ್ಠ ರನ್ನಿನ ಇನ್ನಿಂಗ್ಸ್‌ ಗೆಲುವು ಆಗಿದೆ. ಶ್ರೀಲಂಕಾಕ್ಕೆ ಇದು ಐದನೇ ಬಲುದೊಡ್ಡ ಇನ್ನಿಂಗ್ಸ್‌ ಸೋಲು ಆಗಿದೆ. 

ಈ ಸರಣಿಯಲ್ಲಿ ಭಾರತ ಮೂರು ಬಾರಿ ಮೊದಲ ಇನ್ನಿಂಗ್ಸ್‌ನಲ್ಲಿ 300ಕ್ಕಿಂತ ಹೆಚ್ಚಿನ ಮುನ್ನಡೆ ಸಾಧಿಸಿದೆ. ಯಾವುದೇ ಸರಣಿಯಲ್ಲಿ ಇದು ಗರಿಷ್ಠ ಸಾಧನೆಯಾಗಿದೆ. 2009-10ರ ತವರಿನ ಸರಣಿ ಮತ್ತು ಕಳೆದ ವರ್ಷ ವೆಸ್ಟ್‌ಇಂಡೀಸ್‌ ವಿರುದ್ಧ ಭಾರತ ಎರಡು ಬಾರಿ ಮೊದಲ ಇನ್ನಿಂಗ್ಸ್‌ನಲ್ಲಿ 300 ಪ್ಲಸ್‌ ಮುನ್ನಡೆ ಸಾಧಿಸಿತ್ತು. ಭಾರತ ಈ ಸರಣಿಯಲ್ಲಿ ಮೊದಲ ಇನ್ನಿಂಗ್ಸ್‌ನಲ್ಲಿ ಅನುಕ್ರಮವಾಗಿ 309, 439 ಮತ್ತು 352 ರನ್‌  ಮುನ್ನಡೆ ಸಾಧಿಸಿತ್ತು.

ಸರಣಿಯಲ್ಲಿ ಪೂರ್ತಿಗೊಂಡ ಇನ್ನಿಂಗ್ಸ್‌ ಒಂದರಲ್ಲಿ 487 ರನ್‌ ಭಾರತದ ಕನಿಷ್ಠ ಮೊತ್ತವಾಗಿತ್ತು. 386 ರನ್‌ ಶ್ರೀಲಂಕಾದ ಗರಿಷ್ಠ ಮೊತ್ತವಾಗಿದೆ.

ಭಾರತದ ಐವರು ಬ್ಯಾಟ್ಸ್‌ಮನ್‌ ಈ ಸರಣಿಯಲ್ಲಿ ಶತಕ ಸಿಡಿಸಿದ್ದಾರೆ. ಶಿಖರ್‌ ಧವನ್‌, ಚೇತೇಶ್ವರ್‌ ಪೂಜಾರ. ವಿರಾಟ್‌ ಕೊಹ್ಲಿ, ಅಜಿಂಕ್ಯ ರಹಾನೆ ಮತ್ತು ಹಾರ್ದಿಕ್‌ ಪಾಂಡ್ಯ ಶತಕ ವೀರರಾಗಿದ್ದಾರೆ. ಒಟ್ಟಾರೆ 10 ಆಟಗಾರರು 50 ಪ್ಲಸ್‌ ಮೊತ್ತ ಗಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next