ದುಬೈ: ಶ್ರೀಲಂಕಾ ವಿರುದ್ಧ ನಡೆದ ದ್ವಿತೀಯ ಟೆಸ್ಟ್‌ನಲ್ಲಿ 215 ರನ್ ಗಳಿಸಿದ್ದ ನ್ಯೂಜಿಲೆಂಡಿನ ಕೇನ್ ವಿಲಿಯಮ್ಸನ್ ಅವರು ನೂತನ ಐಸಿಸಿ ರ್‍ಯಾಂಕಿಂಗ್‌ನ ಟೆಸ್ಟ್ ಬ್ಯಾಟರ್ ಪಟ್ಟಿಯಲ್ಲಿ ನಾಲ್ಕು ಸ್ಥಾನ ಮೇಲಕ್ಕೇರಿ ದ್ವಿತೀಯ ಸ್ಥಾನ ಪಡೆದಿದ್ದಾರೆ. ಕಳೆದ ಜನವರಿಯಿಂದ ಸ್ಪರ್ಧಾತ್ಮಕ ಕ್ರಿಕೆಟ್‌ನಲ್ಲಿ ಆಡದಿದ್ದರೂ ಜೋಶ್ ಹೇಝಲ್‌ವುಡ್ ಅವರು ಏಕದಿನ ಬೌಲಿಂಗ್ ರ್‍ಯಾಂಕಿಂಗ್‌ನಲ್ಲಿ ಅಗ್ರಸ್ಥಾನದಲ್ಲಿ ಮುಂದುವರಿದಿದ್ದಾರೆ. ಆಸ್ಟ್ರೇಲಿಯ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಮೂರು ವಿಕೆಟ್ ಪಡೆದಿದ್ದ ಮೊಹಮ್ಮದ್ ಸಿರಾಜ್ ಮೂರನೇ ಸ್ಥಾನಕ್ಕೆ ಜಾರಿದ್ದಾರೆ. 2022ರ ಸೆಪ್ಟೆಂಬರ್‌ನಲ್ಲಿ ಈ ಹಿಂದಿನ ಏಕದಿನ ಆಡಿದ್ದ ಟ್ರೆಂಟ್ ಬೌಲ್ಟ್ ದ್ವಿತೀಯ ಸ್ಥಾನದಲ್ಲಿದ್ದಾರೆ.
ಕೇನ್ ವಿಲಿಯಮ್ಸನ್ ಶ್ರೀಲಂಕಾ ವಿರುದ್ಧದ ಮೊದಲ ಮತ್ತು ದ್ವಿತೀಯ ಟೆಸ್ಟ್‌ನಲ್ಲಿ ಅಮೋಘ ನಿರ್ವಹಣೆ ನೀಡಿದ್ದರು. ಮೊದಲ ಟೆಸ್ಟ್‌ನಲ್ಲಿ ನ್ಯೂಜಿಲೆಂಡ್ ಕೊನೆಯ ಎಸೆತದಲ್ಲಿ ನಾಟಕೀಯ ಗೆಲುವು ದಾಖಲಿಸಲು ಅವರ ಬ್ಯಾಟಿಂಗ್ ವೈಭವ ಕಾರಣವಾಗಿತ್ತು. ಅವರ ಅಜೇಯ 121 ರನ್ ಸಾಧನೆಯಿಂದ ತಂಡ ಜಯ ಸಾಧಿಸಿತ್ತು. ದ್ವಿತೀಯ ಟೆಸ್ಟ್‌ನಲ್ಲಿ ಅವರ ಉತ್ತಮ ನಿರ್ವಹಣೆಯಿಂದ ನ್ಯೂಜಿಲೆಂಡ್ ಇನಿಂಗ್ಸ್ ಮತ್ತು 58 ರನ್ನುಗಳಿಂದ ಜಯ ಸಾಧಿಸಿತ್ತು. ಇದರಿಂದಾಗಿ ವಿಲಿಯಮ್ಸನ್ ನಾಲ್ಕು ಸ್ಥಾನ ಮೇಲಕ್ಕೇರಿ ದ್ವಿತೀಯ ಸ್ಥಾನ ಪಡೆದಿದ್ದಾರೆ. ಅವರು ಈ ಹಿಂದೆ ನಂ.1 ಸ್ಥಾನ ಕೂಡ ಪಡೆದಿದ್ದರು.
ಅವರ ಜತೆಗಾರ ಹೆನ್ನಿ ನಿಕೋಲ್ಸ್ ಕೂಡ ರ್‍ಯಾಂಕಿಂಗ್‌ನಲ್ಲಿ ಉತ್ತಮ ಸ್ಥಾನ ಪಡೆದಿದ್ದಾರೆ. ಅಜೇಯ 200 ರನ್ ಬಾರಿಸಿದ್ದ ಅವರು 20 ಸ್ಥಾನ ಮೇಲಕ್ಕೇರಿ 27ನೇ ಸ್ಥಾನದಲ್ಲಿದ್ದಾರೆ. ನ್ಯೂಜಿಲೆಂಡಿನ ನಾಯಕ ಟಿಮ್ ಸೌದಿ 11ನೇ ಸ್ಥಾನದಲ್ಲಿದ್ದರೆ ಶ್ರೀಲಂಕಾದ ದಿಮುತ್ ಕರುಣರತ್ನೆ ಬ್ಯಾಟಿಂಗ್‌ನಲ್ಲಿ 10ನೇ ಸ್ಥಾನ ಪಡೆದಿದ್ದಾರೆ.
ಸಿರಾಜ್-ಸ್ಟಾರ್ಕ್ ಜಂಟಿ 3ನೇ ಸ್ಥಾನ: ಇನ್ನು ಬೌಲಿಂಗ್ ವಿಭಾಗದ ಏಕದಿನ ರ್‍ಯಾಂಕಿಂಗ್‌ನಲ್ಲಿ ಮೂರನೇ ಸ್ಥಾನಕ್ಕೆ ಜಾರಿರುವ ಮೊಹಮ್ಮದ್ ಸಿರಾಜ್, ಇದೀಗ ಮಿಚೆಲ್ ಸ್ಟಾರ್ಕ್ ಜತೆ ಜಂಟಿಯಾಗಿ 3ನೇ ಸ್ಥಾನ ಹಂಚಿಕೊಂಡಿದ್ದಾರೆ. ಏಕದಿನ ಸರಣಿಯಲ್ಲಿ 53ಕ್ಕೆ 5 ಮತ್ತು 49ಕ್ಕೆ 3 ವಿಕೆಟ್ ಕಿತ್ತ ಸಾಧನೆ ಮಾಡತಿದ ಸ್ಟಾರ್ಕ್ ತನ್ನ ಸ್ಥಾನವನ್ನು ಉತ್ತಮಪಡಿಸಿಕೊಂಡು ಸಿರಾಜ್‌ಗೆ ಪೈಪೋಟಿ ನೀಡಿದ್ದಾರೆ.