Advertisement

ಟೆಸ್ಟ್‌ ರ್‍ಯಾಂಕಿಂಗ್‌: ಅಗ್ರಸ್ಥಾನ ಕಳೆದುಕೊಂಡ ಭಾರತ

01:01 AM May 02, 2020 | Sriram |

ದುಬಾೖ: ಭಾರತ 2016-17ರ ಬಳಿಕ ಮೊದಲ ಸಲ ಟೆಸ್ಟ್‌ ರ್‍ಯಾಂಕಿಂಗ್‌ನ ಅಗ್ರಸ್ಥಾನವನ್ನು ಕಳೆದುಕೊಂಡಿದೆ. ಶುಕ್ರ ವಾರ ಪರಿಷ್ಕರಿಸಲಾದ ರ್‍ಯಾಂಕಿಂಗ್‌ನಲ್ಲಿ ಟೀಮ್‌ ಇಂಡಿಯಾ 3ನೇ ಸ್ಥಾನಕ್ಕೆ ಕುಸಿದಿದೆ. ಆಸ್ಟ್ರೇಲಿಯ ಮರಳಿ ಅಗ್ರಸ್ಥಾನ ಅಲಂಕರಿಸಿದೆ.

Advertisement

2016ರ ಅಕ್ಟೋಬರ್‌ನಲ್ಲಿ ಅಗ್ರಮಾನ್ಯ ಟೆಸ್ಟ್‌ ತಂಡವೆನಿಸಿಕೊಂಡ ಭಾರತ, ಅನಂತರ ತಾನೇ ಈ ಸ್ಥಾನದಲ್ಲಿ ವಿರಾಜಮಾನವಾಗುತ್ತ ಬಂದಿತ್ತು. ಐಸಿಸಿ ಟೆಸ್ಟ್‌ ಚಾಂಪಿಯನ್‌ಶಿಪ್‌ ಪಟ್ಟವನ್ನು ತನ್ನಲ್ಲೇ ಉಳಿಸಿಕೊಂಡಿತ್ತು. ಭಾರತ 2016-17ರಲ್ಲಿ ದಾಖಲೆ 12 ಟೆಸ್ಟ್‌ ಪಂದ್ಯಗಳ ಗೆಲುವು ಹಾಗೂ ಏಕೈಕ ಸೋಲನುಭವಿಸಿತ್ತು.

2016-17ರ ಅವಧಿಯಲ್ಲಿ ಭಾರತ ತಂಡ ಆಡಿದ ಎಲ್ಲ 5 ಟೆಸ್ಟ್‌ ಸರಣಿಗಳನ್ನು ಗೆದ್ದಿತ್ತು. ಆಸ್ಟ್ರೇಲಿಯ, ಇಂಗ್ಲೆಂಡ್‌ ತಂಡಗಳನ್ನು ಭಾರತ ಮಣಿಸಿತ್ತು.

ನೂತನ ಮಾನದಂಡ
ಪರಿಷ್ಕೃತ ರ್‍ಯಾಂಕಿಂಗ್‌ ಯಾದಿಗೆ ನೂತನ ಮಾನದಂಡವನ್ನು ಅನುಸರಿಸಲಾಗಿದೆ. 2019ರ ಮೇ ಬಳಿಕ ಆಡಲಾದ ಟೆಸ್ಟ್‌ ಪಂದ್ಯಗಳಿಗೆ ಶೇ. 100ರಷ್ಟು ಹಾಗೂ ಇದಕ್ಕೂ ಹಿಂದಿನ 2 ವರ್ಷಗಳ ಟೆಸ್ಟ್‌ ಪಂದ್ಯಗಳಿಗೆ ಶೇ. 50ರಷ್ಟು ಅಂಕವನ್ನಷ್ಟೇ ನೀಡಲಾಗಿದೆ. ಇದು ಭಾರತಕ್ಕೆ ಹಿನ್ನಡೆಯಾಗಿ ಪರಿಣಮಿಸಿತು. ಆಸ್ಟ್ರೇಲಿಯ ಅಗ್ರಸ್ಥಾನಕ್ಕೆ ನೆಗೆಯಿತು. ಕಾಂಗರೂ ಪಡೆಯೀಗ 116 ಅಂಕಗಳನ್ನು ಹೊಂದಿದೆ. ದ್ವಿತೀಯ ಸ್ಥಾನಿಯಾಗಿರುವ ನ್ಯೂಜಿಲ್ಯಾಂಡ್‌ ಬಳಿ 115 ಅಂಕವಿದೆ. ಭಾರತದ ಖಾತೆಯಲ್ಲಿ 114 ಅಂಕಗಳಿವೆ. 2016ರ ಜನವರಿ ಬಳಿಕ ಅಗ್ರ 3 ಸ್ಥಾನ ಪಡೆದ ತಂಡಗಳ ನಡುವೆ ಕೇವಲ ಒಂದು ಅಂಕದ ಅಂತರದ ನಿಕಟ ಪೈಪೋಟಿ ಕಂಡುಬಂದದ್ದು ಇದೇ ಮೊದಲು.

ಇಂಗ್ಲೆಂಡ್‌ 4ನೇ (105), ಶ್ರೀಲಂಕಾ 5ನೇ ಸ್ಥಾನಿಯಾಗಿವೆ (94). ದಕ್ಷಿಣ ಆಫ್ರಿಕಾಕ್ಕೆ 8 ಅಂಕಗಳ ಭಾರೀ ನಷ್ಟ ಸಂಭವಿಸಿದ್ದು, ಅದು 6ನೇ ಸ್ಥಾನದಲ್ಲಿದೆ (90). ಅನಂತರದ ಸ್ಥಾನದಲ್ಲಿರುವ ತಂಡಗಳೆಂದರೆ ಪಾಕಿಸ್ಥಾನ (86), ವೆಸ್ಟ್‌ ಇಂಡೀಸ್‌ (79).

Advertisement

ಟಿ20ಯಲ್ಲೂ ನಂ.1
ಆಸ್ಟ್ರೇಲಿಯಕ್ಕೆ ಇನ್ನೊಂದು ಹೆಗ್ಗಳಿಕೆಯೂ ಲಭಿಸಿದೆ. ಅದು ಮೊದಲ ಸಲ ಟಿ20 ರ್‍ಯಾಂಕಿಂಗ್‌ನಲ್ಲೂ ಅಗ್ರಸ್ಥಾನ ಅಲಂಕರಿಸಿದೆ (278). ಇಂಗ್ಲೆಂಡ್‌ (268) ಮತ್ತು ಭಾರತ (266) ಅನಂತರದ ಸ್ಥಾನದಲ್ಲಿವೆ. ನಂಬರ್‌ ವನ್‌ ಸ್ಥಾನಿಯಾಗಿದ್ದ ಪಾಕಿಸ್ಥಾನವೀಗ 4ಕ್ಕೆ ಇಳಿದಿದೆ (260).
ಏಕದಿನ ರ್‍ಯಾಂಕಿಂಗ್‌ನಲ್ಲಿ ವಿಶ್ವ ಚಾಂಪಿಯನ್‌ ಇಂಗ್ಲೆಂಡ್‌ ನಂ.1 ಆಗಿದ್ದು, ಅದು ತನ್ನ ಅಂಕವನ್ನು 127ಕ್ಕೆ ಏರಿಸಿಕೊಂಡಿದೆ. ಭಾರತ ದ್ವಿತೀಯ (119) ಮತ್ತು ರನ್ನರ್ ಅಪ್‌ ನ್ಯೂಜಿಲ್ಯಾಂಡ್‌ (116) 3ನೇ ಸ್ಥಾನದಲ್ಲಿವೆ.

Advertisement

Udayavani is now on Telegram. Click here to join our channel and stay updated with the latest news.

Next