Advertisement

ಇಂದಿನಿಂದ ಭಾರತ-ಬಾಂಗ್ಲಾ ಟೆಸ್ಟ್‌; ರೋಹಿತ್‌ ಶರ್ಮ ಗೈರಿನಲ್ಲಿ ಕೆ.ಎಲ್‌.ರಾಹುಲ್‌ಗೆ ನಾಯಕತ್ವದ ಪರೀಕ್ಷೆ

10:46 PM Dec 13, 2022 | Team Udayavani |

ಚತ್ತೋಗ್ರಾಮ್‌ (ಬಾಂಗ್ಲಾದೇಶ): ಇದೇ “ಜಹುರ್‌ ಅಹ್ಮದ್‌ ಚೌಧರಿ ಸ್ಟೇಡಿಯಂ’ನಲ್ಲಿ ನಡೆದ ಅಂತಿಮ ಏಕದಿನ ಪಂದ್ಯದಲ್ಲಿ ಅಮೋಘ ಜಯಭೇರಿ ಮೊಳಗಿಸಿದ ಭಾರತವೀಗ ಆತಿಥೇಯ ಬಾಂಗ್ಲಾದೇಶ ವಿರುದ್ಧ ಟೆಸ್ಟ್‌ ಸಮರಕ್ಕೆ ಇಳಿಯಲಿದೆ. ಇದು 2 ಪಂದ್ಯಗಳ ಕಿರು ಸರಣಿಯಾಗಿದ್ದು, ಮೊದಲ ಟೆಸ್ಟ್‌ ಬುಧವಾರ ಆರಂಭವಾಗಲಿದೆ.

Advertisement

ನಾಯಕ ಹಾಗೂ ಅಷ್ಟೇನೂ ಫಾರ್ಮ್ನಲ್ಲಿಲ್ಲದ ರೋಹಿತ್‌ ಶರ್ಮ ಗಾಯಾಳಾದ ಕಾರಣ ಈ ಪಂದ್ಯದಲ್ಲಿ ಆಡುತ್ತಿಲ್ಲ. ಪ್ರಧಾನ ವೇಗಿಗಳಾದ ಬುಮ್ರಾ, ಮೊಹಮ್ಮದ್‌ ಶಮಿ, ಆಲ್‌ರೌಂಡರ್‌ ರವೀಂದ್ರ ಜಡೇಜಾ ಎಲ್ಲರೂ ಗಾಯಾಳಾಗಿ ಹೊರಗುಳಿದಿದ್ದಾರೆ. ಹೀಗಾಗಿ ಈ ಪಂದ್ಯದಲ್ಲಿ ಭಾರತವನ್ನು ಮುನ್ನಡೆಸಲಿರುವ ಕೆ.ಎಲ್‌.ರಾಹುಲ್‌ ಪಾಲಿಗೆ ಇದು ಹಲವು ವಿಧದಲ್ಲಿ “ಟೆಸ್ಟ್‌’ ಆಗಲಿದೆ. ಒಂದು ನಾಯಕತ್ವದ ಟೆಸ್ಟ್‌ ಆದರೆ, ಇನ್ನೊಂದು ಬ್ಯಾಟಿಂಗ್‌ ಟೆಸ್ಟ್‌.

“ಐಸಿಸಿ ಟೆಸ್ಟ್‌ ವಿಶ್ವ ಚಾಂಪಿಯನ್‌ಶಿಪ್‌’ನಲ್ಲಿ 4ನೇ ಸ್ಥಾನಕ್ಕೆ ಕುಸಿದಿರುವ ಕಾರಣ ಭಾರತಕ್ಕೆ ಈ ಸರಣಿ ಅಗ್ನಿಪರೀಕ್ಷೆ ಆಗಲಿದೆ. ಸದ್ಯ ಆಸ್ಟ್ರೇಲಿಯ, ದಕ್ಷಿಣ ಆಫ್ರಿಕಾ ಮತ್ತು ಶ್ರೀಲಂಕಾ ಬಳಿಕ ಭಾರತ ತಂಡವಿದೆ. ಬಾಂಗ್ಲಾವನ್ನು ಎರಡೂ ಟೆಸ್ಟ್‌ಗಳಲ್ಲಿ ಸೋಲಿಸಿದರೆ, ಬಳಿಕ ತವರಲ್ಲಿ ಆಸ್ಟ್ರೇಲಿಯ ವಿರುದ್ಧದ ನಾಲ್ಕೂ ಟೆಸ್ಟ್‌ ಪಂದ್ಯಗಳನ್ನು ಗೆದ್ದರಷ್ಟೇ ಭಾರತ ರೇಸ್‌ನಲ್ಲಿ ಉಳಿಯಲಿದೆ ಎನ್ನುತ್ತದೆ ಲೆಕ್ಕಾಚಾರ.

ಬಾಂಗ್ಲಾ ವಿರುದ್ಧ ಅಜೇಯ ದಾಖಲೆ:
ಟೆಸ್ಟ್‌ ಪಂದ್ಯದಲ್ಲಿ ಬಾಂಗ್ಲಾದೇಶವಿನ್ನೂ ಭಾರತವನ್ನು ಸೋಲಿಸಿಲ್ಲ. ಈವರೆಗಿನ 11 ಟೆಸ್ಟ್‌ಗಳಲ್ಲಿ ಭಾರತ 9ರಲ್ಲಿ ಜಯ ಸಾಧಿಸಿದೆ. 2 ಪಂದ್ಯ ಡ್ರಾಗೊಂಡಿದೆ. ಕೊನೆಯ ಪಂದ್ಯ ನಡೆದದ್ದು 2019ರಲ್ಲಿ. ಅದು “ಈಡನ್‌ ಗಾರ್ಡನ್ಸ್‌’ನಲ್ಲಿ ಆಡಲಾದ ಹಗಲುರಾತ್ರಿ ಟೆಸ್ಟ್‌ ಪಂದ್ಯವಾಗಿತ್ತು. ಭಾರತ ಇದನ್ನು ಇನಿಂಗ್ಸ್‌ ಹಾಗೂ 46 ರನ್ನುಗಳಿಂದ ಗೆದ್ದಿತ್ತು. ಭಾರತ ತಂಡ ಇದೇ ಲಯದಲ್ಲಿ ಸಾಗಬಹುದೇ ಎಂಬುದೊಂದು ನಿರೀಕ್ಷೆ.

ಬ್ಯಾಟಿಂಗ್‌ ಸಂಯೋಜನೆ: ಉಸ್ತುವಾರಿ ನಾಯಕ ಕೆ.ಎಲ್‌.ರಾಹುಲ್‌ ಜತೆ ಇನಿಂಗ್ಸ್‌ ಆರಂಭಿಸಲು ಇಬ್ಬರು ರೇಸ್‌ನಲ್ಲಿದ್ದಾರೆ. ಶುಭಮನ್‌ ಗಿಲ್‌ ಮತ್ತು ಅಭಿಮನ್ಯು ಈಶ್ವರನ್‌. ಮೊದಲ ಆಯ್ಕೆ ಗಿಲ್‌ ಆಗಿರುವ ಸಾಧ್ಯತೆ ಹೆಚ್ಚು. ಗಿಲ್‌ 11 ಟೆಸ್ಟ್‌ ಆಡಿದ್ದು, 30.47ರ ಸರಾಸರಿಯಲ್ಲಿ 579 ರನ್‌ ಹೊಡೆದಿದ್ದಾರೆ. ಆದರೆ ಇನ್ನಷ್ಟೇ ಟೆಸ್ಟ್‌ ಆಡಬೇಕಿರುವ ಈಶ್ವರನ್‌ ಬಾಂಗ್ಲಾ “ಎ’ ವಿರುದ್ಧ ಆಡಿದ ಎರಡೂ ಟೆಸ್ಟ್‌ಗಳಲ್ಲಿ ಕ್ರಮವಾಗಿ 141 ಹಾಗೂ 157 ರನ್‌ ಬಾರಿಸಿ ಪ್ರಚಂಡ ಫಾರ್ಮ್ ಪ್ರದರ್ಶಿಸಿದ್ದನ್ನು ಮರೆಯುವಂತಿಲ್ಲ.

Advertisement

ಅನಂತರ ಚೇತೇಶ್ವರ ಪೂಜಾರ, ವಿರಾಟ್‌ ಕೊಹ್ಲಿ, ಶ್ರೇಯಸ್‌ ಐಯ್ಯರ್‌, ರಿಷಭ್‌ ಪಂತ್‌ 3ರಿಂದ 6ರವರೆಗಿನ ಸ್ಥಾನ ತುಂಬಲಿದ್ದಾರೆ. ಪೂಜಾರ ಇಂಗ್ಲೆಂಡ್‌ನ‌ಲ್ಲಿ ಅದ್ಭುತ ಆಟವಾಡಿ ಗಮನ ಸೆಳೆದಿದ್ದಾರೆ. ಆದರೆ ಇಲ್ಲಿನ ಟ್ರ್ಯಾಕ್‌ ಬ್ಯಾಟಿಂಗ್‌ಗೆ ಸಹಕರಿಸುವ ಸಾಧ್ಯತೆ ಹೆಚ್ಚಿರುವುದರಿಂದ ಭಾರತದಿಂದ ದೊಡ್ಡ ಮೊತ್ತ ನಿರೀಕ್ಷಿಸಲಾಗಿದೆ.

ಸ್ಪಿನ್‌ಗೆ ಅಗ್ರ ಪ್ರಾಶಸ್ತ್ಯ: ಬೌಲಿಂಗ್‌ ವಿಭಾಗದತ್ತ ಬಂದಾಗ ಸ್ಪಿನ್ನರ್‌ಗಳಿಗೆ ಮೊದಲ ಆದ್ಯತೆ ನೀಡಬೇಕಾಗುತ್ತದೆ. ಏಷ್ಯನ್‌ ಟ್ರ್ಯಾಕ್‌ ಆದ ಕಾರಣ ತಿರುವು ಪಡೆಯುವ ಸಾಧ್ಯತೆ ಹೆಚ್ಚು. ಇಲ್ಲಿ ಆರ್‌.ಅಶ್ವಿ‌ನ್‌, ಅಕ್ಷರ್‌ ಪಟೇಲ್‌, ಕುಲದೀಪ್‌ ಯಾದವ್‌, ಸೌರಭ್‌ ಕುಮಾರ್‌ ಇದ್ದಾರೆ. ಎರಡೇ ಆಯ್ಕೆಗಳಿದ್ದರೆ ಅನುಭವಿ ಅಶ್ವಿ‌ನ್‌ ಮತ್ತು ಅಕ್ಷರ್‌ ಪಟೇಲ್‌ ಆಯ್ಕೆ ಸಾಧ್ಯತೆ ಹೆಚ್ಚು. 6 ಟೆಸ್ಟ್‌ಗಳಲ್ಲಿ 39 ವಿಕೆಟ್‌ ಉಡಾಯಿಸಿದ ಸಾಧನೆ ಪಟೇಲ್‌ ಅವರದು. ಬ್ಯಾಟಿಂಗ್‌ ವಿಷಯಕ್ಕೆ ಬಂದರೆ ಅವರು ಕುಲದೀಪ್‌ ಮತ್ತು ಸೌರಭ್‌ಗಿಂತ ಎಷ್ಟೋ ಮೇಲಿದ್ದಾರೆ. ತ್ರಿವಳಿ ಸ್ಪಿನ್‌ ಸಂಯೋಜನೆ ಇದ್ದರೆ ಚೈನಾಮನ್‌ ಕುಲದೀಪ್‌ ಯಾದವ್‌ ಒಳಬರಬಹುದು.

ವೇಗಕ್ಕೆ 5 ಆಯ್ಕೆ: ವೇಗದ ವಿಭಾಗದಲ್ಲಿ ಹೊಸತಾಗಿ ಸೇರ್ಪಡೆಗೊಂಡ ಜೈದೇವ್‌ ಉನಾದ್ಕಟ್‌ ಸೇರಿದಂತೆ 5 ಆಯ್ಕೆಗಳಿವೆ. ಅನುಭವದ ಮಾನದಂಡದಂತೆ ಉಮೇಶ್‌ ಯಾದವ್‌ ಮತ್ತು ಮೊಹಮ್ಮದ್‌ ಸಿರಾಜ್‌ಗೆ ಅವಕಾಶ ಜಾಸ್ತಿ. ಇನ್ನೋರ್ವ ವೇಗಿಯ ಅಗತ್ಯವಿದ್ದರೆ ಬ್ಯಾಟಿಂಗ್‌ ಕೂಡ ಮಾಡಬಲ್ಲ ಶಾರ್ದೂಲ್ ಠಾಕೂರ್‌ ಅವರನ್ನು ಪರಿಗಣಿಸಬಹುದು. ಆಗ 3ನೇ ಸ್ಪಿನ್ನರ್‌ಗೆ ಜಾಗ ಇರುವುದಿಲ್ಲ. ಇನ್ನು ಈ ಸರಣಿಯಲ್ಲಿ ಭಾರತದ ಕಾರ್ಯತಂತ್ರ ಏನಿರಬಹುದು ಎಂಬುದು. ಸೋಮವಾರದ ಟ್ರೋಫಿ ಬಿಡುಗಡೆ ವೇಳೆ “ನಾವು ಇಂಗ್ಲೆಂಡ್‌ನಂತೆ ಆಕ್ರಮಣಕಾರಿ ಆಟ ಆಡುತ್ತೇವೆ’ ಎಂಬುದಾಗಿ ನಾಯಕ ರಾಹುಲ್‌ ಹೇಳಿದ್ದಾರೆ. “ಆಡಿ’ದಂತೆ ಆಡಿ ತೋರಿಸುವರೇ ಎಂಬುದಷ್ಟೇ ಇಲ್ಲಿನ ಪ್ರಶ್ನೆ.

ಬಾಂಗ್ಲಾ ಬ್ಯಾಟಿಂಗ್‌ ಬಲಿಷ್ಠ: ಬಾಂಗ್ಲಾದೇಶದ ಬ್ಯಾಟಿಂಗ್‌ ಬಲಿಷ್ಠ ಎಂಬುದರಲ್ಲಿ ಎರಡು ಮಾತಿಲ್ಲ. ನಾಯಕ ಶಕಿಬ್‌ ಅಲ್‌ ಹಸನ್‌, ಮುಶ್ಫಿಕರ್‌ ರಹೀಂ ಮತ್ತು ಮೊಮಿನುಲ್‌ ಹಕ್‌ ಸೇರಿ 12,500ರಷ್ಟು ರನ್‌ ಪೇರಿಸಿದ್ದಾರೆ. ತವರಲ್ಲಿ ಇವರೆಲ್ಲರೂ ಅಪಾಯಕಾರಿಗಳು. ಬಾಂಗ್ಲಾದ ಬೌಲಿಂಗ್‌ ಘಾತಕವೇನಲ್ಲ. ಪೇಸರ್‌ಗಳಾದ ತಸ್ಕಿನ್‌ ಅಹ್ಮದ್‌, ಇಬಾದತ್‌ ಹುಸೇನ್‌, ಶೊರಿಫುಲ್ ಇಸ್ಲಾಮ್‌, ಸ್ಪಿನ್ನರ್‌ಗಳಾದ ಶಕಿಬ್‌ ಮತ್ತು ತೈಜುಲ್‌ ಇಸ್ಲಾಮ್‌ ಅವರ ಕಾಂಬಿನೇಶನ್‌ ಇಲ್ಲಿದೆ. ಇವರು ಭಾರತಕ್ಕೆ ಕಡಿವಾಣ ಹಾಕಬಲ್ಲರೇ?

ಸ್ಥಳ: ಚತ್ತೋಗ್ರಾಮ್‌
ಆರಂಭ: ಬೆ. 9.00
ಪ್ರಸಾರ: ಸೋನಿ ಸ್ಪೋರ್ಟ್ಸ್ ಟೆನ್‌ 1, ಟೆನ್‌ 5

Advertisement

Udayavani is now on Telegram. Click here to join our channel and stay updated with the latest news.

Next