Advertisement

ಟೆಸ್ಟ್‌ ಪಂದ್ಯ: ಭಾರತ ಗೆಲುವಿಗೆ ಬೇಕಿದೆ ನಾಲ್ಕೇ ವಿಕೆಟ್‌

11:25 PM Dec 17, 2022 | Team Udayavani |

ಚತ್ತೋಗ್ರಾಮ್‌: ಭಾರತ-ಬಾಂಗ್ಲಾದೇಶ ನಡುವಿನ ಮೊದಲ ಟೆಸ್ಟ್‌ ಪಂದ್ಯ ಅಂತಿಮ ದಿನಕ್ಕೆ ವಿಸ್ತರಿಸಲ್ಪಟ್ಟಿದೆ. ರಾಹುಲ್‌ ಪಡೆ ಗೆಲುವಿನ ಹಾದಿಯಲ್ಲಿ ಇನ್ನಷ್ಟು ಮುಂದೆ ಸಾಗಿದೆ.

Advertisement

ರವಿವಾರ ವಿಜಯ ದಿವಸವನ್ನು ಆಚರಿಸುವುದರಲ್ಲಿ ಅನುಮಾನ ಉಳಿದಿಲ್ಲ.ಗೆಲುವಿಗೆ 513 ರನ್ನುಗಳ ಕಠಿನ ಗುರಿ ಪಡೆದಿರುವ ಬಾಂಗ್ಲಾ, 4ನೇ ದಿನದ ಅಂತ್ಯಕ್ಕೆ 6 ವಿಕೆಟ್‌ ಕಳೆದುಕೊಂಡು 272 ರನ್‌ ಗಳಿಸಿದೆ. ಉಳಿದಿರುವುದು ನಾಲ್ಕೇ ವಿಕೆಟ್‌. 90 ಓವರ್‌ಗಳ ಆಟದಲ್ಲಿ ಈ 4 ವಿಕೆಟ್‌ಗಳನ್ನು ಉಳಿಸಿಕೊಳ್ಳುವುದಾಗಲಿ, ಗೆಲುವಿಗೆ ಇನ್ನೂ ಅಗತ್ಯವಿರುವ 241 ರನ್‌ ಪೇರಿಸುವುದಾಗಲಿ ಬಾಂಗ್ಲಾಕ್ಕೆ ಸುಲಭವಲ್ಲ.

ಸದ್ಯ ಅನುಭವಿ ಆಟಗಾರ, ನಾಯಕ ಶಕಿಬ್‌ ಅಲ್‌ ಹಸನ್‌ ಮತ್ತು ಏಕದಿನದಲ್ಲಿ ಭಾರತವನ್ನು ಕಾಡಿದ ಆಲ್‌ರೌಂಡರ್‌ ಮೆಹಿದಿ ಹಸನ್‌ ಮಿರಾಜ್‌ ಕ್ರೀಸ್‌ನಲ್ಲಿದ್ದಾರೆ. ಶಕಿಬ್‌ ಅಪಾಯಕಾರಿಯಾಗಿ ಗೋಚರಿಸಿದ್ದು, 69 ಎಸೆತಗಳಿಂದ 40 ರನ್‌ ಮಾಡಿದ್ದಾರೆ. 3 ಬೌಂಡರಿ ಜತೆಗೆ 2 ಸಿಕ್ಸರ್‌ ಕೂಡ ಬಾರಿಸಿದ್ದಾರೆ. ಆದರೆ ಮಿರಾಜ್‌ ಮಾತ್ರ ಆಕ್ರಮಣಕಾರಿ ಆಟವನ್ನು ಬದಿಗೊತ್ತಿ 40 ಎಸೆತಗಳಿಂದ 9 ರನ್‌ ಮಾಡಿ ವಿಕೆಟ್‌ ಉಳಿಸಿಕೊಳ್ಳುವ ಕಾಯಕದಲ್ಲಿ ತೊಡಗಿದ್ದಾರೆ. ದಿನದಾಟದ ಕೊನೆಯ 14 ಓವರ್‌ಗಳನ್ನು ಯಶಸ್ವಿಯಾಗಿ ಎದುರಿಸಿ ನಿಂತಿದ್ದಾರೆ. ಗೆಲುವಿಗೆ ಅಡ್ಡಿಯಾಗಿರುವ ಈ ಜೋಡಿಯನ್ನು ಸಾಧ್ಯವಾದಷ್ಟು ಬೇಗ ಮುರಿಯಬೇಕಿದೆ.

ಝಾಕಿರ್‌ ಸೆಂಚುರಿ
4ನೇ ದಿನದಾಟದ ಆಕರ್ಷಣೆಯೆಂದರೆ, ಬಾಂಗ್ಲಾದ ಎಡಗೈ ಆರಂಭಕಾರ ಝಾಕಿರ್‌ ಹಸನ್‌ ಚೊಚ್ಚಲ ಟೆಸ್ಟ್‌ ಪಂದ್ಯದಲ್ಲೇ ಬಾರಿಸಿದ ಶತಕ ಹಾಗೂ ನಜ್ಮುಲ್‌ ಹಸನ್‌ ಅವರೊಂದಿಗೆ ಮೊದಲ ವಿಕೆಟಿಗೆ ದಾಖಲಿಸಿದ 124 ರನ್‌ ಜತೆಯಾಟ. ಈ ಜೋಡಿ ಮೊದಲ ಅವಧಿಯನ್ನು ಸಂಪೂರ್ಣವಾಗಿ ಆಕ್ರಮಿಸಿಕೊಂಡಿತು. ಭಾರತದ ಬೌಲರ್ ವಿಕೆಟ್‌ ಕೀಳಲಾಗದೆ ಪರದಾಡಿದರು.

ಝಾಕಿರ್‌ ಹಸನ್‌ ಅವರಂತೂ 79ನೇ ಓವರ್‌ ತನಕ ಭಾರತದ ಬೌಲಿಂಗ್‌ ದಾಳಿಯನ್ನು ಮೆಟ್ಟಿ ನಿಂತರು. 224 ಎಸೆತಗಳನ್ನು ನಿಭಾಯಿಸಿ ಸರಿಯಾಗಿ 100 ರನ್‌ ಹೊಡೆದರು (12 ಬೌಂಡರಿ, 1 ಸಿಕ್ಸರ್‌). ನಜ್ಮುಲ್‌ ಹಸನ್‌ ಗಳಿಕೆ 156 ಎಸೆತಗಳಿಂದ 67 ರನ್‌ (7 ಬೌಂಡರಿ). ಈ ಜೋಡಿ 46.1 ಓವರ್‌ಗಳನ್ನು ನಿಭಾಯಿಸಿತು.

Advertisement

ನಜ್ಮುಲ್‌ ಅವರನ್ನು ಕೀಪರ್‌ ಪಂತ್‌ ಕೈಗೆ ಕ್ಯಾಚ್‌ ಕೊಡಿಸಿದ ಉಮೇಶ್‌ ಯಾದವ್‌ ಭಾರತಕ್ಕೆ ಮೊದಲ ಯಶಸ್ಸು ತಂದಿತ್ತರು. ಬಳಿಕ ಬೆನ್ನು ಬೆನ್ನಿಗೆ ವಿಕೆಟ್‌ ಉರುಳುತ್ತ ಹೋಯಿತು. ಯಾಸಿರ್‌ ಅಲಿ (5), ಲಿಟನ್‌ ದಾಸ್‌ (19), ರಹೀಂ (23), ನುರುಲ್‌ ಹಸನ್‌ (3) ಬೇಗನೇ ಪೆವಿಲಿಯನ್‌ ಸೇರಿಕೊಂಡರು.

ಉರುಳಿದ 6 ವಿಕೆಟ್‌ಗಳಲ್ಲಿ 5 ಸ್ಪಿನ್ನರ್‌ಗಳ ಪಾಲಾಯಿತು. 3 ವಿಕೆಟ್‌ ಉರುಳಿಸಿದ ಅಕ್ಷರ್‌ ಪಟೇಲ್‌ ಹೆಚ್ಚಿನ ಯಶಸ್ಸು ಪಡೆದರು.

ಸ್ಕೋರ್‌ ಪಟ್ಟಿ
ಭಾರತ ಪ್ರಥಮ ಇನ್ನಿಂಗ್ಸ್‌ 404
ಬಾಂಗ್ಲಾದೇಶ ಪ್ರಥಮ ಇನ್ನಿಂಗ್ಸ್‌ 150
ಭಾರತ ದ್ವಿತೀಯ ಇನ್ನಿಂಗ್ಸ್‌
2 ವಿಕೆಟಿಗೆ ಡಿಕ್ಲೇರ್‌ 258
ಬಾಂಗ್ಲಾದೇಶ ದ್ವಿತೀಯ ಇನ್ನಿಂಗ್ಸ್‌
(ಗೆಲುವಿನ ಗುರಿ 513 ರನ್‌)
ನಜ್ಮುಲ್‌ ಹುಸೇನ್‌ ಸಿ ಪಂತ್‌ ಬಿ ಉಮೇಶ್‌ 67
ಝಾಕಿರ್‌ ಹಸನ್‌ ಸಿ ಕೊಹ್ಲಿ ಬಿ ಅಶ್ವಿ‌ನ್‌ 100
ಯಾಸಿರ್‌ ಅಲಿ ಬಿ ಅಕ್ಷರ್‌ 5
ಲಿಟನ್‌ ದಾಸ್‌ ಸಿ ಉಮೇಶ್‌ ಬಿ ಕುಲದೀಪ್‌ 19
ಮುಶ್ಫಿಕರ್‌ ರಹೀಂ ಬಿ ಅಕ್ಷರ್‌ 23
ಶಕಿಬ್‌ ಅಲ್‌ ಹಸನ್‌ ಬ್ಯಾಟಿಂಗ್‌ 40
ನುರುಲ್‌ ಹಸನ್‌ ಸ್ಟಂಪ್ಡ್ ಪಂತ್‌ ಬಿ ಅಕ್ಷರ್‌ 3
ಮೆಹಿದಿ ಹಸನ್‌ ಮಿರಾಜ್‌ ಬ್ಯಾಟಿಂಗ್‌ 9
ಇತರ 6
ಒಟ್ಟು (6 ವಿಕೆಟಿಗೆ) 272
ಬೌಲಿಂಗ್‌:
ಮೊಹಮ್ಮದ್‌ ಸಿರಾಜ್‌ 15-3-46-0
ಉಮೇಶ್‌ ಯಾದವ್‌ 15-3-27-1
ಆರ್‌. ಅಶ್ವಿ‌ನ್‌ 27-3-75-1
ಅಕ್ಷರ್‌ ಪಟೇಲ್‌ 27-10-50-3
ಕುಲದೀಪ್‌ ಯಾದವ್‌ 18-2-69-1

Advertisement

Udayavani is now on Telegram. Click here to join our channel and stay updated with the latest news.

Next