Advertisement

ಟೆಸ್ಟ್‌ ಲ್ಯಾಬ್‌ ಕಾರ್ಯಾರಂಭ

05:43 PM Apr 20, 2020 | Suhan S |

ಗದಗ: ವಿವಿಧ ಸಾಧನೆ ಹಾಗೂ ಹೊಸತನಕ್ಕೆ ಹೆಸರುವಾಸಿಯಾಗಿರುವ ಇಲ್ಲಿನ ಗದಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಜಿಮ್ಸ್‌) ಇದೀಗ ಕೋವಿಡ್ 19 ಟೆಸ್ಟ್‌ ಲ್ಯಾಬ್‌ ಆರಂಭಿಸುವಲ್ಲಿ ಯಶಸ್ವಿಯಾಗಿದೆ. ಕ್ಷಯ ರೋಗ ಪತ್ತೆಗೆ ಬಳಕೆ ಮಾಡುವ ಟ್ರೂ ನೆಟ್‌ ಪಿಸಿಆರ್‌ ಯಂತ್ರವನ್ನು ಸಾಕಷ್ಟು ಸುಧಾರಣೆ ಮಾಡಿ, ಮಹಾಮಾರಿ ಕೋವಿಡ್ 19 ಪತ್ತೆಗೆ ಅಣಿಗೊಳಿಸಿರುವುದು ವೈದ್ಯಕೀಯ ಲೋಕವನ್ನು ಅಚ್ಚರಿಗೊಳಿಸಿದೆ.

Advertisement

ಮಹಾಮಾರಿ ಕೋವಿಡ್ 19ವಿರುದ್ಧ ಇಡೀ ವಿಶ್ವವೇ ಸೆಣಸುತ್ತಿದೆ. ಕೊರೊನಾ ಶಂಕಿತರ ಪರೀಕ್ಷೆಗೆ ಅಗತ್ಯವಿರುವ ಲ್ಯಾಬ್‌ಗಳ ಕೊರತೆಯಿಂದಾಗಿ ಅನೇಕ ಕಡೆ ಶಂಕಿತರ ಪ್ರಕರಣಗಳ ಗಂಟಲು ದ್ರಾವಣ ಹಾಗೂ ರಕ್ತದ ಮಾದರಿಗಳನ್ನು ಪ್ರಯೋಗಕ್ಕೆ ಒಳಪಡಿಸಲು ವಿಳಂಬವಾಗುತ್ತಿದ್ದು, ನಾನಾ ರೀತಿಯ ಸಮಸ್ಯೆಗಳು ಉಲ್ಬಣಿಸುತ್ತವೆ. ಈ ಸಮಸ್ಯೆಯಿಂದ ಮುಕ್ತಿ ಹೊಂದಲು ಜಿಮ್ಸ್‌ ನಡೆಸಿದ ಪ್ರಯತ್ನ ಯಶಸ್ವಿಯಾಗಿದ್ದು, ಇದೀಗ ಕೋವಿಡ್ 19ಮಾದರಿಗಳ ಟೆಸ್ಟಿಂಗ್‌ನಲ್ಲಿ ಸ್ವಾವಲಂಬನೆ ಕಂಡುಕೊಂಡಿದೆ.

ಸ್ವದೇಶಿ ಕಿಟ್‌ನಿಂದ ಕೋವಿಡ್ 19 ಪತ್ತೆ!: ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೋವಿಡ್ 19 ಶಂಕಿತರ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿವೆ. ಪರಿಣಾಮದಲ್ಲಿರುವ ನಾಲ್ಕಾರು ಕೋವಿಡ್ 19ಟೆಸ್ಟಿಂಗ್‌ ಲ್ಯಾಬ್‌ಗಳ ಮೇಲೆ ಕೆಲಸದ ಒತ್ತಡ ಹೆಚ್ಚುತ್ತಿದ್ದು, ಮಾದರಿಗಳ ಫಲಿತಾಂಶ ವಿಳಂಬವಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಕ್ಷಯ ರೋಗ ಪತ್ತೆಗೆ ಬಳಕೆ ಮಾಡಲಾಗುವ ಟ್ರೂ ನೆಟ್‌ ಪಿಸಿಆರ್‌ ಮಷಿನ್‌ನಲ್ಲಿ ಸಾಕಷ್ಟು ಸುಧಾರಣೆ ಮಾಡಿ, ಕೋವಿಡ್ 19 ಟೆಸ್ಟ್‌ಗೆ ಅಣಿಗೊಳಿಸಿದ್ದಾರೆ.

ಅದಕ್ಕಾಗಿ ದೆಹಲಿಯಿಂದ ಆಗಮಿಸಿದ್ದ ಇಬ್ಬರು ವಿಜ್ಞಾನಿಗಳ ನೇತೃತ್ವದಲ್ಲಿ ಜಿಮ್ಸ್‌ನ 10ಕ್ಕೂ ಹೆಚ್ಚು ವೈದ್ಯರು ಹಾಗೂ ತಂತ್ರಜ್ಞರು ಶ್ರಮಿಸಿದ್ದಾರೆ. ಟ್ರೂನೆಟ್‌ ಪಿಸಿಆರ್‌ನಲ್ಲಿ ಕೊರೊನಾ ಪತ್ತೆಗೆ ಒಳಪಡಿಸಿದ ಮಾದರಿಗಳು ಹಾಗೂ ಅದರ ವರದಿಯನ್ನು ಕೂಲಂಕುಷವಾಗಿ ಪರಿಶೀಲಿಸಿರುವ ದೆಹಲಿಯ ಐಎಂಸಿಆರ್‌, ಜಿಮ್ಸ್‌ನಲ್ಲಿ ಕೊರೊನಾ ಟೆಸ್ಟ್‌ ಲ್ಯಾಬ್‌ ಆರಂಭಿಸಲು ಅನುಮತಿ ನೀಡಿದೆ.

ದಿನಕ್ಕೆ 48 ಜನರ ಮಾದರಿ ಪರೀಕ್ಷೆ: ಕೋವಿಡ್‌-19 ಪ್ರಕಾರ ಶಂಕಿತರ ಲ್ಯಾಬ್‌ ಟೆಸ್ಟ್‌ ವರದಿ ಬರುವವರೆಗೆ ಕೋವಿಡ್ 19 ಚಿಕಿತ್ಸೆ ನೀಡುವಂತಿಲ್ಲ. ಹೀಗಾಗಿ ಸಕಾಲಕ್ಕೆ ಲ್ಯಾಬ್‌ ವರದಿ ಸಿಗದೇ, ಚಿಕಿತ್ಸೆಯೂ ವಿಳಂಬವಾಗುತ್ತಿತ್ತು. ಆದರೆ, ಇದಿಗ ಟ್ರೂ ನೆಟ್‌ ಪಿಸಿಆರ್‌ ಉಪಕರಣ ಪುಟ್ಟದಾಗಿದ್ದು, ಗಂಟೆಗೆ ಒಬ್ಬರ ಮಾದರಿ ಪರೀಕ್ಷಿಸಬಹುದಾಗಿದೆ. ಸದ್ಯ ಈ ರೀತಿಯ ಎರಡು ಉಪಕರಣಗಳಿದ್ದು, ದಿನಕ್ಕೆ 48 ಜನರ ಮಾದರಿಗಳನ್ನು ಪರೀಕ್ಷೆಗೊಳಪಡಿಸಬಹುದಾಗಿದೆ. ತ್ವರಿಗತಿಯಲ್ಲಿ ಕೊರೊನಾ ಟೆಸ್ಟ್‌ ವರದಿ ಕೈಗೆ ಸಿಗಲಿದೆ. ಇದರಿಂದ ರೋಗದ ಸ್ವರೂಪ ತಿಳಿದು, ವೈದ್ಯರು ಚಿಕಿತ್ಸೆ ಕೈಗೊಳ್ಳಲು ಅನುಕೂಲವಾಗಲಿದೆ ಎನ್ನುತ್ತಾರೆ ಜಿಮ್ಸ್‌ ವೈದ್ಯರು.

Advertisement

ಜಿಮ್ಸ್‌ನಲ್ಲಿ ಎಲ್ಲ ರೀತಿಯ ಸೌಲಭ್ಯವಿದ್ದರೂ, ಕೋವಿಡ್ 19ಲ್ಯಾಬ್‌ ಕೊರತೆ ಕಾಡುತ್ತಿತ್ತು. ಇದೀಗ ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು ಹಾಗೂ ಜಿಲ್ಲಾಡಳಿತದ ಪ್ರಯತ್ನದಿಂದ ಟೆಸ್ಟ್‌ ಲ್ಯಾಬ್‌ ಆರಂಭವಾಗಿದ್ದು, ಈ ಭಾಗದ ಜನರನ್ನು ಕೋವಿಡ್ 19ಮುಕ್ತರನ್ನಾಗಿಸುವುದು ನಮ್ಮ ಪ್ರಯತ್ನ. ಈಗಗಾಲೇ ಪರೀಕ್ಷಾರ್ಥವಾಗಿ ಪ್ರಯೋಗಾಲಯ ಕಾರ್ಯನಿರ್ವಹಿಸುತ್ತಿದ್ದು, ರವಿವಾರ ರಾತ್ರಿಯಿಂದ ಬರುವ ಪ್ರಕರಣಗಳ ವರದಿಗಳನ್ನು ಇಲ್ಲೇ ತಯಾರಿಸಲಾಗುತ್ತದೆ. -ಡಾ.ಪಿ.ಎಸ್‌.ಭೂಸರಡ್ಡಿ, ಜಿಮ್ಸ್‌ ನಿರ್ದೇಶಕ

Advertisement

Udayavani is now on Telegram. Click here to join our channel and stay updated with the latest news.

Next