ಕಾರವಾರ: ಜಿಲ್ಲೆಯ ಐವರು ಕೋವಿಡ್ -19 ಸೋಂಕಿತರು ಗುಣಮುಖರಾಗಿದ್ದು, ಇಲ್ಲಿನ ನೌಕಾನೆಲೆ ಆಸ್ಪತ್ರೆ ಐಎನ್ ಎಸ್ ಪತಂಜಲಿಯಿಂದ ಬುಧವಾರ ಬಿಡುಗಡೆಯಾಗಿದ್ದಾರೆ.
ಈವರೆಗೆ ಪತ್ತೆಯಾದ ಜಿಲ್ಲೆಯ ಎಲ್ಲ 11 ಸೋಂಕಿತರೂ ಭಟ್ಕಳದವರೇ ಆಗಿದ್ದಾರೆ. ಮೊದಲಿಗೆ ಓರ್ವ ಮಂಗಳೂರಿನ ವೆನ್ ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖನಾಗಿದ್ದರೆ, ವಾರದ ಹಿಂದೆ ಕಾರವಾರದ ನೌಕಾನೆಲೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಇಬ್ಬರು ಮನೆಗೆ ಮರಳಿದ್ದರು. ಇದೀಗ ಐವರು ಗುಣಮುಖರಾಗಿದ್ದು, ಹೋಂ ಕ್ವಾರಂಟೈನ್‌ನಲ್ಲಿರಲಿದ್ದಾರೆ.
ಇನ್ನುಳಿದ ಮೂವರು ಸೋಂಕಿತರ ಪೈಕಿ ಇಬ್ಬರು ಕಾರವಾರದ ನೌಕಾನೆಲೆ ಆಸ್ಪತ್ರೆ “ಐಎನ್‌ಎಸ್ ಪತಂಜಲಿ’ಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಓರ್ವ ಮಹಿಳೆಗೆ ಉಡುಪಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ. ಈ ಮೂವರ ಆರೋಗ್ಯದಲ್ಲಿ ಚೇತರಿಕೆ ಇದೆ ಎಂದು ಜಿಲ್ಲಾಧಿಕಾರಿ ಡಾ| ಹರೀಶ್ ಕುಮಾರ್ ತಿಳಿಸಿದ್ದಾರೆ.
ಲ್ಯಾಬ್‌ಗ ಒಪ್ಪಿಗೆ: ಕಾರವಾರ ಮೆಡಿಕಲ್ ಕಾಲೇಜಿನಲ್ಲಿ ಕೋವಿಡ್ -19 ಟೆಸ್ಟಿಂಗ್ ಲ್ಯಾಬ್ ಸ್ಥಾಪನೆಗೆ ಸರ್ಕಾರ ಒಪ್ಪಿಗೆ ನೀಡಿದೆ. ಬಯೋ ಸೇಫ್ ಲೆವೆಲ್ -2 ಲ್ಯಾಬ್ ಸ್ಥಾಪನೆಗೆ ಸಕಲ ಸಿದ್ಧತೆ ನಡೆದಿವೆ. ಕೋವಿಡ್ -19 ಟೆಸ್ಟ್ ಲ್ಯಾಬ್ ಇಲ್ಲೇ ಆದಲ್ಲಿ ಜ್ವರ, ಕೆಮ್ಮು, ನೆಗಡಿ ಇರುವ ಸಂಶಯಿತ ರೋಗಿಗಳ ಗಂಟಲು ದ್ರವ ಪರೀಕ್ಷೆಗೆ ಅನುಕೂಲವಾಗಲಿದೆ. ಇದು ಜಿಲ್ಲೆಯಲ್ಲಿ ಕೋವಿಡ್ -19 ಜಾಗೃತಿ ಮತ್ತು ನಿಯಂತ್ರಣಕ್ಕೆ ಅನುಕೂಲವಾಗಲಿದೆ ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ.
ಕಚೇರಿಗಳು ಪ್ರಾರಂಭ: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ವೈದ್ಯಕೀಯ ಇಲಾಖೆ, ಒಳಾಡಳಿತ ಇಲಾಖೆ, ಕಂದಾಯ ಇಲಾಖೆ, ಅರಣ್ಯ, ಖಜಾನೆ, ನಗರಾಭಿವೃದ್ಧಿ, ಆಹಾರ, ವಾರ್ತಾ ಇಲಾಖೆ, ಸಾರಿಗೆ ಇಲಾಖೆ, ಇಂಧನ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ, ಪಶುಸಂಗೋಪನಾ, ಮೀನುಗಾರಿಕಾ ಇಲಾಖೆ ಅಧಿಕಾರಿ-ಸಿಬ್ಬಂದಿ ಕೆಲಸಕ್ಕೆ ಹಾಜರಾಗಬೇಕು ಎಂದು ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿ ವಿಜಯಭಾಸ್ಕರ್ ಆದೇಶ ಹೊರಡಿಸಿದ್ದಾರೆ.