Advertisement

Test; ಸಿಡ್ನಿ ಸಂಘರ್ಷಕ್ಕೆ ಭಾರತ ಸಿದ್ಧ :ರೋಹಿತ್‌-ಗಂಭೀರ್‌ ಮನಸ್ತಾಪ ತೀವ್ರ?

11:20 PM Jan 02, 2025 | Team Udayavani |

ಸಿಡ್ನಿ: ಅತ್ಯಂತ ಮಹತ್ವದ್ದಾಗಿರುವ ಭಾರತ-ಆಸ್ಟ್ರೇಲಿಯ ನಡುವಣ 5ನೇ ಟೆಸ್ಟ್‌ ಪಂದ್ಯ ಸಿಡ್ನಿಯಲ್ಲಿ ಶುಕ್ರವಾರ ದಿಂದ ಆರಂಭವಾಗಲಿದೆ. ಟೆಸ್ಟ್‌ ವಿಶ್ವ ಚಾಂಪಿಯನ್‌ಶಿಪ್‌ ಫೈನಲ್‌ಗೇರುವುದು ದೂರದ ಮಾತಾದರೂ, ಸಿಡ್ನಿಯಲ್ಲಿ ಗೆದ್ದರೆ ಫೈನಲ್‌ಗೇರುವ ಭರವಸೆಯೊಂದು ಉಳಿದುಕೊಳ್ಳಲಿದೆ. ಈ ಕಾರಣದಿಂದ ಮತ್ತು ತಂಡದ ಗೌರವವನ್ನು ಕಾಪಾಡಿಕೊಳ್ಳಲು ಭಾರತಕ್ಕೆ ಗೆಲ್ಲಲೇಬೇಕಾದ ಅನಿವಾರ್ಯತೆಯಿದೆ.

Advertisement

ಈ ಮಧ್ಯೆ ನಾಯಕ ರೋಹಿತ್‌ ಶರ್ಮ ಮತ್ತು ಕೋಚ್‌ ಗೌತಮ್‌ ಗಂಭೀರ್‌ ನಡುವೆ ತೀವ್ರ ಜಟಾಪಟಿ ನಡೆದಿದೆ. ಇದರ ಪರಿಣಾಮ ರೋಹಿತ್‌ ಶರ್ಮ ಅವರಿಗೆ ಈ ಪಂದ್ಯದಲ್ಲಿ “ವಿಶ್ರಾಂತಿ’ ನೀಡಲಾಗಿದೆ ಎಂದು ಮೂಲಗಳು ಹೇಳಿವೆ. ಇನ್ನೊಂದು ಕಡೆ ಅವರನ್ನು ಕೈಬಿಡಲಾಗಿದೆ ಎನ್ನಲಾಗಿದ್ದು, ಇವರ ಗೈರುಹಾಜರಿಯಲ್ಲಿ ಜಸ್‌ಪ್ರೀತ್‌ ಬುಮ್ರಾ ತಂಡವನ್ನು ಮುನ್ನಡೆಸುವುದು ಬಹುತೇಕ ಖಾತ್ರಿ. ಒಂದು ವೇಳೆ ರೋಹಿತ್‌ರನ್ನು ಕೈಬಿಟ್ಟಿದ್ದೇ ಹೌದಾದರೆ, ಸರಣಿ ಮಧ್ಯದಲ್ಲಿ ಕೈಬಿಡಲ್ಪಟ್ಟ ಭಾರತದ ಮೊದಲ ನಾಯಕರಾಗಲಿದ್ದಾರೆ.

ಇನ್ನೊಂದು ಕಡೆ ಆಸ್ಟ್ರೇಲಿಯ ತಂಡ ಈಗಾಗಲೇ ಸರಣಿಯಲ್ಲಿ 2-1ರಿಂದ ಮುನ್ನಡೆ ಸಾಧಿಸಿರುವುದರಿಂದ ನಿರಾಳವಾ ಗಿದೆ. ಆ ತಂಡದ ತನ್ನ ಆಡುವ ಬಳಗವನ್ನು ಅಂತಿಮಗೊಳಿಸಿದೆ. ಕಳಪೆ ಲಯದಲ್ಲಿರುವ ಮಿಚೆಲ್‌ ಮಾರ್ಷ್‌ ಅವರನ್ನು ಕೈಬಿಟ್ಟು ಇನ್ನೊಬ್ಬ ಆಲ್‌ರೌಂಡರ್‌ ಬ್ಯೂ ವೆಬ್‌ಸ್ಟರ್‌ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ.

ಭಾರತ ತಂಡದೊಳಗೆ ತೀವ್ರ ಸಂಘರ್ಷಗಳಿರುವುದು ಮೂಲಗಳಿಂದ ಖಚಿತವಾಗಿದೆ. ಒಂದು ಕಡೆ ಸತತ ಸೋಲು, ಮತ್ತೂಂದು ಕಡೆ ಹಿರಿಯ ಆಟಗಾರರ ಕಳಪೆ ಪ್ರದರ್ಶನ ಎಲ್ಲರಿಂದಲೂ ಟೀಕೆಗೆ ಕಾರಣವಾಗಿದೆ. ಬುಮ್ರಾ ನಾಯಕತ್ವದಲ್ಲಿ ಪರ್ತ್‌ ಟೆಸ್ಟ್‌ ಗೆದ್ದ ಭಾರತ, 5ನೇ ಮತ್ತು ಅಂತಿಮ ಟೆಸ್ಟ್‌ ಅನ್ನೂ ಅವರ ನೇತೃತ್ವದಲ್ಲೇ ಆಡುವ ಸ್ಥಿತಿ ಎದುರಾಗಿದೆ. ಈ ಬಗ್ಗೆ ಶುಕ್ರವಾರ ಬೆಳಗ್ಗೆಯೇ ಖಚಿತ ಸುದ್ದಿ ಹೊರಬೀಳಬೇಕಾಗಿದೆ.
ಅಡಿಲೇಡ್‌, ಮೆಲ್ಬರ್ನ್ ಟೆಸ್ಟ್‌ ಗೆದ್ದಿರುವ ಆಸ್ಟ್ರೇಲಿಯವೀಗ 2-1ರಿಂದ ಮುನ್ನಡೆ ಸಾಧಿಸಿದೆ. ಭಾರತ ಈ ಪಂದ್ಯವನ್ನು ಗೆದ್ದರೆ ಸರಣಿ ಸಮಬಲಗೊಳ್ಳಲಿದೆ, ಆಗಲೂ ಬಾರ್ಡರ್‌-ಗಾವಸ್ಕರ್‌ ಸರಣಿಯನ್ನು ಉಳಿಸಿಕೊಳ್ಳಲಿದೆ.

ಸಿಡ್ನಿ ಸವಾಲು ಸುಲಭದ್ದಲ್ಲ
ಆಸ್ಟ್ರೇಲಿಯವೀಗ ಭಾರತದ ದೌರ್ಬಲ್ಯ ವನ್ನು ಸಂಪೂರ್ಣವಾಗಿ ಅರಿತು ಯಶಸ್ವಿ ಕಾರ್ಯತಂತ್ರ ರೂಪಿಸುತ್ತಿರುವ ಕಾರಣ ಭಾರತಕ್ಕೆ ಸಿಡ್ನಿ ಸವಾಲು ಖಂಡಿತ ಸುಲಭದ್ದಲ್ಲ. ಸೂಕ್ತ ಬ್ಯಾಟಿಂಗ್‌ ಸರದಿ ಹಾಗೂ ಬೌಲಿಂಗ್‌ ಸಂಯೋಜನೆ ರೂಪಿಸಲು ಎಡವುತ್ತಲೇ ಇದೆ. ಸಿಡ್ನಿಯಲ್ಲೂ ಇದು ಕಾಡಬಹುದು.
ರೋಹಿತ್‌ ಬದಲು ಗಿಲ್‌ ಆಡುವ ಬಳಗಕ್ಕೆ ಮರಳುವ ಸಾಧ್ಯತೆಗಳಿವೆ. 2024ರ ಟೆಸ್ಟ್‌ನಲ್ಲಿ 866 ರನ್‌ ಗಳಿಸಿದ ಹಿರಿಮೆ ಇವರದು. ಆದರೆ ಆಸ್ಟ್ರೇಲಿಯದಲ್ಲಿ ಸಿಕ್ಕಿದ ಅವಕಾಶವನ್ನು ಬಾಚಿಕೊಳ್ಳಲಿಲ್ಲ ಎಂಬುದು ಅಷ್ಟೇ ಸತ್ಯ. ಗಿಲ್‌ ಅವರಿಗಾಗಿ ಯಾರನ್ನು ಬಿಡುವುದು ಎಂಬುದು ದೊಡ್ಡ ಪ್ರಶ್ನೆ.

Advertisement

ರೋಹಿತ್‌-ಗಂಭೀರ್‌ ಮನಸ್ತಾಪ ತೀವ್ರ?
ಮಂಗಳವಾರವಷ್ಟೇ ಕೋಚ್‌ ಗಂಭೀರ್‌ ಕಳಪೆ ಪ್ರದರ್ಶನ ನೀಡಿದ ಭಾರತೀಯ ಆಟಗಾರರನ್ನು ಕೈಬಿಡುವ ಎಚ್ಚರಿಕೆ ನೀಡಿದ್ದಾರೆ ಎಂಬ ಸುದ್ದಿಗಳು ಕೇಳಿ ಬಂದಿದ್ದವು. ಅದರ ಬೆನ್ನಲ್ಲೇ ನಾಯಕ ರೋಹಿತ್‌ ಮತ್ತು ಗಂಭೀರ್‌ ನಡುವೆ ತೀವ್ರ ಮನಸ್ತಾಪವಿರುವುದು ಖಚಿತವಾಗಿದೆ. ಪಂದ್ಯಪೂರ್ವ ಪತ್ರಿಕಾಗೋಷ್ಠಿಗೆ ಮಾಮೂಲಿಯಾಗಿ ನಾಯಕ ಬರುತ್ತಾರೆ. ಆದರೆ ರೋಹಿತ್‌ ಗೈರಾಗಿ ಗಂಭೀರ್‌ ಮಾತ್ರ ಬಂದಿದ್ದು ಅಚ್ಚರಿ ಮೂಡಿಸಿತು.
ಗೋಷ್ಠಿಯಲ್ಲಿ ಮಾತನಾಡಿದ ಗಂಭೀರ್‌, ರೋಹಿತ್‌ ಸ್ಥಾನದ ಬಗ್ಗೆ ಖಾತ್ರಿಯಾಗಿ ಏನೂ ಹೇಳಲಿಲ್ಲ. ರೋಹಿತ್‌ ಆಡುತ್ತಾರಾ ಎಂದು ಕೇಳಿದ ಪ್ರಶ್ನೆಗೆ, ಅವರದ್ದು ಯಾವುದೇ ಸಮಸ್ಯೆ ಯಿಲ್ಲ. ತಂಡದ 11ರ ಬಳಗದ ಬಗ್ಗೆ ಅಂಕಣ ನೋಡಿ ನಿರ್ಧರಿಸಲಾಗುವುದು ಎಂಬ ವಿಚಿತ್ರ ಉತ್ತರವನ್ನು ಗಂಭೀರ್‌ ನೀಡಿದರು! ಅದರ ಬೆನ್ನಲ್ಲೇ ರೋಹಿತ್‌ರನ್ನು ಕೈಬಿಡಲಾಗಿದೆ, ಸಿಡ್ನಿ ಟೆಸ್ಟ್‌ ನಿಂದ ವಿಶ್ರಾಂತಿ ನೀಡಲಾಗಿದೆ, ಸ್ವತಃ ರೋಹಿತ್‌ ತಾವೇ ಪಂದ್ಯದಿಂದ ಹೊರಗುಳಿ ದಿದ್ದಾರೆಂದು ಹಲವು ಪ್ರಮುಖ ಮಾಧ್ಯ ಮಗಳು ಖಚಿತವಾಗಿ ವರದಿ ಮಾಡಿ ದವು. ಆದರೆ ತಂಡದ ಮೂಲಗಳು ಯಾವುದನ್ನೂ ಖಚಿತಪಡಿಸಿಲ್ಲ.

ಸಿಡ್ನಿ ಟೆಸ್ಟ್‌ ಗೆ ಮಳೆ ಸಾಧ್ಯತೆ
ಭಾರತ ಮತ್ತು ಆಸ್ಟ್ರೇಲಿಯ ನಡುವಣ ಸಿಡ್ನಿ ಟೆಸ್ಟ್‌ ಪಂದ್ಯಕ್ಕೆ ಮಳೆ ತೊಂದರೆ ನೀಡುವ ಸಾಧ್ಯತೆಯಿದೆ. ಪಂದ್ಯದ ಮೊದಲ ಮೂರು ದಿನ ಮಳೆಯಿಂದ ಆಟಕ್ಕೆ ಅಡಚಣೆಯಾಗಲಿದೆ ಆಸ್ಟ್ರೇಲಿಯ ಸರಕಾರದ ಹವಾಮಾನ ಇಲಾಖೆಯ ಪ್ರಕಟನೆ ತಿಳಿಸಿದೆ.

ಸಂಭಾವ್ಯ ತಂಡಗಳು
ಭಾರತ: ರೋಹಿತ್‌ ಶರ್ಮ, ಜೈಸ್ವಾಲ್‌, ಕೆಎಲ್‌ ರಾಹುಲ್‌, ಶುಭ ಮನ್‌ ಗಿಲ್‌, ಕೊಹ್ಲಿ, ರಿಷಭ್‌ ಪಂತ್‌/ಧ್ರುವ್‌ ಜುರೆಲ್‌, ರವೀಂದ್ರ ಜಡೇಜ, ನಿತೀಶ್‌ ಕುಮಾರ್‌ ರೆಡ್ಡಿ, ಹರ್ಷಿತ್‌ ರಾಣ/ಪ್ರಸಿದ್ಧ್ ಕೃಷ್ಣ, ಬುಮ್ರಾ, ಸಿರಾಜ್‌, ವಾಷಿಂಗ್ಟನ್‌ ಸುಂದರ್‌.

ಆಸ್ಟ್ರೇಲಿಯ: ಉಸ್ಮಾನ್‌ ಖ್ವಾಜಾ, ಸ್ಯಾಮ್‌ ಕೋನ್‌ಸ್ಟಾಸ್‌, ಮಾರ್ನಸ್‌ ಲಬುಶೇನ್‌, ಸ್ಟೀವ್‌ ಸ್ಮಿತ್‌, ಟ್ರ್ಯಾವಿಸ್‌ ಹೆಡ್‌, ವೆಬ್‌ಸ್ಟರ್‌, ಅಲೆಕ್ಸ್‌ ಕ್ಯಾರಿ, ಪ್ಯಾಟ್‌ ಕಮಿನ್ಸ್‌ (ನಾಯಕ), ಮಿಚೆಲ್‌ ಸ್ಟಾರ್ಕ್‌, ನಥನ್‌ ಲಿಯೋನ್‌, ಸ್ಕಾಟ್‌ ಬೋಲ್ಯಾಂಡ್‌.

ಮುಖಾಮುಖಿ
ಒಟ್ಟು ಪಂದ್ಯ: 111
ಭಾರತ ಜಯ:33
ಆಸ್ಟ್ರೇಲಿಯ ಜಯ:47
ಟೈ:1
ಡ್ರಾ:30

ಆರಂಭ: ಬೆಳಗ್ಗೆ 5.00
ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್

ಸಿಡ್ನಿಯಲ್ಲಿ ಭಾರತ
ಟೆಸ್ಟ್‌  : 13
ಜಯ: 01
ಸೋಲು: 05
ಡ್ರಾ: 07

Advertisement

Udayavani is now on Telegram. Click here to join our channel and stay updated with the latest news.

Next