ದುಬಾೖ: ಆ್ಯಶಸ್ ಸರಣಿಯಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶಿಸುತ್ತಿರುವ ಆಸ್ಟ್ರೇಲಿಯದ ವನ್‌ಡೌನ್ ಬ್ಯಾಟ್ಸ್‌ಮನ್ ಮಾರ್ನಸ್ ಲಬುಶೇನ್ ಮೊದಲ ಬಾರಿಗೆ ಟೆಸ್ಟ್ ಕ್ರಿಕೆಟಿನ ನಂ.1 ಬ್ಯಾಟ್ಸ್‌ಮನ್ ಆಗಿ ಮೂಡಿಬಂದಿದ್ದಾರೆ.
ಇಲ್ಲಿಯ ತನಕ ಈ ಸ್ಥಾನದಲ್ಲಿದ್ದ ಎದುರಾಳಿ ಇಂಗ್ಲೆಂಡ್ ತಂಡದ ನಾಯಕ ಜೋ ರೂಟ್ ದ್ವಿತೀಯ ಸ್ಥಾನಿಯಾಗಿದ್ದಾರೆ.
ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ 6ರಿಂದ 7ನೇ ಸ್ಥಾನಕ್ಕೆ ಕುಸಿದರೆ, ರೋಹಿತ್ ಶರ್ಮ 5ನೇ ಸ್ಥಾನ ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಕೊಹ್ಲಿ ನ್ಯೂಜಿಲ್ಯಾಂಡ್ ಎದುರಿನ ಸರಣಿಯಲ್ಲಿ ಒಂದೇ ಟೆಸ್ಟ್ ಆಡಿದ್ದರು. ಸದ್ಯ 756 ಅಂಕ ಹೊಂದಿದ್ದಾರೆ.
ಆ್ಯಶಸ್ ಸರಣಿಗೂ ಮುನ್ನ ಲಬುಶೇನ್ 4ನೇ ಸ್ಥಾನದಲ್ಲಿದ್ದರು. ಬ್ರಿಸ್ಬೇನ್ ಟೆಸ್ಟ್ ಬಳಿಕ ಎರಡಕ್ಕೇರಿದರು. ಅಡಿಲೇಡ್ ಟೆಸ್ಟ್ ಅನಂತರ ನಂ.1 ಸ್ಥಾನಕ್ಕೆ ಲಗ್ಗೆ ಹಾಕಿದರು.
ಇದನ್ನೂ ಓದಿ:ಡೀಮ್ಡ್ ಫಾರೆಸ್ಟ್ ಅವೈಜ್ಞಾನಿಕ : ಆರ್. ಅಶೋಕ್
ಸರಣಿಯ 3 ಇನ್ನಿಂಗ್ಸ್ ಗಳಲ್ಲಿ ಲಬುಶೇನ್ ಕ್ರಮವಾಗಿ 74, 103 ಮತ್ತು 51 ರನ್ ಬಾರಿಸಿದ್ದಾರೆ. ಬೌಲಿಂಗ್ ರ್‍ಯಾಂಕಿಂಗ್‌ನಲ್ಲಿ ಆಸ್ಟ್ರೇಲಿಯದ ಕಪ್ತಾನ ಪ್ಯಾಟ್ ಕಮಿನ್ಸ್ ನಂ.1 ಸ್ಥಾನ ಕಾಯ್ದುಕೊಂಡಿದ್ದಾರೆ.
ಆರ್. ಅಶ್ವಿನ್ ದ್ವಿತೀಯ ಸ್ಥಾನದಲ್ಲಿ ಉಳಿದಿದ್ದಾರೆ. ಮಿಚೆಲ್ ಸ್ಟಾರ್ಕ್ ಟಾಪ್-10 ಯಾದಿಗೆ ಮರಳುವಲ್ಲಿ ಯಶಸ್ವಿಯಾಗಿದ್ದಾರೆ (9).