ಬೆಂಗಳೂರು: ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಮೂರು ವರ್ಷದ ಎಲ್‌ಎಲ್‌ಬಿ ಕೋರ್ಸ್‌ಗೆ (ಕಾನೂನು ಪದವಿ) ತೃತೀಯ ಲಿಂಗಿ ವಿದ್ಯಾರ್ಥಿಯು ಅರ್ಹವಾಗಿದ್ದಲ್ಲಿ ಪ್ರವೇಶಾವಕಾಶ ಕಲ್ಪಿಸುವಂತೆ ಬೆಂಗಳೂರಿನ ಭಾರತೀಯ ವಿಶ್ವವಿದ್ಯಾಲಯದ ರಾಷ್ಟ್ರೀಯ ಕಾನೂನು ಶಾಲೆ (ಎನ್‌ಎಲ್‌ಎಸ್‌ಐಯು)ಗೆ ಹೈಕೋರ್ಟ್ ಮಧ್ಯಂತರ ಆದೇಶ ನೀಡಿದೆ.
ತಮಗೆ ಕಾನೂನು ಪದವಿ ಪ್ರವೇಶ ನಿರಾಕರಿಸಿರುವ ಎನ್‌ಎಲ್‌ಎಸ್‌ಐಯು ಕ್ರಮ ಪ್ರಶ್ನಿಸಿ ಲೈಂಗಿಕ ಅಲ್ಪಸಂಖ್ಯಾತ ಅಭ್ಯರ್ಥಿ ಮುಗಿಲ್ ಅನ್ಬು ವಸಂತ್ ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅಶೋಕ್ ಎಸ್. ಕಿಣಗಿ ಅವರ ನೇತೃತ್ವದ ಏಕಸದಸ್ಯ ನ್ಯಾಯಪೀಠ ಈ ಮಧ್ಯಂತರ ಆದೇಶ ನೀಡಿತು. ಅಲ್ಲದೇ ಅರ್ಜಿದಾರರ ಪ್ರವೇಶವು ಅರ್ಜಿಯ ಅಂತಿಮ ಆದೇಶಕ್ಕೆ ಒಳಪಟ್ಟಿರುತ್ತದೆ ಎಂದು ಸ್ಪಷ್ಟಪಡಿಸಿದೆ.
ಅರ್ಜಿದಾರರು ಮತ್ತು ಇತರೆ ತೃತೀಯ ಲಿಂಗಿಗಳ ಹಕ್ಕು ಸಂರಕ್ಷಿಸುವ ನಿಟ್ಟಿನಲ್ಲಿ ಸಕಾರಾತ್ಮಕ ಕ್ರಮಕೈಗೊಳ್ಳುವುದು ಪ್ರತಿವಾದಿಗಳ ಸಾಂವಿಧಾನಿಕವಾಗಿ ಹೊಣೆಗಾರಿಕೆಯಾಗಿದೆ. ಈ ವಿಚಾರದಲ್ಲಿ ಪ್ರತಿವಾದಿಗಳು ತಮ್ಮ ಹೊಣೆಗಾರಿಕೆ ನಿಭಾಯಿಸುವಲ್ಲಿ ವಿಫಲರಾಗಿದ್ದಾರೆ ಎಂದು ನ್ಯಾಯಾಲಯವು ಆದೇಶದಲ್ಲಿ ಹೇಳಿದೆ.
ಪ್ರಸಕ್ತ ಶೈಕ್ಷಣಿಕ ಸಾಲಿನ ಮೂರು ವರ್ಷದ ಕಾನೂನು ಪದವಿ ಪ್ರವೇಶಾತಿಯಲ್ಲಿ ಲೈಂಗಿಕ ಅಲ್ಪಸಂಖ್ಯಾತರಿಗೆ (ತೃತೀಯ ಲಿಂಗಿಗಳಿಗೆ) ಮೀಸಲಾತಿ ಕಲ್ಪಿಸದಿರಲು ತನ್ನ ಕಾರ್ಯಕಾರಿ ಮಂಡಳಿ ನಿರ್ಧರಿಸಿದೆ ಎಂದು ಎನ್‌ಎಲ್‌ಎಸ್‌ಐಯು ಆಕ್ಷೇಪಿಸಿತ್ತು.
ಕರ್ನಾಟಕ ರಾಜ್ಯ ತೃತೀಯ ಲಿಂಗಿಗಳ ನೀತಿ 2017ಅನ್ನು ಜಾರಿಗೊಳಿಸಲು ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಬೇಕು. ಆ ಮೂಲಕ ಅರ್ಜಿದಾರರು ಸೇರಿದಂತೆ ತೃತೀಯ ಲಿಂಗಿಗಳಿಗೆ ವಿಶ್ವವಿದ್ಯಾಲಯದಲ್ಲಿ ಮೀಸಲಾತಿ ಕಲ್ಪಿಸಬೇಕು. ಅರ್ಜಿದಾರರಿಗೆ ಪ್ರವೇಶಾತಿ ನಿರಾಕರಿಸಿದ್ದ ಎನ್‌ಎಲ್‌ಎಸ್‌ಐಯು ನಿರ್ಧಾರವನ್ನು ವಜಾ ಮಾಡುವಂತೆ ಅರ್ಜಿದಾರರು ಕೋರಿದ್ದರು.