ಲಕ್ನೋ:ಒಂದು ವೇಳೆ ತಾವು ಏನಾದರು ದಾಳಿ ಮಾಡಿದರೆ ಯಾವುದೇ ಪಾತಾಳದಲ್ಲಿ ಅಡಗಿದ್ದರೂ ಮೋದಿ ಬಿಡುವುದಿಲ್ಲ, ತಕ್ಕ ಪಾಠ ಕಲಿಸದೆ ಬಿಡುವುದಿಲ್ಲ ಎಂಬುದು ಉಗ್ರರಿಗೆ ಮನವರಿಕೆಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಉತ್ತರಪ್ರದೇಶದ ಅಮ್ರೋಹಾದಲ್ಲಿ ಶುಕ್ರವಾರ ಚುನಾವಣಾ ಪ್ರಚಾರ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್ ಮತ್ತು ಬಿಎಸ್ಪಿ, ಎಸ್ಪಿ ಮೈತ್ರಿ ವಿರುದ್ಧ ವಾಗ್ದಾಳಿ ನಡೆಸಿದರು. ಈ ಪಕ್ಷಗಳ ಮೃದು ಧೋರಣೆಯಿಂದಾಗಿಯೇ ಉಗ್ರರು ಅಟ್ಟಹಾಸ ಮೆರೆಯಲು ಕಾರಣವಾಗಿತ್ತು ಎಂದು ಆರೋಪಿಸಿದರು.
ಈ ಪಕ್ಷಗಳು ಮೃದು ಧೋರಣೆ ಅಳವಡಿಸಿಕೊಂಡಿದ್ದರಿಂದ ಕೇವಲ ಭಯೋತ್ಪಾದಕರಿಗೆ ಮಾತ್ರ ಲಾಭವಾಯಿತು. ಆದರೆ ನಿಮ್ಮ ಜೀವನ ಮತ್ತು ಭವಿಷ್ಯವನ್ನು ಅಪಾಯದಲ್ಲಿರಿಸಿದರು. ಇದಕ್ಕೆ ಕಾರಣ ಬುವಾ ಮತ್ತು ಬಬುವಾ (ಸಮಾಜವಾದಿ ಪಕ್ಷದ ಅಖಿಲೇಶ್ ಮತ್ತು ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ) ವೋಟ್ ಬ್ಯಾಂಕ್ ರಾಜಕೀಯ. ಇದರಿಂದಾಗಿ ಉಗ್ರರು ದಾಳಿ ನಡೆಸಲು ಮುಕ್ತ ಅವಕಾಶ ನೀಡಿದಂತಾಗಿತ್ತು ಎಂದು ಮೋದಿ ದೂರಿದರು.
ಕಳೆದ ಐದು ವರ್ಷಗಳ ಆಡಳಿತದಲ್ಲಿ ಶಾಂತಿಯನ್ನು ಪುನರ್ ಸ್ಥಾಪಿಸಲಾಗಿದೆ. ಭಯೋತ್ಪಾದನಾ ದಾಳಿ ಬಳಿಕ ನಾನು ಸುಮ್ಮನಿರಲಿ ಅಥವಾ ಸೇನೆ ದಾಳಿ ನಡೆಸಿದರೆ, ಕೆಲವು ಜನರು ಬೊಬ್ಬೆ ಹೊಡೆಯಲು ಆರಂಭಿಸುತ್ತಾರೆ ಎಂದು ಬಾಲಾಕೋಟ್ ಏರ್ ಸ್ಟ್ರೈಕ್ ಗೆ ಸಂಬಂಧಿಸಿದಂತೆ ಪರೋಕ್ಷವಾಗಿ ವಿಪಕ್ಷಗಳಿಗೆ ತಿರುಗೇಟು ನೀಡಿದ್ದಾರೆ.
ಭಾರತ ಪ್ರತಿಕ್ರಿಯೆ ನೀಡಿದ ನಂತರ ಪಾಕಿಸ್ತಾನ ಜಾಗತಿಕ ಸಮುದಾಯದ ಎದುರು ಮಂಡಿಯೂರುವಂತಾಗಿತ್ತು..ಆಗ ಇದೇ ಕೆಲವು ಜನರು ದೇಶದಲ್ಲಿ ಮತ್ತೆ ಹೀರೋ ಆಗಲು ಪ್ರಯತ್ನಿಸುತ್ತಾರೆ ಎಂದು ವ್ಯಂಗ್ಯವಾಡಿದರು.