ಶ್ರೀನಗರ:ಭದ್ರತಾಪಡೆಗಳ ರಣಬೇಟೆಗೆ ಹೆದರಿ, ಹೇಡಿ ಉಗ್ರರು ಶೌಚಾಲಯಗಳ ಕೆಳಭಾಗದಲ್ಲಿ ಬಂಕರ್ ನಿರ್ಮಿಸಿಅಡಗಿಕೊಳ್ಳುತ್ತಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಕೆಲವೆಡೆ ಉಗ್ರರು ಈ ಪಿತೂರಿ ಆರಂಭಿಸಿದ್ದಾರೆ. ಸ್ಥಳೀಯರು ಮತ್ತು ಭದ್ರತಾಪಡೆ ನಡುವಿನ ಸಂಬಂಧ ಗಾಢವಾಗುತ್ತಿದ್ದಂತೆ, ಉಗ್ರರಿಗೆ ಕಣಿವೆ ರಾಜ್ಯದಲ್ಲಿ ಅಡಗುತಾಣಗಳ ಕೊರತೆ ಶುರುವಾಗಿದೆ. ಟಾಯ್ಲೆಟ್ ಅಡಿ ಬಂಕರ್ ನಿರ್ಮಿಸಿ ಕುಳಿತ ಹಲವು ಉಗ್ರರನ್ನು ಸೇನೆ ಇತ್ತೀಚೆಗೆ ಹೆಡೆಮುರಿ ಕಟ್ಟಿದೆ.
ಇದು ಹೊಸತಲ್ಲ: “ಭೂಗರ್ಭದಡಿ ಬಂಕರ್ ಮತ್ತು ನಕಲಿ ಗುಹೆಗಳನ್ನು ನಿರ್ಮಿಸಿ ಅಡಗಿ ಕೂರುವುದು ಹೊಸತೇನೂ ಅಲ್ಲ. ದಕ್ಷಿಣ ಕಾಶ್ಮೀರದಲ್ಲಿ ಇದನ್ನು ಹಲವು ಬಾರಿ ನೋಡಿದ್ದೇವೆ. ಒಂದು ಪ್ರಕರಣದಲ್ಲಂತೂ, ಉಗ್ರರು ಟಾಯ್ಲೆಟ್ ಅಡಿ ನಿರ್ಮಿಸಿದ್ದ ಗಬ್ಬು ನಾರುವ ಟ್ಯಾಂಕ್‌ನಲ್ಲಿ ಅವಿತಿದ್ದರು’ ಎಂದು ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಮಹಾನಿರ್ದೇಶಕ ದಿಲ್‌ಬಾಘ… ಸಿಂಗ್ ಹೇಳಿದ್ದಾರೆ.
ಬೇಧಿಸಿದ್ದು ಹೇಗೆ?: ಅನಂತನಾಗ್‌ನ ವಾಟ್ರಿ ಗಾಮ್‌ನ ಒಂದು ಮನೆಯಲ್ಲಿ ಉಗ್ರರು, ಶೌಚಾಲಯ ಅಡಿಯಲ್ಲಿ ಗುಹೆ ನಿರ್ಮಿಸಿಕೊಂಡಿದ್ದರು. ಗುಪ್ತಚರರ ಮಾಹಿತಿ ಆಧರಿಸಿ ನಾವು ಹೋದಾಗ, ಟಾಯ್ಲೆಟ್‌ನಲ್ಲಿ ಮಲ ತುಂಬಿ ಕೊಂಡಿತ್ತು. ಆದರೆ, ಬೇಸಿನ್ ಸುತ್ತ ಹೊಸದಾಗಿ ಸಿಮೆಂಟ್‌ಹಾಕಿದ್ದನ್ನು ಗಮನಿಸಿದೆವು. ಸಿಮೆಂಟ್ ಅಗೆದಾಗ, ಕೆಳಗಿನಿಂದ ಉಗ್ರರು ಗುಂಡು ಹಾರಿಸತೊಡಗಿದರು. ಈ ವೇಳೆ 4 ಲಷ್ಕರ್- ಇ-ತೊಯ್ಬಾ ಉಗ್ರರು ಸಿಕ್ಕಿಬಿದ್ದಿದ್ದರು ಎಂದಿದ್ದಾರೆ.
ಇದನ್ನೂ ಓದಿ: ರೈತರಿಗೆ ಅನ್ಯಾಯವಾದರೆ ಅಧಿಕಾರಕ್ಕೆ ಅಂಟಿಕೊಂಡು ಕೂರಲ್ಲ: ಬಿ ಎಸ್ ಯಡಿಯೂರಪ್ಪ
ಲಸ್ಸಿಪುರದಲ್ಲೂ ಇಂಥದ್ದೇ ಪ್ರಕರಣ ನಡೆಯಿತು. ಮನೆಯನ್ನು 6 ಬಾರಿ ಹುಡುಕಿದರೂ ಉಗ್ರರು ಸಿಕ್ಕಿರಲಿಲ್ಲ. ಕೊನೆಗೆ ಟಾಯ್ಲೆಟ್ ಅಗೆದಾಗ, ಅದರ ಅಡಿಯಲ್ಲಿ ಇಬ್ಬರು ಉಗ್ರರು ಬಂಕರ್ ನಿರ್ಮಿಸಿಕೊಂಡು ಅವಿತಿರುವುದನ್ನು ಪತ್ತೆ ಹಚ್ಚಿದೆವು ಎಂದು ತಿಳಿಸಿದ್ದಾರೆ. ಕಾಶ್ಮೀರದಲ್ಲಿ ಕೆಲವೆಡೆ ಅಡುಗೆಮನೆ, ಬೆಡ್‌ರೂಮ್‌ಗಳಲ್ಲಿ ನಕಲಿ ಗೋಡೆಗಳನ್ನು ನಿರ್ಮಿಸಿ ಉಗ್ರರು ಅವಿತುಕೊಳ್ಳುವ ಟ್ರೆಂಡ್ ಕೂಡ ಚಾಲ್ತಿಯಲ್ಲಿದೆ ಎಂದಿದ್ದಾರೆ.
ನುಸುಳುವಿಕೆಯತ್ನ ವಿಫಲಗೊಳಿಸಿದ ಬಿಎಸ್‌ಎಫ್ ಜಮ್ಮು-ಕಾಶ್ಮೀರದ ಸಾಂಬಾ ಜಿಲ್ಲೆಯ ಅಂತಾರಾಷ್ಟ್ರೀಯ ಗಡಿಯಲ್ಲಿ ಶಸ್ತ್ರಸಜ್ಜಿತ ಐವರು ಉಗ್ರರ ಒಳನುಸುಳುವಿಕೆ ಯತ್ನವನ್ನು ಗಡಿ ಭದ್ರತಾ ಪಡೆ(ಬಿಎಸ್‌ಎಫ್) ವಿಫಲಗೊಳಿಸಿದೆ. ಪಾಕಿಸ್ತಾನದ ಸೇನೆಯು ಗಡಿಯಲ್ಲಿ ಅಪ್ರಚೋದಿತ ದಾಳಿ ನಡೆಸುವ ಮೂಲಕ ಉಗ್ರರಿಗೆ ಒಳನುಸುಳಲು ನೆರವಾಗಿತ್ತು.
ಇದನ್ನೂ ಓದಿ: ವಾಹನಗಳಲ್ಲಿ ಈ ಕಾರಣಗಳಿಗೆ ಮಾತ್ರ ಸ್ಮಾರ್ಟ್ ಪೋನ್ ಬಳಸಿ: ಮೋಟಾರು ವಾಹನ ಕಾಯ್ದೆ ಅಧಿಸೂಚನೆ !
ಆದರೆ,ಬಿಎಸ್‌ಎಫ್ಯೋಧರು ತಕ್ಕ ಪ್ರತ್ಯುತ್ತರ ನೀಡುವ ಮೂಲಕ ನುಸುಳುವಿಕೆ ಯತ್ನವನ್ನು ತಡೆದಿದ್ದಾರೆ. ಗುಂಡಿನ ದಾಳಿಯಿಂದ ಬೆದರಿದ ಉಗ್ರರು ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ಕಾಲ್ಕಿತ್ತಿದ್ದಾರೆ ಎಂದು ಬಿಎಸ್‌ಎಫ್ ಹೇಳಿದೆ. ಇದೇ ವೇಳೆ, ಪುಲ್ವಾಮಾ ಜಿಲ್ಲೆಯಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಉಗ್ರನೊಬ್ಬನನ್ನು ಭದ್ರತಾ ಪಡೆ ಭಾನುವಾರ ಹೊಡೆದುರುಳಿಸಿದೆ.