ಪಾಕಿಸ್ಥಾನ ಪ್ರಯೋಜಿತ ಉಗ್ರವಾದದ ಬಗ್ಗೆ ಭಾರತ ಮೊದಲಿನಿಂದಲೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಧ್ವನಿ ಎತ್ತಿಕೊಂಡು ಬರುತ್ತಲೇ ಇದೆ. ಪಾಕಿಸ್ಥಾನವು ಉಗ್ರವಾದವನ್ನು ಸೃಷ್ಟಿಸಿ, ಬೆಳೆಸಿ, ಪೋಷಿಸಿ ಹೆಮ್ಮರವನ್ನಾಗಿ ಮಾಡುತ್ತಿರುವ ಸಂಗತಿ ಇಡೀ ಜಗತ್ತಿಗೇ ಗೊತ್ತಿದೆ. ಅಷ್ಟೇ ಅಲ್ಲ, ಜಗತ್ತಿಗೆ ಕಂಟಕವೆನಿಸಿರುವ ದೊಡ್ಡ ದೊಡ್ಡ ಉಗ್ರ ಸಂಘಟನೆಗಳ ಮೂಲವೂ ಪಾಕಿಸ್ಥಾನದಲ್ಲೇ ಇದೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರವೇ ಆಗಿದೆ. ಆದರೆ, ಅಂತಾರಾಷ್ಟ್ರೀಯ ಸಂಬಂಧದ ವಿಚಾರದಲ್ಲಿಯೂ ಉಗ್ರವಾದ, ಆಯಾ ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧಕ್ಕೆ ತಕ್ಕಂತೆ ರೂಪಿತವಾಗುತ್ತದೆ. ಪಾಕಿಸ್ಥಾನದ ಮಿತ್ರ ದೇಶವೆನಿಸಿರುವ ಚೀನಕ್ಕೆ, ಆ ದೇಶದ ಉಗ್ರವಾದ ಕಂಟಕವೆನಿಸಿಯೇ ಇಲ್ಲ. ಆದರೆ ತನ್ನದೇ ದೇಶದಲ್ಲಿರುವ ವುಯಿಗರ್ ಮುಸ್ಲಿಮರಿಗೆ ಕಿರುಕುಳ ಕೊಡುತ್ತ ಬಂದಿರುವ ಚೀನ ಮಾತ್ರ, ಈ ವಿಚಾರದಲ್ಲಿ ದ್ವಂದ್ವ ವಿಚಾರ ಅನುಸರಿಸುತ್ತಿದೆ.
ಇತ್ತೀಚೆಗಷ್ಟೇ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಸಭೆಯಲ್ಲಿ ಚೀನಾದ ವಿರುದ್ಧ ಮಾನವ ಹಕ್ಕುಗಳ ಉಲ್ಲಂಘನೆ ವಿಚಾರದಲ್ಲಿ ಚರ್ಚೆಯಾಗಬೇಕು ಎಂದು ಮತಕ್ಕೆ ಹಾಕಲಾಗಿತ್ತು. ಆದರೆ ಈ ಮತದಾನದಿಂದ ಭಾರತ ಗೈರುಹಾಜರಾಗಿದ್ದು, ಎಲ್ಲರ ಹುಬ್ಬೇರಿಸುವಂತೆ ಮಾಡಿತ್ತು. ಇದಕ್ಕೆ ಸ್ಪಷ್ಟನೆಯನ್ನೂ ನೀಡಿದ್ದ ವಿದೇಶಾಂಗ ಇಲಾಖೆ, ಯಾವುದೇ ಒಂದು ದೇಶವನ್ನು ಗುರಿಯಾಗಿಸಿಕೊಂಡು ಇಂಥ ಯಾವುದೇ ಚರ್ಚೆ ಮಾಡುವ ವಿಷಯಗಳಿಗೆ ಮೊದಲಿನಿಂದಲೂ ಮತ ಹಾಕಿಲ್ಲ ಎಂದು ಹೇಳಿತ್ತು.
ಇದಾದ ಬಳಿಕ, ವುಯಿಗರ್‌ನಲ್ಲಿನ ಮುಸ್ಲಿಮರ ವಿರುದ್ಧದ ಚೀನ ಕಿರುಕುಳದ ಬಗ್ಗೆ ಆತಂಕವನ್ನೂ ಭಾರತ ವ್ಯಕ್ತಪಡಿಸಿತ್ತು. ಅಲ್ಲದೆ ಈ ಜನರ ಹಕ್ಕುಗಳ ಬಗ್ಗೆ ಮಾತನಾಡಿತ್ತು. ಯಾವುದೇ ದೇಶದಲ್ಲೇ ಆಗಲಿ ನಾಗರಿಕರಿಗೆ ಸುಖಾಸುಮ್ಮನೆ ಕಿರುಕುಳ ನೀಡುವುದು ತರವಲ್ಲ ಎಂದೂ ಹೇಳಿತ್ತು. ಈ ಸಂಬಂಧ ಚೀನ ಸ್ಪಷ್ಟನೆಯನ್ನು ನೀಡಿದ್ದು, ವುಯಿಗರ್ ಮುಸ್ಲಿಮರ ವಿರುದ್ಧದ ಕಾರ್ಯಾಚರಣೆ ಭಯೋತ್ಪಾದನೆಯ ಒಂದು ಭಾಗ ಎಂದು ಹೇಳಿಕೊಂಡಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಈ ಬಗ್ಗೆ ಚರ್ಚೆ ನಡೆಸುತ್ತಿರುವುದು ನಮಗೆ ಗೊತ್ತಾಗಿದೆ. ಆದರೆ ಕ್ಸಿಂಗಿಯಾಂಗ್‌ನ ವುಯಿಗರ್ ಮುಸಲ್ಮಾನರ ಹಿಂಸಾತ್ಮಕ ಉಗ್ರವಾದ, ಮೂಲಭೂತವಾದ ಮತ್ತು ಪ್ರತ್ಯೇಕತಾವಾದವನ್ನು ತಡೆಯುವ ಸಲುವಾಗಿ ಈ ಕಾರ್ಯಾಚರಣೆ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದೆ. ವಿಚಿತ್ರವೆಂದರೆ ಭಾರತ ಈ ಕುರಿತ ವಿಶ್ವಸಂಸ್ಥೆಯಲ್ಲಿನ ಚರ್ಚೆಯ ಮತದಿಂದ ಗೈರಾಗಿದ್ದ ವಿಚಾರ ಸಂಬಂಧ ಯಾವುದೇ ಹೇಳಿಕೆ ನೀಡದೇ ಮೌನಕ್ಕೆ ಶರಣಾಗಿದೆ.
ವುಯಿಗರ್ ಮುಸಲ್ಮಾನರ ವಿಚಾರದಲ್ಲಿ ಚೀನ ಅನುಸರಿಸುತ್ತಿರುವ ಧೋರಣೆ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ತಾನು ಅನುಸರಿಸುತ್ತಿರುವ ನೀತಿಗೂ ಅಜಗಜಾಂತರವಿದೆ. ವಿಶ್ವಸಂಸ್ಥೆ, ಅಮೆರಿಕ, ಭಾರತವು ಸೇರಿದಂತೆ ಹಲವಾರು ದೇಶಗಳು ಪಾಕ್‌ನಲ್ಲಿನ ಭಯೋತ್ಪಾದಕ ಸಂಘಟನೆಗಳ ಮುಖ್ಯಸ್ಥರನ್ನು ಅಂತಾರಾಷ್ಟ್ರೀಯ ಭಯೋತ್ಪಾದಕರ ಪಟ್ಟಿಗೆ ಸೇರಿಸಲು ಶ್ರಮ ಪಡುತ್ತಿವೆ. ಆದರೆ ಭದ್ರತಾ ಮಂಡಳಿಯಲ್ಲಿ ವಿಟೋ ಅಧಿಕಾರ ಹೊಂದಿರುವ ಚೀನ, ಇದಕ್ಕೆ ಮೊದಲಿನಿಂದಲೂ ಅಡ್ಡಗಾಲು ಹಾಕಿಕೊಂಡೇ ಬರುತ್ತಿದೆ. ಅಲ್ಲದೆ, ಪಾಕಿಸ್ಥಾನದ ಉಗ್ರರು ನಡೆಸುತ್ತಿರುವ ಹಿಂಸಾಕೃತ್ಯಗಳು ಹೊರಜಗತ್ತಿಗೆ ಕಾಣುವಂತೆ ಇದ್ದರೂ, ಇಂಥ ಉಗ್ರ ಸಂಘಟನೆಗಳ ವಿರುದ್ಧ ಸಾಕ್ಷ್ಯ ಕೇಳುವಂಥ ಕೆಲಸವನ್ನೂ ಮಾಡುತ್ತಿದೆ. ಹೀಗಾಗಿ ಚೀನದ ಈ ಇಬ್ಬಗೆ ನೀತಿ ಸರಿಯಾದ ಕ್ರಮವೇ ಅಲ್ಲ ಎಂಬುದನ್ನು ಖಂಡತುಂಡವಾಗಿ ಹೇಳಬೇಕಾಗುತ್ತದೆ.