Advertisement
ಈವರೆಗೆ ಉತ್ತರದ ಬಾರಾಮುಲ್ಲಾ ಹಾಗೂ ಇತರ ಪ್ರದೇಶಗಳಲ್ಲಿ ಉಗ್ರರು ಅಷ್ಟೇನೂ ಪ್ರಭಾವಶಾಲಿಯಾಗಿರಲಿಲ್ಲ. ಅದರಲ್ಲೂ ಕಳೆದ ಜನವರಿಯಲ್ಲಂತೂ ಬಾರಾಮುಲ್ಲಾವನ್ನು ಉಗ್ರ ಚಟುವಟಿಕೆ ಮುಕ್ತ ಜಿಲ್ಲೆ ಎಂದೇ ಸೇನೆ ಘೋಷಿಸಿತ್ತು. ಆದರೆ ಮಂಗಳವಾರ ಬಾರಾಮುಲ್ಲಾದಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಲಷ್ಕರ್ ಉಗ್ರನೊಬ್ಬನನ್ನು ಸೇನೆ ಹೊಡೆದುರುಳಿಸಿದೆ. ಈತನನ್ನು ತಿಂಗಳ ಹಿಂದಷ್ಟೇ ಉಗ್ರ ಸಂಘಟನೆ ಸೇರಿದ್ದ 20 ವರ್ಷದ ಮೋಮಿನ್ ರಸೂಲ್ ಗೋಜ್ರಿ ಎಂದು ಗುರುತಿಸಲಾಗಿದೆ.
ಸದ್ಯಕ್ಕೆ ಸೇನೆ ವಾಪಸ್ ಇಲ್ಲ
ಜಮ್ಮು ಕಾಶ್ಮೀರದಿಂದ ಸದ್ಯಕ್ಕೆ ಸೇನೆ ಹಿಂಪಡೆಯುವ ಯೋಜನೆಯಿಲ್ಲ ಎಂದು ಗೃಹ ಖಾತೆ ರಾಜ್ಯ ಸಚಿವ ಜಿ ಕಿಶನ್ ಹೇಳಿದ್ದಾರೆ. ಪಾಕಿಸ್ತಾನವು ಉಗ್ರರನ್ನು ಕಳುಹಿಸಿ ದಾಳಿ ನಡೆಸಲು ಪ್ರಚೋದಿಸುತ್ತಿರುವಾಗ ಯಾಕೆ ತಕ್ಷಣ ಸೇನೆಯನ್ನು ಹಿಂಪಡೆಯಬೇಕು ಎಂದು ಅವರು ಪ್ರಶ್ನಿಸಿದ್ದಾರೆ. ಕಾಶ್ಮೀರದ ಜನರನ್ನು ಪಾಕ್ ಪ್ರಚೋದಿಸಲು ಯತ್ನಿಸುತ್ತಿದೆ. ಕಾಶ್ಮೀರದಲ್ಲಿ ಅಸ್ಥಿರತೆ ಸೃಷ್ಟಿಸಿ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಭಾರತವನ್ನು ದೂರುವುದು ಪಾಕಿಸ್ತಾನದ ಉದ್ದೇಶ ಎಂದೂ ಅವರು ಆರೋಪಿಸಿದ್ದಾರೆ.
ಕ್ಷೌರಿಕರದ್ದೇ ಸಮಸ್ಯೆ!
ಕಾಶ್ಮೀರದಲ್ಲಿ ಈಗ ಕ್ಷೌರಿಕರ ಕೊರತೆ ಎದುರಾಗಿದೆ. ಹೊರ ರಾಜ್ಯದಿಂದ ಬಂದ ಕ್ಷೌರಿಕರೇ ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದರು. ಆದರೆ ಆ. 5ರಂದು ಇಲ್ಲಿ ಕರ್ಫ್ಯೂ ವಿಧಿಸಿದ ನಂತರ ಕ್ಷೌರಿಕರು ತಮ್ಮ ರಾಜ್ಯಗಳಿಗೆ ವಾಪಸಾಗಿದ್ದರು. ಇದರಿಂದ ಕ್ಷೌರಿಕರ ಕೊರತೆ ಕಂಡುಬಂದಿದೆ. ಕೆಲವೇ ಜನರು ವಾಪಸಾಗಿದ್ದು, ಇವರು ದುಪ್ಪಟ್ಟು ದರ ಹೇಳುತ್ತಿದ್ದಾರೆ.