Advertisement

ಶಾಂತಿ, ಸೌಹಾರ್ದಕ್ಕೆ ಉಗ್ರವಾದ ಬೆದರಿಕೆ

03:25 AM Aug 28, 2018 | Team Udayavani |

ಉಡುಪಿ: ಉಗ್ರವಾದವೇ ಶಾಂತಿಯ ಪರಿಕಲ್ಪನೆಗೆ ಇರುವ ಅತಿ ದೊಡ್ಡ ಬೆದರಿಕೆ ಎಂದು ವಿದೇಶಾಂಗ ವ್ಯವಹಾರಗಳ ಖಾತೆಯ ರಾಜ್ಯ ಸಚಿವ, ಹಿರಿಯ ಪತ್ರಕರ್ತ ಎಂ.ಜೆ. ಅಕ್ಬರ್‌ ಅಭಿಪ್ರಾಯಪಟ್ಟಿದ್ದಾರೆ. ಮಣಿಪಾಲದ ಮಾಹೆ ವಿ.ವಿ.ಯಲ್ಲಿ ಜಿಯೋಪಾಲಿಟಿಕ್ಸ್‌ ಆ್ಯಂಡ್‌ ಇಂಟರ್‌ನ್ಯಾಶನಲ್‌ ರಿಲೇಶನ್ಸ್‌ ವತಿಯಿಂದ ಆರಂಭಗೊಂಡ ಚೀನ ಅಧ್ಯಯನ ಕೇಂದ್ರವನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದ ಅವರು, ಭಾರತವೂ ಸೇರಿದಂತೆ ಜಾಗತಿಕ ಮಟ್ಟದಲ್ಲಿ ಸಾಮಾಜಿಕ ಸೌಹಾರ್ದಕ್ಕೆ ಭಯೋತ್ಪಾದನೆ ಭಾರೀ ಸವಾಲು. ಬಹುತ್ವದ ಸಮಾಜ ಮತ್ತು ರಾಷ್ಟ್ರಕ್ಕೆ ಇದು ಬೆದರಿಕೆ ಒಡ್ಡುತ್ತಿದೆ ಎಂದರು. ದೇಶದಲ್ಲಿ ಬಹುತ್ವದ ಸಮಾಜವನ್ನು ಬಹುಕಾಲದಿಂದ ಕಾಪಾಡಿಕೊಂಡು ಬರಲಾಗಿದೆ. ಬಹುತ್ವವನ್ನು ಮೂಲ ಹಕ್ಕಾಗಿ ಸಂವಿಧಾನ ಪರಿಗಣಿಸಿದೆ. ಭಾರತ ಧಾರ್ಮಿಕ ವಿಶ್ವಾಸದಲ್ಲಿ ನಂಬಿಕೆ ಇರಿಸಿದೆ. ನಾವು ರಕ್ಷಣಾ ಸಾಹಸದಲ್ಲಿ ಹೆಚ್ಚು ಆಸಕ್ತಿಯಿಂದಿಲ್ಲ, ಆದರೆ ಶಾಂತಿ ಮೂಲಕ ಅಭಿವೃದ್ಧಿ ಸಾಧಿಸುವ ಛಲ ಭಾರತಕ್ಕೆ ಇದೆ. ಭಾರತದ ಪ್ರಧಾನಿ ಎಲ್ಲರನ್ನೂ ಒಳಗೊಂಡ ಅಭಿವೃದ್ಧಿಗೆ ಹೆಚ್ಚು ಪ್ರೋತ್ಸಾಹ ಕೊಡುತ್ತಿದ್ದಾರೆ. ಶಾಂತಿ ಇಲ್ಲದೆ ಅಭಿವೃದ್ಧಿ ಅಸಾಧ್ಯ. ನಮ್ಮ ಆರ್ಥಿಕ ನೀತಿಗಳು ಮತ್ತು ಅಭಿವೃದ್ಧಿ ನಿಧಿಗಳು ಜನ ಕೇಂದ್ರಿತವಾಗಿವೆ ಎಂದರು.

Advertisement

ಜಾಗತಿಕ ಮಟ್ಟದಲ್ಲಿ ಭಾರತ ನಡೆಸುತ್ತಿರುವ ಸ್ನೇಹ ಪ್ರದರ್ಶನಕ್ಕೆ ಜಗತ್ತೇ ಆಶ್ಚರ್ಯ ವ್ಯಕ್ತಪಡಿಸುತ್ತಿದೆ. ಇದಕ್ಕೆ ಪ್ರಧಾನಿ ಮೋದಿ ಜಗತ್ತಿನಾದ್ಯಂತ ಪ್ರವಾಸ ನಡೆಸಿ ನೀಡುತ್ತಿರುವ ಶಕ್ತಿಯುತ ಅಭಿಮತಗಳೇ ಉದಾಹರಣೆ ಎಂದು ಅಕ್ಬರ್‌ ಹೇಳಿದರು. ಮಹಿಳಾ ಸಶಕ್ತೀಕರಣವನ್ನು ಉಲ್ಲೇಖೀಸಿದ ಸಚಿವರು, ಸ್ತ್ರೀಯರು ಸಾಮಾಜಿಕ, ಆರ್ಥಿಕವಾಗಿ ಸಬಲರಾಗುತ್ತಿದ್ದಾರೆ. 13 ಕೋಟಿ ಮುದ್ರಾ ಯೋಜನೆ ಫ‌ಲಾನುಭವಿಗಳಲ್ಲಿ ಶೇ. 80 ಮಹಿಳೆಯರು ಎಂದರು.

ಅಧ್ಯಯನ ಕೇಂದ್ರಕ್ಕೆ ಶ್ಲಾಘನೆ
ಶೈಕ್ಷಣಿಕ ಕೇಂದ್ರಗಳಲ್ಲಿ ಅಧ್ಯಯನ ಕೇಂದ್ರ ಆರಂಭಿಸುವುದರಿಂದ ಬೇರೆ ದೇಶಗಳ ಕುರಿತು ಜನ ಸಾಮಾನ್ಯರ ಜ್ಞಾನ ಹೆಚ್ಚಲಿದೆ. ನೆರೆ ರಾಷ್ಟ್ರಗಳ ಮಹತ್ವದ ತಿಳಿವಳಿಕೆ ವಿಚಾರದಲ್ಲಿ ಭಾರತದ ಸ್ಥಾನ ಏರುತ್ತಿದೆ. ಇಂತಹ ಪ್ರಯತ್ನಕ್ಕೆ ಶೈಕ್ಷಣಿಕ ಕೇಂದ್ರಗಳ ಅಧ್ಯಯನ ಸಹಕಾರಿಯಾಗಲಿದೆ ಎಂದರು.

ಮಾಹೆ ವಿ.ವಿ. ಕುಲಪತಿ ಡಾ| ಎಚ್‌. ವಿನೋದ ಭಟ್‌ ಸ್ವಾಗತಿಸಿ, ವಿಭಾಗದ ಮುಖ್ಯಸ್ಥ ಡಾ| ಅರವಿಂದಕುಮಾರ್‌ ಕಾರ್ಯಕ್ರಮ ನಿರ್ವಹಿಸಿದರು. ರಾಜಕೀಯ ವಿಶ್ಲೇಷಕ, ಪತ್ರಕರ್ತ ಶೇಷಾದ್ರಿಚಾರಿ ವಂದಿಸಿದರು. ಮಾಹೆ ಸಹಕುಲಾಧಿಪತಿ ಡಾ| ಎಚ್‌.ಎಸ್‌. ಬಲ್ಲಾಳ್‌, ಕುಲಸಚಿವ ಡಾ| ನಾರಾಯಣ ಸಭಾಹಿತ್‌, ಸಹಕುಲಪತಿ ಡಾ| ಪೂರ್ಣಿಮಾ ಬಾಳಿಗಾ ಉಪಸ್ಥಿತರಿದ್ದರು.

ಮಣಿಪಾಲದ ಶಿಕ್ಷಣಕ್ಕೆ ಜಗತ್ತಿನಲ್ಲಿ ‘ಹಸಿವು’
ನಾನು ವಿವಿಧ ದೇಶಗಳಿಗೆ ಭೇಟಿ ಕೊಟ್ಟಾಗ ಮಣಿಪಾಲದ ಶಿಕ್ಷಣ ಸಂಸ್ಥೆಗಳ ಹೆಸರು ಕೇಳಿಬರುತ್ತದೆ. ಭಾರತದ ಶಿಕ್ಷಣ ಅದರಲ್ಲೂ  ವಿಶೇಷವಾಗಿ ಮಾಹೆ ವಿ.ವಿ.ಯ ಶಿಕ್ಷಣಕ್ಕೆ ಜಗತ್ತಿನ ವಿವಿಧೆಡೆ ಕಂಡುಬರುತ್ತಿರುವ ಹಸಿವನ್ನು ನಾನು ವರ್ಣಿಸಲಾರೆ. ನಿಮಗೆ ಕೇಂದ್ರ ಸರಕಾರ ನೀಡಿರುವ ‘ಶ್ರೇಷ್ಠ ಶಿಕ್ಷಣ ಸಂಸ್ಥೆ’ ಸ್ಥಾನ ಅರ್ಹವಾಗಿದೆ. ಭಾರತದ ಶಿಕ್ಷಣ ಸಂಸ್ಥೆಗಳು ಹೆಸರಾಗಿರುವುದು ಶಿಕ್ಷಣದಿಂದಾಗಿ ವಿನಾ ಯಾವುದೇ ಸಿದ್ಧಾಂತಗಳ ಮಿಶ್ರಣದಿಂದಲ್ಲ.
– ಎಂ.ಜೆ. ಅಕ್ಬರ್‌

Advertisement
Advertisement

Udayavani is now on Telegram. Click here to join our channel and stay updated with the latest news.

Next