ನವದೆಹಲಿ: ಪಾಕಿಸ್ತಾನಿ ಯೋಧರು ಇಬ್ಬರು ಭಾರತೀಯ ಯೋಧರ ಶಿರಚ್ಛೇದ ನಡೆಸಿದ ಬಳಿಕ ಎರಡೂ ದೇಶಗಳ ಬಾಂಧವ್ಯ ಮತ್ತಷ್ಟು ಹದಗೆಟ್ಟಿದೆ. ಜೊತೆಗೆ ಮೊದಲೇ ಹಳಸಿದ್ದ ಕ್ರೀಡಾ ಸಂಬಂಧ ಮತ್ತಷ್ಟು ಕೆಟ್ಟುಹೋಗಿದೆ. ಇದಕ್ಕೆ ಸರಿಯಾಗಿ, ಪಾಕಿಸ್ತಾನ ಗಡಿಯಾಚೆಗಿನ ಭಯೋತ್ಪಾದನೆ ನಿಲ್ಲಿಸುವವರೆಗೆ ಆ ದೇಶ ದೊಂದಿಗೆ ಎಲ್ಲ ರೀತಿಯ ದ್ವಿಪಕ್ಷೀಯ ಕ್ರೀಡಾ ಸಂಬಂಧ ರದ್ದುಗೊಳಿಸುವುದಾಗಿ ಕೇಂದ್ರ ಕ್ರೀಡಾ ಸಚಿವ ವಿಜಯ್ ಗೋಯಲ್ ತಿಳಿಸಿದ್ದಾರೆ.
ಇದಕ್ಕೆ ಪೂರಕವಾಗಿ ಭಾರತದಲ್ಲಿ ಮುಂದಿನ ವಾರದಿಂದ ಆರಂಭವಾಗಬೇಕಿರುವ ಕುಸ್ತಿ ಏಷ್ಯನ್ ಚಾಂಪಿಯನ್‌ಶಿಪ್‌ನಲ್ಲಿ ಪಾಲ್ಗೊಳ್ಳಲು ಪಾಕಿಸ್ತಾನಿ ಕುಸ್ತಿಪಟುಗಳಿಗೆ ವೀಸಾ ನಿರಾಕರಿಸಲಾಗಿದೆ. ಅಲ್ಲದೇ ಸ್ಕ್ವಾಷ್ ಏಷ್ಯನ್ ಚಾಂಪಿಯನ್‌ಶಿಪ್‌ಗ್ೂ ಪಾಕಿಸ್ತಾನಿ ಕ್ರೀಡಾಪಟುಗಳಿಗೆ ಭಾರತದ ವೀಸಾ ಸಿಕ್ಕಿಲ್ಲ. ಇದು ಪಾಕಿಸ್ತಾನವನ್ನು ಕೆರಳಿಸಿದ್ದು ಸಂಬಂಧಪಟ್ಟ ವಿಶ್ವ ಕ್ರೀಡಾಸಂಸ್ಥೆಗಳಿಗೆ ದೂರು ನೀಡಿ, ಅಂತಾರಾಷ್ಟ್ರೀಯ ಕ್ರೀಡಾಕೂಟಗಳನ್ನು ತಟಸ್ಥ ತಾಣಗಳಲ್ಲಿ ನಡೆಸುವಂತೆ ಕೋರಿದೆ.
ಗಮನಿಸಬೇಕಾದ ಸಂಗತಿಯೆಂದರೆ ಮಲೇಷ್ಯಾದಲ್ಲಿ ನಡೆಯುತ್ತಿರುವ ಮಹತ್ವದ ಅಜ್ಲಾನ್ ಶಾ ಹಾಕಿ ಕೂಟದಲ್ಲೂ ಪಾಕಿಸ್ತಾನಕ್ಕೆ ಆಹ್ವಾನ ಸಿಕ್ಕಿಲ್ಲ. ಭಾರತದ ವಿರೋಧದಿಂದಲೇ ಪಾಕಿಸ್ತಾನಕ್ಕೆ ಆಹ್ವಾನವಿಲ್ಲ ಪಾಕ್ ಹಾಕಿ ಮಂಡಳಿ ದೂರಿಕೊಂಡಿದೆ.
ಇಷ್ಟೆಲ್ಲ ಅವಾಂತರಗಳ ನಂತರ ಪ್ರತಿಕ್ರಿಯೆ ನೀಡಿರುವ ಕ್ರೀಡಾ ಸಚಿವ ವಿಜಯ್ ಗೋಯಲ್, ಭಯೋತ್ಪಾದನೆ ಮತ್ತು ಕ್ರೀಡೆ ಒಟ್ಟೊಟ್ಟಿಗೆ ಹೋಗಲು ಸಾಧ್ಯವಿಲ್ಲ. ಎರಡೂ ದೇಶಗಳ ನಡುವಿನ ಸಂಬಂಧ ಸುಗಮವಾಗಬೇಕಾದರೆ ಪಾಕಿಸ್ತಾನ
ಗಡಿಯಾಚೆಯಿಂದ ಭಯೋತ್ಪಾದನೆ ರಫ್ತು ಮಾಡುವುದನ್ನು ನಿಲ್ಲಿಸಬೇಕು ಎಂದು ಹೇಳಿದ್ದಾರೆ.
ಭಾರತ ಈ ವಿಚಾರಗಳನ್ನು ಗಂಭೀರವಾಗಿ ಪರಿಗಣಿಸುತ್ತದೆ. ಈ ರೀತಿಯ ಕ್ರೀಡಾ ಸಂಬಂಧಗಳನ್ನು ರದ್ದು ಮಾಡುವುದರಿಂದ
ನಮಗೇನು ನಷ್ಟವಿಲ್ಲ. ಗಡೆಯಾಚೆಯಿಂದ ಭಯೋತ್ಪಾದನೆ ರಫ್ತು ಮಾಡುವುದನ್ನು ನಿಲ್ಲಿಸುವಂತೆ ಪಾಕ್ ಸರ್ಕಾರವನ್ನು ಅಲ್ಲಿನ
ಕ್ರೀಡಾಭಿಮಾನಿಗಳು ಒತ್ತಾಯಿಸಬೇಕು ಎಂದು ಗೋಯಲ್ ಹೇಳಿದ್ದಾರೆ.