ಹರ್ಯಾಣದಲ್ಲಿರುವ ರೇವಾರಿ ರೈಲು ನಿಲ್ದಾಣವನ್ನು ಮತ್ತು ಹಲವು ದೇವಸ್ಥಾನಗಳನ್ನು ಅಕ್ಟೋಬರ್ 8ರ ಒಳಗೆ ಸ್ಪೋಟಿಸುತ್ತೇವೆ ಎಂದು ಪಾಕಿಸ್ಥಾನ ಉಗ್ರಗಾಮಿ ಸಂಘಟನೆ ಜೈಶ್-ಇ-ಮಹಮ್ಮದ್ (ಜೆ.ಇ.ಎಂ.) ಬೆದರಿಕೆ ಪತ್ರ ಒಂದನ್ನು ಕಳುಹಿಸಿದೆ. ಮಸೂದ್ ಎಂಬ ವ್ಯಕ್ತಿ ಕರಾಚಿಯಿಂದ ಈ ಬೆದರಿಕೆ ಪತ್ರವನ್ನು ಕಳುಹಿಸಿದ್ದಾನೆ ಎಂಬುದನ್ನು ಪೊಲೀಸರು ದೃಢಪಡಿಸಿದ್ದಾರೆ. ಹಾಗಾಗಿ ಜೈಶ್ ಮುಖ್ಯಸ್ಥ ಮಸೂದ್ ಅಜ್ಹರ್ ಈ ಪತ್ರವನ್ನು ಕಳುಹಿಸಿರಬಹುದೇ ಎಂದು ಪೊಲೀಸರು ಇದೀಗ ಶಂಕಿಸುತ್ತಿದ್ದಾರೆ.
ಈ ಬೆದರಿಕೆ ಪತ್ರ ಪೊಲೀಸರ ಕೈ ಸೇರಿದ ಬಳಿಕ ರೇವಾರಿ ರೈಲು ನಿಲ್ದಾಣದ ಸುತ್ತಮುತ್ತ ಭದ್ರತೆಯನ್ನು ಬಿಗಿಗೊಳಿಸಲಾಗಿದೆ.
ಜೈಶ್ ಸಂಘಟನೆಯ ಜಲ ದಾಳಿ ಘಟಕವು ಜಲಮಾರ್ಗಗಳ ಮೂಲಕ ಭಾರತದಲ್ಲಿ ದಾಳಿ ನಡೆಸಲು ಯೋಜಿಸುತ್ತಿದೆ ಎಂಬ ಮಾಹಿತಿ ಗುಪ್ತಚರ ಇಲಾಖೆಗಳಿಗೆ ಈಗಾಗಲೇ ಲಭ್ಯವಾಗಿದ್ದು, ಈ ರೀತಿಯ ಯಾವುದೇ ಸಂಭವನೀಯ ದಾಳಿಗಳನ್ನು ಮಟ್ಟಹಾಕಲು ಭಾರತೀಯ ನೌಕಾಪಡೆ ಸರ್ವಸನ್ನದ್ಧವಾಗಿದೆ ಎಂದು ನೌಕಾಪಡೆಯ ಉನ್ನತ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಇಷ್ಟು ಮಾತ್ರವಲ್ಲದೇ, ಭಾರತದ ಮೇಲೆ ದಾಳಿ ನಡೆಸಲು ಕನಿಷ್ಠ 50 ಜನ ಜೈಶ್ ಉಗ್ರರು ಆಳ ಸಮುದ್ರ ಈಜು ತರಬೇತಿಯಲ್ಲಿ ತೊಡಗಿದ್ದಾರೆ ಎಂದು ಗಡಿ ಭದ್ರತಾ ಪಡೆಗಳು ನೀಡಿರುವ ಮಾಹಿತಿಗಳಿಂದ ಬಹಿರಂಗಗೊಂಡಿದೆ.
ಸಮುದ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಭಾರತೀಯ ಭದ್ರತಾ ಪಡೆಗಳ ಮೇಲೆ ದಾಳಿ ನಡೆಸಲು ಉಗ್ರಗಾಮಿಗಳಿಗೆ ತರಬೇತು ನೀಡಲಾಗುತ್ತಿದೆ ಎಂದು ತಮಗೆ ಲಭ್ಯವಾಗಿರುವ ಮಾಹಿತಿಯನ್ನು ಬಿ.ಎಸ್.ಎಫ್. ಸದರ್ನ್ ಕಮಾಂಡ್ ಗೆ ರವಾನಿಸಿದೆ.