ಶ್ರೀನಗರ : ಜಮ್ಮು ಕಾಶ್ಮೀರದಲ್ಲಿನ ಉಗ್ರ ಸಮೂಹಗಳಿಗೆ ಹಣ ಒದಗಿಸುತ್ತಿದ್ದ ಆರೋಪದ ಮೇಲೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಯ ಅಧಿಕಾರಿಗಳು ಇಂದು, ಕಾಶ್ಮೀರ ಪ್ರತ್ಯೇಕತಾ ನಾಯಕ ಸೈಯದ್ ಅಲೀ ಶಾ ಗೀಲಾನಿ ಯ ಅಳಿಯನ ಸಹಿತ ಏಳು ಕಾಶ್ಮೀರೀ ಪ್ರತ್ಯೇಕತಾ ನಾಯಕರನ್ನು ಬಂಧಿಸಿದ್ದಾರೆ.
ಕಾಶ್ಮೀರ ಕಣಿವೆಯಲ್ಲಿ ಉಗ್ರ ಚಟುವಟಿಕೆಗಳನ್ನು ಪ್ರವರ್ತಿಸಲು ಮತ್ತು ಕಲ್ಲೆಸೆವ ಪ್ರತಿಭಟನಕಾರರಿಗೆ ಹಣ ನೀಡಲು ಈ ಏಳು ಮಂದಿ ಬಂಧಿತರು ಪಾಕಿಸ್ಥಾನದಿಂದ ಹಣ ಪಡೆಯುತ್ತಿದ್ದರು ಎಂದು ಎನ್‌ಐಎ ಹೇಳಿದೆ.
ಕೇಂದ್ರೀಯ ತನಿಖಾ ಸಂಸ್ಥೆಯಂದ ಬಂಧಿಸಲ್ಪಟ್ಟಿರುವ ಏಳು ಮಂದಿ ಕಾಶ್ಮೀರೀ ಪ್ರತ್ಯೇಕತಾ ನಾಯಕರೆಂದರೆ : ಹುರಿಯತ್ ಅಧ್ಯಕ್ಷ ಸೈಯದ್ ಅಲೀ ಶಾ ಗೀಲಾನಿ ಯ ಅಳಿಯ ಅಲ್‌ತಾಫ್ ಶಾ, ಬಿಟ್ಟಾ ಕರಾಟೆ, ಅಮಾನತುಗೊಂಡಿರುವ ಹುರಿಯತ್ ನಾಯಕ ನಯೀಮ್ ಖಾನ್, ಹುರಿಯತ್ ವಕ್ತಾರ ಅಯಾಜ್ ಅಕ್‌ಬರ್, ಪೀರ್ ಸೈಫುಲ್ಲಾ, ಮಿರಾಜುದ್ದೀನ್ ಕಲವಾಲ್, ಮತ್ತು ಮಂದಗಾಮಿ ಹುರಿಯತ್ ಅಧ್ಯಕ್ಷ ಮೀರ್‌ವೆàಜ್ ಉಮರ್ ಪಾರೂಕ್‌ನ ನಿಕಟ ಸಹವರ್ತಿ ಶಾಹಿದ್ ಉಲ್ ಇಸ್ಲಾಮ್.
ಅಲ್‌ತಾಫ್ ಅಹ್ಮದ್ ಶಾ “ಅಲ್‌ತಾಫ್ ಫಂತೂಷ್’ ಎಂದೇ ಕುಖ್ಯಾತನಾಗಿದ್ದಾನೆ.
ಈ ಎಲ್ಲ ಏಳು ಮಂದಿ ಬಂಧಿತರನ್ನು ಇಂದು ಸೋಮವಾರ ದಿಲ್ಲಿಗೆ ಕರೆತರಲಾಗುವುದು ಎಂದು ಅಧಿಕಾರಿ ತಿಳಿಸಿದ್ದಾರೆ.
ಕಾಶ್ಮೀರದ ಉರಿ ಮತ್ತು ಜಮ್ಮುವಿನ ಚಕನ್ ದ-ಬಾದ್ ನಲ್ಲಿ ಎಲ್‌ಓಸಿ ಆಚೆಗಿನ ವ್ಯಾಪಾರ ವಹಿವಾಟು ವಿನಿಮಯದ ನೆಲೆಯಲ್ಲಿ ನಡೆಯುವುದರಿಂದ ಕೆಲವು ವ್ಯಾಪಾರಿಗಳು ತಮ್ಮ ಬಿಲ್‌ಗಳನ್ನು ಕಡಿಮೆ ಅಥವಾ ಜಾಸ್ತಿ ಪ್ರಮಾಣದಲ್ಲಿ ತೋರಿಸಿ ಅವುಗಳ ವ್ಯತ್ಯಾಸದ ಹಣವನ್ನು ಕಾಶ್ಮೀರ ಕಣಿವೆಯಲ್ಲಿನ ಉಗ್ರ ಚಟುವಟಿಕಗಳಿಗೆ ಪೂರೈಸುತ್ತಿದ್ದಾರೆ ಎಂದು ಎನ್‌ಐಎ ಆರೋಪಿಸಿದೆ.