ಪೂಂಚ್: ಲೋಕಸಭಾ ಚುನಾವಣೆ ನಡೆಯುತ್ತಿದ್ದಂತೆ ಜಮ್ಮು ಕಾಶ್ಮೀರದಲ್ಲಿ ಉಗ್ರ ದಾಳಿಯಾಗಿದೆ. ಜಮ್ಮುವಿನ ಪೂಂಚ್ ಜಿಲ್ಲೆಯಲ್ಲಿ ಶನಿವಾರ ಭಯೋತ್ಪಾದಕರ ದಾಳಿಯಲ್ಲಿ ಓರ್ವ ಯೋಧ ಹುತಾತ್ಮರಾಗಿದ್ದಾರೆ. ಭಾರತೀಯ ವಾಯುಪಡೆಗೆ ಸೇರಿದ ನಾಲ್ಕು ಯೋಧರಿಗೆ ಗಾಯಗಳಾಗಿದೆ ಎಂದು ವರದಿ ತಿಳಿಸಿದೆ.
ಶನಿವಾರ ಸಂಜೆ ಪೂಂಚ್ ನ ಸುರಾನ್ ಕೋಟೆ ಎಂಬಲ್ಲಿ ವಾಯುಪಡೆಯ ವಾಹನದ ಮೇಲೆ ದಾಳಿ ನಡೆಸಲಾಗಿದೆ. ಗಾಯಗೊಂಡ ಎಲ್ಲಾ ಐದು ಮಂದಿ ಯೋಧರನ್ನು ಆರ್ಮಿ ಬೇಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು, ಆದರೆ ಓರ್ವ ಯೋಧ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.
ವಾಯುಸೇನೆಯ ವಾಹನದ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿದ್ದಾರೆ. ಮೂಲಗಳ ಪ್ರಕಾರ ಇಬ್ಬರು ಉಗ್ರರು ಈ ಕೃತ್ಯದಲ್ಲಿ ಭಾಗಿಯಾಗಿದ್ದಾರೆ. ಜಮ್ಮು ಕಾಶ್ಮೀರ ಪೊಲೀಸರು ಮತ್ತು ಭಾರತೀಯ ಸೇನೆಯು ಕೂಡಲೇ ಸ್ಥಳಕ್ಕೆ ಧಾವಿಸಿದೆ. ಪ್ರದೇಶದಲ್ಲಿ ಹುಡುಕು ಕಾರ್ಯಾಚರಣೆ ಮುಂದುವರಿದಿದೆ.
ಪೂಂಚ್ ಮತ್ತು ರಜೌರಿಯಲ್ಲಿ ಕಳೆದ ವರ್ಷ ಹಲವು ಭಯೋತ್ಪಾದಕಾ ಘಟನೆಗಳು ನಡೆದಿದ್ದವು. ಈ ವರ್ಷ ನಡೆದ ಮೊದಲ ಘಟನೆ ಇದಾಗಿದೆ. ಇಡೀ ಪೂಂಚ್ ಜಿಲ್ಲೆಯನ್ನು ಈಗ ಹೈ ಅಲರ್ಟ್ ಮಾಡಲಾಗಿದೆ.
ಸುರನ್‌ಕೋಟೆಯ ಸನೈ ಟಾಪ್ ಮತ್ತು ಗಡಿ ಪೂಂಚ್ ಜಿಲ್ಲೆಯ ಮೆಂಧರ್ ನ ಗುರ್ಸಾಯ್ ಪ್ರದೇಶದ ನಡುವೆ ದಟ್ಟವಾದ ಮರಗಳು ಮತ್ತು ಶಾ ಸತ್ತಾರ್ ಅರಣ್ಯ ಪ್ರದೇಶದಲ್ಲಿ ದಾಳಿ ನಡೆದಿದೆ.
ಕಳೆದ ವರ್ಷ ಸೇನೆಯ ಮೇಲೆ ಸರಣಿ ಭಯೋತ್ಪಾದಕ ದಾಳಿಗೆ ಸಾಕ್ಷಿಯಾಗಿದ್ದ ಈ ಪ್ರದೇಶದಲ್ಲಿ ಈ ವರ್ಷ ಸಶಸ್ತ್ರ ಪಡೆಗಳ ಮೇಲೆ ನಡೆದ ಮೊದಲ ಪ್ರಮುಖ ದಾಳಿ ಇದಾಗಿದೆ. ದಾಳಿಯ ಸ್ಥಳದ ದೃಶ್ಯಗಳು ದಾಳಿಗೆ ಒಳಗಾದ ವಾಹನದ ವಿಂಡ್‌ಸ್ಕ್ರೀನ್‌ನಲ್ಲಿ ಕನಿಷ್ಠ ಒಂದು ಡಜನ್ ಬುಲೆಟ್ ರಂಧ್ರಗಳನ್ನು ತೋರಿಸಿದೆ.